Wednesday, June 19, 2024

ಸತ್ಯ | ನ್ಯಾಯ |ಧರ್ಮ

1985ರಲ್ಲಿ SSLC ಪಾಸ್.. 2023ರಲ್ಲಿ PUC… ಸ್ಪೂರ್ತಿಯ ಸೆಲೆಯಾದ ಆಟೋ ಚಾಲಕ!

ಬೆಂಗಳೂರು ಮೂಲದ ನಿಧಿ ಅಗರ್ವಾಲ್ ಇತ್ತೀಚೆಗೆ ಎಕ್ಸ್(ಟ್ವಿಟರ್) ನಲ್ಲಿ ಆಸಕ್ತಿದಾಯಕ ಪೋಸ್ಟ್ ಒಂದನ್ನು ಟ್ವೀಟ್ ಮಾಡಿದ್ದಾರೆ. ಆ ಪೋಸ್ಟ್‌ನಲ್ಲಿ ಅವರು ಆಟೋ ಡ್ರೈವರ್ ಭಾಸ್ಕರ್ ಅವರೊಂದಿಗಿನ ಅದ್ಭುತ ಅನುಭವವನ್ನು ಹಂಚಿಕೊಂಡಿದ್ದಾರೆ.

ಭಾಸ್ಕರ್ ಅವರು ಇತ್ತೀಚೆಗಷ್ಟೇ ಪದವಿ ಪೂರ್ವ (ಪಿಯುಸಿ) ಪರೀಕ್ಷೆ ಬರೆದಿದ್ದರು. ನಿಧಿ ತಮ್ಮ ಪೋಸ್ಟ್‌ನಲ್ಲಿ ಆಟೋ ಚಾಲಕರಾಗಿದ್ದ ಭಾಸ್ಕರ್ ಅವರು 1985ರಲ್ಲಿ ಶಾಲೆಯನ್ನು ತೊರೆದಾಗಿನಿಂದ ಉನ್ನತ ಶಿಕ್ಷಣವನ್ನು ಪಡೆಯಲು ಹಾತೊರೆಯುತ್ತಿದ್ದರು ಎಂದು ಹೇಳಿದ್ದಾರೆ.

ಆಟೋ ಚಾಲಕ ಭಾಸ್ಕರ್ ಅವರ ಫೋಟೋ ಜೊತೆಗೆ, ನಿಧಿ ಅಗರ್ವಾಲ್ ಹೀಗೆ ಬರೆದಿದ್ದಾರೆ, ‘ಇಂದು ಓಲಾ ಕ್ಯಾಬ್ಸ್ ನನಗೆ ಭಾಸ್ಕರ್ ಅವರ ಆಟೋವನ್ನು ಪರಿಚಯಿಸಿತು. ಇಂದು ಅವರು ಪಿಯುಸಿ ಪರೀಕ್ಷೆಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಬರೆದಿದ್ದಾರೆ. ಭಾಸ್ಕರ್ 1985ರಲ್ಲಿ 10ನೇ ತರಗತಿ ಪಾಸಾಗಿದ್ದು, ಈ ವರ್ಷ ಪಿಯುಸಿ ಪರೀಕ್ಷೆ ಬರೆದಿದ್ದರು. ಭಾಸ್ಕರ್ ಅವರ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ. ಭಾಸ್ಕರ್ ಅವರ ಶಿಕ್ಷಣದ ಒಲವು ಇತರರಿಗೆ ಪ್ರೇರಣೆಯಾಗುವಂತಹದ್ದು.’

ನಿಧಿ ಅಗರ್ವಾಲ್ ಅವರ ಈ ಪೋಸ್ಟ್ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದ್ದು 1,500 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ದೇಶದ ಐಟಿ ಹಬ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಇಂತಹ ಹೃದಯ ತುಂಬಿಬರುವ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿರುತ್ತವೆ.

ನಗರ ಜೀವನ ಕುರಿತು, ಆಟೋ ಚಾಲಕರ ಕುರಿತು ಆಗಾಗ ಕೇಳಿ ಬರುವ ನಕಾರಾತ್ಮಕ ಸುದ್ದಿಗಳ ನಡುವೆ ಇಂತಹ ಸುದ್ದಿಗಳು ದೈನದಂದಿನ ಬದುಕಿನ ಜಂಜಡಗಳ ನಡುವೆ ಒಂದಷ್ಟು ಉಲ್ಲಾಸ ತರುತ್ತವೆ ಎಂದು ಓದುಗರೊಬ್ಬರು ಈ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು