Friday, June 14, 2024

ಸತ್ಯ | ನ್ಯಾಯ |ಧರ್ಮ

ಉದಯನಿಧಿಗೆ ಸ್ಟಾಲಿನ್ ಬೆಂಬಲ… ಮೋದಿಗೆ ಸಖತ್ ಕೌಂಟರ್, ಇನ್ನೊಂದೆಡೆ ಸನಾತನವೆನ್ನುವುದು HIV, ಕುಷ್ಟ ರೋಗ ಎಂದ ಎ ರಾಜಾ

ಸನಾತನ ಧರ್ಮಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಚಿವ ಉದಯನಿಧಿ ಅವರ ಹೇಳಿಕೆಯನ್ನು ಅವರ ತಂದೆ ತಮಿಳುನಾಡು ಸಿಎಂ ಸ್ಟಾಲಿನ್ ಬೆಂಬಲಿಸಿದ್ದಾರೆ. ಸನಾತನ ಧರ್ಮ ಬೋಧಿಸುವ ಅಮಾನವೀಯ ತತ್ವಗಳು, ಪರಿಶಿಷ್ಟ ಜಾತಿ, ಪಂಗಡ ಮತ್ತು ಮಹಿಳೆಯರ ವಿರುದ್ಧದ ತಾರತಮ್ಯದ ಬಗ್ಗೆ ಉದಯನಿಧಿ ಮಾತನಾಡಿದ್ದಾರೆ ಎಂದು ಸಿಎಂ ಸ್ಟಾಲಿನ್ ಸ್ಪಷ್ಟಪಡಿಸಿದ್ದಾರೆ.

ಉದಯನಿಧಿ ಹೇಳಿಕೆಯಲ್ಲಿ ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಉದ್ದೇಶವಿಲ್ಲ ಎಂದು ಅವರು ಹೇಳಿದ್ದಾರೆ. ಈ ಕುರಿತು ಸ್ಟಾಲಿನ್ ತಮಿಳು ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಹೇಳಿಕೆ ನೀಡಿದ್ದಾರೆ.

ಚಂದ್ರಯಾನದಂತಹ ಪ್ರಯೋಗಗಳು ನಡೆಯುತ್ತಿರುವ ದೇಶದಲ್ಲಿ ಇನ್ನೂ ಕೆಲವರು ಜಾತಿ ಆಧಾರಿತ ತಾರತಮ್ಯವನ್ನು ತೋರಿಸುತ್ತಿದ್ದಾರೆ ಮತ್ತು ಆಧ್ಯಾತ್ಮಿಕ ವೇದಿಕೆಗಳಲ್ಲಿ ಮಹಿಳೆಯರನ್ನು ಅವಮಾನಿಸುತ್ತಿದ್ದಾರೆ ಎಂದು ಸ್ಟಾಲಿನ್ ಕಳವಳ ವ್ಯಕ್ತಪಡಿಸಿದರು.

ದಬ್ಬಾಳಿಕೆಯ ತತ್ವಕ್ಕೆ ವಿರುದ್ಧವಾಗಿ ಮಾತನಾಡುತ್ತಿರುವ ಉದಯನಿಧಿ ಅವರನ್ನು ಬಿಜೆಪಿ ಪರ ಶಕ್ತಿಗಳಿಗೆ ಸಹಿಸಲಾಗುತ್ತಿಲ್ಲ ಎಂದರು. ಬಿಜೆಪಿಯ ಪೋಷಣೆಯಲ್ಲಿರುವ ಸೋಷಿಯಲ್ ಮೀಡಿಯಾ ಗ್ರೂಪ್ ಈ ಸುಳ್ಳನ್ನು ಉತ್ತರದ ರಾಜ್ಯಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡುತ್ತಿದೆ ಎಂದು ಸ್ಟಾಲಿನ್‌ ಆರೋಪಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯವನ್ನು ಮುಂದುವರಿಸಲು ಕೆಲವರು ಸನಾತನ ಪದವನ್ನು ಬಳಸುತ್ತಾರೆ ಎಂದ ಸ್ಟಾಲಿನ್, ಇಂತಹ ದಬ್ಬಾಳಿಕೆಯ ಸಿದ್ಧಾಂತಗಳನ್ನು ಮಾತ್ರ ಉದಯನಿಧಿ ವಿರೋಧಿಸಿದ್ದು. ಆದರೆ ಬಿಜೆಪಿ ಟ್ರೋಲ್ ಆರ್ಮಿ ಸುಳ್ಳುಗಳನ್ನು ಹರಡುತ್ತಿದೆ ಎಂದು ಆರೋಪಿಸಿರುವ ಸ್ಟಾಲಿನ್, ಕೇಂದ್ರ ಸಚಿವರು, ಅಮಿತ್ ಶಾ, ರಾಜನಾಥ್ ಸಿಂಗ್ ಅವರಂತಹ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ತನ್ನ ಮಗ ನರಮೇಧಕ್ಕೆ ಕರೆ ನೀಡಿಲ್ಲ, ಆದರೆ ತಾರತಮ್ಯದ ವಿರುದ್ಧ ಮಾತ್ರ ಮಾತನಾಡಿದ್ದಾರೆ ಎಂದು ಹೇಳಿದರು. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಧಾನಿ, ಕೇಂದ್ರ ಸಚಿವರು ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸುಳ್ಳು ಪ್ರಚಾರ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಕಿಡಿಕಾರಿದ್ದಾರೆ.

ಇನ್ನೊಂದೆಡೆ ಇದೇ ಕುರಿತಾಗಿ ಕೇಂದ್ರ ಮಾಜಿ ಮಂತ್ರಿ ಎ ರಾಜಾ ಮಾತನಾಡಿದ್ದು ಅವರು ಸನಾತನ ಧರ್ಮವನ್ನು HIV ಮತ್ತು ಕುಷ್ಠ ರೋಗಕ್ಕೆ ಹೋಲಿಸಿದ್ದಾರೆ. ಈ ಕುರಿತು ಯಾರ ಜೊತೆಗಾದರೂ ನಾನು ಚರ್ಚೆಗೆ ಸಿದ್ಧ, ತಾಕತ್ತಿದ್ದರೆ ನಿಮ್ಮ ಪುಸ್ತಕಗಳನ್ನು ಹಿಡಿದು ಬನ್ನಿ ಎಂದು ಅವರು ಸವಾಲು ಎಸೆದಿದ್ದಾರೆ. ನಾವು ಅಂಬೇಡ್ಕರ್‌, ತಂದೈ ಪೆರಿಯಾರ್‌ ಹಿಂಬಾಲಕರು ನಾವು ವೈಚಾರಿಕತೆಯಿಂದ ಹಿಂದೆ ಹೆಜ್ಜೆ ಇಡುವವರಲ್ಲ ಎಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು