Friday, September 13, 2024

ಸತ್ಯ | ನ್ಯಾಯ |ಧರ್ಮ

ಶುರು ಮಾಡೋ ಮೊದಲು.. 

ಹಲವಾರು ಬಾರಿ ಸ್ತ್ರೀವಾದದ ಪರಿಕಲ್ಪನೆ ತಪ್ಪಾಗಿ ಅರ್ಥವಾಗಿರುವುದು, ಇನ್ನಷ್ಟು ಅತಿರೇಕದ ವಿಮರ್ಶೆಗೆ ಕಾರಣವಾಗಿರುವುದನ್ನು ಸಹ ಕಾಣುತ್ತಿದ್ದೇವೆ. ಇದನ್ನು ಸರಳೀಕರಿಸುವ ಮತ್ತು ಸಮತೆಯ ಹಾದಿ ಕಟ್ಟಿಕೊಡುವ ಒಂದು ಸಣ್ಣ ಪ್ರಯತ್ನವೇ Her Story.

ಮಹಿಳೆಯರ ಬಗ್ಗೆ, ಅಥವಾ ಮಹಿಳಾ ಕೇಂದ್ರೀಕೃತ ವಿಷಯಗಳ ಬಗೆ ಮಾತಾಡುವ ಅಗತ್ಯಗಳ ಬಗ್ಗೆ ಯೋಚಿಸಿದಾಗೆಲ್ಲ ಕಣ್ಣಮುಂದೆ ಒಂದಿಷ್ಟು ಕಾರಣಗಳು ಬಂದು ನಿಲ್ಲುತ್ತವೆ. 

ಮಹಿಳಾ ವಾದ ಅಥವಾ ಸ್ತ್ರೀವಾದದ ಇತಿಹಾಸ 18ನೇ ಶತಮಾನದಿಂದಲೂ ಇದೆ. ಸಾಧಾರಣವಾಗಿ ಸ್ತ್ರೀವಾದವನ್ನು ಮೂರು ಹಂತಗಳಾಗಿ ವಿಂಗಡಿಸುತ್ತೇವೆ. ಮೊದಲ ಹಂತದಲ್ಲಿ ಸುಮಾರು 1700ರ ಉತ್ತರಾರ್ಧದಿಂದ 1900ರ ಪೂರ್ವಾರ್ಧದವರೆಗೂ ಮತದಾನ, ಆಸ್ತಿ ಹಕ್ಕು ಸೇರಿದಂತೆ ಕಾನೂನಾತ್ಮಕ ಹಕ್ಕುಗಳಿಗಾಗಿ ನಡೆದ ಹೋರಾಟ ಅದು. ನಂತರದಲ್ಲಿ ಎರಡನೆಯ ಹಂತದಲ್ಲಿ ಸಮಾನತೆಗಾಗಿ ಮತ್ತು ಲಿಂಗ ಬೇಧದ ವಿರುದ್ಧ ಹೋರಾಟಗಳು ನಡೆದವು.  ಮೂರನೆಯ ಹಂತದ ಸ್ತ್ರೀವಾದ ಎರಡನೆಯ ಅಲೆಗೆ ಮಾರುತ್ತರವಾಗಿ ಆರಂಭವಾದದ್ದು. ಬಿಳಿಯ ಮಹಿಳೆಯರಿಗೆ ಮಾತ್ರ ಇದ್ದ ಸವಲತ್ತುಗಳನ್ನು ಪ್ರಶ್ನಿಸುತ್ತಲೇ, ಸಮಾನತೆಯ ಹೊರತಾಗಿ ಸಮತೆಯ ಮಾರ್ಗವನ್ನು ಆಯ್ದುಕೊಂಡ ಹೋರಾಟಗಳು ಅವು. 

ಭಾರತದಂತಹ ವೈವಿಧ್ಯಮಯ ಸಂಸ್ಕೃತಿಗಳನ್ನು ಹೊಂದಿದ ದೇಶದಲ್ಲಿ ಸಮಾನತೆಯ ಜೊತೆ ಜೊತೆಗೇ ಸಮತೆಯ ಹಾದಿ ನಿರ್ಮಾಣವಾಗುವುದು ಕೂಡ ಮುಖ್ಯ. ಹಲವಾರು ಬಾರಿ ಸ್ತ್ರೀವಾದದ ಪರಿಕಲ್ಪನೆ ತಪ್ಪಾಗಿ ಅರ್ಥವಾಗಿರುವುದು, ಇನ್ನಷ್ಟು ಅತಿರೇಕದ ವಿಮರ್ಶೆಗೆ ಕಾರಣವಾಗಿರುವುದನ್ನು ಸಹ ಕಾಣುತ್ತಿದ್ದೇವೆ. ಇದನ್ನು ಸರಳೀಕರಿಸುವ ಮತ್ತು ಸಮತೆಯ ಹಾದಿ ಕಟ್ಟಿಕೊಡುವ ಒಂದು ಸಣ್ಣ ಪ್ರಯತ್ನವೇ Her Story. 

ಸಮಾನತೆ ಮತ್ತು ಸಮತೆಯನ್ನು ಅತ್ಯಂತ ಸರಳ ಪದಗಳಲ್ಲಿ ಮಾತನಾಡುವುದಾದರೆ, ಸಮಾನತೆ ಪುರುಷ ಪ್ರಧಾನ ವ್ಯವಸೆಯ ಜೊತೆಗಿನ ಹೋಲಿಕೆಯ ಮೂಲಕ ಬರುವ ಪದ (Relative Term). ಪುರುಷನಿಗೆ ಮಹಿಳೆ ಸಮಾನಳು, ಹಾಗಾಗಿ ಪುರುಷನ ಅಗತ್ಯವೇ ಇಲ್ಲ ಅನ್ನುವುದು ಇಲ್ಲಿಯ ವಾದ. ಸಮತೆ ತುಸು ವಿಭಿನ್ನವಾದುದು. ಪುರುಷ ಮತ್ತು ಮಹಿಳೆ ಸಮಾನರಲ್ಲ. ಇಬ್ಬರೂ ಒಬ್ಬರನ್ನೊಬ್ಬರ ವ್ಯತ್ಯಾಸ ಮತ್ತು ಹೋಲಿಕೆಗಳನ್ನು ಗೌರವಿಸಬೇಕು. ಆದರೆ ಸಮಾನ ಅವಕಾಶ, ಸಮಾನ ಆಯ್ಕೆ ಇಬ್ಬರ ಹಕ್ಕು ಕೂಡ. ಇದು ಸ್ತ್ರೀವಾದದ ಸರಳ ಪರಿಕಲ್ಪನೆ. 

ಅದರ ಹೊರತಾಗಿ ಮಹಿಳಾ ವಾದದ ಆಯಾಮಗಳು ಹಲವಷ್ಟಿದೆ. ಬೌದ್ಧಿಕ ವಿಮರ್ಶೆಗಳು, ವಾದಗಳ ಹೊರತಾಗಿ ಮಹಿಳಾ ಕೇಂದ್ರೀಕೃತ ಕ್ಷೇತ್ರಗಳ ಕಡೆ ಗಮನ ಕೊಡುವ ಅಗತ್ಯ ಬಹಳಷ್ಟಿದೆ. ಶಿಕ್ಷಣ, ಆರೋಗ್ಯ ಮುಂತಾದ ಮೂಲ ಸೌಕರ್ಯಗಳ ಕುರಿತು ಮಾತುಕತೆಗಳು ಹೆಚ್ಚಾಗಬೇಕಿದೆ. 

ಇಂದಿಗೂ ಬೌದ್ಧಿಕ ವಲಯದಲ್ಲಿ ಒಂದು ವರ್ಗ ಮಹಿಳಾವಾದದ ಕುರಿತು ಮಾತನಾಡಿದರೆ, ಇನ್ನೊಂದು ವರ್ಗ ಯಾವುದೋ ಹಳ್ಳಿಯ ಮೂಲೆಯಲ್ಲಿ ಮುಟ್ಟಾದಾಗ, ಬಾಣಂತಿಯಾದಾಗ ಊರಾಚೆಗಿನ ಗುಡಿಸಲಲ್ಲಿಯೇ ಬದುಕು ಕಳೆಯುತ್ತಿದೆ. ಒಂದು ವರ್ಗ ಲಿಂಗ ತಾರತಮ್ಯದ ಪ್ರಗತಿಪರ ಆಯಾಮದ ಕುರಿತು ಮಾತನಾಡಿದರೆ, ಇನ್ನೊಂದು ವರ್ಗ ಮರ್ಯಾದೆಗೇಡು ಹತ್ಯೆಗೆ ಸಿಲುಕಿ ನಲುಗುತ್ತಿದೆ. ಒಂದು ವಲಯದಲ್ಲಿ ಸೆಲೆಬ್ರಿಟಿಗಳು ಪ್ರಗ್ನೆನ್ಸಿ ಫೋಟೋಶೂಟ್‌ ಮಾಡಿಸಿದುದರ ಬಗ್ಗೆ ಚರ್ಚೆ ನಡೆದರೆ,  ಅಲ್ಲೆಲ್ಲೋ ಫುಟ್‌ ಪಾತ್‌ ನಲ್ಲಿ ಒಬ್ಬ ಮಹಿಳೆ ಜನರು ನೋಡು ನೋಡುತ್ತಿದ್ದಂತೆಯೇ ಅತ್ಯಾಚಾರಕ್ಕೀಡಾಗುತ್ತಾಳೆ. ಇದೆರಡರ ನಡುವಿನ ಕಂದಕ ಬಹಳ ಆಳವಾದುದು. ಆದ್ದರಿಂದಲೇ ಮಾತನಾಡುವ ಅಗತ್ಯ ಹೆಚ್ಚಾಗಿರುವುದು. 

ಕನಿಷ್ಟ ಮನುಷ್ಯಳನ್ನಾಗಿಯೂ ನಡೆಸಿಕೊಳ್ಳದ ಸಮಾಜದಲ್ಲಿಯೇ ಹೆಣ್ಣನ್ನು ದೇವಿಗೆ ಹೋಲಿಸುವ ಮಾತಿವೆ. ಹೆಣ್ಣನ್ನು ಪ್ರಕೃತಿಗೆ ಹೋಲಿಸುವ ಒಂದಿಷ್ಟು ಮಾತುಗಳಿವೆ. Mother Nature ಅನ್ನುವ ಶಬ್ಧದಿಂದ ಹಿಡಿದು ಪುರುಷ-ಪ್ರಕೃತಿ ಅನ್ನುವ ಪದಬಳಕೆಯಿದೆ. ಯಾವ ಪ್ರಕೃತಿಗೆ ಹೆಣ್ಣನ್ನು ಹೋಲಿಸುತ್ತಾರೋ ಅದೇ ಪ್ರಕೃತಿಯ ಮೇಲೆ ಇಂದು ಅಭಿವೃದ್ಧಿಯ ಹೆಸರಲ್ಲಿ ದೌರ್ಜನ್ಯಗಳಾಗಿವೆ. ಮನುಷ್ಯ – ಪ್ರಕೃತಿಯ ನಡುವಿನ ಸಮತೋಲನ ತಪ್ಪಿದೆ. ನಾವೆಲ್ಲ ಮತ್ತೆ ಪರಿಸರ, ಪ್ರಕೃತಿ ಸಂರಕ್ಷಣೆಯ ಕುರಿತು ಮಾತಾಡುತ್ತಿದ್ದೇವೆ. 

ಹೆಣ್ಣು ಪ್ರಕೃತಿ ಹೌದೋ ಅಲ್ಲವೋ ಅನ್ನುವುದು ಬೇರೆ ಚರ್ಚೆ. ಆದರೆ, ಅವಳ ಮೇಲೆ ನಡೆಯುತ್ತಿರುವ ದೌರ್ಜನ್ಯದ, ಅವಳು ವಂಚಿತಳಾಗಿರುವ ಅವಕಾಶಗಳ ಕುರಿತು ಮಾತನಾಡಬೇಕಾಗಿರುವುದು ಖಂಡಿತಾ ಪ್ರಸ್ತುತ ಅಗತ್ಯ. ಹೆಣ್ಣುಮಕ್ಕಳೆಲ್ಲಾ ಒಳ್ಳೆಯವರಾ?, ಅವರಿಂದ ತಪ್ಪಾಗಿಲ್ವಾ?, ಅವರಿಂದ ಗಂಡಸರು ಎಷ್ಟು ನೋವು ಅನುಭವಿಸಿದಾರೆ? ಅನ್ನುವ ಮಾತುಗಳಿಗೆ ಸಾಕಷ್ಟು ಉತ್ತರಗಳಿವೆ. ಸಾಕಷ್ಟು ಆಯಾಮಗಳು ಕೂಡ. ಒಂದು ಪ್ರೀತಿ ಪ್ರೇಮ, ಸಂಬಂಧದ ಹೊರತಾಗಿ ಬೇರೆ ವಿಷಯಗಳ ಕುರಿತು ಈ ಅತಿರೇಕದ ಮಾತುಗಳು ಕಂಡುಬರೋದಿಲ್ಲ. 

ಆದರೆ ಹೆಣ್ಣು ಶತಮಾನಗಳಿಂದ ಅನುಭವಿಸಿರುವುದು, ಅನುಭವಿಸುತ್ತಿರುವುದು ಇದೆಲ್ಲದನ್ನೂ ಮೀರಿದ್ದು. ಹೆಣ್ಣಿನ ಬದುಕಿನುದ್ದಕ್ಕೂ, ಈ ಸವಾಲುಗಳು ಬರುತ್ತಲೇ ಇರುತ್ತವೆ. ಹೆಣ್ಣು ಭ್ರೂಣಹತ್ಯೆಯಂತಹ ಅಮಾನುಷ ಘಟನೆಗಳು ಇವತ್ತಿಗೂ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಿವೆ. ಅಪೌಷ್ಠಿಕತೆ, ಹೆರಿಗೆಯ ಸಮಯದಲ್ಲಿ ತಾಯಿ – ಮಗು ಸಾವು, ಅಪ್ರಾಪ್ತ ವಯಸ್ಸಿಗೆ ಗರ್ಭಧಾರಣೆ, ಬಾಲ್ಯ ವಿವಾಹಗಳು, ಶಾಲೆಯಲ್ಲಿ ಶೌಚಾಲಯದಂತಹಾ ಮೂಲ ಸೌಕರ್ಯಗಳ ಕೊರತೆಯಿಂದ ಶಾಲೆ ಬಿಟ್ಟಿರುವ ಹೆಣ್ಣಮಕ್ಕಳು, ದೌರ್ಜನ್ಯಗಳು, ಅತ್ಯಾಚಾರಗಳು, ಸಮಾನ ಅವಕಾಶದ ಕೊರತೆ, ಮೂಢನಂಬಿಕೆಗಳು, ಸೈಬರ್‌ ಅಪರಾಧಗಳು, ಬ್ಲಾಕ್‌ ಮೈಲ್‌, ಖಾಸಗಿ ವಿಡಿಯೋ ಚಿತ್ರೀಕರಣಗಳು, ವರದಕ್ಷಿಣೆ ಕಿರುಕುಳಗಳು, ಮರ್ಯಾದೆಗೇಡು ಹತ್ಯೆಗಳು, ಕೆಲಸದ ಸ್ಥಳದಲ್ಲಿ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆಗಳು ಪಟ್ಟಿ ಮಾಡುತ್ತಾ ಹೋದಂತೆ ಬೆಳೆಯುತ್ತಲೇ ಹೋಗುತ್ತದೆ. 

ಯಾರದೋ ವಿಚ್ಛೇದನ, ಯಾರದೋ ಫೋಟೋಶೂಟ್‌, ಬಟ್ಟೆ ಬರೆ ಮುಂತಾದ ಸಾಮಾಜಿಕ ಜಾಲತಾಣದ ಸುದ್ದಿಗಳು, ಬೌದ್ಧಿಕ ವಲಯದ ಚಿಂತನೆಗಳನ್ನು ಮೀರಿ, ಸಾಮಾಜಿಕ, ಆರ್ಥಿಕ, ರಾಜಕೀಯ, ಗ್ರಾಮೀಣ, ನಗರ ಎಲ್ಲಾ ವಲಯಗಳಲ್ಲೂ ಮಾತಾಡಬೇಕಾದ ಅನೇಕ ಸಮಸ್ಯೆಗಳಿವೆ. ಇದು ಹೆಣ್ಣು ಗಂಡು ಎಂಬ ಲಿಂಗ ಬೇಧವನ್ನು ಮೀರಿದ್ದು. ಒಂದು ಸಮಾಜವಾಗಿ ನಾವೆಲ್ಲರೂ ಶ್ರಮಿಸಿ ಸಾಧಿಸಬೇಕಾದ ಸಮತೆ. 

ಈ ನಿಟ್ಟಿನಲ್ಲಿ ಪ್ರತಿ ಮಹಿಳೆಯ ಪ್ರತಿ ಸಮಸ್ಯೆ ಒಂದಿಡೀ ಸಮಾಜದ ಸಮಸ್ಯೆಯಾಗುತ್ತದೆ. ಅದರ ಕುರಿತು ಧ್ವನಿಯೆತ್ತಿದಾಗ, ಆಕೆ ತನ್ನೊಬ್ಬಳ ಪರವಾಗಿ ಮಾತ್ರವಲ್ಲ, ಅವಳಿಗರಿವಿಲ್ಲದೇ ಎಲ್ಲ ಹೆಣ್ಣುಮಕ್ಕಳ ಪರವಾಗಿ ಧ್ವನಿಯೆತ್ತುತ್ತಾಳೆ. 

“Each time a woman stands up for herself, without knowing it possibly, without claiming it, she stands up for all women.” ― Maya Angelou

Related Articles

ಇತ್ತೀಚಿನ ಸುದ್ದಿಗಳು

You cannot copy content of this page