Home ರಾಜ್ಯ ಕೃತಕ ಬುದ್ಧಿಮತ್ತೆ ಹೊಣೆಗಾರಿಕೆ ಸಮಿತಿ ರಚಿಸಿದ ರಾಜ್ಯ ಸರ್ಕಾರ

ಕೃತಕ ಬುದ್ಧಿಮತ್ತೆ ಹೊಣೆಗಾರಿಕೆ ಸಮಿತಿ ರಚಿಸಿದ ರಾಜ್ಯ ಸರ್ಕಾರ

0

ಬೆಂಗಳೂರು : ಸರ್ಕಾರದ ವಿವಿಧ ಹಂತಗಳ ಆಡಳಿತ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಸುರಕ್ಷಿತ, ನೈತಿಕ ಮತ್ತು ಪಾರದರ್ಶಕ ರೀತಿಯಲ್ಲಿ ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ‘ಎಐ ಹೊಣೆಗಾರಿಕೆ ಸಮಿತಿ’ಯನ್ನು ರಚಿಸಿದೆ.

ಇನ್ಫೊಸಿಸ್‌ನ ಸಹ ಸಂಸ್ಥಾಪಕ ಮತ್ತು ಆಕ್ಸಿಲರ್ ವೆಂಚರ್ಸ್‌ನ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ಸಹಾಧ್ಯಕ್ಷತೆಯಲ್ಲಿ 13 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

ಸಮಿತಿಯ ಮೊದಲ ಸಭೆ ಗುರುವಾರ ಬೆಂಗಳೂರಿನಲ್ಲಿ ನಡೆಯಿತು. ವೇಗವಾಗಿ ಬೆಳೆಯುತ್ತಿರುವ ಎಐ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಬಳಸುವ ಬಗ್ಗೆ ಸಮರ್ಥ ಆಡಳಿತ ಚೌಕಟ್ಟು ರೂಪಿಸುವ ಅಗತ್ಯವನ್ನು ಸಭೆಯಲ್ಲಿ ಚರ್ಚಿಸಲಾಯಿತು. ನಾಗರಿಕರ ಮೇಲೆ ಪರಿಣಾಮ ಬೀರುವ ವ್ಯವಸ್ಥೆಗಳಲ್ಲಿ ಎಐ ಬಳಕೆಯ ಪ್ರಭಾವಕ್ಕೂ ವಿಶೇಷವಾಗಿ ಗಮನ ಹರಿಸಲಾಯಿತು.

ಈ ಸಮಿತಿಯು ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಎಐ ವ್ಯವಸ್ಥೆಗಳು ಸುರಕ್ಷಿತ, ನ್ಯಾಯಸಮ್ಮತ, ಪಾರದರ್ಶಕ ಹಾಗೂ ಜವಾಬ್ದಾರಿಯುತವಾಗಿರುವಂತೆ ನೀತಿ ಮಾರ್ಗಸೂಚಿಗಳನ್ನು ರೂಪಿಸುವ ಜವಾಬ್ದಾರಿಯನ್ನು ಹೊತ್ತಿದೆ.

ಈ ಕುರಿತು ಮಾತನಾಡಿದ ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, “ಕರ್ನಾಟಕ ಡೀಪ್‌ಟೆಕ್ ಯುಗಕ್ಕೆ ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ ಎಐ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಬಳಸುವುದು ಅತ್ಯಂತ ಮುಖ್ಯ. ಈ ಸಮಿತಿಯ ಮೂಲಕ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನಾಗರಿಕರ ವಿಶ್ವಾಸವನ್ನು ಕಾಪಾಡುವ ಆಡಳಿತ ಚೌಕಟ್ಟು ರೂಪಿಸಲು ಸರ್ಕಾರ ಮುಂದಾಗಿದೆ” ಎಂದು ಹೇಳಿದರು.

ಸಮಿತಿಯ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಪ್ರತಿಕ್ರಿಯಿಸಿ, “ಕೃತಕ ಬುದ್ಧಿಮತ್ತೆ ಆರ್ಥಿಕ ಬೆಳವಣಿಗೆಗೆ ಮಹತ್ತರ ಅವಕಾಶಗಳನ್ನು ನೀಡುವ ತಂತ್ರಜ್ಞಾನವಾಗಿದೆ. ಜವಾಬ್ದಾರಿಯುತ ಎಐ ಚೌಕಟ್ಟು ರೂಪಿಸುವಲ್ಲಿ ಕರ್ನಾಟಕ ದೇಶಕ್ಕೆ ಮಾದರಿಯಾಗುವ ಸಾಧ್ಯತೆ ಇದೆ. ಇದರಿಂದ ಉತ್ತಮ ಸಾರ್ವಜನಿಕ ಸೇವೆಗಳು ಹಾಗೂ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ” ಎಂದು ಅಭಿಪ್ರಾಯಪಟ್ಟರು.

You cannot copy content of this page

Exit mobile version