Wednesday, November 5, 2025

ಸತ್ಯ | ನ್ಯಾಯ |ಧರ್ಮ

ರಾಜ್ಯ ಸರ್ಕಾರ ಕೃಷಿಕರ ಕಷ್ಟವನ್ನು ಕೇಳುತ್ತಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಬ್ಬು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದರೂ ರಾಜ್ಯ ಸರ್ಕಾರ ಅವರ ಅಳಲನ್ನು ಆಲಿಸಲು ಮುಂದೆ ಬರುತ್ತಿಲ್ಲ ಎಂದು ಆರೋಪಿಸಿದರು. ಗುರ್ಲಾಪುರ ಬಳಿ ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ ₹3,500 ನೀಡುವಂತೆ ನ್ಯಾಯಯುತ ಬೇಡಿಕೆಯೊಂದಿಗೆ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರವೇ ಸ್ವತಃ ಮುಂದಾಳತ್ವ ವಹಿಸಿ ರೈತರ ಬೇಡಿಕೆಗಳನ್ನು ಈಡೇರಿಸಬೇಕಿತ್ತು. ಆದರೆ, ರಾಜ್ಯ ಸರ್ಕಾರವು ಸ್ಪಂದಿಸದ ಕಾರಣ, ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲು ತಾವು ಇಲ್ಲಿಗೆ ಬಂದಿರುವುದಾಗಿ ಅವರು ತಿಳಿಸಿದರು.

2014ರಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನದ ವೇಳೆ ಕಬ್ಬಿನ ವಿಷಯವಾಗಿಯೇ ರೈತ ವಿಠ್ಠಲ ಅರಭಾವಿ ಪ್ರಾಣ ಕಳೆದುಕೊಂಡಿದ್ದರು ಎಂಬುದನ್ನು ವಿಜಯೇಂದ್ರ ನೆನಪಿಸಿಕೊಂಡರು. ಆಗ ಬಿ.ಎಸ್.ಯಡಿಯೂರಪ್ಪನವರು ಹೋರಾಟ ಮಾಡಿ ಅಂದಿನ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇಂದು ರೈತರು ಸಂಕಷ್ಟದಲ್ಲಿದ್ದರೂ ರಾಜ್ಯ ಸರ್ಕಾರವು ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಎಂದು ಅವರು ಆಡಳಿತ ಪಕ್ಷವನ್ನು ತೀವ್ರವಾಗಿ ಟೀಕಿಸಿದರು.

ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ವಾರ್ಷಿಕವಾಗಿ 6 ಮಿಲಿಯನ್ ಟನ್ ಕಬ್ಬು ನುರಿಸುತ್ತವೆ ಮತ್ತು ಇದರಿಂದ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ ₹55 ಸಾವಿರ ಕೋಟಿ ತೆರಿಗೆ ರೂಪದಲ್ಲಿ ಬರುತ್ತದೆ. ರಾಜ್ಯದಲ್ಲಿ ಯಾರ ಸಕ್ಕರೆ ಕಾರ್ಖಾನೆಗಳಿವೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದ ವಿಜಯೇಂದ್ರ, ಸರ್ಕಾರವು ಸಕ್ಕರೆ ಕಾರ್ಖಾನೆಗಳ ಸಾಹುಕಾರರೊಂದಿಗೆ ನೇರವಾಗಿ ಮಾತುಕತೆ ನಡೆಸಬೇಕು ಹಾಗೂ ಅಧಿಕಾರಿಗಳು ಕೂಡಲೇ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.

ಇದೇ ವೇಳೆ, ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಹೊಸ ಮುಖ್ಯಮಂತ್ರಿ ಬರುತ್ತಾರೆ ಎಂಬ ಬಿ. ಶ್ರೀರಾಮುಲು ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ ವಿಜಯೇಂದ್ರ, ರಾಮುಲು ಹೇಳಿದ್ದನ್ನೇ ಸ್ವತಃ ಆಡಳಿತ ಪಕ್ಷದ ಸಚಿವರು ಮತ್ತು ಶಾಸಕರು ಕೂಡ ಹೇಳುತ್ತಿದ್ದಾರೆ. ಸರ್ಕಾರದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಯಾವ ರೀತಿಯ ಯುದ್ಧ ಆರಂಭವಾಗಿದೆ ಎಂಬುದು ಬಿಹಾರ ಚುನಾವಣೆ ಫಲಿತಾಂಶ ಬಂದ ನಂತರ ಎಲ್ಲರಿಗೂ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page