ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ್ ಜೋಶಿ ಅವರ ಕ್ಯಾಬಿನೆಟ್ ದರ್ಜೆಯ ಎಲ್ಲಾ ಸವಲತ್ತುಗಳನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ. ಕಳೆದ ಕೆಲವು ದಿನಗಳಿಂದ ನಾಡೋಜ ಮಹೇಶ್ ಜೋಷಿ ವಿರುದ್ಧ ಅಧಿಕಾರ ದುರುಪಯೋಗದಂತಹ ಗಂಭೀರ ಆರೋಪಗಳು ಮತ್ತು ಮೇಲಿಂದ ಮೇಲೆ ಪ್ರತಿಭಟನೆ ನಡೆದ ಹಿನ್ನಲೆಯಲ್ಲಿ ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಅವರಿಗೆ ಈ ವರೆಗೆ ಇದ್ದ ಸಂಪುಟ ದರ್ಜೆಯ ಎಲ್ಲಾ ಸವಲತ್ತುಗಳನ್ನು ಹಿಂಪಡೆಯುವಂತೆ ಸರ್ಕಾರ ಆದೇಶಿಸಿದೆ.
ಸಾಹಿತ್ಯ ಪರಿಷತ್ತಿನಲ್ಲಿ ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ಬೈಲಾ ತಿದ್ದುಪಡಿಯಂತಹ ಗಂಭೀರ ಪ್ರಕರಣಗಳಲ್ಲಿ ಮಹೇಶ್ ಜೋಷಿ ಹೆಸರು ಹೆಚ್ಚು ಕೇಳಿ ಬಂದಿತ್ತು. ಅಷ್ಟೇ ಅಲ್ಲದೆ ಸ್ವಜನ ಪಕ್ಷಪಾತ, ಸರ್ವಾಧಿಕಾರಿ ಧೋರಣೆ, ದಬ್ಬಾಳಿಕೆ ಮೂಲಕ ಆಡಳಿತ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಹೇಶ್ ಜೋಷಿ ಮೇಲೆ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅವರನ್ನು ವಜಾಗೊಳಿಸಿ, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಹಲವು ಜನಪರ ಸಂಘಟನೆಗಳು, ಸಾಹಿತ್ಯ ಪ್ರೇಮಿಗಳು ಇತ್ತೀಚೆಗೆ ಬಹಿರಂಗವಾಗಿ ಪ್ರತಿಭಟಿಸಿ ಸರ್ಕಾರಕ್ಕೆ ಮನವಿ ಕೂಡ ಸಲ್ಲಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್, ನಾಡು, ನುಡಿ, ಸಂಸ್ಕೃತಿ ಉಳಿಸಲು ಕೆಲಸ ಮಾಡಬೇಕು. ಆದರೆ ಮೂರು ವರ್ಷದಿಂದ ಅಧಿಕಾರ ಹಿಡಿದಿರುವ ಮಹೇಶ್ ಜೋಷಿ ಸರ್ವಾಧಿಕಾರಿ ಧೋರಣೆ, ದಬ್ಬಾಳಿಕೆ ಮೂಲಕ ಆಡಳಿತ ನಡೆಸುತ್ತಿದ್ದಾರೆ. ಪರಿಷತ್ತಿನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ, ಹೀಗಾಗಿ ಅವರ ಆಡಳಿತಾವಧಿಯಲ್ಲಿ ನಡೆದ ಅವ್ಯವಹಾರದ ತನಿಖೆ ನಡೆಸಬೇಕು ಎಂದು ಆರೋಪ ಮಾಡಲಾಗಿತ್ತು.
ಇವೆಲ್ಲವುಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವರಿಗೆ ನೀಡಲಾಗಿದ್ದ ಸಂಪುಟ ದರ್ಜೆಯ ಎಲ್ಲಾ ಸವಲತ್ತುಗಳನ್ನು ಹಿಂಪಡೆದು ಆದೇಶ ಹೊರಡಿಸಿದೆ.
