ಉದ್ಯೋಗ ಸನ್ನದ್ಧತೆಗಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಮೂಲಕ ಉದ್ಯೋಗಾವಕಾಶ ಮತ್ತು ಉದ್ಯಮಶೀಲತೆಯನ್ನು ಹೆಚ್ಚಿಸಲು ʼನಿಪುಣ ಕರ್ನಾಟಕʼ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಘೋಷಿಸಿದ್ದು, ಶೀಘ್ರದಲ್ಲೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರು ಟೆಕ್ ಶೃಂಗಸಭೆಗೆ ಮುನ್ನ ಸಚಿವರು ಆರ್ ಅಂಡ್ ಡಿ ಲ್ಯಾಬ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳ ತಜ್ಞರು ಹಾಗೂ ಪ್ರತಿನಿಧಿಗಳ ಜೊತೆ ಪರಸ್ಪರ ಸಂವಾದ ಮಾಡಿ ಸಚಿವರು ಮಾತನಾಡಿದರು
ಯುವ ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಸಚಿವರು ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವ ಮತ್ತು ಮನಃಸ್ಥಿತಿಯನ್ನು ಬೆಳೆಸಲು ವಿದ್ಯಾರ್ಥಿಗಳನ್ನು ಚರ್ಚೆಗಳು, ರಸಪ್ರಶ್ನೆಗಳು ಮತ್ತು ವಿಜ್ಞಾನ ಪ್ರದರ್ಶನಗಳಂತಹ ಜ್ಞಾನಾಭಿವೃದ್ಧಿ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತಹ ಕಾರ್ಯಕ್ರಮ ಚೌಕಟ್ಟನ್ನು ರೂಪಿಸಲು ಸಚಿವರು ಸಲಹೆ ನೀಡಿದರು.
ಕರ್ನಾಟಕ ಸರ್ಕಾರದ ಉದ್ದೇಶವು ಅತ್ಯಂತ ಸ್ಪಷ್ಟವಾಗಿದ್ದು, ನಾವು ಕೇವಲ ಹೂಡಿಕೆಯ ತಾಣವಾಗಿ ಇರಲು ಬಯಸುವುದಿಲ್ಲ.ಜ್ಞಾನ ಹಾಗೂ ಕೌಶಲ್ಯವೇ ನಮ್ಮ ಬಂಡವಾಳವಾಗಬೇಕೆಂದು ಬಯಸುತ್ತೇವೆ, ಪಿರಮಿಡ್ ಮಾದರಿಯಲ್ಲಿ ಶಿಕ್ಷಣ ಮೊದಲನೆಯದು ಹಾಗೂ ಕೌಶಲ್ಯ ಎರಡನೆಯದು, ಬೆಂಬಲಿಸುವ ಮೂರನೆಯದೆಂದರೆ ವಾಣಿಜ್ಯೀಕರಣಗೊಳ್ಳುವ ನಾವೀನ್ಯತೆಗಳು ಎಂದೂ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ನಾವು ಕರ್ನಾಟಕದಲ್ಲಿ ಅತ್ಯುತ್ತಮ ಮತ್ತು ಹೆಚ್ಚು ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಹೊಂದಿದ್ದೇವೆ, ನಮ್ಮ ಯುವ ಸಮೂಹದಲ್ಲಿ ಕೌಶಲ್ಯವನ್ನು ಸ್ಥಳೀಯವಾಗಿ ನೀಡಿ, ಜಾಗತಿಕವಾಗಿ ಉದ್ಯೋಗ ಮಾಡವ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದ ಸಚಿವರು ಪೇಟೆಂಟ್‌ಗಳನ್ನು ಪಿಚ್ ಮಾಡಲು ಶಿಕ್ಷಣತಜ್ಞರಿಗೆ ವೇದಿಕೆಯನ್ನು ರಚಿಸುವುದಾಗಿ ಹೇಳಿದರು. ಅಲ್ಲದೆ, ದೃಢೀಕರಣಕ್ಕಾಗಿ ಬಯೋ ಪೋಸ್ಟರ್‌ಗಳಿಗೆ ಐ.ಎಸ್.ಬಿ.ಎನ್ ಸಂಖ್ಯೆಗಳನ್ನು ನಿಯೋಜಿಸಲು ಮತ್ತು ಕೆಳ ಹಂತದ ನಾವೀನ್ಯಕಾರರಿಗೆ ತಮ್ಮ ಚಾತುರ್ಯವನ್ನು ಪ್ರದರ್ಶಿಸಲು ಸ್ಥಳವನ್ನು ಒದಗಿಸಲು ಸಚಿವರು ಸಮ್ಮತಿಸಿದರು. ಕರ್ನಾಟಕದಲ್ಲಿ ಬಾಹ್ಯಾಕಾಶ ಮತ್ತು ರಕ್ಷಣಾ ಉತ್ಪಾದನ ಕೇಂದ್ರ ಸ್ಥಾಪನೆ ಮಾಡವುದಾಗಿಯೂ ಸಚಿವರು ಪ್ರಕಟಿಸಿದರು.
ಬೆಂಗಳೂರು ಟೆಕ್ ಶೃಂಗಸಭೆಯು ನವೆಂಬರ್ 19 ರಿಂದ 21ರವರೆಗೆ ಬೆಂಗಳೂರು ಅರಮನೆ ಆವರಣದಲ್ಲಿ ನಡೆಯಲಿದೆ.