Monday, June 17, 2024

ಸತ್ಯ | ನ್ಯಾಯ |ಧರ್ಮ

ಹಿಂದುತ್ವ ರಾಜಕಾರಣದ ಕಥೆ – 18 : ದಡ ಸೇರಿದ ನಿವೇದನೆ

ಮೊಂಟಾಗು ಮತ್ತು ಚೆಮ್ಸ್‌ಫೋರ್ಡ್‌ ಜಂಟಿಯಾಗಿ ಸೂಚಿಸಿದ್ದ ಆಡಳಿತ ಸುಧಾರಣಾ ಕಾರ್ಯಕ್ರಮಗಳನ್ನು ೧೯೧೯ರಲ್ಲಿ ಬ್ರಿಟನ್‌ ರಾಜನಾಗಿದ್ದ ಐದನೇ ಜಾರ್ಜ್‌ ರಾಜಕೀಯ ಘೋಷಣೆಯ ಮೂಲಕ ಅಂಗೀಕರಿಸಿದ್ದರು. ಅದರ ಆರನೇ ಕಲಂ ರಾಜಕೀಯ ಖೈದಿಗಳಿಗೆ ಕ್ಷಮಾಪಣೆ ನೀಡುವುದರ ಕುರಿತಾಗಿತ್ತು. ಭಾರತದ ಜೈಲುಗಳಲ್ಲಿ ಖೈದಿಗಳಾಗಿದ್ದ ಬಹುಪಾಲು ಜನರನ್ನು ಇದರಡಿಯಲ್ಲಿ ಬಿಡುಗಡೆಗೊಳಿಸಲಾಯಿತು. ಅರವಿಂದ ಘೋಷರ ಸಹೋದರ ಬಾರಿನ್‌ ಘೋಷ್‌, ತ್ರೈಲೋಕ್ಯನಾಥ್‌ ಚಕ್ರವರ್ತಿ, ಹೇಮ ಚಂದ್ರದಾಸ್‌, ಭಾಯ್‌ ಪರಮಾನಂದ್‌ ಮೊದಲಾದವರು ಬಿಡುಗಡೆಗೊಂಡವರಲ್ಲಿ ಪ್ರಮುಖರು. ಆದರೆ, ವಿನಾಯಕ್‌ ಮತ್ತು ಸಹೋದರ ಬಾಬಾರಾವ್‌ಗೆ ಬಿಡುಗಡೆ ಭಾಗ್ಯ ಲಭಿಸಲಿಲ್ಲ. ಈ ಸಂದರ್ಭದಲ್ಲಿಯೇ ನಾವು ಕಳೆದ ಅಧ್ಯಾಯದಲ್ಲಿ ಕಂಡ ಕ್ಷಮಾಪಣಾ ಪತ್ರವನ್ನು ವಿನಾಯಕ್‌ ದಾಮೋದರ್‌ ಸಾವರ್ಕರ್‌ ಸಮರ್ಪಿಸುವುದು. ಯುದ್ಧ ಆರಂಭವಾದ ಕಾಲದಲ್ಲಿ ಬರೆದಿದ್ದ ಕ್ಷಮಾಪಣಾ ಪತ್ರದಲ್ಲಿ ರಾಜಕೀಯ ಖೈದಿಗಳಿಗೆ ಕ್ಷಮಾಪಣೆ ನೀಡಬೇಕಾಗಿರುವುದು ತನ್ನ ವೈಯಕ್ತಿಕ ಇಚ್ಛೆಯಲ್ಲವೆಂದೂ ತನ್ನನ್ನು ಬಿಟ್ಟು ಉಳಿದ ಖೈದಿಗಳನ್ನು ಬಿಡುಗಡೆಗೊಳಿಸಿದರೆ ತಾನು ಸಂತುಷ್ಟನಾಗುತ್ತೇನೆಂದೂ ವಿನಾಯಕ್‌ ಹೇಳಿಕೊಂಡಿದ್ದರು. ಆ ಹೇಳಿಕೆಯ ಮುಖವಾಡ ಪೂರ್ತಿ ಕಳಚಿ ಬೀಳುವುದನ್ನು ನಾವು ಈ ಪತ್ರದಲ್ಲಿ ಕಾಣಬಹುದು. ಬಾರಿನ್‌ ಘೋಷ್‌ ಮತ್ತು ಇತರರನ್ನು ಬಿಡುಗಡೆಗೊಳಿಸಿದ ಕಾರಣಕ್ಕೆ ಸಂತೋಷಗೊಂಡಿರುವ ಸಾವರ್ಕರನ್ನು ಇಲ್ಲಿ ಕಾಣಲು ಸಿಗುವುದಿಲ್ಲ. ಬದಲಿಗೆ, ತನ್ನನ್ನು ಬಿಡುಗಡೆಗೊಳಿಸದೆ ಅವರನ್ನು ಮಾತ್ರ ಬಿಡುಗಡೆಗೊಳಿಸಿದ ಕಾರಣಕ್ಕೆ ಅಸಹನೆಗೊಂಡಿರುವ ಸಾವರ್ಕರನ್ನು ಇಲ್ಲಿ ಕಾಣಬಹುದು. ಬಾರಿನ್‌ ಘೋಷ್‌ ಮತ್ತು ಇತರರು ಅಂಡಮಾನ್‌ ದ್ವೀಪದಲ್ಲಿ ಜೈಲಿನಿಂದ ಹೊರಗೆ ಬದುಕಬಹುದು ಎಂಬ ರೀತಿಯಲ್ಲಿ ಶಿಕ್ಷೆಯಿಂದ ರಿಯಾಯಿತಿ ಪಡೆದುಕೊಂಡು ಬದುಕುತ್ತಿದ್ದಾಗ ಅವರು ಬಾಂಬ್‌ ತಯಾರಿಸುತ್ತಿದ್ದರು ಎಂಬ ಆರೋಪ ಹೊರಿಸಿ ಅವರನ್ನು ಪುನಃ ಜೈಲಿಗೆ ಹಾಕಲಾಗಿತ್ತು. ಆ ಘಟನೆಯನ್ನು ಸಾವರ್ಕರ್‌ ಪುನಃ ಇಲ್ಲಿ ಎತ್ತಿ ಹಾಕುವುದನ್ನು ಈ ಪತ್ರದಲ್ಲಿ ಕಾಣಬಹುದು.‌ ಅದು ಕೂಡ ಬಾರಿನ್‌ ಘೋಷ್ ಮತ್ತು ಹೇಮ ಚಂದ್ರದಾಸ್‌ ಅವರ ಹೆಸರುಗಳನ್ನು ಹೇಳಿಕೊಂಡು.

ಇನ್ನೊಂದು ವೈರುಧ್ಯ ಅಫ್ಘಾನ್–ಟರ್ಕಿ ʼಭಯೋತ್ಪಾದಕʼ ದಾಳಿಯ ವಿರುದ್ಧ ಹೋರಾಡಲು ತನಗಿರುವ ಸನ್ನದ್ಧತೆಯ ಕುರಿತು. ಇಂಡಿಯಾ ಹೌಸಿನಲ್ಲಿದ್ದ ತನ್ನ ಸಹವರ್ತಿ ವೀರೇಂದ್ರನಾಥ್‌ ಚಟ್ಟೋಪಾಧ್ಯಾಯ ಮತ್ತಿತರರು ಒಟ್ಟಾಗಿ ಜರ್ಮನ್‌–ಟರ್ಕಿ ಮೈತ್ರಿಕೂಡದೊಂದಿಗೆ ಸೇರಿಕೊಂಡು ಹಿಂದೂ ಮಹಾಸಾಗರದ ಮೂಲಕ ಅಂಡಮಾನ್‌ ತಲುಪಿ ಅಲ್ಲಿಂದ ಸಾವರ್ಕರನ್ನು ಪಾರು ಮಾಡುವ ಯೋಜನೆ ಹಾಕಿಕೊಂಡಿದ್ದರು ಎಂಬ ಸಾವರ್ಕರ್‌ ಆತ್ಮಕಥೆಗಾರರ ಬರಹಗಳನ್ನು ಬುಡಮೇಲು ಮಾಡುವಂತಿದೆ ಈ ಸನ್ನದ್ಧತೆ. ವಿವರವಾದ ಸಾವರ್ಕರ್‌ ಆತ್ಮಕತೆ ಬರೆದ ವಿಕ್ರಂ ಸಂಪತ್‌ ಸ್ವತಃ ಈ ಕ್ಷಮಾಪಣಾ ಪತ್ರವನ್ನು ಸಾವರ್ಕರ್‌ ಆಮೇಲೆ ಬರೆದ ನನ್ನ ಗಡೀಪಾರು (My Transportation For Life) ಎಂಬ ಅಂಡಮಾನ್‌ ನೆನಪಿನ ಟಿಪ್ಪಣಿಗಳೊಂದಿಗೆ ತುಲನೆ ಮಾಡಿಕೊಂಡು ಇನ್ನೂ ಕೆಲವು ವೈರುಧ್ಯಗಳನ್ನು ಎತ್ತಿ ತೋರಿಸುತ್ತಾರೆ. ಈ ಕ್ಷಮಾಪಣಾ ಪತ್ರದಲ್ಲಿ ಬ್ರಿಟಿಷ್‌ ಸಂವಿಧಾನಕ್ಕೆ ನಿಷ್ಠೆ ಮತ್ತು ಅಹಿಂಸೆಯೊಂದಿಗೆ ತನಗಿರುವ ಗೌರವವನ್ನು ತೋರ್ಪಡಿಸುವ ಸಾವರ್ಕರ್‌ ನೆನಪಿನ ಟಿಪ್ಪಣಿಯಲ್ಲಿ ಇನ್ನೊಂದು ತರಹದ ರಾಜಕೀಯ ಪ್ರಚೋದನೆಗಳ ಬಗ್ಗೆ ಹೇಳಿಕೊಳ್ಳುತ್ತಾರೆ ಎಂದು ವಿಕ್ರಂ ಸಂಪತ್‌ ಬೊಟ್ಟು ಮಾಡುತ್ತಾರೆ.

ಏನೇ ಆದರೂ ಈ ಸಲ ಜೈಲಿನ ಅಧಿಕಾರಿಗಳು ಸಾವರ್ಕರ್‌ ನಿವೇದನೆಯನ್ನು ಮೇಲಕ್ಕೆ ಕಳುಹಿಸಿಕೊಡುತ್ತಾರೆ. ಸಾವರ್ಕರ್‌ ಮತ್ತು ಬಾಬಾರಾವ್‌ಗೆ ಜೈಲಿನ ʼಒಳ್ಳೆಯ ಮಕ್ಕಳುʼ ಎಂದು ರಿಪೋರ್ಟ್‌ ಕೊಟ್ಟರು. ಆದರೆ ಬಾಂಬೆ ಸರಕಾರ ಅದನ್ನೂ ತಳ್ಳಿ ಹಾಕಿತು.

೨೦೨೧ರಲ್ಲಿ ಪ್ರಕಟಗೊಂಡ ಉದಯ ಮಹೂರ್ಕರ್‌ ಮತ್ತು ಚಿರಾಯು ಪಂಡಿತ್‌ ಜಂಟಿಯಾಗಿ ಬರೆದ, ಆರ್‌ ಎಸ್‌ ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಮುನ್ನುಡಿ ಬರೆದಿರುವ, ವೀರ್‌ ಸಾವರ್ಕರ್:‌ ದಿ ಮ್ಯಾನ್‌ ಕುಡ್‌ ಹ್ಯಾವ್‌ ಪ್ರಿವೆಂಟೆಡ್‌ ಪಾರ್ಟಿಷನ್‌ ಎಂಬ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅವರು ಗಾಂಧಿಯ ಸಲಹೆಯ ಪ್ರಕಾರ ಸಾವರ್ಕರ್‌ ಕ್ಷಮಾಪಣಾ ಪತ್ರಗಳನ್ನು ಬರೆದಿದ್ದರು ಎಂದು ಭಾಷಣ ಮಾಡಿದ್ದು ದೊಡ್ಡ ಮಟ್ಟದ ವಿವಾದವಾಗಿತ್ತು. ಲಂಡನ್ನಿನಲ್ಲಿ ಕನಿಷ್ಠ ಎರಡು ಬಾರಿಯಾದರೂ ಗಾಂಧಿ ಮತ್ತು ಸಾವರ್ಕರ್‌ ಭೇಟಿ ನಡೆದಿರುವುದರ ಬಗ್ಗೆ ಇತಿಹಾಸ ಹೇಳುತ್ತದೆ. ಈ ಎರಡು ಭೇಟಿಗಳಲ್ಲೂ ಪರಸ್ಪರ ಅಭಿಪ್ರಾಯಗಳಲ್ಲಿ ಯಾವ ಒಮ್ಮತವೂ ಮೂಡಿರಲಿಲ್ಲ. ನಾವು ವಿವರವಾಗಿ ನೋಡಿದ ೧೯೧೧ರಿಂದ ೧೯೨೦ರ ತನಕ ಸಾವರ್ಕರ್‌ ಬರೆದ ಯಾವ ನಿವೇದನೆಯಲ್ಲೂ ಗಾಂಧಿ ಬರುವುದೇ ಇಲ್ಲ. ಅಂದರೆ, ದಾರಿ ತಪ್ಪಿದ ಮಗ ಮರಳಿ ಬರುವಾಗ ಸರಕಾರ ತನ್ನ ಬಾಗಿಲುಗಳನ್ನು ತೆರೆದು ಕೊಡದೆ ಬೇರೇನು ತಾನೇ ಮಾಡೀತು ಎಂದೂ, ಸಾಮ್ರಾಜ್ಯದ ಏಳಿಗೆಗಾಗಿ ಮೊದಲ ಮಹಾಯುದ್ಧದ ಮುಂಚೂಣಿಯಲ್ಲಿ ನಿಂತು ಬ್ರಿಟಿಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಯುದ್ಧ ಮಾಡುವ ಆಗ್ರಹ ವ್ಯಕ್ತಪಡಿಸುವಾಗಲೂ, ಬ್ರಿಟಿಷ್‌ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತೇನೆಂದು ಮತ್ತೆ ಮತ್ತೆ ಆಣೆ ಪ್ರಮಾಣ ಮಾಡುವಾಗಲೂ, ಬ್ರಿಟಿಷರು ಸೂಚಿಸುವಷ್ಟು ಕಾಲಕ್ಕೆ ರಾಜಕೀಯ ಚಟುವಟಿಕೆಗಳಿಂದ ಹಿಂದೆ ಸರಿಯುತ್ತೇನೆಂದು ಕಾಡಿ ಬೇಡುತ್ತಿರುವಾಗಲೂ ಗಾಂಧಿಯ ಚಿತ್ರಣ ಬರುವುದೇ ಇಲ್ಲ. ಈ ಕಾಲವೆಲ್ಲ, ಅದರಲ್ಲೂ ೧೯೧೯ರ ನಂತರ ಗಾಂಧಿ ಬ್ರಿಟಿಷರೊಂದಿಗೆ ರಾಜಿಯಿಲ್ಲದ ಹೋರಾಟಕ್ಕೆ ಧುಮುಕಿದ್ದರು.

ಗಾಂಧಿ ಸಾವರ್ಕರ್‌ ಬಿಡುಗಡೆಗಾಗಿ ಮಾನವೀಯ ನೆಲೆಯಲ್ಲಿ ಹಸ್ತಕ್ಷೇಪ ನಡೆಸುವುದು ಇದೆಲ್ಲದರ ನಂತರ. ಸಾವರ್ಕರ್‌ ಸಹೋದರರಲ್ಲಿ ಕಿರಿಯವನಾಗಿದ್ದ ನಾರಾಯಣ ರಾವ್‌ ೧೯೨೦ ಜನವರಿ ೧೮ರಂದು ಗಾಂಧಿಗೆ ಪತ್ರ ಬರೆದಿದ್ದ. ರಾಜಕೀಯ ಘೋಷಣೆಯ ಭಾಗವಾಗಿ ಸಾವರ್ಕರ್‌ ಸಹೋದರರನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲವೆಂದು ಸರಕಾರ ತಿಳಿಸಿದ ನಂತರ ನಾರಾಯಣ ರಾವ್‌ ಗಾಂಧಿಗೆ ಪತ್ರ ಬರೆದಿದ್ದ. ಈ ಸನ್ನಿವೇಶದಲ್ಲಿ ಏನು ಮಾಡಬೇಕೆಂಬ ಸಲಹೆಯನ್ನು ಕೇಳಿಕೊಳ್ಳುವ ಪತ್ರವಾಗಿತ್ತದು. ಅವರ ರಾಜಕೀಯ ನಿಲುವಿನ ಕುರಿತು ಯಾವ ಚರ್ಚೆಯೂ ಆ ಪತ್ರದಲ್ಲಿರಲಿಲ್ಲ. ಕೇವಲ ಮಾನವೀಯವಾದ ವಿಷಯ ಅದಾಗಿತ್ತು.

ʼಅವರ ದೇಹತೂಕ ೧೧೮ ಪೌಂಡ್‌ನಿಂದ ೯೫-೧೦೦ ಪೌಂಡ್‌ ಆಗಿ ಕುಸಿದಿದೆ. ಈಗ ಅವರಿಗೆ ಆಸ್ಪತ್ರೆಯಿಂದ ಸೂಚಿಸಿದ ಆಹಾರ ಕೊಡುತ್ತಿದ್ದಾರಾದರೂ ಅವರ ಆರೋಗ್ಯ ಸುಧಾರಿಸುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಕಮ್ಮಿಯೆಂದರೂ (ಅಂಡಮಾನಿಗಿಂತ) ಉತ್ತಮವಾದ ಹವಾಮಾನ ಇರುವ ಯಾವುದಾದರು ಭಾರತದ ಜೈಲಿಗೆ ಅವರನ್ನು ವರ್ಗಾಯಿಸುವುದು ಅತ್ಯಂತ ಉತ್ತಮವಾಗಿರುತ್ತದೆ. ಅವರಲ್ಲಿ ಒಬ್ಬರ ಪತ್ರ ಈ ನಡುವೆ ನನಗೆ ಲಭಿಸಿತ್ತು. ಅದರಲ್ಲಿ ಈ ಸಂಗತಿಗಳನ್ನೆಲ್ಲ ಹೇಳಿಕೊಂಡಿದ್ದಾರೆ. ಇದರ ಕುರಿತು ತಾವು ಏನು ಮಾಡಬಹುದು ಎಂದು ತಿಳಿಸಲು ಕೋರುತ್ತಿದ್ದೇನೆ.ʼ ಎಂದು ಆ ಪತ್ರ ಕೊನೆಯಾಗಿತ್ತು. ೧೯೨೦ ಜನವರಿ ೨೫ರಂದು ಗಾಂಧಿ ಅದಕ್ಕೆ ಉತ್ತರ ಬರೆದರು. ಈ ಕುರಿತು ಸಲಹೆ ನೀಡುವುದು ಕಷ್ಟಕರ ಎಂದು ಗಾಂಧಿ ಬರೆದಿದ್ದರು. ತಮ್ಮ ಸಹೋದರ ಜೈಲು ಸೇರಿರುವುದು ಪೂರ್ಣವಾದ ರಾಜಕೀಯ ಕಾರಣಗಳಿಗಾಗಿ ಎಂದು ಘೋಷಿಸುವ ಒಂದು ಬೃಹತ್‌ ಅರ್ಜಿಯನ್ನು ತಯಾರಿಸಲು ಗಾಂಧಿ ಹೇಳುತ್ತಾರೆ. ಅದರ ಜೊತೆಗೆ ತನ್ನ ಮಟ್ಟಿನಲ್ಲಿ ಆಗುವ ಕೆಲಸಗಳನ್ನು ಮಾಡುತ್ತೇನೆಂದೂ ಭರವಸೆ ನೀಡುತ್ತಾರೆ.

ಗಾಂಧಿ ಮಾತಿನಂತೆ ನಡೆದುಕೊಂಡರು. ೧೯೨೦ ಮೇ ೨೬ರಂದು ಯಂಗ್‌ ಇಂಡಿಯಾದಲ್ಲಿ ಸಾವರ್ಕರ್‌ ಸಹೋದರರು ಎಂಬ ತಲೆಬರಹದ ಲೇಖನದಲ್ಲಿ ಗಾಂಧಿ ಅವರ ಬಿಡುಗಡೆಗಾಗಿ ಆಗ್ರಹಿಸಿದರು. ರಾಜಕೀಯ ಖೈದಿಗಳಿಗೆ ಕ್ಷಮಾಪಣೆ ನೀಡಿ ಬಿಡುಗಡೆಗೊಳಿಸುವ ರಾಜಕೀಯ ಘೋಷಣೆಯನ್ನು ಗಾಂಧಿ ಸ್ವಾಗತಿಸಿದರು. ಆ ಪ್ರಕಾರ ಹಲವಾರು ರಾಜಕೀಯ ಖೈದಿಗಳ ಬಿಡುಗಡೆ ಮಾಡಿರುವುದನ್ನೂ ಶ್ಲಾಘಿಸಿದರು. ಅದರ ಜೊತೆಗೆ ಸಾವರ್ಕರ್‌ ಸಹೋದರರಿಗೂ ಆ ಬಿಡುಗಡೆ ಭಾಗ್ಯವನ್ನು ಅನ್ವಯಿಸಬೇಕೆಂದು ಗಾಂಧಿ ಆಗ್ರಹಿಸಿದರು. ʼಹಿರಿಯ ಸಾವರ್ಕರ್‌ ಮೇಲೆ ಆರೋಪಿಸಲಾಗಿರುವ ಎಲ್ಲ ಆರೋಪಗಳು ಸಾಮಾನ್ಯ ಸ್ವಭಾವದವು. ಆತ ನೇರವಾಗಿ ಅಕ್ರಮಗಳಲ್ಲಿ ಭಾಗಿಯಾಗಿಲ್ಲ. ವಿವಾಹಿತನಾಗಿರುವ ಆತನಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಅವರಿ ತೀರಿ ಹೋದರು. ಸುಮಾರು ಹದಿನೆಂಟು ತಿಂಗಳುಗಳ ಹಿಂದೆ ಪತ್ನಿಯೂ ತೀರಿ ಹೋದರು. …ಇನ್ನೊಬ್ಬ ಸಹೋದರ… ಲಂಡನ್ನಿನಲ್ಲಿ ನಡೆಸಿದ ಕೃತ್ಯಗಳ ಆಧಾರದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಅವರು ೧೯೧೧ರ ಕೊಲೆಯ ಗೂಢಾಲೋಚನೆ ಪ್ರಕರಣದಲ್ಲಿ ಬಂಧಿತರಾದವರು. ಅವರ ವಿರುದ್ಧವೂ ಹಿಂಸಾತ್ಮಕ ಚಟುವಟಿಕೆಗಳು ಸಾಬೀತಾಗಿಲ್ಲ.ʼ

ನಾರಾಯಣ ರಾವ್‌, ತನ್ನ ಅಣ್ಣಂದಿರ ಬಿಡುಗಡೆಯನ್ನು ಗುರಿಯಾಗಿಟ್ಟುಕೊಂಡು ಹಲವು ಅರ್ಜಿಗಳನ್ನು ಕಳುಹಿಸಿದ. ನಾವು ಈಗಾಗಲೆ ಕಂಡ ಹಾಗೆ ೧೯೧೫ರಲ್ಲಿ ವಿನಾಯಕ್‌ ಪತ್ನಿ ಯಮುನ ಮತ್ತು ಬಾಬಾರಾವ್‌ ಪತ್ನಿ ಯೆಶುವಾಹಿನಿ ಒಂದೊಂದು ದಯಾ ಅರ್ಜಿಯನ್ನು ಹಾಕಿದ್ದರು. ೧೯೨೦ರಲ್ಲಿ ವಿನಾಯಕ್‌ ಕಳುಹಿಸಿದ, ನಾವು ಕಳೆದ ಅಧ್ಯಾಯದಲ್ಲಿ ಗಮನಿಸಿದ ಅರ್ಜಿಯನ್ನೂ ಬ್ರಿಟಿಷ್‌ ಅಧಿಕಾರಿಗಳು ತಳ್ಳಿ ಹಾಕಿದರು. ಕ್ಷಮಾಪಣೆಯನ್ನು ಇನ್ನಷ್ಟು ವಿಸ್ತರಿಸುವ ಕುರಿತು ನಾವು ಯೋಚಿಸಿಲ್ಲ ಎಂದು ಸರಕಾರ ಅದಕ್ಕೆ ಕಾರಣವಾಗಿ ತಿಳಿಸಿತ್ತು.

ಅಂಡಮಾನ್‌ ಬದುಕಿನ ಸಮಯದಲ್ಲಿ ಮುಸ್ಲಿಂ ವಿರೋಧವನ್ನು ಎತ್ತಿಹಿಡಿದಿದ್ದ ಸಾವರ್ಕರ್‌ಗೋಸ್ಕರ ಬಾಂಬೆ ಲೆಜಿಸ್ಲೇಟಿವ್‌ ಅಸೆಂಬ್ಲಿಯಲ್ಲಿ ದನಿಯೆತ್ತಿದ್ದು ಮಾತ್ರ ಮುಸ್ಲಿಂ ಸದಸ್ಯನಾಗಿದ್ದ ಮುಹಮ್ಮದ್‌ ಫಯಾಜ್‌ ಖಾನ್.‌ ಅಸೆಂಬ್ಲಿ ದಾಖಲೆಗಳ ಪ್ರಕಾರ ೧೯೨೧ ಫೆಬ್ರವರಿ ೧೫ರ ಅಲಹಾಬಾದಿನಿನಂದ ಪ್ರಸಾರವಾಗುತ್ತಿದ್ದ ಲೀಡರ್‌ ಪತ್ರಿಕೆಯಲ್ಲಿ ಸಾವರ್ಕರ್‌ ಸಹೋದರರ ಕುರಿತು ಬಂದ ಸುದ್ದಿಯನ್ನು ಮುಂದಿಟ್ಟುಕೊಂಡು ಫಯಾಜ್‌ ಖಾನ್‌ ಅಸೆಂಬ್ಲಿಯಲ್ಲಿ ಪ್ರಶ್ನೆಗಳನ್ನು ಎತ್ತಿದ್ದರು. ಅಸೆಂಬ್ಲಿ ದಾಖಲೆಗಳಿಂದ ನಮಗೆ ಸಿಗುವ ಪ್ರಶ್ನೆಗಳು ಇಂತಿವೆ:

  1. ಕಳೆದ ಹನ್ನೊಂದೋ ಹನ್ನೆರಡೋ ವರ್ಷಗಳಿಂದ ಅವರನ್ನು ಸೆಲ್ಲಿನೊಳಗೆ ಕಠಿಣ ಬಂಧನದಲ್ಲಿಡಲಾಗಿದೆ.
  2. ಅವರಿಗೆ ಕಠಿಣವಾದ ಕೆಲಸಗಳನ್ನು ವಹಿಸಲಾಗಿದೆ.
  3. ಇಬ್ಬರಲ್ಲಿ ಹಿರಿಯ ಸಹೋದರನಿಗೆ, ಗಣೇಶ್‌ ದಾಮೋದರ್‌ಗೆ ಜ್ವರ ಮತ್ತು ದೇಹತೂಕ ಇಳಿತ ದಿನೇ ದಿನೇ ಕಾಡುತ್ತಿದೆ.
  4. ಮೆಡಿಕಲ್‌ ಆಫೀಸರ್‌ ಆತನಿಗೆ ಕ್ಷಯದ ಔಷಧೋಪಚಾರಗಳನ್ನು ಮಾಡುತ್ತಿದ್ದಾರೆ.
  5. ಆಸ್ಪತ್ರೆ ಸೂಚಿಸಿದ ಆಹಾರವನ್ನು ಆತನಿಗೆ ನೀಡಲಾಗುತ್ತಿದೆಯಾದರೂ, ಸೆಲ್ಲಿನಿಂದ ಹೊರಗೆ ಬಿಡದೆ ಬಂಧನದಲ್ಲಿಡಲಾಗಿದೆ.

ಈ ಮೇಲಿನ ವಿಷಯಗಳು ನಿಜವಾಗಿದ್ದರೆ ಕೆಳಗಿನ ಸಂಗತಿಗಳಿಗೆ ಸ್ಪಷ್ಟತೆಯನ್ನು ನೀಡಬೇಕೆಂದು ನಾನು ಸರಕಾರದ ಬಳಿ ಕೇಳಿಕೊಳ್ಳುತ್ತಿದ್ದೇನೆ.

  1. ಈ ಸಹೋದರರ ಮೇಲೆ ನಡೆಯುತ್ತಿರುವ ಈ ದಬ್ಬಾಳಿಕೆ ಸರಕಾರದ ಸಮ್ಮತಿಯೊಂದಿಗೆ ನಡೆಯುತ್ತಿದೆಯೇ?
  2. ಈ ದಬ್ಬಾಳಿಕೆ ಸರಕಾರದ ನೀತಿ ಮತ್ತು ಆಗ್ರಹಗಳಿಗೆ ವಿರುದ್ಧವಾಗಿದ್ದರೆ, ಇದನ್ನು ನಡೆಸಿದ ಅಧಿಕಾರಿಗಳ ವಿರುದ್ಧ ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಸರಕಾರ ಉದ್ದೇಶಿಸಿದೆ.
  3. ಅಂಡಮಾನಿಗೆ ತನ್ನ ಕುಟುಂಬವನ್ನು ಕರೆತರಲು ಅವರಿಗೆ ಸಮ್ಮತಿ ನಿರಾಕರಿಸಲಾಯಿತು ಎಂಬುದು ನಿಜವಾಗಿದ್ದರೆ, ಹತ್ತು ವರ್ಷಗಳ ಜೈಲುವಾಸ ಅನುಭವಿಸಿದ ನಂತರ ಶಿಕ್ಷಾನಿಯಮಗಳ ಪ್ರಕಾರ ಇರುವ ಅನುಕೂಲತೆಗಳು ಯಾವಾಗ ಅವರಿಗೆ ದೊರೆಯುತ್ತವೆ.

ಈ ಪ್ರಶ್ನೆಗಳಿಗೆ ದೊರೆತ ಉತ್ತರವನ್ನು ಕೆಳಗೆ ನೀಡಲಾಗಿದೆ:

  1. ಅಂಡಮಾನ್‌ ತಲುಪಿದ ದಿನದಿಂದ ಸಾವರ್ಕರ್‌ ಸಹೋದರರು ಜೈಲಿನಲ್ಲಿದ್ದಾರಾದರೂ ಅದು ಕಠಿಣ ಬಂಧನವಲ್ಲ. ಅವರು ರಾತ್ರಿ ಹೊತ್ತು ಸೆಲ್ಲಿನಲ್ಲಿ ಮಲಗುತ್ತಾರೆ ಮತ್ತು ಹಗಲಿನಲ್ಲಿ ಹೊರಗಡೆ ಕೆಲಸ ಮಾಡುತ್ತಾರೆ.
  2. ಅವರ ಕೆಲಸಗಳು ಸಣ್ಣ ಮಟ್ಟಿನ ದೈಹಿಕ ಶ್ರಮ ಬೇಡುವಂತವು ಮಾತ್ರ.
  3. ಗಣೇಶ್ ವೈದ್ಯರ ನಿಗಾದಲ್ಲಿದ್ದಾರೆ. ಒಂದು ಸಂಜೆ ಅವರ ದೇಹದ ಉಷ್ಣತೆ ೯೯ ಡಿಗ್ರಿ ತನಕ ಏರಿತು. ದೇಹತೂಕ ೧೧೦ ಪೌಂಡ್.‌ ಹತ್ತು ವರ್ಷಗಳ ಹಿಂದೆ ಇಲ್ಲಿ ತಲುಪಿದ ಸಮಯದಲ್ಲಿ ತೂಕ ೧೧೩ ಪೌಂಡ್‌ ಆಗಿತ್ತು.

d ಮತ್ತು e. ಆವರ ರೋಗ ಕ್ಷಯವೆಂದು ಪರೀಕ್ಷೆಯಲ್ಲಿ ಸಾಬೀತಾಗಿಲ್ಲ. ಆದರೆ, ಮುಂಜಾಗ್ರತೆ ಎಂಬ ನೆಲೆಯಲ್ಲಿ ಸೆಲ್ಲಿಗೆ ತಾಗಿಕೊಂಡಿರುವ ವರಾಂಡದಲ್ಲಿ ಅವರಿಗೆ ವ್ಯವಸ್ಥೆ ಮಾಡಲಾಗಿದೆ.

ಅದರ ನಂತರ ವಿಠ್ಠಲ್‌ ಭಾಯ್‌ ಪಟೇಲ್‌, ಜಿ.ಎಸ್‌. ಖಪಾರ್ಡೆ ಮೊದಲಾದವರು ೧೯೨೧ರಲ್ಲಿ ಸಾವರ್ಕರ್‌ ಬಿಡುಗಡೆಯ ಕುರಿತು ಅಸೆಂಬ್ಲಿಯಲ್ಲಿ ದನಿಯೆತ್ತಿದರು. ೧೯೨೧ ಮಾರ್ಚ್‌ ತಿಂಗಳಲ್ಲಿ ರಂಗಸ್ವಾಮಿ ಅಯ್ಯಂಗಾರ್‌ ಮಂಡಿಸಿದ ನಿರ್ಣಯದಲ್ಲಿ ಸಂವಿಧಾನಬದ್ಧವಾಗಿ ಬದುಕಲು ಸಾವರ್ಕರ್‌ ತೆಗೆದುಕೊಂಡ ನಿಲುವು ಪರಮಸತ್ಯವೆಂದು ಹೇಳಲಾಗಿದೆ. ಸ್ವತಃ ಸಾವರ್ಕರ್‌ ಮತ್ತು ನಂತರದ ಕಾಲದಲ್ಲಿ ಸಾವರ್ಕರೈಟುಗಳು ಎಂದು ಗುರುತಿಸಿಕೊಂಡಿರುವ ಶಿಷ್ಯಗಣಗಳು ನಿರಂತರವಾಗಿ ನಿರಾಕರಿಸಿಕೊಂಡು ಬಂದಿರುವ ವಾಸ್ತವವನ್ನು ಇಲ್ಲಿ ರಂಗಸ್ವಾಮಿ ಅಯ್ಯಂಗಾರ್‌ ನಿಜವೆಂದೇ ಒಪ್ಪಿಕೊಳ್ಳುತ್ತಿದ್ದಾರೆ.

ಈ ನಡುವೆ ಅಂಡಮಾನ್‌ ಜೈಲಿನ ಮುಖ್ಯ ಉತ್ಪನ್ನಗಳಲ್ಲಿ ಒಂದಾಗಿದ್ದ ಕೊಬ್ಬರಿ ಎಣ್ಣೆಯ ತಯಾರಿಯ ಮುಂದಾಳಾಗಿ ಸಾವರ್ಕರ್‌ ಅವರನ್ನು ನೇಮಿಸಲಾಗಿತ್ತು. ಪ್ರತಿ ತಿಂಗಳು ಒಂದು ರೂಪಾಯಿ ಸಂಬಳ ಲಭಿಸುತ್ತಿತ್ತು. ಇದರ ಜೊತೆಗೆ ಹಿಂದಿ ರಾಷ್ಟ್ರಭಾಷೆಯಾಗಬೇಕೆಂಬ ನಿಟ್ಟಿನಲ್ಲಿ ಪ್ರಚಾರ ಕಾರ್ಯಗಳನ್ನು ಶುದ್ಧಿಚಳುವಳಿಯ ಜೊತೆಗೆ ನಡೆಸುತ್ತಿದ್ದರು. ನಂತರದ ಕಾಲದ ಹಿಂದುತ್ವದ ಶಕ್ತಿಶಾಲಿ ಘೋಷಣೆಗಳಲ್ಲಿ ಒಂದಾದ ಹಿಂದು, ಹಿಂದಿ, ಹಿಂದೂಸ್ತಾನ್‌ ಎಂಬುದರಲ್ಲಿ ಮೊದಲೆರಡು ಚಟುವಟಿಕೆಗಳನ್ನು ಸಾವರ್ಕರ್‌ ಅಂಡಮಾನಿನಲ್ಲಿಯೇ ಆರಂಭಿಸಿದ್ದರು. ಅಭಿನವ್‌ ಭಾರತ್‌ನ ಭಾಷಾ ಶೈಲಿಯಲ್ಲಿಯೇ ಇದರ ನೆರಳು ಕಾಣಬಹುದಾಗಿತ್ತು. ದೇವನಾಗರಿ ಲಿಪಿಯನ್ನು ಭಾರತದ ಎಲ್ಲ ಭಾಷೆಗಳ ಬರವಣಿಗೆಗೆ ಬಳಸಬೇಕೆಂಬುದು ಅಭಿನವ್‌ ಭಾರತ್‌ ಮುಂದಿಟ್ಟಿದ್ದ ಲಿಪಿ ಪರಿಕಲ್ಪನೆ. ಮರಾಠಾ ಪ್ರಾಂತ್ಯದ ಹೊರಗೆ ಹಿಂದೂ ಸಂಘಟನಾತ್ಮಕ ಚಳುವಳಿಗೆ ಮುಂದಾಳುತ್ವ ನೀಡಿದ್ದ ಆರ್ಯಸಮಾಜ ತರಹದ ಸಂಘಟನೆಗಳು ಮತ್ತು ಬನಾರಸಿನ ನಗರಪ್ರಚಾರಿಣಿ ಸಭೆಗಳು ಹಿಂದಿ ಮತ್ತು ದೇವನಾಗರಿ ಲಿಪಿಗಳಿಗೆ ದೊಡ್ಡ ಮಟ್ಟದ ಪ್ರಚಾರ ಕಾರ್ಯಗಳನ್ನು ನಡೆಸಿದವು.

ಹಿಂದಿ ಎಂಬ ಭಾಷೆಯ ಮೇಲಿನ ಪ್ರೀತಿಗಿಂತ ಉರ್ದು ಭಾಷೆಯ ಮೇಲಿನ ದ್ವೇಷವೇ ಹಿಂದೂ ಸಂಘಟಬೆಗಳ ಹಿಂದಿ ಪ್ರೇಮದ ಹಿನ್ನೆಲೆಯಲ್ಲಿ ಕೆಲಸ ಮಾಡಿತ್ತು. ಜೊತೆಗೆ ದೇವನಾಗರಿ ಲಿಪಿಗಾಗಿ ವಾದಿಸುವುದರ ಹಿಂದೆ ಸಂಸ್ಕೃತದ ಮೇಲಿನ ಮೋಹವೂ ಇತ್ತು. ಹಿಂದುತ್ವ ರಾಜಕಾರಣದ ಮೂಲಬಿಂದುವೆಂದು ಕರೆಯಬಹುದಾದ ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮಿನ ಅತ್ಯಂತ ಪ್ರಮುಖ ಮುಖಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವುದು ಮುಸ್ಲಿಂ ವಿರೋಧಿತನ ಆಗಿತ್ತು. ಅದು ಸಾಮಾಜಿಕವಾಗಿ ಮಾತ್ರ ಪ್ರಕಟಗೊಂಡಿರಲಿಲ್ಲ. ಸಂಸ್ಕೃತಿಯೊಳಗೆ ನುಸುಳುವುದು ಆರಂಭದಿಂದಲೂ ಅದರ ಶೈಲಿಯಾಗಿತ್ತು. ಸರಕಾರಿ ದಾಖಲೆಗಳೆಲ್ಲವೂ ಉರ್ದು ಭಾಷೆಯಲ್ಲಿ ಇರುತ್ತಿದ್ದವು. ಉರ್ದು ಭಾಷೆಯನ್ನು ಬರೆಯಲು ಬಳಸುವ ಪರ್ಷಿಯನ್‌ ಲಿಪಿಯಲ್ಲಿಯೇ ಹಿಂದಿ ಭಾಷೆಯನ್ನೂ ಬರೆಯಲಾಗುತ್ತಿತ್ತು. ಭಾಷೆಗೆ ಧಾರ್ಮಿಕತೆಯನ್ನು ಲೇಪಿಸುವುದು ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮಿನ ಮುಖ್ಯ ಸಾಂಸ್ಕೃತಿಕ ಹಸ್ತಕ್ಷೇಪ. ಈ ಹಸ್ತಕ್ಷೇಪವನ್ನೇ ಸಾವರ್ಕರ್‌ ಜೈಲೊಳಗೆ ನಡೆಸುತ್ತಿದ್ದದ್ದು. ಶಾಲೆಗಳಲ್ಲಿ ಉರ್ದು ಭಾಷೆಯನ್ನು ಮುಖ್ಯ ಭಾಷೆಯಾಗಿ ಕಲಿಸುವುದರ ವಿರುದ್ಧವೂ ಸಾವರ್ಕರ್‌ ಇದೇ ಹೊತ್ತಲ್ಲಿ ದನಿಯೆತ್ತಿದ್ದರು.

೧೯೨೦ ಆಗಸ್ಟ್‌ ೧ರಂದು ಬಾಲಗಂಗಾಧರ ತಿಲಕ್‌ ನಿಧನ ಹೊಂದಿದರು. ಕಾಂಗ್ರೆಸ್ಸನ್ನು ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ಬೃಹತ್‌ ಚಳುವಳಿಯಾಗಿಸುವ ಕನಸು ಕೈ ಮೀರಿ ಹೋಗಿತ್ತು. ಗಾಂಧಿ ಅದನ್ನು ಬಹುಜನ ಚಳುವಳಿಯಾಗಿ ಬೆಳೆಸಲು ಅತಿ ಕಠಿಣವಾಗಿ ದುಡಿಯುತ್ತಿದ್ದರು. ಮುಸ್ಲಿಮರನ್ನು ಜೊತೆಸೇರಿಸಿಕೊಂಡು ಮಾತ್ರವೇ ಅದು ಸಾಧ್ಯವಾಗುವುದು ಎಂದು ಭಾರತದ ಬಹುತ್ವದ ಮೂಲಭೂತ ಅರಿವು ಇರುವ ಎಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದ್ದ ವಾಸ್ತವಕ್ಕೆ ಗಾಂಧಿ ತಲುಪಿದ್ದರು. ಹಿಂದೂ ಸಂಘಟನಾ ಚಳುವಳಿಗಳು ವಿವಿಧ ಜಾತಿಗಳ ಜನರನ್ನು ಒಂದೇ ಕೊಡೆಯಡಿಗೆ ತರುವ ಪ್ರಯತ್ನದಲ್ಲಿ ಮುಳುಗಿದ್ದಾಗ, ಗಾಂಧಿ ಭಾರತದ ಬಹುತ್ವವನ್ನು ಒಂದು ಸಾಮುದಾಯಿಕ ಸಂಗೀತದ ಕಡೆಗೆ, ಸಾಮಾಜಿಕ ಬದುಕು ಮತ್ತು ರಾಜಕೀಯ ಬದುಕುಗಳ ನಡುವಿನ ಸಾಮಾನ್ಯ ರಂಗಕ್ಕೆ, ಸಂಗ್ರಹಿಸುವ ಪ್ರಯತ್ನದಲ್ಲಿ ಮುಳುಗಿದ್ದರು. ಇದು ಸಹಜವಾಗಿಯೇ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮನ್ನು ಸಂಘರ್ಷಕ್ಕೆ ಈಡು ಮಾಡಿತು. ಸಾಮ್ರಾಜ್ಯಶಾಹಿ ವಿರೋಧ ಗಾಂಧಿಯನ್‌ ರಾಜಕಾರಣದ ಕೇಂದ್ರಬಿಂದುವಾಗಿ ಬದಲಾಗಿತ್ತು. ಅದೇ ಹೊತ್ತು ಬ್ರಿಟಿಷ್‌ ವಿರೋಧ ಎಂಬುದು ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ಅಜೆಂಡಾದಿಂದ ಸಂಪೂರ್ಣವಾಗಿ ಮಾಯವಾಗಿತ್ತು.

ಟರ್ಕಿಯ ಅಟೋಮನ್‌ ಸಾಮ್ರಾಜ್ಯ ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ ಜರ್ಮನಿ ನೇತೃತ್ವದ ಶಕ್ತಿಗಳೊಂದಿಗೆ ಸೇರಿಕೊಂಡು ಬ್ರಿಟನ್‌ ಸದಸ್ಯ ರಾಷ್ಟ್ರವಾಗಿದ್ದ ಮಿತ್ರರಾಷ್ಟ್ರಗಳ ವಿರುದ್ಧ ಯುದ್ಧಕ್ಕೆ ಹೊರಟದ್ದನ್ನು ನಾವು ಈಗಾಗಲೇ ಚರ್ಚಿಸಿದೆವು. ಯುದ್ಧದ ಕೊನೆಯಲ್ಲಿ ಟರ್ಕಿ ಸೋತರೂ ಕೂಡ ಬ್ರಿಟಿಷ್ ಪ್ರಧಾನ ಮಂತ್ರಿ ಲಾಯ್ಡ್‌ ಜಾರ್ಜ್‌ ಮತ್ತು ಅಮೇರಿಕಾ ಅಧ್ಯಕ್ಷ ವುಡ್ರೋ ವಿಲ್ಸನ್‌ ಸೇರಿಕೊಂಡು ಟರ್ಕಿ ಸುಲ್ತಾನ್‌ ಮತ್ತು ಇಸ್ಲಾಂ ಚರಿತ್ರೆಯಲ್ಲಿ ಮುಖ್ಯ ಪಾತ್ರ ವಹಿಸುವ ಖಲೀಫಾಗೆ, ಯುದ್ಧದಲ್ಲಿ ಸೋತರೂ ಕೂಡ, ಗೌರವಯುತವಾದ ರಾಜಿ ಒಪ್ಪಂದಗಳ ವಾಗ್ದಾನ ನೀಡಿದ್ದರು. ಆದರೆ, ಕೊನೆಗೆ ಅವರು ಅದು ಯಾವುದನ್ನೂ ಪಾಲಿಸದೆ ಟರ್ಕಿಯನ್ನು ಒಡೆದು ಚೂರು ಮಾಡಿದರು. ಟರ್ಕಿ ವಿಭಜನೆಗೊಂಡು ಒಂದು ಭಾಗ ಗ್ರೀಸ್‌ಗೂ ಇನ್ನೊಂದು ಭಾಗ ಬ್ರಿಟನ್‌ ಮತ್ತು ಫ್ರಾನ್ಸ್‌ಗಳಿಗೂ ಲಭಿಸಿತು. ಖಲೀಫಾ ಬರಿಯ ನೆರಳು ಮಾತ್ರವಾಗಿ ಬದಲಾದ.

ಇದರ ಅಲೆಗಳು ಇಂಡಿಯನ್‌ ಮುಸ್ಲಿಮರ ನಡುವೆಯೂ ಮಾರ್ದನಿಸಿತು. ಮೌಲಾನಾ ಮುಹಮ್ಮದ್‌ ಅಲಿ ಜೌಹರ್‌, ಶೌಕತ್‌ ಅಲಿ, ಮೌಲಾನಾ ಅಬುಲ್‌ ಕಲಾಂ ಆಝಾದ್‌, ಹಕೀಂ ಅಜ್ಮಲ್‌ ಖಾನ್‌ ಮೊದಲಾದವರು ಸೇರಿಕೊಂಡು ಈ ವಿಷಯದ ಮೇಲೆ ರಚಿಸಿದ ಮೈತ್ರಿಕೂಟದೊಂದಿಗೆ ಗಾಂಧಿಯೂ ಸಹಮತ ಸೂಚಿಸಿದರು. ೧೯೧೯ ನವೆಂಬರ್‌ ೨೩ರಂದು ಗಾಂಧಿಯನ್ನು ಖಿಲಾಫತ್‌ ಚಳುವಳಿಯ ಅಧ್ಯಕ್ಷನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಲ್ಲಿಯ ತನಕ ಕಾಣದಿದ್ದ ರೀತಿಯಲ್ಲಿ ಹಿಂದೂ ಧರ್ಮದ ವಿಭಿನ್ನ ಜಾತಿಗಳ ಜನರು ಮತ್ತು ಮುಸ್ಲಿಮರು ಸಾಮ್ರಾಜ್ಯಶಾಹಿ ವಿರೋಧವನ್ನೇ ತಮ್ಮ ಮೂಲಭೂತ ಧ್ಯೇಯವಾಗಿಸಿ ರಾಜಕಾರಣದಲ್ಲಿ ಕೈಗೂಡಿಸಿದರು. ಇದು ತಿಲಕರ ವಾರೀಸುದಾರರಾಗಿದ್ದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸ್ಟ್‌ಗಳಿಗೆ ಅರಗಿಸಿಕೊಳ್ಳುವ ಸಂಗತಿಯಾಗಿರಲಿಲ್ಲ. ಅವರಿಗೆ ಮತ್ತು ಇತರ ರೀತಿಯಲ್ಲಿ ಭಿನ್ನಮತ ಹೊಂದಿದ್ದವರಿಗೆ ೧೯೨೦ ಜೂನ್‌ ೨ರ ಯಂಗ್‌ ಇಂಡಿಯಾದಲ್ಲಿ ಗಾಂಧಿ ಉತ್ತರ ನೀಡಿದರು.

‘ಭಾರತದ ಮುಹಮ್ಮದೀಯರ ಬಗ್ಗೆ ನನಗೆ ಆಸಕ್ತಿ ಇಲ್ಲದಿರುತ್ತಿದ್ದರೆ ಟರ್ಕಿಯ ಕ್ಷೇಮ ಸಮಾಚಾರದಲ್ಲಿ ಆಸ್ಟ್ರಿಯಾ ಅಥವಾ ಪೋಲೆಂಡಿನ ಸಮಾಚಾರದಂತೆ ನನಗೆ ಯಾವ ಆಸಕ್ತಿಯೂ ಇರುತ್ತಿರಲಿಲ್ಲ. ಆದರೆ, ಒಬ್ಬ ಭಾರತೀಯನೆಂಬ ನೆಲೆಯಲ್ಲಿ ಸಹ ಭಾರತೀಯನ ದುರಿತಗಳನ್ನೂ ಯೋಚನೆಗಳನ್ನೂ ಹಂಚಿಕೊಳ್ಳಬೇಕಾಗಿರುವುದು ನನ್ನ ಕರ್ತವ್ಯ. ಹಿಂದೂಗಳಿಗೆ ಮುಹಮ್ಮದೀಯರೊಂದಿಗೆ ಕೈ ಜೋಡಿಸಲು ಇರುವ ವ್ಯಾಪ್ತಿ… ಅದಕ್ಕಿರುವ ಸುಲಭ ದಾರಿ ಎಂದರೆ… ನನ್ನ ಮುಹಮ್ಮದೀಯ ಸ್ನೇಹಿತನಿಗಾಗಿ, ನ್ಯಾಯಯುತವಾದ ಕಾರ್ಯವೊಂದರಲ್ಲಿ, ಇನ್ನಿಲ್ಲದ ಹಾಗೆ ಸಹಿಷ್ಣುತೆ ಹೊಂದುವುದೇ ಆಗಿದೆ. ಆದ್ದರಿಂದ ನಾನು ಆ ದಾರಿಯ ಕೊನೆಯವರೆಗೆ ಆತನ ಜೊತೆ ನಡೆಯಬಲ್ಲೆ̤.ʼ

ತಿಲಕರ ಹಾಗೆ, ಅದರ ನಂತರ ಸಾವರ್ಕರ್‌ ಹಾಗೆ ಚಿತ್ಪಾವನ ಬ್ರಾಹ್ಮಣರೊಂದಿಗೋ ಅಥವಾ ಬ್ರಾಹ್ಮಣ ಕುಲದೊಂದಿಗೋ ಮಾತ್ರ ಸಂವಾದ ನಡೆಸುವ ಮಾತು ಅದಾಗಿರಲಿಲ್ಲ. ಸಾಮಾಜಿಕ ಪ್ರಾಬಲ್ಯವನ್ನು ವಾಸ್ತವವಾಗಿಟ್ಟುಕೊಂಡಿದ್ದ ಸಂಪ್ರದಾಯವಾದಿ ಬ್ರಾಹ್ಮಣರನ್ನು ರಾಜಕೀಯದಲ್ಲೂ ಮೇಲುಗೈ ಸಾಧಿಸುವವರನ್ನಾಗಿಸಲು, ಅದರ ಫಲಾನುಭವಿಗಳನ್ನಾಗಿಸಲು ಪ್ರೇರೇಪಿಸುವ, ಪ್ರಗತಿಪರ ವಿಚಾರಧಾರೆಯ ವಕ್ತಾರರನ್ನು ಹಿಮ್ಮೆಟ್ಟಿಸುವ, ಇತರ ಧರ್ಮಗಳೊಂದಿಗೆ ಸಂವಾದ ಸಾಧ್ಯವಲ್ಲದ ಒಂದೇ ಒಂದು ಪದವಾಗಲೀ, ಮಾತಾಗಲೀ ಅದರಲ್ಲಿ ಇರಲಿಲ್ಲ. ಅದು ಮಾತನಾಡುತ್ತಿರುವುದು ಹಿಂದೂ ಎಂಬ ವಿಶಾಲ ವ್ಯಾಪ್ತಿಯಲ್ಲಿ ಇರುವವರೊಂದಿಗೆ ಹೌದಾದರೂ, ತಮ್ಮೊಳಗೆ ಕೇಂದ್ರೀಕರಿಸಲು ಇಲ್ಲಿ ಹೇಳುತ್ತಿಲ್ಲ. ಬದಲಿಗೆ ಸುತ್ತಲು ವ್ಯಾಪಿಸಿಕೊಂಡು ಬೆಳೆಯುವ ಮಾತು ಇಲ್ಲಿದೆ. ಗೋಖಲೆ ಮತ್ತು ಅಗರ್ಕರ್‌ ಅವರುಗಳ ಬೌದ್ಧಿಕ ತಾಲೀಮುಗಳೂ ಇದರಲ್ಲಿ ಕಾಣಿಸುವುದಿಲ್ಲ. ಬದಲಿಗೆ, ತಮ್ಮೊಳಗೆ ಬೌದ್ದಿಕತೆ ಬೆಳೆಯುವುದಲ್ಲಿ, ತಾವು ಯಾರ ಬಳಿ ಹೋಗಿ ನಿಲ್ಲಬೇಕಾಗಿದೆಯೋ ಆ ಒರೆಗಲ್ಲಿನಲ್ಲಿ ಬೌದ್ದಿಕತೆ ಬೆಳೆಯಬೇಕಾಗಿರುವುದು ಎಂಬ ಹೊಸತೇ ಒಂದು ದರ್ಶನವನ್ನು ಇಲ್ಲಿ ಕಾಣಬಹುದು. ಶರೀರದ ಮೂಲಕವೂ, ಚಿಂತನೆಗಳ ಮೂಲಕವೂ ಸಹಿಷ್ಣುತೆ ಹೊಂದುವುದರಿಂದ ಸಮಾನತೆಯಿಂದ ಕೂಡಿದ ಸಾಂಸ್ಕೃತಿಕ ಮತ್ತು ಸಾಮಾಜಿಕ ವಾತಾವರಣ ನಿರ್ಮಿಸುವುದು ಸಾಧ್ಯ ಎಂಬ ಅಪಾರ ಆತ್ಮವಿಶ್ವಾಸವನ್ನೂ ಇಲ್ಲಿ ಕಾಣಬಹುದು.

ಆ ಹೊಸ ದನಿ ಹೊಸ ರಾಜಕಾರಣವನ್ನು ಹುಟ್ಟು ಹಾಕಿತು. ಅದು ಸೃಷ್ಟಿಸಿದ ಹೊಸ ಶಕ್ತಿ ಅಸಹಕಾರ ಚಳುವಳಿಯಲ್ಲಿ ಭಾರತದ ಎಲ್ಲ ಜಾತಿಯ ಜನರ ಜೊತೆಗೆ ಮುಸ್ಲಿಮರನ್ನೂ ಅಣಿನೆರೆಸಲು ಸಾಧ್ಯವಾಗಿಸಿತು. ಹಳೆಯ ರಾಜಕಾರಣವನ್ನು ಅದು ಹಿಮ್ಮೆಟ್ಟಿಸಿತು.

೧೯೨೧ ಜಜವರಿ ೧೯ರಂದು ಗುಜರಾತಿನಲ್ಲಿ ಗಾಂಧಿ ಮಾಡಿದ ಭಾಷಣದಲ್ಲೂ ಈ ಹೊಸ ಭಾಷೆಯನ್ನು ಕಾಣಬಹುದು.

ʼಹಿಂದೂ ಸನ್ಯಾಸಿಗಳ ಬಳಿ ನಾನು ಹೇಳುವುದೇನೆಂದರೆ, ಅವರು ತಮ್ಮೆಲ್ಲವನ್ನು ಖಿಲಾಫತಿಗೋಸ್ಕರ ತ್ಯಾಗ ಮಾಡುತ್ತಾರಾದರೆ, ಹಿಂದೂ ಧರ್ಮವನ್ನು ರಕ್ಷಿಸಲು ಬೇಕಾಗಿ ಮಾಡುವ ಅತ್ಯಂತ ದೊಡ್ಡ ಕಾರ್ಯ ಅದಾಗಿರುತ್ತದೆ. ಇಂದು ಮುಸ್ಲಿಮರನ್ನು ಆಪತ್ತಿನಿಂದ ರಕ್ಷಿಸಬೇಕಾಗಿರುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ. ನೀವು ಅದನ್ನು ಮಾಡುವುದೇ ಆದರೆ, ಹಿಂದೂಗಳನ್ನು ತಮ್ಮ ಸಹೋದರರಂತೆ ಕಾಣಲು ದೇವರು ಅವರನ್ನು ಪ್ರೇರೇಪಿಸುತ್ತಾನೆ. ಹಿಂದೂಗಳು ಮುಸ್ಲಿಮರನ್ನೂ ಗೆಳೆಯರಂತೆ ಕಾಣುತ್ತಾರೆ.ʼ

ತಿಲಕ್‌, ತಿಲಕೈಟ್‌ಗಳು, ಸಾವರ್ಕರ್‌, ಅಭಿನವ್‌ ಭಾರತ್‌, ಭಾಯ್‌ ಪರಮಾನಂದ್‌, ಬಂಗಾಲಿ ಕ್ರಾಂತಿಕಾರಿಗಳಲ್ಲಿ ಹಲವರು… ಇವರು ಯಾರು ಕೂಡ ಮಾತನಾಡಿದ ಭಾಷೆ ಅದಾಗಿರಲಿಲ್ಲ. ಹಳೆಯ ಜಾತ್ಯಾತೀತತೆಯ ಭಾಷೆಯೂ ಅಲ್ಲ. ಬದಲಿಗೆ, ಪ್ರಜಾಪ್ರಭುತ್ವ ಪ್ರಜ್ಞೆಯ ಅಧ್ಯಾತ್ಮವನ್ನಾಗಿ ಸೌಹಾರ್ದತೆಯನ್ನು ಪ್ರತಿಷ್ಠಾಪಿಸುವ ಭಾಷೆಯಾಗಿತ್ತದು. ೧೯೨೦ರ ನಾಗ್ಪುರ ಕಾಂಗ್ರೆಸ್‌ ಅಧಿವೇಶನದಲ್ಲೂ ಈ ಸ್ವರವನ್ನು ಗುರುತಿಸಬಹುದು. ಗಾಂಧಿಯ ಅಸಹಕಾರ ಚಳುವಳಿಯನ್ನು ರಾಜಕೀಯವಾಗಿ ಆ ಅಧಿವೇಶನ ಕೈಗೆತ್ತಿಕೊಂಡಿತ್ತು.

ಇದೇ ಹೊತ್ತು ಕ್ಷಮಾಪಣಾ ಪತ್ರಗಳ ಮೂಲಕ ಬ್ರಿಟಿಷರೊಂದಿಗೆ ಒಪ್ಪಂದಕ್ಕೆ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದ ವಿನಾಯಕ್‌, ಖಿಲಾಫತ್‌ ಚಳುವಳಿಯನ್ನು ಹೀಗಳೆಯುವ ಮೂಲಕ ಬ್ರಿಟಿಷರೊಂದಿಗೆ ಆತ್ಮೀಯತೆ ಸಾಧಿಸಬಹುದು ಎಂದು ಭಾವಿಸಿರಬಹುದು. ಅಥವಾ, ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ರಾಜಕೀಯ ಕೀಲಿಗೈಯಂತೆ ಮುಸ್ಲಿಂ ವಿರೋಧಿ ಚಿಂತನೆಯನ್ನು ಗಟ್ಟಿಗೊಳಿಸಿದ್ದ ಸಾವರ್ಕರ್‌ಗೆ ಹಿಂದೂ-ಮುಸ್ಲಿಂ ಸೌಹಾರ್ದತೆಯೆಂಬುದು ಬೆಚ್ಚಿ ಬೀಳಿಸುವ ಸಂಗತಿಯಾಗಿ ಕಂಡಿರಬಹುದು. ಖಿಲಾಫತನ್ನು ‌ʼಆಪತ್ʼ (ಆಪತ್ತು) ಎಂದು ಸಾವರ್ಕರ್‌ ಕರೆದಿದ್ದರು.

ಅಸಹಕಾರ ಚಳುವಳಿಯಲ್ಲಿ ಗಾಂಧಿ ಬಂಧಿತರಾದರು. ಗಾಂಧಿಯ ನಾಯಕತ್ವದಲ್ಲಿ ಭಿನ್ನಮತ ಹೊಂದಿದ ಮೋತಿಲಾಲ್‌ ನೆಹರು ಮತ್ತು ಚಿತ್ತರಂಜನ್‌ ದಾಸ್‌ ಕಾಂಗ್ರೆಸ್ಸಿಗೆ ರಾಜಿನಾಮೆ ನೀಡಿದರು. ತಿಲಕರ ಹಿಂಬಾಲಕ ಬ್ರಾಹ್ಮಣರು ಸೇರಿಕೊಂಡು ೧೯೨೨ರಲ್ಲಿ ಸ್ವರಾಜ್‌ ಪಾರ್ಟಿ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದರು.

ಬ್ರಿಟಿಷರೊಂದಿಗೆ ನೇರ ಹಣಾಹಣಿಗೆ ಇಳಿದಿದ್ದ ಗಾಂಧಿ ಜೈಲು ಪಾಲಾಗುವ ಹಂತದಲ್ಲಿರುವಾಗ, ಅತ್ತ ಕಡೆ ಸಾವರ್ಕರ್‌ ಬ್ರಿಟಿಷರೊಂದಿಗೆ ಸ್ನೇಹ ಸಾಧಿಸಿ ಜೈಲಿನಿಂದ ಹೊರ ಬರುವ ಯೋಜನೆಯಲ್ಲಿದ್ದರು. ೫೦ ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿ ಅಂಡಮಾನ್‌ ಪಾಲಾಗಿದ್ದ ಸಾವರ್ಕರ್‌ಗೆ ೧೯೨೧ರಲ್ಲಿ ಅಲ್ಲಿಂದ ಬಿಡುಗಡೆ ಲಭಿಸುತ್ತದೆ. ಭಾರತ ಭೂಖಂಡಕ್ಕೆ ಜೈಲುಶಿಕ್ಷೆಯನ್ನು ವರ್ಗಾಯಿಸುವ ಆಜ್ಞೆ ಸಾವರ್ಕರ್‌ ಕೈ ಸೇರುತ್ತದೆ. ಕ್ಷಮಾಪಣಾ ಪತ್ರಗಳ ಅತಿಮುಖ್ಯ ಬೇಡಿಕೆ ನೆರವೇರಿಸದಿದ್ದರೂ ಒಂದು ಉಪ ಬೇಡಿಕೆಯನ್ನು ನೆರವೇರಿಸುವ ಮೂಲಕ ಭವಿಷ್ಯತ್ತಿನ ಹಸಿರು ಬಾವುಟವನ್ನು ಬ್ರಿಟಿಷರು ಸಾವರ್ಕರ್‌ ಎದುರಿಗೆ ಮೊದಲ ಬಾರಿ ಹಿಡಿದು ನಿಂತಿದ್ದರು. ಸಾವರ್ಕರನ್ನು ಸಾಮ್ರಾಜ್ಯಶಾಹಿಗೆ ಭಾರತದಲ್ಲಿ ಬಳಸಬಹುದಾದ ಬಲಿಷ್ಠ ಆಯುಧವಾಗಿ ಕಂಡ ಬ್ರಿಟಿಷರು, ವಿಲ್ಲಿ ಮತ್ತು ಜಾಕ್ಸನ್‌ ಕೊಲೆಗಳನ್ನು ಮರೆಯಲು ಪ್ರಯತ್ನಿಸಿದರು.

೧೯೨೧ ಮೇ ೨೬ರಂದು, ತನ್ನನ್ನು ಪೋರ್ಟ್‌ ಬ್ಲೇರಿಗೆ ಕೊಂಡು ಹೋಗಿದ್ದ ಅದೇ ಎಸ್‌.ಎಸ್. ಮಹಾರಾಜ ಹಡಗಿನಲ್ಲಿ ವಿನಾಯಕ್‌ ದಾಮೋದರ್‌ ಸಾವರ್ಕರ್‌ ಮತ್ತು ಗಣೇಶ್‌ ದಾಮೋದರ್‌ ಸಾವರ್ಕರ್‌ ಎಂಬ ಬಾಬಾರಾವ್‌ ಕಲ್ಕತ್ತಾ ತಲುಪಿದರು. ಅವರನ್ನು ಮೊದಲಿಗೆ ಅಲಿಪುರ ಜೈಲಿನಲ್ಲಿ ಇಡಲಾಗಿತ್ತು. ಅಲ್ಲಿ ಇಬ್ಬರು ಪೊಲೀಸರ ಮಾತುಕತೆಯ ಮೂಲಕ ತಾನು ಅಂಡಮಾನಿನಲ್ಲಿದ್ದಾಗ ಭಾರತದ ರಾಜಕಾರಣದಲ್ಲಿ ಗಾಂಧಿ ಎಷ್ಟೆಲ್ಲ ವ್ಯಾಪಿಸಿದರು ಎಂಬ ಬಗ್ಗೆ ಸಾವರ್ಕರ್‌ ಮೊದಲ ಬಾರಿಗೆ ಅರಿಯುವುದು. ರಾಜಕಾರಣದ ಗಡಿರೇಖೆಗಳಾಚೆ ಜನಪದ ಪುರಾಣಗಳ ನಾಯಕನಾಗಿ ಗಾಂಧಿ ಬದಲಾದ ದೃಷ್ಟಾಂತವನ್ನು ಪೊಲೀಸ್‌ ಸಿಪಾಯಿಗಳ ಸಂಭಾಷಣೆಯಲ್ಲಿ ಸಾವರ್ಕರ್‌ ಕೇಳಿಸಿಕೊಳ್ಳುವುದು. ಗಾಂಧಿ ಒಬ್ಬ ಮಹಾಯೋಗಿ, ಜೈಲು ಕೋಣೆಗಳನ್ನು ಬೇಧಿಸುವ ಯೋಗಶಕ್ತಿ ಗಾಂಧಿಗಿದೆ, ಆದ್ದರಿಂದ ಭಾರತದ ಸ್ವಾತಂತ್ರ್ಯ ಇನ್ನು ಬಹಳ ದೂರವೇನಿಲ್ಲ ಎಂಬುದು ಆ ಮಾತುಕತೆಯ ಸಾರವಾಗಿತ್ತು.

ಒಂದು ವಾರದ ನಂತರ ಅಲಿಪುರ ಜೈಲಿನಿಂದ ಬಾಂಬೆ ಪ್ರೆಸಿಡೆನ್ಸಿಯ ರತ್ನಗಿರಿ ಜಿಲ್ಲಾ ಕಾರಾಗೃಹಕ್ಕೆ ೫೫೮ನೇ ನಂಬರ್‌ ಖೈದಿಯಾಗಿ ಸಾವರ್ಕರನ್ನು ವರ್ಗಾಯಿಸಿದರು. ಕರ್ನಾಟಕದ ಬಿಜಾಪುರ ಜೈಲಿಗೆ ಬಾಬಾರಾವನ್ನು ಕಳಿಸಿದರು.

ಸಾವರ್ಕರ್‌ ಕಾಂಗ್ರೆಸ್‌ ಮತ್ತು ಗಾಂಧಿಯನ್ನು ತನ್ನ ವಿರೋಧಿ ಸ್ಥಾನದಲ್ಲಿ ಕೂರಿಸಿದರೂ ಕೂಡ ಬಿಡುಗಡೆಗಾಗಿ ಅವರನ್ನು ಆಶ್ರಯಿಸಬೇಕಾಗಿ ಬಂದಿತ್ತು ಎಂಬುದು ಸ್ಪಷ್ಟವಾಯಿತು. ನಾರಾಯಣ್‌ ರಾವ್‌ ಈ ಬೇಡಿಕೆಯಿಟ್ಟುಕೊಂಡು ಗಾಂಧಿಗೆ ಆರು ಪತ್ರಗಳನ್ನು ಬರೆದಿದ್ದ. ೧೯೨೧ ಸೆಪ್ಟೆಂಬರ್‌ ೧೫ರಂದು ನಾರಾಯಣ್‌ ರಾವ್‌ ಅಂದು ಯಂಗ್‌ ಇಂಡಿಯಾದ ಸಂಪಾದಕರಾಗಿದ್ದ ಜಮ್ನಾದಾಸ್‌ ದ್ವಾರಕಾದಾಸರಿಗೆ ಇದೇ ಬೇಡಿಕೆಯಿಟ್ಟುಕೊಂಡು ಪತ್ರ ಬರೆದಿದ್ದ. ಅದಕ್ಕೂ ಮೊದಲು ಸ್ವತಃ ಸಾವರ್ಕರ್‌ ಮತ್ತೊಂದು ಕ್ಷಮಾಪಣಾ ಪತ್ರವನ್ನು ಬ್ರಿಟಿಷ್‌ ಸರಕಾರದ ಮುಂದಿಟ್ಟಿದ್ದರು. ಹಿಂದಿನ ಕ್ಷಮಾಪಣಾ ಪತ್ರಗಳಿಗಿಂತಲೂ ದಯನೀಯವಾಗಿ ಬೇಡಿಕೊಳ್ಳುವ ಪತ್ರವಾಗಿತ್ತದು. ತನ್ನ ಭೂತಕಾಲದ ಬ್ರಿಟಿಷ್‌ ವಿರೋಧಿ ಚಿಂತನೆಯನ್ನು ನೆನೆದುಕೊಂಡ ಪಶ್ಚಾತ್ತಾಪ ಆ ಪತ್ರದಲ್ಲಿ ತುಂಬಿ ತುಳುಕುತ್ತಿತ್ತು.

Related Articles

ಇತ್ತೀಚಿನ ಸುದ್ದಿಗಳು