Tuesday, June 25, 2024

ಸತ್ಯ | ನ್ಯಾಯ |ಧರ್ಮ

ಸನಾತನ ಧರ್ಮ ಮತ್ತು ಉದಯನಿಧಿ ಹೇಳಿಕೆ | ಶುದ್ಧಿಗೊಳ್ಳಬೇಕಾದವರು ಯಾರು?

ವೈಜ್ಞಾನಿಕ, ವೈಚಾರಿಕ ಮನೋಭಾವವನ್ನು ಸದೃಢಗೊಳಿಸಿ, ಸಂವಿಧಾನದ ನಿರ್ದೇಶಕ ತತ್ವಗಳಂತೆ ಭಾರತವನ್ನು ಮುನ್ನಡೆಸಲು ಅಡ್ಡಿಪಡಿಸುತ್ತಿರುವ ಸನಾತನ ಆಚರಣೆಗಳ ಜಡತ್ವವನ್ನೆ ಉದಯನಿಧಿ ನಿರ್ಮೂಲನೆ ಮಾಡಬೇಕೆಂದಿರುವುದು.  ಅವರ ಹೇಳಿಕೆ ನಿರ್ದಿಷ್ಟವಾಗಿ ಸನಾತನ ಧರ್ಮಕ್ಕೆ ಸಂಬಂಧಿಸಿದ್ದು. ಆದರೆ ಅದನ್ನು ಹಿಂದೂ ಧರ್ಮಕ್ಕಾದ ಅಪಚಾರವೆಂಬಂತೆ ಶೂದ್ರರೇ ವಿರೋಧಿಸಲು ಮುಗಿಬಿದ್ದಿದ್ದಾರೆ.  ಇದು ಅಜ್ಞಾನದ ನಗ್ನ ಪ್ರದರ್ಶನ – ಆಕಾಶ್.ಆರ್.ಎಸ್, ಯುವ ಬರಹಗಾರ

ಧರ್ಮದ ಕುರಿತು ಹೇಳಿಕೆಗಳು ಸಾಕಷ್ಟು ಬಾರಿ ರಾಜಕೀಯ ವಲಯಗಳಲ್ಲಿ ಹಾಗೂ ಚಿಂತಕರು, ಲೇಖಕರ ಬಳಗದಲ್ಲಿ ವಾದ-ವಿವಾದಗಳಾಗುವುದನ್ನು ಕೇಳುತ್ತಲೆ ಬಂದಿದ್ದೇವೆ.  ಆದರೆ ಈಗ  ‘ಸನಾತನ ಧರ್ಮ’ ಕುರಿತಂತೆ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಪಕ್ಷದ ಸಚಿವ ಉದಯನಿಧಿ ಸ್ಟಾಲಿನ್‌ ಹೇಳಿಕೆಯನ್ನು ವಿವಾದವನ್ನಾಗಿಸುವ ಪ್ರಯತ್ನಗಳು ನಡೆಯುತ್ತಿವೆ. “ಸನಾತನ ಧರ್ಮವು ಸಮಾನತೆ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಇದು ಕೊರೋನಾ, ಡೆಂಗ್ಯು, ಮಲೇರಿಯಾಕ್ಕೆ ಸಮಾನವಾದುದು. ಅದನ್ನು ಕೇವಲ ವಿರೋಧಿಸಿದರೆ ಸಾಲದು, ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು” ಎಂಬ ಹೇಳಿಕೆ ನೀಡುವ  ಮೂಲಕ ಉದಯನಿಧಿ ಸ್ಟಾಲಿನ್ ಸೋ ಕಾಲ್ಡ್ ಧರ್ಮ ಸಂಘಟನೆಗಳು, ಸನಾತನವಾದಿಗಳ, ಧರ್ಮಬೀರು(?) ಗಳ  ಪ್ರತಿರೋಧವನ್ನು ಎದುರಿಸುವಂತಾಗಿದೆ. ಬ್ರಾಹ್ಮಣ ಸಂಘಟನೆಗಳು, ಮಠಾಧಿಪತಿಗಳು ಹಾಗೂ ಹಿಂದೂ ಮತೀಯ ಸಂಘಟನೆಗಳು ಕೆರಳಿ ನಿಂತಿವೆ. ಖಂಡನೆಯಲ್ಲಿ ನಿರತವಾಗಿವೆ.

ಧರ್ಮನಿರಪೇಕ್ಷ ಭಾರತವನ್ನು ಬಯಸುವ ಸಂವಿಧಾನದ ಆಶಯಗಳು ಇದ್ದರೂ ಸಹ ಇನ್ನೂ ಈ ದೇಶದ ಬಹುಜನರಿಗೆ ಸಮಾನತೆ, ಜಾತ್ಯಾತೀತತೆ, ಧರ್ಮನಿರಪೇಕ್ಷತೆಯ  ಪರಿಪೂರ್ಣ ಸ್ಪರ್ಶ ಸಿಕ್ಕಿಲ್ಲ ಎಂಬ ಕೂಗು ಈಗಲೂ ಕೇಳಿಬರುತ್ತಲೆ ಇದೆ.  ಈ ದೇಶದಲ್ಲಿ ಶೇ.3 ರಷ್ಟಿರುವ ಬ್ರಾಹ್ಮಣ ಸಮಯದಾಯವೇ ನಿರ್ಧಾರ ಕೇಂದ್ರಿತ ಅಧಿಕಾರ ಸ್ಥಾನ- ಮಾನಗಳಲ್ಲಿ ಹಿಡಿತ ಸಾಧಿಸಿರುವುದು. ದೇವರು ಧರ್ಮದ ಹೆಸರಲ್ಲಿ‌ ಮೌಢ್ಯ, ಶೋಷಣೆಯನ್ನು  ಮತ್ತು ಒಂದಲ್ಲ ಒಂದು ರೂಪದಲ್ಲಿ ಜಾತಿಶ್ರೇಷ್ಠತೆಯನ್ನು ಪ್ರತಿಪಾದಿಸುತ್ತಾ ಅದು ಬಂದಿದೆ. ಇಂತಹ  ಬ್ರಾಹ್ಮಣ್ಯ  ಪ್ರೇರಿತವಾದ ಸನಾತನ ಧರ್ಮ ಕುರಿತೇ   ಉದಯನಿಧಿ ಸ್ಟಾಲಿನ್ ಹೇಳಿಕೆಯ ಒಳ ಅರ್ಥ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು.

ನಾವು ಎಷ್ಟೇ ವೈಜ್ಞಾನಿಕವಾಗಿ, ವಿಜ್ಞಾನದಲ್ಲಿ ಮುಂದುವರೆದು ಚಂದ್ರಮಂಡಲಕ್ಕೆ ಹೋದರೂ ದೇವರ ಕೃಪೆಯ ಮೌಢ್ಯದ ಪಿಡುಗಿನಿಂದ ಮುಕ್ತವಾಗಿಲ್ಲ; ಹಾಗೆ ಮುಕ್ತವಾಗುವ ಮತ್ತು ವೈಜ್ಞಾನಿಕ ಮನೋಭಾವವನ್ನು ಸ್ಥಿರಗೊಳಿಸಲು ʼಧರ್ಮ ಎಂಬ  ಹೆಸರಿನ ಅಡ್ಡಿಯನ್ನು ಕಾಣಬಹುದು. ಅದಕ್ಕಾಗಿ ಧಾರ್ಮಿಕ ಸಂಘಟನೆಗಳು ಮತ್ತು ಧರ್ಮಾಧಾರಿತ ರಾಜಕೀಯ  ಮಾಡಹೊರಟವರು ನಿರಂತರವಾಗಿ ದುಡಿಯುತ್ತಿದ್ದಾರೆ. ಇಂತಹವರೇ  ಈಗ ಉದಯನಿಧಿಯ ಅಭಿಪ್ರಾಯದ  ಅಭಿವ್ಯಕ್ತಿಗೆ ಕಂಟಕ ಸೃಷ್ಟಿಸುತ್ತಿದ್ದಾರೆ. ಸನಾತನ ಧರ್ಮವನ್ನೆ ಹಿಂದೂ ಧರ್ಮವನ್ನಾಗಿಸಲಾಗಿದೆ. ಬ್ರಾಹ್ಮಣ ಧರ್ಮ ಬೇರೆ, ಹಿಂದೂ ಧರ್ಮಬೇರೆ ಅನ್ನೋದನ್ನು ಈ ಹಿಂದಿನ ಪೇಜಾವರ ಮಠದ ಶ್ರೀಗಳೆ ಸ್ಪಷ್ಟಪಡಿಸಿದ್ದನ್ನು ಈಗಲೂ ಕಾಣಬಹುದು.‌ ಬ್ರಾಹ್ಮಣ್ಯಾಧಾರಿತ ಸನಾತನ ಧರ್ಮವನ್ನು ಶೂದ್ರರು, ದಲಿತರನ್ನೊಳಗೊಂಡ ರಾಜಕೀಯ ಹಿತಾಸಕ್ತಿಯ ಹಿಂದೂ ಧರ್ಮದ ರೂಪವಾಗಿಸಿರುವುದನ್ನು ಅಲ್ಲೆಗಳೆಯಲಾಗದು.

ಹಿಂದೂ ಧರ್ಮ – ಸನಾತನ ಧರ್ಮ ಇವೆರೆಡು ತದ್ವಿರುದ್ಧ ಎನ್ನುವುದು ಅಷ್ಟೇ ಸತ್ಯ. ಪ್ರಥಮ ನಾಗರೀಕತೆಯಾದ ಸಿಂಧೂ ನಾಗರೀಕತೆಯಲ್ಲಿ ಈ ಹಿಂದೂ ಪದ ಜನ್ಮ ತಾಳಿದೆ.  ಸಾವರ್ಕರ್ ತಮ್ಮ ಪುಸ್ತಕ essentiles of hindutva 1923 ದಲ್ಲಿ ಆರ್ಯರು ಬರುವ ಮುಂಚೆ ಇಲ್ಲಿ ಮೂಲ ನಿವಾಸಿಗಳಿದ್ದರು.  ಅವರು ಸಪ್ತ ಸಿಂಧೂ ನದಿಯ ಪಕ್ಕದಲ್ಲಿ ವಾಸಿಸುತ್ತಿದ್ದ ಕಾರಣ ಪರ್ಷಿಯನ್ನರು ಹಸ್ತ ಹಿಂದೂ(“ಸ” ಕಾರ ಬದಲು “ಹ” ಕಾರ ಬಳಸುತ್ತಿದ್ದರು.) ಎಂದು ಕರೆದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಇದಲ್ಲದೆ ಕೆಲವು ವರ್ಷಗಳ ಹಿಂದೆ ಸಿಂಧೂ ನದಿಯ ತಟದಲ್ಲಿ ಸಿಂಧೂ ನಾಗರೀಕತೆಯ ಪಳೆಯುಳಿಕೆ ದಕ್ಕಿದ್ದು ಅದರ ಡಿಎನ್ಎ ಪರೀಕ್ಷೆ ಮಾಡಿದಾಗ ಅದು ಈ ದೇಶದ ಮೂಲ ಜನಾಂಗ ಆದಿವಾಸಿಗಳದ್ದು ಎಂದು ದಾಖಲೆ ಬಿಡುಗಡೆಯಾಗಿದ್ದು, ಅದು ಸುದ್ದಿಯಾಗಿತ್ತು. ಇದೆಲ್ಲಾ ಗಮನಿಸಿದರೆ ಹಿಂದೂ ಪದದ ಮೊದಲಿಗೆ ಹುಟ್ಟಿಕೊಂಡು ತದ ನಂತರ ಅದು ಧರ್ಮದ ರೂಪತಾಳಿತು ಎನ್ನಬಹುದು. ಆದರೆ ಈ ಸನಾತನ ಧರ್ಮದ ಉಗಮ ಯಾವಾಗ ಆಯಿತು? ಇದರ ಕತೃ ಯಾರು? ಇದರ ಮೂಲ ಧಾತು ಯಾವುದು? ಎಂಬ ಪ್ರಶ್ನೆಗಳೆಲ್ಲಾ ಮೆಲ್ಲಗೆ ಉಸಿರಾಡ ತೊಡಗಿವೆ. 

ಮನುಸ್ಪೃತಿಯೇ ಸನಾತನ ಧರ್ಮದ ಮೂಲ

ಸನಾತನ ಧರ್ಮಕ್ಕೆ ಮುಖ್ಯ ಬುನಾದಿಯೇ ಆರ್ಯನ್ನರು (ಬ್ರಾಹ್ಮಣ). ಈ ಸನಾತನ ಧರ್ಮದ ನೀತಿ ನಿಯಮಗಳು ರೂಪುಗೊಂಡಿದ್ದು ಮನುವಿನ ಸ್ಮೃತಿಯಿಂದ. ಅದರಿಂದಲೇ ಅಸ್ಪೃಶ್ಯತೆ ಹುಟ್ಟಿಕೊಂಡಿತ್ತು. ಅಲ್ಲಿಯವರೆಗೂ ಅಂದರೆ ಹಿಂದೂ ಪದದಿಂದ ಹಿಂದೂ ಧರ್ಮದವರೆಗೂ ಇಂತಹ ಯಾವುದೇ ಸಿದ್ಧಾಂತಗಳಾಗಲಿ, ಆಚರಣೆಗಳಾಗಲಿ ಇರಲಿಲ್ಲ. ಮನುಸ್ಮೃತಿಯ ಆಗಮನದಿಂದ ಸತಿಸಹಗಮನ, ದೇವದಾಸಿ, ಮೇಲು ಕೀಳು ಎಂಬುದನ್ನೆಲ್ಲ ಧರ್ಮ ನಿಯಮವೆಂದು ರೂಪಿಸಲಾಗಿತ್ತು. ಇನ್ನು ವೇದಗಳಿಂದ ಸನಾತನ ಧರ್ಮ ಹುಟ್ಟಿತು ಎನ್ನುವವರು ವೇದಗಳ ಕಾಲದಲ್ಲಿ ನಡೆದ ಅಸ್ಪೃಶ್ಯತೆಯನ್ನು ಮೆಲುಕು ಹಾಕಬೇಕಿದೆ. ಯಾಕೆಂದರೆ ಚಾತುರ್ವರ್ಣ ವ್ಯವಸ್ಥೆಯು ಅಲ್ಲಿಂದಲೆ ಆರಂಭವಾಗಿದ್ದು, ಆಚಾರ್ಯತ್ರಯರು ಆತ್ಮ, ಪರಮಾತ್ಮ, ಸೇವಕ, ಗುಲಾಮ ಎನ್ನುವ ಪದ್ಧತಿಗೆ ನಾಂದಿ ಹಾಡಿದ್ದನ್ನು ಇತಿಹಾಸದಲ್ಲಿ ಕಾಣಬಹುದು. ಇದನ್ನು ಇನ್ನಷ್ಟು ಸ್ಪಷ್ಟವಾಗಿ ನೋಡುವುದಾದರೆ ಹಲವು ವರ್ಷಗಳ ಹಿಂದೆ ಉಡುಪಿಯ ಪೇಜಾವರ ಸ್ವಾಮೀಜಿ ಸಂದರ್ಶನವೊಂದರಲ್ಲಿ, ಬ್ರಾಹ್ಮಣ್ಯಕ್ಕೂ ಹಿಂದುತ್ವಕ್ಕೂ ಸಂಬಂಧವಿಲ್ಲ. ಬ್ರಾಹ್ಮಣ್ಯ ರಕ್ಷಣೆಯಾಗಬೇಕು, ಹಿಂದುತ್ವವೂ ರಕ್ಷಣೆ ಆಗಬೇಕು. ಆದರೆ ಬ್ರಾಹ್ಮಣ್ಯ ಬ್ರಾಹ್ಮಣರಿಗೆ ಮಾತ್ರ ಸೀಮಿತ, ಹಿಂದುತ್ವ ಎಲ್ಲರಿಗೂ ಬೇಕು ಎಂದಿದ್ದರು. ಹಾಗಾದರೆ ಪೇಜಾವರರು ಹೇಳುವಂತೆ ಬ್ರಾಹ್ಮಣರಿಗೆ ಹಿಂದುತ್ವ ಬೇಡವಾದರೆ, ಬ್ರಾಹ್ಮಣ್ಯ ರೂಪಗೊಂಡಿದ್ದು ಇದೇ ಮನಸ್ಮೃತಿಯಿಂದಲೇ ತಾನೇ?. ಇದರಿಂದ ಚಾತುರ್ವರ್ಣದಲ್ಲಿ ಬ್ರಾಹ್ಮಣ ಹೊರತಾಗಿ ಇನ್ನುಳಿದ ವರ್ಗಗಳು ಹಿಂದೂ ಧರ್ಮವಾದರೆ, ಅವರು ಅದರೊಳಗೆ ತಮ್ಮದೆ ಆದ ಮನ್ನಣೆ ಪಡೆಯಲು ಸೃಷ್ಟಿಸಿಕೊಂಡಿದ್ದು ಸನಾತನ ಧರ್ಮ ಅಲ್ಲವೇ?. 

ಸನಾತನ ಧರ್ಮವನ್ನು ಸಾರಿದ ವೇದಗಳು

ಇನ್ನು ಸನಾತನ ಧರ್ಮವೂ ವೇದಗಳ ಒಂದು ಭಾಗ ಎನ್ನುವುದಾದರೆ ವೇದಗಳ ಕಾಲಗಳ ಪುರಾಣವೂ ಹೆಚ್ಚಾಗಿ ಅಸ್ಪೃಶ್ಯತೆಯನ್ನೆ ಸಾರಿದೆ. ಶಂಭೂಕನ ತಲೆ ಕಡಿದದ್ದು, ಏಕಲವ್ಯನ ಬೆರಳು ಕೇಳಿದ್ದು, ಕರ್ಣನನ್ನು ಸೂತ ಪುತ್ರನೆಂದು ಜರೆದದ್ದು, ಇದಲ್ಲದೆ ಈಗಷ್ಟೆ ಸನಾತನ ಧರ್ಮ ಕುರಿತು ಮಾತಾಡಿದ  ಉದಯನಿಧಿ ಅವರ  ತಲೆ ಕಡಿದವರಿಗೆ 10  ಕೋಟಿ ರೂ.  ಎಂದು ಇದೇ ಸನಾತನ ಧರ್ಮವನ್ನು ಎತ್ತಿ ಆಡಿಸುವ ಅಯೋಧ್ಯೆಯ ಸಂತ ಪರಮಹಂಸ ಆಚಾರ್ಯರ ಹೇಳಿಕೆಯೂ ಕೂಡ ಈ ಸನಾತನವಾದದ ಅಸಹನೆಯೂ, ನಾಗರೀಕ ಸಮಾಜದ ಘೋರ ಪಾತಕವೂ ಆಗುತ್ತದೆ.

ಇನ್ನು, ನಾಲ್ಕು ವೇದಗಳಲ್ಲಿ ಮುಖ್ಯವಾದ ಖಗ್ವೇದವೂ “ಈ ದೇಶದ ದಸ್ಯುಗಳೆಂಬ ಮೂಲನಿವಾಸಿಗಳನ್ನು ನಿರ್ನಾಮ ಮಾಡುವುದಕ್ಕಾಗಿ ಹೊರಗಿನಿಂದ ಭಾರತಕ್ಕೆ ಬಂದ ತನ್ನ ಜನಾಂಗವಾದ ಆರ್ಯರನ್ನು ಜನಾಂಗ ಹತ್ಯೆಗಾಗಿ ಪ್ರಚೋದಿಸುತ್ತದೆ, ಆ ಮೂಲಕ ಉಗ್ರವಾದ ಭೋದಿಸುತ್ತದೆ. (ಋಗ್ವೇದ ೧ ನೇ ಮಂಡಲ, ೫ ನೇ ಸೂಕ್ತ, ೮ ನೇ ಮಂತ್ರ), ಮನುಸ್ಮೃತಿಯೂ ಕೂಡ ಅಧ್ಯಾಯ ೧೧, ಶೋಕ ೮೪ ರಲ್ಲಿ ” ಬ್ರಾಹ್ಮಣನು ಹುಟ್ಟಿನಿಂದಲೇ ದೇವತೆಗಳಿಗೂ ದೇವತೆಯಾಗಿರುತ್ತಾನೆ. ಈ ಲೋಕದ ಧರ್ಮ ಸಾಧನೆಗೆ ಪ್ರತ್ಯಕ್ಷ ಪ್ರಮಾಣವೆಂದರೆ ಬ್ರಾಹ್ಮಣನೇ ಎಂದಿದೆ”. ಪ್ರಾಚೀನ ಭಾರತದ ಇತಿಹಾಸದಲ್ಲೂ ಕೂಡ ವೇದಗಳ ಧಾರ್ಮಿಕ ಗ್ರಂಥಗಳಾದ ಬ್ರಾಹ್ಮಣ ಗ್ರಂಥಗಳಲ್ಲಿ ಆದರ್ಶ ಸಮಾಜಕ್ಕೆಂದು ಚಾತುರ್ವರ್ಣ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಶೂದ್ರರಿಗೆ ವಿಶೇಷಾಧಿಕಾರವಿಲ್ಲ, ಬ್ರಾಹ್ಮಣರನ್ನು ಪ್ರಶ್ನಿಸುವಂತಿಲ್ಲ, ಶಿಕ್ಷಣ ಮತ್ತು ಜ್ಞಾನ ಹಕ್ಕು ನಿರಾಕರಣೆ, ಇದಲ್ಲದೆ ಯಾವ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಕೂಡ ಶಿಕ್ಷಣ, ಜ್ಞಾನ ನಿರಾಕರಣೆ ಯಾವುದೇ ನಿರ್ಧಾರಕ್ಕೆ ಮುಕ್ತ ಅವಕಾಶವಿಲ್ಲ (ಬುದ್ಧ ಮತ್ತು ಆತನ ಧಮ್ಮ ಕೃತಿಯ ಸಂಕ್ಷಿಪ್ತ ಕಥನ) ಎಂದು ಹೇಳಿದೆ.

ಇದೆಲ್ಲವನ್ನು ತುಲಾನಾತ್ಮಕವಾಗಿ ಅಳೆಯುವುದಾದರೆ  ತರತಮ ಸಿದ್ಧಾಂತದ ಮತ್ತು ಸ್ವಯಂ ಶ್ರೇಷ್ಠತೆಯ ಬ್ರಾಹ್ಮಣ್ಯವನ್ನು ಸಮಾಜದಲ್ಲಿ  ಪೋಷಣೆ ಮಾಡಲು ಹಿಂದೂ ಧರ್ಮದ ನೆರಳಿನಲ್ಲಿ  ಸನಾತನ ಧರ್ಮವನ್ನು ಕಾಯ್ದುಕೊಂಡು ಬರುವ ಹುನ್ನಾರ ಮುಂದುವರೆದಿದೆ. ಮೋಕ್ಷ, ಪಾಪ ಪರಿಹಾರ ಎನ್ನುವ ಭ್ರಮಾ ಮನೋಭಾವನೆಯ ಮೂಲಕ ಆಳುವ, ಉತ್ಕೃಷ್ಟ ಸ್ಥಾನ ಮನ್ನಣೆ ಪಡೆದು ಆತ್ಮ ಪರಮಾತ್ಮ, ದೇವರು- ಭಕ್ತ, ಪುರೋಹಿತ – ಗುಲಾಮ ಎಂತೆಲ್ಲಾ ದೇವರ, ಧರ್ಮ,  ಜಾತಿಯ ಹೆಸರಲ್ಲಿ ಮನುಷ್ಯರನ್ನು ಬಗೆದು ಕಟ್ಟಲಾಗುತ್ತಿದೆ. ವೈಜ್ಞಾನಿಕ, ವೈಚಾರಿಕ ಮನೋಭಾವವನ್ನು ಸದೃಢಗೊಳಿಸಿ, ಸಂವಿಧಾನದ ನಿರ್ದೇಶಕ ತತ್ವಗಳಂತೆ ಭಾರತವನ್ನು ಮುನ್ನಡೆಸಲು ಅಡ್ಡಿಪಡಿಸುತ್ತಿರುವ ಈ ಸನಾತನ ಆಚರಣೆಗಳ ಜಡತ್ವವನ್ನೆ ಉದಯನಿಧಿ ನಿರ್ಮೂಲನೆ ಮಾಡಬೇಕೆಂದಿರುವುದು.  ಉದಯನಿಧಿ ಹೇಳಿಕೆ ನಿರ್ದಿಷ್ಟವಾಗಿ ಸನಾತನ ಧರ್ಮಕ್ಕೆ ಸಂಬಂಧಿಸಿದ್ದು. ಆದರೆ ಅದನ್ನು ಹಿಂದೂ ಧರ್ಮಕ್ಕಾದ ಅಪಚಾರವೆಂಬಂತೆ ಶೂದ್ರರೇ ವಿರೋಧಿಸಲು ಮುಗಿಬಿದ್ದಿದ್ದಾರೆ.  ಇದು ಅಜ್ಞಾನದ ನಗ್ನ ಪ್ರದರ್ಶನ.

ಜಾತೀಯತೆ ಅಡಗಿರುವುದು ಧರ್ಮದಲ್ಲಿ. ಜಾತಿ ನಾಶವಾದರೆ ಧರ್ಮವೂ ನಾಶವಾಗಿ ಬಿಡುತ್ತದೆ. ಆ ಕಾರಣಕ್ಕಾಗಿ ಧರ್ಮದ ಹೆಸರಲ್ಲಿ ಜನರನ್ನು ಸುಲಿಯುತ್ತಿರುವವರು, ಅಧಿಕಾರ- ಸಂಪತ್ತು  ಸಾಧಿಸಿಕೊಳ್ಳಲು ಹೊರಟವರು ಧರ್ಮದ ಹೆಸರಲ್ಲಿ‌ ಜನರನ್ನು  ದಿಕ್ಕುತಪ್ಪಿಸುತ್ತಿದ್ದಾರೆ ಇಲ್ಲವೆ ಸಂಘರ್ಷಕ್ಕೆ ಪ್ರಚೋದಿಸುತ್ತಿದ್ದಾರೆ. ಯಾವುದೇ ಧರ್ಮ ಕಾಲಾನುಕ್ರಮವಾಗಿ ಆಯಾ ಸಂದರ್ಭದ ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿಗನುಗುಣವಾಗಿ ಹಾಗೂ ವೈಚಾರಿಕ ನೆಲೆಗಟ್ಟಿನಲ್ಲಿ ಸುಧಾರಣೆಗೊಳ್ಳುವತ್ತ ಚಲನಾಶಕ್ತಿಯನ್ನು ಹೊಂದಿರಬೇಕು.  ಇದರಿಂದ  ಈ ಸಮಾಜದ ಎಲ್ಲಾ ಮನುಷ್ಯರ ಸಹಬಾಳ್ವೆಯ ಕಲ್ಯಾಣ  ಸಾಧಿಸಲು ಸಾಧ್ಯ.‌ ಇಂತಹ ಸಾಧ್ಯತೆ, ಚಲನಶೀಲತೆಯ ಗುಣಗಳನ್ನು ಸನಾತನ ಧರ್ಮ ಹೊಂದಿದೆಯಾ ಎಂಬುದನ್ನು ಅದರ ಪ್ರತಿಪಾದಕರು ಸಾಬೀತುಪಡಿಸಬೇಕಾದ ಸಂದರ್ಭ ಈಗಲ್ಲದೆ ಮತ್ಯಾವಾಗ ಎಂಬುದನ್ನು ಯೋಚಿಸಬೇಕಾಗಿದೆ. 

ಆಕಾಶ್.ಆರ್.ಎಸ್

ಯುವ ಬರಹಗಾರ

ಇದನ್ನೂ ಓದಿ-Sanatan Dharma remark: ಉದಯನಿಧಿ ಸ್ಟಾಲಿನ್ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ FIR

Related Articles

ಇತ್ತೀಚಿನ ಸುದ್ದಿಗಳು