Sunday, June 30, 2024

ಸತ್ಯ | ನ್ಯಾಯ |ಧರ್ಮ

ಸ್ಟೀಲ್‌ ಸೇತುವೆ ವಿರುದ್ಧ ಪ್ರತಿಭಟನೆ: ಎಎಪಿ ಮುಖಂಡರಿಗೆ ಸಮನ್ಸ್!

ಬೆಂಗಳೂರು: ಶಿವಾನಂದ ವೃತ್ತ ಸಮೀಪದ ಸ್ಟೀಲ್‌ ಬ್ರಿಡ್ಜ್‌ ಕಾಮಗಾರಿಯಲ್ಲಿ ಕಂಡುಬಂದ ಅನೇಕ ಲೋಕದೋಷಗಳ ವಿರುದ್ಧ ಪ್ರತಿಭಟನೆ ನಡೆಸಿದ್ದ ಆಮ್‌ ಆದ್ಮಿ ಪಾರ್ಟಿ ಮುಖಂಡರು ಹಾಜರಾಗಬೇಕೆಂದು ರಾಜ್ಯ ಸರ್ಕಾರವು ಹೆಚ್ಚುವರಿ ಮ್ಯಾಜಿಸ್ಟೇಟ್‌ರಿಂದ ಸಮನ್ಸ್‌ ಜಾರಿಮಾಡಿಸಿದೆ. ಭ್ರಷ್ಟ ಬಿಜೆಪಿ ಸರ್ಕಾರದ ಇಂತಹ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಎಎಪಿ ತಿಳಿಸಿದೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿ ಎಎಪಿ ಬೆಂಗಳೂರು ನಗರ ಅಧ್ಯಕ್ಷ ಮೋಹನ್‌ ದಾಸರಿ, “ಸ್ಟೀಲ್‌ ಬ್ರಿಡ್ಜ್‌ನಲ್ಲಿ ಹಲವು ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಆಗಸ್ಟ್‌ 29, 2022ರಂದು ಆಮ್‌ ಆದ್ಮಿ ಪಾರ್ಟಿ ಮುಖಂಡರು “40% ಕಮಿಷನ್‌ ಮೇಲ್ಸೇತುವೆ” ಹೆಸರಿನಲ್ಲಿ ವಿನೂತನ ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ಭಾಗವಹಿಸಿದ್ದ ಮೋಹನ್‌ ದಾಸರಿ ಆದ ನಾನು, ಬಿ.ಟಿ.ನಾಗಣ್ಣ, ಸುರೇಶ್‌ ರಾಥೋಡ್‌, ಜಗದೀಶ್‌ ವಿ ಸದಂ, ಕುಶಲಸ್ವಾಮಿ, ಸುಹಾಸಿನಿ ಫಣಿರಾಜ್‌, ಚನ್ನಪ್ಪಗೌಡ ನೆಲ್ಲೂರು, ಮೊಹಮದ್‌ ಅಸದ್‌, ಆಯಿತುಲ್ಲಾ ರೊಹಲ್ಲಾ, ಮೊಹಮದ್‌ ಇರ್ಫಾನ್‌ ಮತ್ತಿತರರಿಗೆ ಸಮನ್ಸ್‌ ಜಾರಿಯಾಗಿದೆ. ಭ್ರಷ್ಟಾಚಾರ ಹಾಗೂ ಅನ್ಯಾಯವನ್ನು ಪ್ರಶ್ನಿಸಿದ್ದಕ್ಕೆ ಪಕ್ಷದ ವಿರುದ್ಧ ಈಗಾಗಲೇ ಅನೇಕ ಪ್ರಕರಣಗಳಿದ್ದು, ಈಗ ಅವುಗಳಿಗೆ ಸಾಲಿಗೆ ಇನ್ನೊಂದು ಸೇರ್ಪಡೆಯಾಗಿದೆಯಷ್ಟೆ” ಎಂದು ಹೇಳಿದರು.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಅವ್ಯವಹಾರವನ್ನು ಪ್ರಶ್ನಿಸುವ ಹಾಗೂ ಅದರ ವಿರುದ್ಧ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ರಾಜ್ಯದ ಭ್ರಷ್ಟ ಬಿಜೆಪಿ ಸರ್ಕಾರವು ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಪ್ರಯತ್ನ ಮಾಡುತ್ತಿದೆ. ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದರೂ ಮೊಕದ್ದಮೆ ದಾಖಲಿಸಿಕೊಂಡಿರುವುದು ಖಂಡನೀಯ. ರಾಜ್ಯ ಬಿಜೆಪಿಯು ಆಮ್‌ ಆದ್ಮಿ ಪಾರ್ಟಿಯ ಭಯದಿಂದ ಬಳಲುತ್ತಿರುವುದು ಇದರಿಂದ ಸ್ಪಷ್ಟವಾಗಿದೆ”ಎಂದು ಮೋಹನ್‌ ದಾಸರಿ ಹೇಳಿದರು.

“ಶಿವಾನಂದ ವೃತ್ತದ ಸ್ಟೀಲ್‌ ಸೇತುವೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಳಪೆ ಗುಣಮಟ್ಟದ ಬೇರಿಂಗ್, ಶಾಕ್‌ ಅಬ್ಸಾರ್ವರ್‌ ಬಳಸಿ ನಿರ್ಮಿಸಿರುವ ಅನುಮಾನ ಮೂಡುತ್ತದೆ. ಸೇತುವೆಯಲ್ಲಿ ಸುಮಾರು 20 ಮೀಟರ್‌ಗೊಮ್ಮೆ ಜಾಯಿಂಟ್‌ಗಳಿದ್ದು, ಅಲ್ಲಿ ವಾಹನ ಸವಾರರಿಗೆ ಕಿರಿಕಿರಿಯಾಗುವಂತಹ ಅವೈಜ್ಞಾನಿಕ ಹಂಪುಗಳನ್ನು ನಿರ್ಮಿಸಲಾಗಿದೆ. ಲಘು ವಾಹನ ಸಂಚರಿಸಿದರೂ ಸೇತುವೆಯು ವೈಬ್ರೇಟ್‌ ಆಗುತ್ತಿದೆ. ಕಳಪೆ ಕಾಮಗಾರಿಯಿಂದಾಗಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಸ್ಟೀಲ್‌ ಬ್ರಿಡ್ಜ್‌ ಮೇಲಿನ ಸಂಚಾರಕ್ಕೆ ಸರ್ಕಾರವೇ ನಿರ್ಬಂಧ ಹೇರಿತ್ತು. ಕಾಮಗಾರಿ ವಿರುದ್ಧ ದನಿ ಎತ್ತಿದ್ದಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದು ಅಕ್ರಮವನ್ನು ಮುಚ್ಚಿಡುವ ಪ್ರಯತ್ನ” ಎಂದು ಮೋಹನ್‌ ದಾಸರಿ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು