Friday, October 10, 2025

ಸತ್ಯ | ನ್ಯಾಯ |ಧರ್ಮ

ಕಠಾರಿ ಅಂಚು: ಆಕ್ಟ್ ಆಫ್ ಗಾಡ್ – ಸಂವಿಧಾನ ವಿರೋಧಿಗಳಿಗೆ ಮೆಟ್ಟುಸೇವೆ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ಸನಾತನಿ ಸಂಘಿ ವಕೀಲ ಶೂ ಎಸೆದ ಘಟನೆಯ ಆಧಾರವಾಗಿ ತನ್ನದೇ ಆದ ವಿಡಂಬನಾತ್ಮಕ ಬರಹದ ಮೂಲಕ ನಿಮ್ಮ ಮುಂದಿಟ್ಟಿದ್ದಾರೆ ಚಂದ್ರಪ್ರಭ ಕಠಾರಿಯವರು.. ತಪ್ಪದೇ ಓದಿ

ಅವನಿಗೆ ತಡರಾತ್ರಿಯಾದರೂ ನಿದ್ದೆ ಬಾರದೆ ಕಣ್ರೆಪ್ಪೆಗಳು ಕೂಡಲಿಲ್ಲ. ದೇಶದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮೇಲೆ ಅವಿವೇಕಿಯೊಬ್ಬ ಶೂ ಎಸೆದ ಸುದ್ದಿ ಅವನ ಎದೆಯನ್ನು ಒಡೆದು ಚೂರಾಗಿಸಿತ್ತು.

ʼವಿಷ್ಣು ವಿಗ್ರಹವನ್ನು ಪುನರ್ ನಿರ್ಮಿಸ ಬೇಕೆಂದಿದ್ದರೆ ಪುರಾತತ್ವ ಸಮೀಕ್ಷೆಯ ಇಲಾಖೆಗೆ ಹೋಗಿ. ಇದು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ನಿಮ್ಮ ದೇವರನ್ನೂ ಒಮ್ಮೆ ಪ್ರಾರ್ಥಿಸಿʼ ಎಂದ ನ್ಯಾಯಾಧೀಶರ ಮಾತಿನಿಂದ ಸನಾತನ ಧರ್ಮದ ಅಪಮಾನ ಹೇಗಾಗುತ್ತದೆ? ಪುರಾತತ್ವ ಇಲಾಖೆಗೆ ಹೋಗಿ ಅವನು ಮನವಿ ಸಲ್ಲಿಸಲಿಲ್ಲವೇಕೆ? ಬದಲಿಗೆ ಶೂ ಎಸೆಯುವಂತಹ ಹೀನ ಕೃತ್ಯ ಎಸಗಿ ಅವಮಾನ ಮಾಡಲು ಯತ್ನಿಸಿದ್ದಾದರೂ ಏಕೆ?

ದಮನಿತ ಸಮುದಾಯಕ್ಕೆ ಸೇರಿದ ಮುಖ್ಯ ನ್ಯಾಯಾಧೀಶರಿಗೆ ಈ ಪರಿ ಅಪಮಾನವೆಂದಾದರೆ ಇನ್ನು ಆ ಸಮುದಾಯದ ಸಾಮಾನ್ಯರಿಗೆ ರಕ್ಷಣೆ ಈ ದೇಶದಲ್ಲಿ ಸಾಧ್ಯವೇ? ಅಲ್ಲದೆ, ಸಂವಿಧಾನಕ್ಕೆ ಅಗೌರವ ತೋರಿದ ಆ ಭಯೋತ್ಪಾದಕ ʼನನಗೆ ಯಾವ ಪಶ್ಚಾತ್ತಾಪವಿಲ್ಲ. ದೇವರೇ ನನಗೆ ಹಾಗೆ ಮಾಡಲು ಸೂಚಿಸಿದ್ದುʼ ಎಂದೇಕೆ ಹೇಳಿದ? ಚಪ್ಪಲಿ, ಶೂ ಅನ್ನು ಯಾವ ನಾಚಿಕೆ ಇಲ್ಲದೆ ನಿನಗೆ ಆಗದವರ ಮೇಲೆ ಎಸೆ! ಎಂದು ಯಾವ ದೇವರು ಅವನಿಗೆ ಹೇಳಿರಬಹುದು?

ಗೋಡೆಗೆ ತೂಗು ಹಾಕಿದ್ದ ಬಾಬಾ ಸಾಹೇಬರ ಪಟವನ್ನು ನೋಡುತ್ತ, ಚಿಂತಿಸುತ್ತಿದ್ದವನನ್ನು ಅದ್ಯಾವ ಹೊತ್ತಿನಲ್ಲೊ ಮಾಯದ ನಿದ್ರೆ ಮಡಿಲಿಗೆ ಹಾಕಿ ಕೊಂಡಿತು.

ಮೈದಾನದಲ್ಲಿ ಎಲ್ಲಿ ನೋಡಿದರಲ್ಲಿ ಜನವೋ ಜನ! ಎಲ್ಲೆಲ್ಲೂ ಕೇಸರಿ ಬಾವುಟಗಳು, ಕೇಸರಿ ತಳಿರು ತೋರಣಗಳು! ಎಲ್ಲೆಲ್ಲೂ ಕೇಸರಿ ಬಣ್ಣ ಕಂಡು ಅವನ ಹೊಟ್ಟೆ ತೊಳೆಸಿ ಬಂದು ವಾಂತಿ ಮಾಡಿದ.

ʼಸನಾತನ ಧರ್ಮಕ್ಕೆ ಜಯವಾಗಲಿ…ಮನುವಾದ ಚಿರಾಯುವಾಗಲಿ” ಎಂಬ ಘೋಷಣೆ ಗಗನ ಮುಟ್ಟಿತ್ತು. ಕಿವಿ ತಮಟೆ ಹರಿಯುವ ಡಿಜೆ ಸಂಗೀತಕ್ಕೆ ಜನರು ಮೈಮೇಲೆ ದೆವ್ವ ಮೆಟ್ಟಿದವರಂತೆ ಕುಣಿಯುತ್ತಿದ್ದರು. ಅಲ್ಲಲ್ಲಿ ಗುಂಪು ಗುಂಪುಗಳಾಗಿ ತಮಟೆಯ ಬಡಿತಕ್ಕೆ ಹೆಜ್ಜೆ ಹಾಕುತ್ತಿದ್ದವರ ಉನ್ಮಾದಕ್ಕೆ ತಮಟೆ ಬಡಿಯುವವರ ಕೈಗಳು ಸೋಲುತ್ತಿದ್ದವು.

ದೂರದ ವೇದಿಕೆಯಿಂದ “ಸಾವಧಾನ…ಸಾವಧಾನ” ಎಂದು ಮೈಕಿನಲ್ಲಿ ಹೇಳಿದ ಮಾತುಗಳು, ಲೌಡ್ ಸ್ಪೀಕರಿನಲ್ಲಿ ಅಲೆಅಲೆಯಾಗಿ ತೇಲಿ ಬರ ತೊಡಗಿತು. ಕುಣಿಯುವುದನ್ನು ನಿಲ್ಲಿಸಿದ ಜನರ ಕಣ್ಣು  ಕುತೂಹಲದಿಂದ ವೇದಿಕೆಯತ್ತ ನೆಟ್ಟಿತು. ವೇದಿಕೆಯ ಮೇಲೆ ಪ್ರಧಾನಮಂತ್ರಿ ಯಾ ಸ್ವಯಂ ಘೋಷಿತ ಸಾಮ್ರಾಟ ಹಿಂದೆಯೇ ಅವನ ಖಾಸಾ ಗೆಳೆಯ ಅಪರಿಮಿತ ಕುತಂತ್ರಿ ಮಂತ್ರಿ ಬರುವುದು ಕಾಣಿಸಿತು. ಜೊತೆಗೆ ರೋಗಿ ಮಿಥ್ಯನಾಥನ ದರ್ಶನವಾಯಿತು. ಗಂಭೀರವದನನಾದ ಮಾಧವ ಕೃಪಾಕಟಾಕ್ಷದ ಕುಟೀರದ ಪೂಜಾರಿ ಉತ್ಸವಮೂರ್ತಿಯಾಗಿ ವೇದಿಕೆ ಮಧ್ಯದಲ್ಲಿ ಇರಿಸಿದ್ದ ಸಿಂಹಾಸನದಂತ ಎತ್ತರದ ಕುರ್ಚಿಯಲ್ಲಿ ಮೀಸೆ ತಿರುವುತ್ತ ಕೂಡುವುದನ್ನೇ ಕಾಯುತ್ತಿದ್ದ ಉಳಿದವರು, ಅವನಿಗೆ ಸೊಂಟ ಬಗ್ಗಿಸಿ ವಂದಿಸಿ ತಮ್ಮ ಆಸನಗಳಲ್ಲಿ ವಿರಾಜಮಾನರಾದರು.

ವೇದಿಕೆಯಲ್ಲಿ ಮೈಕಿನ ಮುಂದೆ ಈಗ ಹೆಣ ವೇಷಧಾರಿಯೊಬ್ಬ ಕಾಣಿಸಿಕೊಂಡ. ಸನಾತನ ಧರ್ಮಕ್ಕೆ ಜಯಕಾರವನ್ನು ನೆರೆದ ಜನರಲ್ಲಿ ಕೂಗು ಹಾಕಿಸಿ ತನ್ನ ಭಾಷಣ ಆರಂಭಿಸಿದ.

“ನನ್ನ ಸೋದರ ಸನಾತನ ಬಂಧುಗಳೇ…ನಾವು ಇಂದು ಇಲ್ಲಿ ನೆರೆದಿರುವುದರ ಕಾರಣ ನಿಮಗೆಲ್ಲ ತಿಳಿದೇ ಇದೆ. ನಮ್ಮ ಕುಟೀರದ ಪೂರ್ವನಿವಾಸಿ ಉಚ್ಚ ನ್ಯಾಯಾಲಯದ ವಕೀಲರೂ ಆದ ಕಿರಾತಕ ಮೂರ್ಖೇಶ್ ಅವರು ಸನಾತನ ಧರ್ಮವನ್ನು ಉಳಿಸಲು ಮಾಡಿರುವ ಘನಂಧಾರಿ ಕೆಲಸವನ್ನು ಗೌರವಿಸಬೇಕೆಂದು ಪೂಜಾರಿಯವರು ಆಜ್ಞಾಪಿಸಿದ್ದರು. ಅಂತೆ ನಾವೆಲ್ಲರೂ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುಣ್ಯವನ್ನು ಸಂಪಾದಿಸಲು ನೆರೆದಿದ್ದೇವೆ. ಮೂರ್ಖೇಶ್ ಅವರು ವಯೋವೃದ್ಧರಾದರೂ ಅವರಲ್ಲಿ ಸನಾತನ ಬಿಸಿ ರಕ್ತ ಉಕ್ಕಿ ಉಕ್ಕಿ ಹರಿಯುತ್ತಿದೆ. ಅವರು ಪಾಶ್ಚಾತ್ಯ ಸಂಸ್ಕೃತಿಗೆ ದಾಸರಾಗುತ್ತಿರುವ ಈ ಕಾಲದ ಜೆನ್ ಜಿ ಯುವಕರಿಗೆ ಮಾದರಿಯಾಗಿದ್ದಾರೆ. ಸನ್ಮಾನಕ್ಕೂ ಮುಂಚೆ – ಮೂರ್ಖೇಶ್ ತಮ್ಮ ವಕೀಲ ವೃತ್ತಿಯ ಎಲ್ಲಾ ವೃತ್ತಿಧರ್ಮವನ್ನು ನೀವಾಳಿಸಿ ಬಿಸಾಕಿ, ಹೇಗೆ ಧೀರೋದಾತ್ತರಾಗಿ ಸನಾತನ ಧರ್ಮವನ್ನು ಕಾಪಾಡುವ ಕೃತ್ಯವನ್ನು ಎಸಗಿದರು ಎಂದು ನಮ್ಮ ಸೋದರ ವಿವರಿಸುತ್ತಾರೆ” ಎಂದು ಪಕ್ಕದಲ್ಲಿಟ್ಟದ್ದ ಲಾಠಿಯನ್ನು ಹಿಡಿದು ಹಿಂದೆ ಸರಿದ.

ಶಿಸ್ತಿನಿಂದ ಲೆಫ್ಟು ರೈಟು ಮಾಡುತ್ತ ಬಂದ ಮತ್ತೊಬ್ಬ ಹೆಣವೇಷಧಾರಿ, ಲಾಠಿಯನ್ನು ಪಕ್ಕದಲ್ಲಿರಿಸಿ ಮೈಕನ್ನು ಬಾಯಿಯ ಒಳಗಿಟ್ಟ.

“ನನ್ನ ಸೋದರ ಸನಾತನ…ಪುರಾತನ ಬಂಧುಗಳೇ…ಆದಿನ ಗೋಧೂಳಿ ಸಮಯದಲ್ಲಿ ಮೂರ್ಖೇಶ್ ಅವರು ಪೂಜಾರಿ ಅವರನ್ನು ಕಾಣಲು ಕುಟೀರಕ್ಕೆ ಬಂದಾಗ ಬಹಳ ಚಿಂತಿತರಾಗಿದ್ದರು. ಪೂಜಾರಿಯವರನ್ನು ಕಂಡೊಡನೆ ಅವರ ಕಾಲಿಗೆ ಬಿದ್ದು ʼನಮ್ಮ ಸನಾತನ ಧರ್ಮಕ್ಕೆ ಅವಮಾನವಾಗುತ್ತಿದೆʼ ಒಂದೇ ಸಮನೆ ಅಳಲು ಆರಂಭಿಸಿದರು. ಪೂಜಾರಿಗಳು ಅವರನ್ನು ಮೇಲೆತ್ತಿ ಅಪ್ಪಿ ಮುದ್ದಾಡಿ ಸಂತೈಸಿ, ಅವರ ವೇದನೆಗೆ ಕಾರಣ ಕೇಳಲಾಗಿ ʼಶತಮಾನಗಳ ಹಿಂದೆ ಸಾಬರಿಂದ ಮುಕ್ಕಾದ ವಿಷ್ಣು ಮೂರ್ತಿಯನ್ನು ಮರು ಸ್ಥಾಪಿಸಲು ನ್ಯಾಯಾಧೀಶರು ಅವಕಾಶ ಕೊಡುತ್ತಿಲ್ಲ” ಎಂದು ಒಂದೇ ಸಮನೆ ರೋದಿಸಲು ಪ್ರಾರಂಭಿಸಿದರು. ಪೂಜಾರಿಗಳು ಅವರನ್ನು ಹಲವು ವಿಧದಲ್ಲಿ ಸಮಾಧಾನಿಸಿ ತಮ್ಮ ಖಾಸಗಿ ಕಪಾಟಿನಿಂದ ಒಂದು ಜೊತೆ ಶೂ ತರಿಸಿ ಕೈಗಿಟ್ಟು ಉಪದೇಶ ಮಾಡಿ “ನಿನ್ನಂತ ವೀರರು ಇರುವುದಕ್ಕೆ ಸನಾತನ ಧರ್ಮ ಉಳಿದಿದೆ. ವಿಜಯಿಯಾಗಿ ಬಾ” ಎಂದು ಆರ್ಶೀರ್ವದಿಸಿದರು. 

ನಂತರ ನ್ಯಾಯಾಲಯದಲ್ಲಿ ಏನಾಯಿತು ಎಂದು ತಮಗೆ ತಿಳಿದ ವಿಷಯವೇ ಆಗಿದೆ. ಅವರು ನ್ಯಾಯಾಲಯದ ಪೀಠದತ್ತ ಶೂ ಅನ್ನು ತೂರಿ ಸನಾತನ ಧರ್ಮವನ್ನು ಎತ್ತಿ ಹಿಡಿದಿದ್ದಾರೆ. ಹಾಗೆ ಮಾಡಲು ಅವರಿಗೆ ನಮ್ಮ ದೇವರುಗಳೇ ಪ್ರೇರೆಪಿಸಿದ್ದನ್ನು ನೆನೆದು ಕಂಬನಿ ಮಿಡಿದಿದ್ದಾರೆ. ಇಂತಹ ಧೈರ್ಯವಂತರಿಗೆ ಈಗ ʼಶತಮಾನದ ಸನಾತನ ವೀರʼ ಪ್ರಶಸ್ತಿಯನ್ನು ಸಾಮ್ರಾಟರು ಸೇರಿದಂತೆ ವೇದಿಕೆ ಮೇಲಿರುವ ಗಣ್ಯರು ನಡೆಸಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ವೇದಿಕೆಯಲ್ಲಿ ಕುಳಿತವರಿಗೆ ನಮಸ್ಕರಿಸಿದ. ನೆರೆದವರು ಶತಮಾನದ ಸನಾತನ ವೀರನಿಗೆ ಜಯವಾಗಲಿ ಎಂದು ಗಂಟಲು ಕಿತ್ತು ಬರುವಂತೆ ಕೂಗಿದರು.

ಮೊದಲಿಗೆ ಪೂಜಾರಿ ಗಂಧದ ಹೂವಿನ ಹಾರವನ್ನು ಕಿರಾತಕ ಮೂರ್ಖೇಶ್ ಕೊರಳಿಗೆ ಹಾಕಿ, ಶೂ ಮಾದರಿಯ ಪ್ರಶಸ್ತಿಯನ್ನು ಕೈಗಿಟ್ಟು ಬೆನ್ನು ತಟ್ಟಿದರು. ತಟ್ಟನೆ ಚಪ್ಪಲಿಯೊಂದು ಪೂಜಾರಿಯ ಮುಖಕ್ಕೆ ಬಡಿಯಿತು. ಅವಾಕ್ಕಾದ ಪೂಜಾರಿ ಎಲ್ಲಿಂದ ಬಂತೆಂದು ನೋಡುವ ಹೊತ್ತಿಗೆ ಮತ್ತೊಂದು ಚಪ್ಪಲಿ ಮೂರ್ಖೇಶ್ ಕಪಾಲಕ್ಕೆ ಬಡಿಯಿತು. ಕೂಗಾಡುತ್ತಿದ್ದ ನೂರಾರು ಜನರಿಂದ ಅದು ತೂರಿ ಬಂದಂತೆ ಕಾಣಲಿಲ್ಲ. ಏನು ಆಗದಂತೆ ನಟಿಸುತ್ತ ಕುರ್ಚಿಯಲ್ಲಿ ಪೂಜಾರಿ ಕುಳಿತ. ಉರಿಯುತ್ತಿದ್ದ ಕೆನ್ನೆಯನ್ನು ಯಾರಿಗೂ ಕಾಣದಂತೆ ಉಜ್ಜಿಕೊಂಡ.

ನಂತರ ಸಾಮ್ರಾಟನ ಸರದಿ. ಹಾರವನ್ನು ಹಾಕಿ ಕ್ಯಾಮೆರಾ ಕಡೆ ಮುಖ ಮಾಡಿದ. ಎಲ್ಲಿಂದಲೋ ಬಂದ ಕಾನಪುರದ ಚಪ್ಪಲಿ ಅವನ ಮುಖಕ್ಕೆ ಬಡಿದು ಸ್ತಂಭೀಭೂತನಾದ. ಚಪ್ಪಲಿ ಬಂದದ್ದಾದರೂ ಏಲ್ಲಿಂದ? ಯಾವುದೋ ಅಶರೀರವಾಣಿ ಕೇಳಿದಂತಾಯಿತು.

“ನಾನೇ ನಿನ್ನ ದೇವರು. ಸಂವಿಧಾನಕ್ಕೆ ಅಪಚಾರ ಮಾಡಿದ ನಿಮ್ಮ ಅಯೋಗ್ಯ ಕೆಲಸಕ್ಕೆ ಮಾರ್ಯಾದೆ ಮಾಡುತ್ತಿದ್ದೇನೆ. ಇದು ಆಕ್ಟ್ ಆಫ್ ಗಾಡ್” ಎಂಬ ಮಾತು ಪ್ರತಿಧ್ವನಿಸಿತು.

ಯಾರಿಗೂ ತೋರಿಸಿಕೊಳ್ಳದೆ ಮಳ್ಳಿಯಂತೆ ಕೂತ ಸಾಮ್ರಾಟನ ನಂತರ, ಸನ್ಮಾನ ಮಾಡಿದ ಉಳಿದವರೆಲ್ಲರಿಗೂ ಇದೇ ರೀತಿ ಮೆಟ್ಟು ಸೇವೆ ಆಗಿ, ಆತುರಾತುರವಾಗಿ ಕಾರ್ಯಕ್ರಮ ಮುಗಿಸಿ ಎಲ್ಲರೂ ಅಲ್ಲಿಂದ ಜಾಗ ಖಾಲಿ ಮಾಡಿದರು.

ತಟ್ಟನೆ ನಿದ್ದೆಯಿಂದ ಎಚ್ಚೆತ್ತವನು ಮತ್ತೆ ನಿದ್ದೆಗೆ ಜಾರಿದಾಗ ಅವನ ಮುಖದ ಮೇಲೆ ಮುಗುಳ್ನಗೆಯೊಂದು ತೇಲಿ ಹೋಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page