Monday, August 26, 2024

ಸತ್ಯ | ನ್ಯಾಯ |ಧರ್ಮ

ಮಲಯಾಳಂ ಚಿತ್ರೋದ್ಯಮಕ್ಕೆ ಲೈಂಗಿಕ ದೌರ್ಜನ್ಯದ ಕಳಂಕ ; SIT ರಚಿಸಿದ ಕೇರಳ ಸರ್ಕಾರ

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರು ಎತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಅನುಚಿತ ವರ್ತನೆಯ ಆರೋಪಗಳ ಬಗ್ಗೆ ವಿಶೇಷ ತನಿಖಾ ತಂಡ (SIT) ತನಿಖೆ ನಡೆಸಲಿದೆ ಎಂದು ಕೇರಳ ಸರ್ಕಾರ ತಿಳಿಸಿದೆ. ಮಲಯಾಳಂ ನಟಿಯೊಬ್ಬರು ಚಿತ್ರರಂಗದ ಪ್ರಮುಖ ನಟ ಮತ್ತು ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ವಿರುದ್ಧ ಆರೋಪಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಚಲನಚಿತ್ರ ನಿರ್ಮಾಪಕ ಮತ್ತು ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ರಂಜಿತ್ ವಿರುದ್ಧ ಬಂಗಾಳಿ ಚಲನಚಿತ್ರ ನಟಿಯೊಬ್ಬರು ಲೈಂಗಿಕ ದುರ್ನಡತೆಯ ಆರೋಪಗಳನ್ನು ಹೊರಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಈ ನಿರ್ಧಾರ ಕೈಗೊಂಡಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಭಾನುವಾರ ಸಭೆ ನಡೆಸಿದರು. ಇನ್ಸ್ ಪೆಕ್ಟರ್ ಜನರಲ್ ಜಿ ಸ್ಪರ್ಜನ್ ಕುಮಾರ್ ನೇತೃತ್ವದ ತಂಡ ದೂರುಗಳ ತನಿಖೆ ನಡೆಸಲಿದೆ ಎಂದು ಮುಖ್ಯಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ.

ಏಳು ಸದಸ್ಯರ ಎಸ್‌ಐಟಿಯಲ್ಲಿ ನಾಲ್ವರು ಮಹಿಳಾ ಅಧಿಕಾರಿಗಳು ಇರಲಿದ್ದು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಅಪರಾಧ ವಿಭಾಗ) ಎಚ್ ವೆಂಕಟೇಶ್ ಅವರು ಮೇಲ್ವಿಚಾರಣೆ ನಡೆಸಲಿದ್ದಾರೆ.

ಏತನ್ಮಧ್ಯೆ ಶನಿವಾರ ಮತ್ತು ಭಾನುವಾರ ಆರೋಪಗಳು ಹೊರಬಿದ್ದಿದ್ದರಿಂದ ಸಿದ್ದಿಕ್ ಮತ್ತು ರಂಜಿತ್ ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2016 ರಲ್ಲಿ ತಿರುವನಂತಪುರಂನ ಹೋಟೆಲ್‌ನಲ್ಲಿ ಸಿದ್ದಿಕ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಲಯಾಳಂ ನಟಿ ಆರೋಪಿಸಿದರೆ, ಬಂಗಾಳಿ ನಟಿ 2009 ರಲ್ಲಿ ರಂಜಿತ್ ಅವರ ಚಿತ್ರದ ಶೂಟಿಂಗ್ ವೇಳೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು.

ಆರೋಪಗಳ ಹಿನ್ನೆಲೆಯಲ್ಲಿ “ನಾನು ನನ್ನ ರಾಜೀನಾಮೆಯನ್ನು AMMA ಅಧ್ಯಕ್ಷ ಮೋಹನ್ ಲಾಲ್ ಅವರಿಗೆ ತಿಳಿಸಿದ್ದೇನೆ. ನನ್ನ ವಿರುದ್ಧ ಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ. ಆರೋಪಗಳ ಬಗ್ಗೆ ಈಗಲೇ ಮಾತನಾಡಲು ಇಷ್ಟಪಡುವುದಿಲ್ಲ ಎಂದು” ನಟ ಸಿದ್ದಿಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಉದ್ಯಮದಲ್ಲಿ ಮಹಿಳಾ ಕಲಾವಿದರು ಮತ್ತು ತಂತ್ರಜ್ಞರು ಎದುರಿಸುತ್ತಿರುವ ಅತಿರೇಕದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳವನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ವಿಸ್ತೃತ ತನಿಖೆಗೆ ಸೂಚಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page