Friday, May 16, 2025

ಸತ್ಯ | ನ್ಯಾಯ |ಧರ್ಮ

ಗ್ರಾಮಸಭೆಯ ಆದೇಶ ಧಿಕ್ಕರಿಸಿ, ಕಾನೂನು ಹೋರಾಟ ನಡೆಸಿ ಗೆದ್ದ ಜಾರ್ಖಂಡ್‌ನ ಬುಡಕಟ್ಟು ದಂಪತಿಗಳ ಕಥೆ.

"ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಲು ಬಯಸಿದ್ದ ಕಾರಣ ಅಸಮಾಧಾನಗೊಂಡಿದ್ದ ಗ್ರಾಮಸಭೆಯು, ರಾಜ್ಯದ ಮತಾಂತರ ನಿಷೇಧ ಕಾನೂನಿನಡಿಯಲ್ಲಿ ಸುಳ್ಳು ಪ್ರಕರಣವನ್ನು ದಾಖಲಿಸುವಂತೆ ಹುಡುಗಿಯ ತಂದೆಯನ್ನು ಪುಸಲಾಯಿಸಿತ್ತು..." ಒಮರ್ ರಾಶೀದ್ ಬರಹದ ಅನುವಾದ

ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಜಾರಿಗೆ ತಂದ ಮತಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಸುಳ್ಳು ಆರೋಪ ಹೊರಿಸಲ್ಪಟ್ಟು, ಕಾನೂನು ಹೋರಾಟಗಳಲ್ಲಿ ಗೆದ್ದು ಬಂದವರ ಸರಣಿ ವರದಿಗಳಲ್ಲಿ ಎಂಟನೇ ಲೇಖನ.

ಭಾಗ 1 | ಭಾಗ 2 | ಭಾಗ 3 | ಭಾಗ 4 | ಭಾಗ 5 | ಭಾಗ 6 | ಭಾಗ 7

ನವದೆಹಲಿ: ತಾವಿಬ್ಬರು ಮದುವೆಯಾಗಲು ತೀರ್ಮಾನಿಸಿದ್ದ ಅದೇ ದಿನದಂದು ಜೈಲು ಸೇರುತ್ತೇವೆಂದು ಆ ಪ್ರೇಮಿಗಳು ಅಂದುಕೊಂಡೇ ಇರಲಿಲ್ಲ. ಜೈಲಿಗೆ ತಳ್ಳಲ್ಪಡುವವರು ಕಿಡಿಗೇಡಿಗಳು ಮಾತ್ರವೆಂದು ಪವನ್* (34) ಮತ್ತು ಚಂದಾ* (27) ಮುಗ್ದವಾಗಿಯೇ ನಂಬಿದ್ದರು. “ನನಗೆ ತುಂಬಾ ಬೇಸರವಾಯಿತು. ಕೆಟ್ಟ ಕೆಲಸಗಳನ್ನು ಮಾಡುವವರು ಮತ್ತು ಅಪರಾಧ ಮಾಡುವವರು ಮಾತ್ರ ಜೈಲು ಸೇರುತ್ತಾರೆ ಎಂದು ನಾನು ಭಾವಿಸಿದ್ದೆ. ನಾವು ಯಾವ ಅಪರಾಧವನ್ನೂ ಮಾಡಿರಲಿಲ್ಲ” ಎಂದು ಪವನ್ ಹೇಳುತ್ತಾರೆ.

ಒಡಿಶಾದ ಗಡಿಯ ಬಳಿ ಇರುವ ಜಾರ್ಖಂಡ್‌ನ ಸಿಮ್ಡೇಗಾ ಎಂಬ ಊರಿನ ನಿವಾಸಿಗಳಾದ ಪವನ್, ಚಂದಾ, ಚಂದಾರ ಅತ್ತಿಗೆ ರಜನಿ ಮತ್ತು ಅವರ ವಿವಾಹವನ್ನು ನಡೆಸಬೇಕಿದ್ದ ಸ್ಥಳೀಯ ಪಾದ್ರಿ ಜಗನ್ ಅವರನ್ನು 2018ರ ಬೇಸಿಗೆಯಲ್ಲಿ ರಾಜ್ಯದ ಮತಾಂತರ ನಿಷೇಧ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗುವ ಮೊದಲು ಅವರು 42 ದಿನಗಳನ್ನು ಜೈಲಿನಲ್ಲಿ ಕಳೆದಿದ್ದರು.

ಈ ಪ್ರಕರಣದ ದೂರುದಾರರಾದ ಚಂದಾರ ತಂದೆ ಹೇಮಂತ್, ತನ್ನ ಮಗಳು ಮತ್ತು ಪವನ್ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆಯಾಗಲು ತೀರ್ಮಾನಿಸಿದ್ದಾರೆ ಎಂಬುದನ್ನು ಅರಿತು ಅಸಮಾಧಾನಗೊಂಡಿದ್ದರು. ಚಂದಾ ಮತ್ತು ಪವನ್ ಇಬ್ಬರೂ ಪ್ರಕೃತಿ ಆರಾಧನೆಯ ಸರ್ನಾ ಧರ್ಮವನ್ನು ಅನುಸರಿಸುವ ಸಂತಾಲ್ ಬುಡಕಟ್ಟು ಜನಾಂಗಕ್ಕೆ ಸೇರಿದವರು. ಸರ್ನಾ ಧರ್ಮಾನುಯಾಯಿಯಾದ ಹೇಮಂತ್, ತನ್ನ ಮಗಳನ್ನು ಸರ್ನಾ ಪದ್ಧತಿಯ ಪ್ರಕಾರವೇ ಮದುವೆ ಮಾಡಿಸಬೇಕೆಂದು ಬಯಸಿದ್ದರು. ಅವರಿಬ್ಬರ ಮದುವೆಗೆ ಆತ ಆಕ್ಷೇಪ ವ್ಯಕ್ತಪಡಿಸಿದ್ದರೂ ಕೂಡ ಆ ಹೆಸರಿನಲ್ಲಿ ತನ್ನ ಮಗಳನ್ನು ಶಿಕ್ಷಿಸುವ ಅಥವಾ ಮತಾಂತರ ವಿರೋಧಿ ಕಾನೂನನ್ನು ಬಳಸುವ ಉದ್ದೇಶ ಆತನಿಗಿರಲಿಲ್ಲ. ಅನಕ್ಷರಸ್ಥನಾಗಿದ್ದ ಮತ್ತು ಕುಡಿತದ ಚಟ ಹೊಂದಿದ್ದ ಹೇಮಂತ್‌ ತನ್ನ ಮಗಳು ಮತ್ತು ಭಾವಿ ಅಳಿಯನ ಮೇಲೆ ಪೊಲೀಸ್‌ ದೂರು ದಾಖಲಿಸುವಂತೆ ತೆರೆಮೆರೆಯಲ್ಲಿ ಕೆಲಸ ಮಾಡುವುದು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಗ್ರಾಮ ಪರಿಷತ್ ಸದಸ್ಯರು. ಆದರೆ, ನ್ಯಾಯಾಲಯದಲ್ಲಿ ಆತ ತನ್ನಿಂದಾದ ಪ್ರಮಾದವನ್ನು ಅರಿತುಕೊಂಡು ಹೇಳಿಕೆಯನ್ನು ಬದಲಾಯಿಸಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೂ ಕೂಡ ಪವನ್, ಚಂದಾ, ರಜನಿ ಮತ್ತು ಪಾದ್ರಿ ಜಗನ್ ಅವರುಗಳು ಆರೋಪಗಳಿಂದ ಮುಕ್ತಗೊಳ್ಳಲು ಆರು ವರ್ಷಗಳ ಸುದೀರ್ಘ ಸಮಯ ಬೇಕಾಗಿ ಬರುತ್ತದೆ.

ಇದೆಲ್ಲ ಆರಂಭವಾಗುವುದು ಮೇ 2018ರಲ್ಲಿ. ಪರಸ್ಪರ ಪ್ರೇಮಿಸುತ್ತಿದ್ದ ಪವನ್ ಮತ್ತು ಚಂದಾ ಆಗ ಮದುವೆಯಾಗಲು ನಿರ್ಧರಿಸಿದ್ದರು. ಅದಾಗಲೇ ಅವರಿಬ್ಬರೂ ತಮ್ಮ ಸರ್ನಾ ಅಸ್ಮಿತೆಯನ್ನು ತ್ಯಜಿಸಿ ಯೇಸುಕ್ರಿಸ್ತನ ಮಾರ್ಗ ಹಿಡಿದಿದ್ದರಿಂದ, ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಮದುವೆಯಾಗಲು ನಿರ್ಧರಿಸುತ್ತಾರೆ. ಮೇ 30, 2018ರಂದು ನಿಗದಿಯಾಗಿದ್ದ ಅವರ ವಿವಾಹದ ಸುದ್ದಿ ಆ ಗ್ರಾಮದಲ್ಲಿ ಸಂಚಲನ ಮೂಡಿಸುತ್ತದೆ. ಆ ಊರಿನಲ್ಲಿ ಹೆಚ್ಚಾಗಿ ಸಂತಾಲ್ ಬುಡಕಟ್ಟಿನ ಸರ್ನಾ ಅನುಯಾಯಿಗಳು ವಾಸಿಸುತ್ತಿದ್ದರು. ಗ್ರಾಮಸ್ಥರು ಎರಡು ಬಾರಿ ಸಾರ್ವಜನಿಕ ಸಭೆಗಳನ್ನು ನಡೆಸಿ, ಪವನ್ ಮತ್ತು ಚಂದಾ ಅವರ ತೀರ್ಮಾನಗಳನ್ನು ಪರಿಶೀಲಿಸುತ್ತಾರೆ. ಕೊನೆಗೆ ತಮ್ಮ ಗ್ರಾಮದಲ್ಲಿ ಕ್ರಿಶ್ಚಿಯನ್ ಪದ್ದತಿಯ ವಿವಾಹವನ್ನು ತಡೆಯಲು ನಿರ್ಧರಿಸುತ್ತಾರೆ. “ನಮ್ಮ ಮದುವೆ ನಿಗದಿಯಾಗಿದ್ದ ವಿಷಯ ಅರಿಗೆ ತಿಳಿದಿತ್ತು. ಆದರೆ ನಾವು ಹೇಗೆ ಮದುವೆಯಾಗುತ್ತೇವೆ ಎಂದು ತಿಳಿಸಿದಾಗ ಅತೃಪ್ತರಾದರು. ನಾವು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗುತ್ತೇವೆ ಎಂದು ತಿಳಿಸಿದಾಗ ಅದನ್ನು ವಿರೋಧಿಸಿದರು ಮತ್ತು ಸರ್ನಾ ಸಂಪ್ರದಾಯದ ಪ್ರಕಾರ ಮದುವೆಯಾಗುವಂತೆ ನಮ್ಮನ್ನು ಬೆದರಿಸಿ ಒತ್ತಾಯಿಸಿದರು” ಎಂದು ಚಂದಾ ಹೇಳುತ್ತಾರೆ.

ಪವನ್, ಚಂದಾ, ರಜನಿ ಮತ್ತು ಜಗನ್ ವಿರುದ್ಧ ಬೋಲ್ಬಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗುತ್ತದೆ. ಚಂದಾರ ತಂದೆ ಹೇಮಂತ್ ಮೇಲೆ ಹಲ್ಲೆ ನಡೆಸಿ ಆತನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಬಲವಂತಪಡಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಗ್ರಾಮದ ಸರ್ನಾ ಧಾರ್ಮಿಕ ಮಂಡಳಿಯ ಅಧ್ಯಕ್ಷ ನರೇಂದ್ರ ಮಾಂಝಿ ಆ ದೂರನ್ನು ಬರೆದಿದ್ದರು ಎಂಬುದು ನಂತರ ಬಹಿರಂಗವಾಗುತ್ತದೆ. ಹೇಮಂತ್‌ ಅವರಿಗೆ ಆ ದೂರಿನಲ್ಲಿದ್ದ ವಿಷಯದ ಬಗ್ಗೆ ಏನೇನೂ ತಿಳಿದಿರಲಿಲ್ಲ. “ಅವರು ದೂರು ಬರೆದುಕೊಂಡು ಸಹಿ ಹಾಕಿಸಿದರು” ಎಂದು ಚಂದಾ ಹೇಳುತ್ತಾರೆ. ಪ್ರಕರಣದಲ್ಲಿ ತಾನೊಬ್ಬನೇ ದೂರುದಾರ ಎಂದು ಕೂಡ ಆತನಿಗೆ ತಿಳಿದಿರಲಿಲ್ಲ ಎಂದು ಚಂದಾ ಹೇಳುತ್ತಾರೆ.

ಮೇ 27, 2018ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಪವನ್ ಮತ್ತು ಪಾದ್ರಿ ಜಗನ್ ತನ್ನ ಮನೆಗೆ ಬಂದು ಕ್ರಿಶ್ಚಿಯನ್ ಸಂಪ್ರದಾಯದ ಮೂಲಕ ಮದುವೆ ನೆರವೇರಿಸುವಂತೆ ಒತ್ತಡ ಹೇರಲು ಪ್ರಾರಂಭಿಸಿದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿತ್ತು. ಅವರಿಬ್ಬರು ತನ್ನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸಲು ಪ್ರಯತ್ನಿಸಿದರು ಎಂದು ಕೂಡ ಆರೋಪಿಸಲಾಗಿತ್ತು. ಅವರ ಮಾತುಗಳನ್ನು ತಳ್ಳಿ ಹಾಕಿದಾಗ ತನ್ನ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದರು, ಹೊಡೆದರು ಮತ್ತು ಕಾಲಿನಿಂದ ಒದ್ದರು ಎಂದು ಆರೋಪಿಸಲಾಗಿತ್ತು. ಈ ಗದ್ದಲ ಕೇಳಿ, ಬಿಜೆಪಿ ಬೆಂಬಲಿತ ಗ್ರಾಮ ಮುಖ್ಯಸ್ಥ ಸೇರಿದಂತೆ ಗ್ರಾಮಸ್ಥರು ಅಲ್ಲಿಗೆ ಬಂದು ಮಧ್ಯಪ್ರವೇಶಿಸುತ್ತಾರೆ.

ನಾಲ್ವರ ವಿರುದ್ಧ ಜಾರ್ಖಂಡ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ, 2017ರ ಸೆಕ್ಷನ್ 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಉದ್ದೇಶಪೂರ್ವಕ ಹಲ್ಲೆ ಮತ್ತು ಅಕ್ರಮ ಬಂಧನದ ಆರೋಪವನ್ನೂ ಅವರ ಮೇಲೆ ಹೊರಿಸಲಾಗುತ್ತದೆ.

ಆದರೆ, ಪವನ್ ಮತ್ತು ಚಂದಾ ಇಡೀ ಘಟನೆಯನ್ನು ಕಟ್ಟುಕಥೆ ಎಂದು ಹೇಳುತ್ತಾರೆ. “ಅಂತಹ ಯಾವುದೇ ಘಟನೆ ನಡೆದಿಲ್ಲ” ಎಂದು ಅವರು ಹೇಳುತ್ತಾರೆ. ತನ್ನ ತಂದೆಯನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಪ್ರಯತ್ನಿಸಲಾಗಿತ್ತು ಎಂಬ ಆರೋಪವನ್ನು ಸಹ ತಳ್ಳಿ ಹಾಕುತ್ತಾರೆ. ತನ್ನ ತಂದೆ ಸರ್ನಾ ನಂಬಿಕೆಗೆ ಬದ್ಧರಾಗಿದ್ದರು ಮತ್ತು ಆ ಸಂಪ್ರದಾಯದಂತೆ ಮದುವೆ ನಡೆಯಬೇಕೆಂದು ಬಯಸಿದ್ದರು ಎಂದು ಚಂದಾ ಹೇಳುತ್ತಾರೆ. “ಅವರು ಹಿಂದೂ ಧರ್ಮವನ್ನು ಸಹ ಅನುಸರಿಸುತ್ತಿದ್ದರು. ನಮ್ಮಂತೆ ಕ್ರಿಶ್ಚಿಯನ್ ನಂಬಿಕೆಯನ್ನು ಅವರು ಎಂದಿಗೂ ಒಪ್ಪಿಕೊಳ್ಳಲಿಲ್ಲ” ಎಂದು ಚಂದಾ ಹೇಳುತ್ತಾರೆ.

2018ರ ಮೇ 27 ಮತ್ತು 28ರಂದು ಗ್ರಾಮದಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗಿತ್ತು. ಅದರಲ್ಲಿ ಮೇ 30ರಂದು ನಡೆಯಬೇಕಿದ್ದ ಕ್ರಿಶ್ಚಿಯನ್ ಸಂಪ್ರದಾಯದ ವಿವಾಹಕ್ಕೆ ಆಕ್ಷೇಪಣೆಗಳನ್ನು ಎತ್ತಲಾಗಿತ್ತು. ಊರವರು ತನ್ನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಯೋಜಿಸುತ್ತಿದ್ದಾರೆಂದು ಪವನ್ ತನ್ನ ಗೆಳೆಯರ ಮೂಲಕ ತಿಳಿದುಕೊಳ್ಳುತ್ತಾರೆ. ನಂತರ, ಚಂದಾ, ಆಕೆಯ ಅತ್ತಿಗೆ ರಜನಿ ಮತ್ತು ಪಾದ್ರಿ ಜಗನ್ ಅವರನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ತಮ್ಮ ಮದುವೆಯ ಬಗ್ಗೆ ಇರುವ ವಿರೋಧದ ಬಗ್ಗೆ ತಿಳಿಸುತ್ತಾರೆ. ತಾವಿಬ್ಬರು ವಯಸ್ಕರಾಗಿದ್ದು ತಮ್ಮಿಚ್ಛೆಯಂತೆ ಮದುವೆಯಾಗುತ್ತಿರುವುದಾಗಿ ಘೋಷಿಸುವ ಅರ್ಜಿಯೊಂದನ್ನು ಪವನ್‌ ಇಟ್ಟುಕೊಂಡಿದ್ದರು. ಆದರೆ ಸರ್ನಾ ಗ್ರಾಮ ಮಂಡಳಿಯ ಸದಸ್ಯರು ಮತ್ತು ಸಂಸದರೊಬ್ಬರ ಪ್ರತಿನಿಧಿ ಸೇರಿದಂತೆ ಆಡಳಿತಾರೂಢ ಬಿಜೆಪಿಯ ಹಲವು ಸದಸ್ಯರು ಅದಾಗಲೇ ಅಲ್ಲಿ ಬಂದಿದ್ದರು ಎಂದು ಪವನ್ ಹೇಳುತ್ತಾರೆ. “ಅವರು ನಮಗೆ ಬೆದರಿಕೆ ಹಾಕಿದರು. ಅವರು ಅದಾಗಲೇ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದರು. ನಮ್ಮ ಮಾತನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಪೊಲೀಸರು ನಮ್ಮ ಅರ್ಜಿಯನ್ನು ಸ್ವೀಕರಿಸಲಿಲ್ಲ. ಅವರು ಅದನ್ನು ಹರಿದು ಹಾಕಿದರು” ಎಂದು ಪವನ್ ಹೇಳುತ್ತಾರೆ.

ಗ್ರಾಮಸ್ಥರು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಚಂದಾ ಪೊಲೀಸರ ಬಳಿ ಹೇಳಿಕೊಳುತ್ತಾರೆ. ಆದರೆ ಅವರ ದೂರನ್ನು ಕೇಳಿಸಿಕೊಳ್ಳುವ ಬದಲು ಪೊಲೀಸರು ಅವರನ್ನೇ ವಶಕ್ಕೆ ಪಡೆಯುತ್ತಾರೆ. “ಅವರು ನಮ್ಮ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ. ಸರ್ನಾ ಆಚರಣೆಗಳು ಮತ್ತು ಸಂಪ್ರದಾಯದ ಪ್ರಕಾರವೇ ನಾವು ಮದುವೆಯಾಗಬೇಕೆಂದು ನಮಗೆ ಪಾಠ ಮಾಡುತ್ತಿದ್ದರು. ಕೊನೆಗೆ ನಾವು ಮದುವೆಯಾಗಬೇಕಿದ್ದ ಮೇ 30ರಂದು ನಮ್ಮನ್ನು ಜೈಲಿಗೆ ಹಾಕಲಾಯಿತು” ಎಂದು ಚಂದಾ ಹೇಳುತ್ತಾರೆ.

ಪ್ರಕರಣ ವಿಚಾರಣೆಗೆ ಬರುತ್ತದೆ. ಚಂದಾಳ ಸೋದರ ಸಂಬಂಧಿ ಬಾಬುಲಾಲ್, ಆಕೆಯ ಸೋದರ ಮಾವ ಬಿರ್ಬಹಾ, ಆಕೆಯ ಸಹೋದರ ಶಿವ ಮತ್ತು ಗ್ರಾಮಮುಖ್ಯಸ್ಥ ಜೋಗೇಂದ್ರ ಮಾಂಝಿ ಸೇರಿದಂತೆ ಆರೋಪಿಗಳ ವಿರುದ್ಧ 11 ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ಹಾಜರುಪಡಿಸುತ್ತದೆ. ಅಧ್ಯಕ್ಷ ನರೇಂದ್ರ ಮಾಂಝಿ ನೇತೃತ್ವದಲ್ಲಿ ನಡೆದ ಗ್ರಾಮ ಸಭೆಯ ನಂತರವೇ ಎಫ್‌ಐಆರ್ ದಾಖಲಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು ಎಂದು ಕೆಲವು ಸಾಕ್ಷಿಗಳು ನ್ಯಾಯಾಲಯಕ್ಕೆ ತಿಳಿಸುತ್ತಾರೆ. ಆರೋಪಿಗಳ ವಿರುದ್ಧ ಸಾಕ್ಷ್ಯ ನುಡಿದವರು ಹೇಳಿದ ಕಥೆಗಳು ತೀರಾ ಅಸಮಂಜಸವಾಗಿತ್ತು. ಕೆಲವರು ಹೇಮಂತ್ ಅವರನ್ನು ಅವರ ಮನೆಯ ಸಮೀಪದ ಹೊಲದಲ್ಲಿ ಥಳಿಸಲಾಯಿತು ಎಂದು ಹೇಳುತ್ತಾರೆ. ಇನ್ನು ಕೆಲವರು ಅವರ ಕೋಣೆಯಲ್ಲಿ ಹಲ್ಲೆ ನಡೆಸಲಾಗಿತ್ತು ಎಂದು ಹೇಳುತ್ತಾರೆ.

ಜುಲೈ 11, 2018ರಂದು ಜಾಮೀನಿನ ಮೇಲೆ ಬಿಡುಗಡೆಯಾಗುವ ಪವನ್ ಮತ್ತು ಚಂದಾ ಸಿವಿಲ್ ನ್ಯಾಯಾಲಯದಲ್ಲಿ ವಿವಾಹವಾಗುತ್ತಾರೆ. ನವದಂಪತಿಗಳು ನ್ಯಾಯಾಲಯದಲ್ಲಿ ಹೋರಾಡುವುದರ ಜೊತೆಗೆ, ಪ್ರಕರಣ ಹಿಂಪಡೆಯುವಂತೆ ಚಂದಾಳ ತಂದೆಯನ್ನು ಮನವೊಲಿಸಲು ಕೂಡ ಪ್ರಯತ್ನಿಸುತ್ತಾರೆ. ಮೊದಲಿಗೆ, ಹೇಮಂತ್ ಅವರ ಮಾತು ಕೇಳುವುದಿಲ್ಲ. ಕುಡುಕನಾಗಿದ್ದ ಹೇಮಂತ್ ಗ್ರಾಮದ ಮುಖ್ಯಸ್ಥ ಮತ್ತು ಸರ್ನಾ ಅನುಯಾಯಿಗಳ ಪ್ರಭಾವಕ್ಕೆ ಒಳಗಾಗಿದ್ದರು ಎಂದು ಪವನ್‌ ಮತ್ತು ಚಂದಾ ಹೇಳುತ್ತಾರೆ. ಆದರೆ ನಿಧಾನಕ್ಕೆ ಹೇಮಂತ್ ಮನಸ್ಸು ಬದಲಾಗುತ್ತದೆ. ತನ್ನ ಬಗ್ಗೆ ಅಪರಾಧಿ ಪ್ರಜ್ಞೆ ಮೂಡಿ, ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆ. ಎರಡೂ ಕಡೆಯವರು ತಮ್ಮ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಂಡಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿ ಜಂಟಿ ರಾಜಿ ಅರ್ಜಿಯನ್ನು ಸಲ್ಲಿಸುತ್ತಾರೆ. “ಅವರು ಅಪ್ಪನಿಗೆ ಊಟ ಮತ್ತು ಮದ್ಯವನ್ನು ನೀಡುತ್ತಿದ್ದರು. ಅದು ಕೊಡುವುದನ್ನು ಅವರು ನಿಲ್ಲಿಸಿದಾಗ ಅಪ್ಪನಿಗೆ ತನ್ನ ತಪ್ಪಿನ ಅರಿವಾಗಿತ್ತು. ತಾನು ಅವರ ತಂತ್ರಕ್ಕೆ ಬಲಿಯಾಗಿದ್ದೆನೆಂದು ಅರಿತು ದುಖಿತರಾದರು. ಇದನ್ನೆಲ್ಲಾ ನೀವು ನ್ಯಾಯಾಲಯದಲ್ಲಿ ಹೇಳಬೇಕು, ಇಲ್ಲಿ ಹೇಳಿಕೊಂಡು ಪಶ್ಚಾತ್ತಾಪ ಪಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ನಾವು ಅಪ್ಪನಿಗೆ ಹೇಳಿದೆವು” ಎಂದು ಪವನ್ ಹೇಳಿದರು.

ಪೊಲೀಸ್ ದೂರಿನಲ್ಲಿ ಕೇವಲ ತನ್ನ ಸಹಿ ಮಾತ್ರ ಇದೆ ಎಂದು ಹೇಮಂತ್ ನ್ಯಾಯಾಲಯಕ್ಕೆ ತಿಳಿಸುತ್ತಾರೆ. ಆ ದೂರನ್ನು ಬರೆದವರು ನರೇಂದ್ರ ಮಾಂಝಿ. ಗ್ರಾಮಸ್ಥರು ಮತ್ತು ತನ್ನ ಸಮುದಾಯದ ಜನರು ದೂರು ದಾಖಲಿಸುವಂತೆ ತನ್ನ ಮೇಲೆ ಒತ್ತಡ ಹೇರಿದ್ದರು ಎಂದು ಹೇಮಂತ್ ನ್ಯಾಯಾಲಯಕ್ಕೆ ತಿಳಿಸುತ್ತಾರೆ.

ಅಕ್ರಮ ಬಂಧನ ಮತ್ತು ಉದ್ದೇಶಪೂರ್ವಕ ಹಲ್ಲೆ ಆರೋಪಗಳನ್ನು CrPCಯ ಸೆಕ್ಷನ್ 320ರ ಮೂಲಕ ಬಗೆಹರಿಸಬಹುದಾಗಿದ್ದರಿಂದ, ಸಿಮ್ಡೆಗಾದ ಸಬ್ ಡಿವಿಷನಲ್ ಜ್ಯಡಿಷಿಯಲ್‌ ಮ್ಯಾಜಿಸ್ಟ್ರೇಟ್ ಸುಮಿ ಬಿನಾ ಹೊರೊ ಅವರು ಆರೋಪಗಳ ಅರ್ಹತೆಯನ್ನು ಪರಿಶೀಲಿಸುತ್ತಾರೆ. ಎಫ್‌ಐಆರ್‌ನಲ್ಲಿನ ದೂರುಗಳನ್ನು ದೃಢೀಕರಿಸಲು ನ್ಯಾಯಾಲಯಕ್ಕೆ ಯಾವುದೇ ಬಲವಾದ ಸಾಕ್ಷಿಗಳು ದೊರೆಯುವುದಿಲ್ಲ. ಘಟನೆ ನಡೆದ ಸ್ಥಳದ ಬಗ್ಗೆ ಸಾಕ್ಷಿಗಳ ಹೇಳಿಕೆಗಳಲ್ಲಿ ಗೊಂದಲಗಳಿದ್ದವು. ಯಾವುದೇ ಸಾಕ್ಷಿಯು ಅಕ್ರಮ ಬಂಧನದ ಬಗ್ಗೆ ಮಾತನಾಡಿರಲಿಲ್ಲ. ಹಲ್ಲೆಯನ್ನು ಸಾಬೀತುಪಡಿಸಲು ಯಾವುದೇ ಗಾಯದ ವರದಿಯೂ ಇರಲಿಲ್ಲ. ತನಿಖಾಧಿಕಾರಿಯು ಹೇಮಂತ್‌ಗೆ ಸೇರಿದ ಯಾವುದೇ ವಸ್ತು ಅಥವಾ ರಕ್ತಸಿಕ್ತ ಬಟ್ಟೆಯನ್ನು ವಶಪಡಿಸಿಕೊಂಡಿಲ್ಲ ಎಂದೂ ಹೇಳಿದ್ದರು.

“ಸಾಕ್ಷಿಗಳು ಜಗಳದ ಸಮಯದಲ್ಲಿ ಯಾವುದೇ ರೀತಿಯ ಆಯುಧವನ್ನು ಬಳಸಿದ್ದರ ಬಗ್ಗೆ ಏನನ್ನೂ ಹೇಳಿಲ್ಲ ಮತ್ತು ಈ ಕುರಿತು ಯಾವುದೇ ಪುರಾವೆಗಳು ಲಭ್ಯವಿಲ್ಲ. ಕ್ರಿಶ್ಚಿಯನ್ ಧರ್ಮವನ್ನು ಸೇರುವಂತೆ ಅವರಿಬ್ಬರು ಒತ್ತಡ ಹೇರುವ ಬಗ್ಗೆ ಏನನ್ನೂ ನೋಡಿಲ್ಲ ಅಥವಾ ಕೇಳಿಲ್ಲ” ಎಂದು ಸಬ್ ಡಿವಿಷನಲ್ ಜ್ಯಡಿಷಿಯಲ್‌ ಮ್ಯಾಜಿಸ್ಟ್ರೇಟ್ ಹೊರೊ ಮೇ 20, 2024ರ ತಮ್ಮ ಆದೇಶದಲ್ಲಿ ದಾಖಲಿಸುತ್ತಾರೆ. ಸಂತ್ರಸ್ತ ಹೇಮಂತ್ “ತನ್ನ ಸಮುದಾಯದ ಒತ್ತಡ”ದ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಿದೆ ಎಂದು ಹೊರೊ ಹೇಳುತ್ತಾರೆ. ಪ್ರಾಸಿಕ್ಯೂಷನ್ “ಅಪರಾಧಗಳ ಅಂಶಗಳನ್ನು ಸಾಬೀತುಪಡಿಸುವಲ್ಲಿ ಶೋಚನೀಯವಾಗಿ ವಿಫಲವಾಗಿದೆ” ಎಂದು ಹೊರೊ ಹೇಳುತ್ತಾರೆ. ಕೊನೆಗೆ ಪವನ್, ಚಂದಾ, ರಜನಿ ಮತ್ತು ಜಗನ್ ಅವರನ್ನು ಖುಲಾಸೆಗೊಳಿಸುತ್ತಾರೆ.

ಆದರೆ ಕಾನೂನುಬಾಹಿರ ಮತಾಂತರದ ಇತರ ಪ್ರಕರಣಗಳಂತೆಯೇ, ಅವರ ಹೋರಾಟವು ನ್ಯಾಯಾಲಯದಲ್ಲಿ ಗೆಲ್ಲುವ ಮೂಲಕ ಕೊನೆಗೊಳ್ಳುವುದಿಲ್ಲ. ಪವನ್ ಮತ್ತು ಚಂದಾ ಅವರನ್ನು ಸಾಮಾಜಿಕ ಒತ್ತಡದ ಮೂಲಕ ಊರು ತೊರೆಯುವಂತೆ ಮಾಡಲಾಗುತ್ತದೆ. ಅವರಿಗೆ ತಮ್ಮಿಬ್ಬರ ಹಳ್ಳಿಗಳಲ್ಲೂ ವಾಸಿಸಲು ಅವಕಾಶ ನೀಡುವುದಿಲ್ಲ. “ಸಮಾಜ ಮತ್ತು ಅದರ ಧರ್ಮದ ಒತ್ತಡದಿಂದಾಗಿ, ನಾವು ಬೇರೆ ಹಳ್ಳಿಗೆ ಸ್ಥಳಾಂತರಗೊಂಡೆವು. ನಮ್ಮ ಮದುವೆಯ ನಂತರ ನಮ್ಮನ್ನು ಅದೇ ಗ್ರಾಮದಲ್ಲಿ ಉಳಿಯಲು ಬಿಟ್ಟರೆ ನನ್ನ ತಂದೆಯನ್ನೂ ಊರಿನಿಂದ ಹೊರಹಾಕುವುದಾಗಿ ಅವರು ಬೆದರಿಸಿದ್ದರು. ಹಾಗಾಗಿ ನಾವು ಊರು ಬಿಡುವುದೇ ಉತ್ತಮ ಎಂದು ಭಾವಿಸಿದೆವು” ಎಂದು ಪವನ್ ಹೇಳುತ್ತಾರೆ. ಅವರ ತಂದೆ 2023ರಲ್ಲಿ ನಿಧನರಾದರು.

ಪವನ್ ಈಗ ಸಿಮ್ಡೆಗಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರನ್ನು ಮನೆಯಿಂದ ಹೊರ ಹಾಕುವಂತೆ ಅವರ ಮನೆ ಮಾಲೀಕರಿಗೂ ಅವಾಗವಾಗ ಬೆದರಿಕೆಗಳು ಬರುತ್ತವೆ. ನ್ಯಾಯಾಲಯದಲ್ಲಿ ಖುಲಾಸೆಗೊಂಡ ನಂತರ ಚಂದಾ ಕಳೆದ ವರ್ಷ ದೆಹಲಿಗೆ ತೆರಳಿ, ಒಂದು ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ. ಸಿಮ್ಡೆಗಾದಲ್ಲಿ ಎಲ್ಲಾದರು ತಮಗಾಗಿ ಒಂದು ಸಣ್ಣ ಮನೆಯನ್ನು ನಿರ್ಮಿಸಲು ಬೇಕಾದಷ್ಟು ಹಣ ಉಳಿತಾಯ ಮಾಡಬೇಕೆಂಬುದು ಅವರ ಬಯಕೆ.
*ಸಂತ್ರಸ್ತರ ಖಾಸಗಿತನವನ್ನು ರಕ್ಷಿಸಲು ಹೆಸರು ಬದಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page