Friday, June 14, 2024

ಸತ್ಯ | ನ್ಯಾಯ |ಧರ್ಮ

ಹಿಂದುತ್ವ ರಾಜಕಾರಣದ ಕಥೆ- 15 : ಬ್ರಿಟಿಷ್‌ ವಿರೋಧದ ಅವಸಾನಕಾಂಡ

ಸಾವರ್ಕರ್ ಈಜು ಸಾಹಸದ ಬಗ್ಗೆ ನಂತರದ ಕಾಲದಲ್ಲಿ ಹಲವು ಕಥೆಗಳು ಹುಟ್ಟಿಕೊಂಡಿದ್ದವು. ಸಮುದ್ರದಲ್ಲಿ ಈಜಿ ದಾಟಿದ ಮೈಲುಗಳು, ತೀರದಲ್ಲಿ ಓಡಿದ ದೂರ ಎಲ್ಲವೂ ಬಣ್ಣ ಬಣ್ಣದ ಕಥೆಗಳಾದವು. ಅವೆಲ್ಲವನ್ನು ಧನಂಜಯ್‌ ಕೀರ್‌ ಜೊತೆಗಿನ ಮಾತುಕತೆಯಲ್ಲಿ ಸಾವರ್ಕರ್‌ ನಿರಾಕರಿಸುತ್ತಾರೆ. ಬಂದರಿನಲ್ಲಿ ಲಂಗರು ಹಾಕಿದ್ದ ಹಡಗಿನಿಂದ ತಾನು ಹಾರಿ ದಡ ಸೇರಿದೆ ಎಂದು ಸಾವರ್ಕರ್‌ ಸ್ಪಷ್ಟವಾಗಿ ಹೇಳುತ್ತಾರೆ.

ಮಾರ್ಸೆಲ್ಸ್‌ನಿಂದ ಜುಲೈ ೯ಕ್ಕೆ ಹೊರಟ ಎಸ್‌.ಎಸ್.‌ ಮೊರಿಯಾ ೧೭ರಂದು ಯೆಮನಿನ ಏಡನ್‌ ಬಂದರು ತಲುಪುತ್ತದೆ. ಅಲ್ಲಿಂದ ಸಾಲ್ಸೆಟ್‌ ಎಂಬ ಹಡಗಿನಲ್ಲಿ ಸಾವರ್ಕರನ್ನು ಬಾಂಬೆಗೆ ಕರೆತರಲಾಗುತ್ತದೆ. ಈ ರೀತಿ ೧೯೧೦ ಜುಲೈ ೨೨ರಂದು ಸಾವರ್ಕರ್‌ ಬಾಂಬೆ ಪೊಲೀಸರ ಕಸ್ಟಡಿ ಸೇರುತ್ತಾರೆ.

ಆದರೆ, ಸಾವರ್ಕರನ್ನು ಫ್ರೆಂಚ್‌ ನೆಲದಿಂದ ಬ್ರಿಟಿಷ್‌ ಪೊಲೀಸರು ಅರೆಸ್ಟ್‌ ಮಾಡಿದ ಪ್ರಸಂಗ ವಿವಾದವಾಗುತ್ತದೆ. ಕಾರ್ಲ್‌ ಮಾರ್ಕ್ಸ್‌ನ ಮೊಮ್ಮಗ ಯಾಂಗ್‌ ಲೋಂಗಟ್‌ ಈ ಮಾನವ ಹಕ್ಕು ಉಲ್ಲಂಘನೆಯನ್ನು ಎತ್ತಿ ತೋರಿಸಿದ ಮೊದಲಿಗ. ನಂತರ ಫ್ರೆಂಚ್‌ ಸೋಶ್ಯಲಿಸ್ಟ್‌ ನಾಯಕ ಯಾಂಗ್‌ ಜೋರಸ್‌ ಈ ಪ್ರಕರಣವನ್ನು ಮುಂದುವರಿಸುತ್ತಾನೆ. ಅದು ನಂತರ ಬ್ರಿಟಿಷ್‌-ಫ್ರೆಂಚ್‌ ಸರಕಾರಗಳ ನಡುವಿನ ವಿವಾದವಾಗಿ ಬದಲಾಗುತ್ತದೆ. ಇದು ಉತ್ತುಂಗಕ್ಕೇರಿದಾಗ ೧೯೧೦ ಅಕ್ಟೋಬರ್‌ ೨೫ರಂದು ಎರಡೂ ಸರಕಾರಗಳು ಒಟ್ಟಿಗೆ ಮಾರ್ಸೆಲ್ಸ್‌ ಪ್ರಕರಣಕ್ಕೆ ಅಂತಿಮ ತೀರ್ಪು ನೀಡಲು ಸಮಿತಿಯೊಂದನ್ನು ರಚಿಸಲು ತೀರ್ಮಾನಿಸುತ್ತಾರೆ. ಹೇಗ್‌ನ ಅಂತರಾಷ್ಟ್ರೀಯ ವಿವಾದ ಪರಿಹಾರ ಸಮಿತಿಯ ಐವರು ಮತ್ತು ಬ್ರಿಟನ್‌ ಮತ್ತು ಫ್ರಾನ್ಸಿನಿಂದ ತಲಾ ಒಬ್ಬರು ಈ ಸಮಿತಿಯಲ್ಲಿದ್ದರು. ಅದೇ ಹೊತ್ತು ಈ ಸಮಿತಿ ಮಾರ್ಸೆಲ್ಸ್‌ನಲ್ಲಿ ನಡೆದ ಬಂಧನದ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಮೊದಲೇ ಭಾರತದಲ್ಲಿ ಸಾವರ್ಕರ್ ವಿಚಾರಣೆ ಆರಂಭಿಸಲು ಬ್ರಿಟಿಷ್‌ ಸರಕಾರ ತೀರ್ಮಾನಿಸಿತ್ತು. ಇದು ಕೂಡ ಇನ್ನೊಂದು ಅಂತರಾಷ್ಟ್ರೀಯ ವಿವಾದವಾಗುತ್ತದೆ.

ಸಾವರ್ಕರ್‌ ಮೇಲೆ ಇದ್ದ ಪ್ರಕರಣಗಳಲ್ಲಿ ಮೊದಲನೆಯ ಪ್ರಕರಣ ನಾಸಿಕ್‌ ಗೂಢಾಲೋಚನೆಯಾಗಿತ್ತು. ಅದರ ವಿಚಾರಣೆ ೧೯೧೦ ಸೆಪ್ಟೆಂಬರ್‌ ೧೫ರಂದು ಆರಂಭವಾಗಿತ್ತು. ಕಾಶಿನಾಥ್‌ ಅಂಕುಷ್ಕರ್‌, ದತ್ತಾತ್ರೇಯ ಜೋಷಿ, ಡಬ್ಲ್ಯೂ.ಆರ್. ಕುಲಕರ್ಣಿ, ಲಂಡನ್ನಿನಿಂದ ಭಾರತಕ್ಕೆ ಸಾವರ್ಕರ್‌ ಆಜ್ಞೆಯಂತೆ ಆಯುಧ ಸಾಗಿಸಿದ್ದ ಚತುರ್ಭುಜ್‌ ಅಮೀನ್‌ ಮೊದಲಾದವರು ಮಾಫಿ ಸಾಕ್ಷಿಗಳಾಗಿದ್ದರು. ಆದರೆ, ಸಾವರ್ಕರ್‌ ಪರ ವಕೀಲ ವಾದಿಸಿದ್ದು ಮಾತ್ರ ಮಾರ್ಸೆಲ್ಸ್‌ನ ಘಟನೆಯನ್ನು ತಪ್ಪಾಗಿ ವಿವರಿಸುವ ಮೂಲಕವಾಗಿತ್ತು. ಎಸ್.ಎಸ್. ‌ಮೋರಿಯಾ ಮಾರ್ಸೆಲ್ಸ್‌ ತಲುಪಿದಾಗ ಸಾವರ್ಕರ್‌ ತನ್ನನ್ನು ತಪ್ಪಾಗಿ ಅರೆಸ್ಟ್‌ ಮಾಡಲಾಗಿದೆಯೆಂದೂ ಆದ್ದರಿಂದ ತನಗೆ ಹಡಗಿನಿಂದ ಇಳಿಯಲು ಸ್ವಾತಂತ್ರ್ಯವಿದೆಯೆಂದೂ ಹೇಳುತ್ತಾರೆ. ಆದರೆ ಅದನ್ನು ನಿರಾಕರಿಸಲಾಯಿತು. ಜೊತೆಗೆ ಇಬ್ಬರು ಫ್ರೆಂಚ್‌ ಅಧಿಕಾರಿಗಳು ತನ್ನನ್ನು ಕಾಣಲೆಂದು ಹಡಗಿಗೆ ಬಂದಿದ್ದರು, ಅವರನ್ನು ಕೂಡ ತಡೆದು ಭೇಟಿ ನಿರಾಕರಿಸಲಾಯಿತು. ಈ ಹಂತದಲ್ಲಿ ಸಾವರ್ಕರ್‌ ಬೇರೆ ದಾರಿಯಿಲ್ಲದೆ ಹಡಗಿನಿಂದ ಹೊರಗೆ ಹಾರಲು ತೀರ್ಮಾನಿಸುವುದು ಎಂಬುವುದು ವಕೀಲರ ವಾದ.

ನಾಸಿಕ್‌ ಗೂಢಾಲೋಚನೆ ಕೇಸಿನಲ್ಲಿ ೩೮ ಜನರು ಆರೋಪಿಗಳಾಗಿದ್ದರು. ನಾಸಿಕ್‌, ಪುಣೆ, ಔರಂಗಾಬಾದಿನಿಂದ ಹಿಡಿದು ದಖ್ಖನ್ ಪ್ರಸ್ಥಭೂಮಿಯ ತನಕದ ಜನರು ಆರೋಪ ಪಟ್ಟಿಯಲ್ಲಿದ್ದರು. ಆದರೆ, ಅವರನ್ನೆಲ್ಲ ಪರಸ್ಪರ ಬಂಧಿಸುವ ಇನ್ನೊಂದು ಅಂಶ ಅಲ್ಲಿತ್ತು. ಅವರಲ್ಲಿ ಒಬ್ಬನನ್ನು ಬಿಟ್ಟು ಉಳಿದವರೆಲ್ಲರು ಚಿತ್ಪಾವನ ಬ್ರಾಹ್ಮಣರಾಗಿದ್ದರು. ಅವರಲ್ಲಿಯೇ ಮೂವರು, ಶಂಕರ್‌ ಬಲವಂತ್‌ ವೈದ್ಯ, ವಿನಾಯಕ್‌ ಸದಾಶಿವ್‌ ಬಾರ್ವೇ, ವಿನಾಯಕ್‌ ಕಾಶಿನಾಥ್‌ ಪುಲಂಬ್ರಿಕರ್‌ ಮಾಫಿ ಸಾಕ್ಷಿಗಳಾಗಿ ಬದಲಾದ ಕಾರಣ ಆರೋಪ ಪಟ್ಟಿಯಿಂದ ಅವರನ್ನು ಕೈಬಿಡಲಾಗಿತ್ತು.

ಅಭಿನವ್‌ ಭಾರತ್‌ನ ಹೊಸ ಸದಸ್ಯರಲ್ಲಿ ಒಬ್ಬನಾಗಿದ್ದ ರಘುನಾಥ್‌ ವೆಂಕಟೇಶ್‌ ಗೋಸಾವಿ ಸಾವರ್ಕರ್‌ ವಿರುದ್ಧ ಹೇಳಿಕೆ ಕೊಟ್ಟ. ಇದರಲ್ಲಿ ಗಮನಿಸಬೇಕಾದ ವಿಶೇಷತೆಯೆಂದರೆ, ಆತನ ಹೇಳಿಕೆ ಅಭಿನವ್‌ ಭಾರತ್‌ ಎಂಬ ಸಂಘಟನೆಯ ನಿಜವಾದ ರೂಪವನ್ನು ತೋರಿಸಿಕೊಡುವಂತದ್ದಾಗಿತ್ತು ಎಂಬುದು. ಅಭಿನವ್‌ ಭಾರತ್ ಮೂರು ಗುಂಪುಗಳನ್ನು ಒಳಗೊಂಡಿತ್ತು. ಮೊದಲನೆಯದು ಬ್ರಿಟಿಷರ ವಿರುದ್ಧ ಯುದ್ಧ ಮಾಡುವ ಕ್ರಾಂತಿಕಾರಿಗಳದ್ದು. ವಿನಾಯಕ್‌ ದಾಮೋದರ್‌ ಸಾವರ್ಕರ್, ಬಾಬಾರಾವ್‌, ಆಬಾ ದಾರೇಕರ್‌ ಮೊದಲಾದವರು ಈ ಗುಂಪಿಗೆ ಸೇರುವವರು. ಎರಡನೆಯ ಗುಂಪು ದೈಹಿಕ ತಾಲೀಮಿನಲ್ಲಿ ಆಸಕ್ತಿ ಇರುವವರದ್ದು. ವಿಷ್ಣು ಮಹಾದೇವ್‌ ಕೇಲ್ಕರ್‌, ಧನಪ್ಪ ಮೊದಲಾದವರು ಈ ಗುಂಪಿನಲ್ಲಿದ್ದರು. ಬೆಂಕಿಯುಗುಳುವ ಭಾಷಣಗಳ ಮೂಲಕ ಕೇಳುಗರ ಮನಃಪರಿವರ್ತನೆ ಮಾಡುವ ಗುಂಪಿಗೆ ಸೇರುವವರು ನಾರಾಯಣ್‌ ರಾವ್‌ ಸಾವರ್ಕರ್‌, ಬಾಪು ಜೋಷಿ ಮೊದಲಾದವರು. ಹೊಸಬರನ್ನು ಈ ಮೂರನೇ ಗುಂಪಿಗೆ ಸೇರಿಸಲಾಗುತ್ತದೆ. ಕಾಲಕ್ರಮೇಣ ಎರಡನೆಯ ಗುಂಪಿಗೂ, ಮೊದಲನೆಯ ಗುಂಪಿಗೂ ವ್ಯಕ್ತಿಗಳ ಪಕ್ವತೆಯ ಆಧಾರದಲ್ಲಿ ʼಬಡ್ತಿʼ ನೀಡಲಾಗುತ್ತದೆ. ಮೊದಲನೆಯ ಗುಂಪಿಗೆ ಸೇರಬೇಕಾದರೆ ಪ್ರತಿಜ್ಞೆ ಸ್ವೀಕರಿಸಬೇಕಾಗಿತ್ತು.

ಇಂಡಿಯಾ ಹೌಸಿನ ಬಾಣಸಿಗನಾಗಿದ್ದ ಚತುರ್ಭುಜ್ ಅಮೀನನ ಹೇಳಿಕೆ ಸಾವರ್ಕರನ್ನು ನಿಜವಾಗಿ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಅಭಿನವ್‌ ಭಾರತ್ನ ಬ್ರಾಹ್ಮಣ ಗುಣವನ್ನು ಸ್ಪಷ್ಟವಾಗಿ ತೋರಿಸಿಕೊಡುವ ಹೇಳಿಕೆಯಾಗಿತ್ತದು. ಶಿವಾಜಿಯ ಪಟದ ಮುಂದೆ ಒಂದು ದೀಪ ಹಚ್ಚಿಟ್ಟು ಅದರ ಮುಂದೆ ಕೂರಿಸಿ ಚತುರ್ಭುಜ್‌ ಅಮೀನನಿಗೆ ಸಾವರ್ಕರ್‌ ಅಭಿನವ್‌ ಭಾರತ್‌ ಸೇರುವ ಪ್ರತಿಜ್ಞೆ ಹೇಳಿಕೊಟ್ಟಿದ್ದರು. ಅಷ್ಟೇ ಅಲ್ಲ ಚತುರ್ಭುಜ್‌ ಅಮೀನನ ಚಾಚಿದ ಕೈಗೆ ನೀರು ಚಿಮುಕಿಸಿ ಹತ್ತು ನಿಮಿಷಗಳ ಕಾಲ ಸಂಸ್ಕೃತ ಶ್ಲೋಕ ಹೇಳಿದ ನಂತರವೇ ಈ ಪ್ರತಿಜ್ಞೆ ಹೇಳಿಕೊಡಲಾಗಿತ್ತು. ಒಂದು ಸಂಘಟನೆಗೆ ಸದಸ್ಯರಾಗಿಸಲು ಆಧುನಿಕವಾದ ರೀತಿ ನೀತಿಗಳನ್ನು ಅನುಸರಿಸದೆ ಅದರಿಂದ ಬಹಳ ಹಿಂದಕ್ಕೆ ಚಲಿಸುವ ಈ ಶೈಲಿ ಬ್ರಾಹ್ಮಣ ಅನುಷ್ಠಾನ ಕರ್ಮಗಳನ್ನು ನೆನಪಿಗೆ ತರುತ್ತದೆ. ಪಿಸ್ತೂಲ್‌ ಕೊಟ್ಟು ಕಳುಹಿಸಿದ್ದು ಹರಿ ಆನಂದ್‌ ತಟ್ಟೇಯ ಹೆಸರಿನಲ್ಲಿ. ಹೆಚ್ಚು ತಪಾಸಣೆ ಇಲ್ಲದಿರಲು ಇಟಾಲಿಯನ್‌ ಹಡಗನ್ನು ಆಯ್ದುಕೊಳ್ಳಲಾಗಿತ್ತು. ತಟ್ಟೇ ಸಿಗದಿದ್ದರೆ ವಿಷ್ಣು ಮಹಾದೇವ್‌ ಭಟ್‌ ಕೈಯಲ್ಲಿ ಆಯುಧಗಳನ್ನು ನೀಡಲು ಸಾವರ್ಕರ್‌ ಆಜ್ಞಾಪಿಸಿದ್ದರು. ಇದೆಲ್ಲವನ್ನು ಮಾಡಿಕೊಡುವುದಕ್ಕಾಗಿ ಐದು ಪೌಂಡ್ ಸಾಲ ಕೊಡಲೂ ಸಾವರ್ಕರ್‌ ಒಪ್ಪಿದ್ದರು.

೧೯೧೦ ಡಿಸೆಂಬರ್‌ ೨೩ರಂದು ನ್ಯಾಯಾಲಯ ತೀರ್ಪು ನೀಡಿತು. ಅಂದಿನ ಇಂಡಿಯನ್‌ ಪೀನಲ್‌ ಕೋಡ್‌ ೧೨೧ ಎ ಪ್ರಕಾರ ವಿನಾಯಕ್‌ ದಾಮೋದರ್‌ ಸಾವರ್ಕರನ್ನು ಗಡಿಪಾರು ಮಾಡಲು (ಜೀವಾವಧಿ ಜೈಲು ಶಿಕ್ಷೆಯೊಂದಿಗೆ) ಮತ್ತು ಸೊತ್ತು ಮುಟ್ಟುಗೋಲು ಹಾಕಲು ವಿಧಿಸಲಾಯಿತು. ನಾರಾಯಣ್‌ ರಾವ್‌ ಸಾವರ್ಕರ್‌ಗೆ ಆರು ತಿಂಗಳ ಕಠಿಣ ಸಜೆಯನ್ನೂ ನೀಡಲಾಯಿತು.

ಜಾಕ್ಸನ್‌ ಕೊಲೆ ಪ್ರೇರೇಪಣೆಯ ಪ್ರಕರಣದ ವಿಚಾರಣೆ ಅದರ ನಂತರವೇ ಆರಂಭವಾಗುವುದು. ೧೯೧೧ ಜನವರಿ ೩೦ರಂದು ನೀಡಿದ ತೀರ್ಪಿನಂತೆ ಇನ್ನೊಂದು ಗಡಿಪಾರು (ಜೀವಾವಧಿ ಜೈಲು ಶಿಕ್ಷೆಯೊಂದಿಗೆ) ಶಿಕ್ಷೆಯೂ ಸಾವರ್ಕರ್‌ಗೆ ಲಭಿಸುತ್ತದೆ. ಅಂದಿನ ಕಾನೂನು ಪ್ರಕಾರ ಒಂದು ಜೀವಾವಧಿ ಶಿಕ್ಷೆ ೨೫ ವರ್ಷಗಳಾಗಿದ್ದವು. ಎರಡು ಜೀವಾವಧಿ, ಅಂದರೆ ೫೦ ವರ್ಷಗಳ ಜೈಲುಶಿಕ್ಷೆ ಸಾವರ್ಕರ್‌ಗೆ ಲಭಿಸಿತ್ತು.

ಸುಮಾರು ಈ ಹೊತ್ತಿನಲ್ಲಿಯೇ ಹೇಗ್‌ನಲ್ಲಿ ಮಾರ್ಸೆಲ್ಸ್‌ ಘಟನೆ ಕುರಿತ ಫ್ರೆಂಚ್-ಇಂಗ್ಲೆಂಡ್‌ ವಿವಾದವನ್ನು ಪರಿಹಾರ ಸಮಿತಿ ಪರಿಶೋಧಿಸುತ್ತಿತ್ತು. ೧೯೧೧ ಫೆಬ್ರವರಿ ೨೪ರಂದು ಸಮಿತಿ ಅದರ ತೀರ್ಪು ಪ್ರಕಟಿಸಿತು. ಅದು ಕೂಡ ಸಾವರ್ಕರ್‌ಗೆ ಪ್ರತಿಕೂಲವಾಗಿತ್ತು. ʼಬ್ರಿಟಿಷ್‌ ಸರಕಾರ ವಿನಾಯಕ್‌ ದಾಮೋದರ್‌ ಸಾವರ್ಕರನ್ನು ಫ್ರೆಂಚ್‌ ರಿಪಬ್ಲಿಕಿಗೆ ಹಸ್ತಾಂತರಿಸಬೇಕಾದ ಅಗತ್ಯವಿಲ್ಲʼ ಎಂಬುದು ಆ ತೀರ್ಪಿನ ಸಾರಾಂಶ.

೧೯೧೧ ಜೂನ್‌ ೨೭ರಂದು ವಿನಾಯಕ್‌ ದಾಮೋದರ್‌ ಸಾವರ್ಕರನ್ನು ಹೊತ್ತ ಎಸ್.ಎಸ್.‌ ಮಹಾರಾಜ ಎಂಬ ಹಡಗು ಮದ್ರಾಸ್‌ ಬಂದರಿನಿಂದ ಅಂಡಮಾನಿನ ಸೆಲ್ಯುಲರ್‌ ಜೈಲಿಗೆ ಯಾತ್ರೆ ಆರಂಭಿಸಿತು. ಸುಮಾರು ಹತ್ತು ದಿನಗಳ ಯಾತ್ರೆಯ ನಂತರ ಹಡಗು ಪೋರ್ಟ್‌ ಬ್ಲೇರ್‌ ತಲುಪಿತು. ಸೆಲ್ಯುಲಾರ್‌ ಜೈಲಿನಲ್ಲಿ ಅಂದು ಇದ್ದ ರಾಜಕೀಯ ಖೈದಿಗಳಲ್ಲಿ ಪ್ರಮುಖರು ಬಾಬಾರಾವ್‌ ಎಂಬ ಗಣೇಶ್‌ ದಾಮೋದರ್‌ ಸಾವರ್ಕರ್‌, ವಾಮನ್‌ ರಾವ್‌ ಜೋಷಿ, ಖುದಿರಾಂ ಬೋಸ್‌ನನ್ನು ಗಲ್ಲಿಗೇರಿಸಿದ ಬಾಂಬ್‌ ದಾಳಿ ಪ್ರಕರಣದ ಆರೋಪಿಗಳಾದ ಉಲ್ಲಾಸ್ಕರ್‌ ದತ್, ಅರಬಿಂದ್‌ ಘೋಷ್‌ (ನಂತರದ ಕಾಲದಲ್ಲಿ ಮಹರ್ಷಿ ಅರಬಿಂದೋ) ಅವರ ಸಹೋದರ ಬಾರಿನ್‌ ಘೋಷ್‌, ಇಂದುಭೂಷಣ್‌ ರಾಯ್‌, ಹೇಮಚಂದ್ರದಾಸ್‌, ಬಿಭೂತಿ ಭೂಷಣ್‌ ಸರ್ಕಾರ್‌, ಸಚೀಂದ್ರನಾಥ್‌ ಸನ್ಯಾಳ್‌ ಮೊದಲಾದವರಾಗಿದ್ದರು. ಒಟ್ಟು ನೂರರಷ್ಟು ರಾಜಕೀಯ ಖೈದಿಗಳು ಅಲ್ಲಿದ್ದರು. ʼಕಾಲಾಪಾನಿʼಗೆ ತಲುಪಿದ ಸಾವರ್ಕರ್‌ ಅದಕ್ಕಿಂತ ಮುಂಚೆ ಇದ್ದ ಸಾವರ್ಕರ್‌ ಆಗಿರಲಿಲ್ಲ. ಐವತ್ತು ವರ್ಷಗಳ ಜೈಲುಶಿಕ್ಷೆ ತನ್ನನ್ನು ಇರಿಯುವಂತೆ ನೋಡುತ್ತಿತ್ತು. ಸ್ವತಃ ಸಾವರ್ಕರ್ ಬರೆದಿರುವಂತೆ, ʼನಾನು ಒಳಗೆ ಹೋದೆ. ಸಾವಿನ ಕಾಳೊಂದು ಗಂಟಲಿನಲ್ಲಿ ಸಿಲುಕಿಕೊಂಡಂತೆ ನನಗೆ ಭಾಸವಾಯಿತು.ʼ ಡೇವಿಡ್‌ ಬಾರಿ ಎಂಬ ಐರ್ಲೆಂಡಿನ ವ್ಯಕ್ತಿ ಜೈಲರ್‌ ಆಗಿದ್ದ. ೩೨೭೭೮ ಎಂಬ ನಂಬರ್‌ ಸಾವರ್ಕರ್‌ಗೆ ನೀಡಲಾಯಿತು. ಮಿರ್ಸಾಖಾನ್‌ ಎಂಬ ವ್ಯಕ್ತಿ ಸಾವರ್ಕರ್‌ ಸಹಾಯಕನಾಗಿದ್ದ.

ಸೆಲ್ಯುಲಾರ್‌ ಜೈಲಿನ ರಾಜಕೀಯ ಖೈದಿಗಳು ಕಲೋನಿಯಲ್‌ ಅಧಿಕಾರಿಗಳಿಂದ ಕ್ರೂರ ಹಿಂಸೆಯನ್ನು ಅನುಭವಿಸುತ್ತಿದ್ದರು. ಕಠಿಣ ಕೆಲಸಗಳನ್ನು ಅವರು ಮಾಡಬೇಕಾಗಿತ್ತು. ಬಹುತೇಕ ಸಂದರ್ಭದಲ್ಲಿ ತುಚ್ಛವಾದ ಆಹಾರ ಮಾತ್ರ ಅವರಿಗೆ ನೀಡಲಾಗುತ್ತಿತ್ತು. ರೋಗಪೀಡಿತ ಖೈದಿಗಳಿಗೆ ಅಗತ್ಯ ಚಿಕಿತ್ಸೆಗಳೂ ಸಿಗುತ್ತಿರಲಿಲ್ಲ. ಈ ನಡುವೆ ಬಾಂಬೆ ಯುನಿವರ್ಸಿಟಿ ಕೇಸಿನ ಭಾಗವಾಗಿ ಸಾವರ್ಕರ್ ಬಿರುದನ್ನು ಕೂಡ ಕಿತ್ತುಕೊಳ್ಳಲಾಗಿತ್ತು.

೧೯೧೧ ಡಿಸೆಂಬರ್‌ ತಿಂಗಳಲ್ಲಿ ಐದನೇ ಜಾರ್ಜ್‌ ಬ್ರಿಟಿಷ್‌ ಚಕ್ರವರ್ತಿಯಾಗಿ ಅಧಿಕಾರಕ್ಕೇರಲಿರುವ ಸುದ್ದಿ ಮಾಧ್ಯಮಗಳಲ್ಲಿ ಬರುತ್ತದೆ. ಹೊಸ ರಾಜ ಅಧಿಕಾರಕ್ಕೇರುವುದರ ಭಾಗವಾಗಿ ರಾಜಕೀಯ ಖೈದಿಗಳಿಗೆ ಕ್ಷಮಾಪಣೆ ಸಿಗಲಿದೆ ಎಂಬ ಸುದ್ದಿಯೂ ಅದರ ಜೊತೆಗೆ ಹರಡುತ್ತದೆ. ವಿನಾಯಕ್‌ ದಾಮೋದರ್‌ ಸಾವರ್ಕರ್‌ ಒಂದು ಕ್ಷಮಾಪಣಾ ಪತ್ರವನ್ನು ಅಧಿಕಾರಿಗಳಿಗೆ ನೀಡುತ್ತಾರೆ. ೧೯೧೧ ಆಗಸ್ಟ್‌ ೩೦ರಂದು ಅಧಿಕಾರಿಗಳು ಆ ಅರ್ಜಿಯನ್ನು ಸ್ವೀಕರಿಸುತ್ತಾರೆ. ೧೯೧೧ ಸೆಪ್ಟೆಂಬರ್‌ ೩ರಂದು ಕ್ಷಮಾಪಣಾ ಅರ್ಜಿಯನ್ನು ತಳ್ಳಿ ಹಾಕಿರುವುದಾಗಿ ಅಧಿಕಾರಿಗಳು ಸಾವರ್ಕರ್‌ಗೆ ಮಾಹಿತಿ ನೀಡುತ್ತಾರೆ.

ಅಲಿಪುರ ಪ್ರಕರಣದ ಖೈದಿ ಇಂದುಭೂಷಣ್‌ ರಾಯ್‌ ಜೈಲಿನ ಹಿಂಸೆ ಸಹಿಸಲಾಗದೆ ೧೯೧೨ ಏಪ್ರಿಲ್‌ ೨೯ರಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದರ ನಂತರ ಹೋತಿಲಾಲ್‌ ವರ್ಮ ಎಂಬ ಖೈದಿ ಒಂದಷ್ಟು ಕಾಗದಗಳನ್ನು ಸಂಗ್ರಹಿಸಿ ಜೈಲು ಜೀವನದ ದಾರುಣ ಅನುಭವನಗಳನ್ನು ವಿವರಿಸುವ ಒಂದು ಪತ್ರ ಬರೆದ. ಹಲವು ತ್ಯಾಗಗಳನ್ನು ಸಹಿಸಿ ಆ ಪತ್ರವನ್ನು ಆತ ಹೊರ ತಂದ. ಕಾಂಗ್ರೆಸ್‌ ನಾಯಕ ಸುರೇಂದ್ರನಾಥ್‌ ಬ್ಯಾನರ್ಜಿಯ ಕೈ ಸೇರಿದ ಪತ್ರವನ್ನು ಅವರು ತಮ್ಮ ಪತ್ರಿಕೆ ಬಂಗಾಳಿಯಲ್ಲಿ ಪ್ರಕಟಿಸುತ್ತಾರೆ. ಅದರ ಜೊತೆಗೆ ಲಾಹೋರಿನ ಟ್ರಿಬ್ಯೂನಲ್‌ ಮತ್ತು ಅಮೃತ್‌ ಬಜಾರ್‌ ಪತ್ರಿಕೆಗಳಲ್ಲೂ ಅವು ಪ್ರಕಟವಾಗುತ್ತವೆ.

ಅದರ ನಂತರ ಸ್ವರಾಜ್‌ ಪತ್ರಿಕೆಯ ಸಂಪಾದಕರಾಗಿದ್ದ ಲತಾರಾಂ ಮತ್ತು ಬರೀ ಹದಿನೇಳು ವರ್ಷ ಪ್ರಾಯದ ಬಂಗಾಳಿ ನಾನಿ ಗೋಪಾಲ್‌ ಜೈಲು ಹಿಂಸೆಯ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸುತ್ತಾರೆ. ಈ ನಡುವೆ ಜೈಲಿನಿಂದ ಹೊರಗೆ ಕೆಲಸಕ್ಕೆ ಹೋಗುವ ಖೈದಿಗಳು ಬಾಂಬ್‌ ತಯಾರಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬುತ್ತದೆ. ಕೆಲವು ಗ್ರಾಮಫೋನ್‌ ಸೂಜಿಗಳು ಮತ್ತು ಕಬ್ಬಿಣದ ಚೂರುಗಳು ಅವರ ಕೆಲಸದ ಜಾಗದಿಂದ ಸಿಕ್ಕಾಗ ಸಾವರ್ಕರ್‌ ಭಯಗೊಳ್ಳುತ್ತಾರೆ. ಸ್ವತಹ ಸಾವರ್ಕರ್‌ ತನ್ನ ಭಯದ ಕುರಿತು ಬರೆದುಕೊಂಡಿರುವುದು ಹೀಗೆ:

ʼಅದು ನನಗಾಗಿ ಮೀಸಲಿಟ್ಟಿರುವ ಭವಿಷ್ಯದ ಕುರಿತು ನನ್ನೊಳಗೆ ಆತಂಕವನ್ನು ಸೃಷ್ಟಿಸಿತು. ನಾನೀಗಾಗಲೆ ಒಂದು ಗೂಢಾಲೋಚನೆ ಪ್ರಕರಣವನ್ನು ಎದುರಿಸುತ್ತಿದ್ದೇನೆ. ಇದು ಕೂಡ ನನ್ನ ಮೇಲೆ ಬಂದೆರಗಬಹುದೆಂದು ನಾನು ಭಯಗೊಂಡೆ. ನಾವು ಈಗಾಗಲೆ ಜೀವಾವಧಿ ಜೈಲು ಶಿಕ್ಷೆಯಲ್ಲಿದ್ದೇವೆ. ನನ್ನ ಜೀವಾವಧಿ ಶಿಕ್ಷೆ ಐವತ್ತು ವರ್ಷಗಳದ್ದು. ದೇವರು ನೀಡಿದ ಕೆಟ್ಟ ಗಳಿಗೆಯಲ್ಲಿದ್ದ ನಾನು ಇದರಲ್ಲೂ ಸಿಕ್ಕಿಕೊಂಡರೆ ನಿಜಕ್ಕೂ ಕೈ ಮೀರಿ ಹೋಗುತ್ತದೆ. ನಾನು ಹೊರಹೋಗುವುದರ ಕುರಿತು ಯೋಚಿಸಿಯೂ ಇರಲಿಲ್ಲ. ಬಾಂಬ್‌ ತಯಾರಿಸುವುದಾಗಲೀ, ಬಚಾವಾಗಲು ಬೋಟ್‌ ಸಜ್ಜುಗೊಳಿಸುವುದಾಗಲೀ ನನ್ನಿಂದ ಯೋಚಿಸಲೂ ಸಾಧ್ಯವಿರಲಿಲ್ಲ. ನನ್ನೊಂದಿಗೆ ಆತ್ಮೀಯತೆಯಿಂದಲೇ ಇದ್ದ ಅಧಿಕಾರಿಯೊಬ್ಬ ಇನ್ನು ಮುಂದೆ ಅಂತಹ ಯೋಚನೆಗಳನ್ನು ಮಾಡಲೇಬೇಡ ಎಂದು ಹೇಳಿಯೂ ಬಿಟ್ಟ. ಶಿಕ್ಷೆಯ ಕಾಲಾವಧಿ ಮುಗಿಯದೆ ನನ್ನನ್ನು ಬಿಡುಗಡೆಗೊಳಿಸಬಾರದೆಂದು ಇಂಡಿಯಾ ಸರಕಾರ ಅವರಿಗೆ ಸೂಚನೆ ಕೊಟ್ಟಿತ್ತು. ಅಲ್ಲದಿದ್ದರೆ ಅದಕ್ಕೂ ಮೊದಲು ನಾನು ಸಾಯಬೇಕು.ʼ

ಮದನ್‌ ಲಾಲ್‌ ಡಿಂಗ್ರನ ಕೈಯಲ್ಲಿ ಪಿಸ್ತೂಲ್‌ ಕೊಟ್ಟು, ವಿಲ್ಲಿಯನ್ನು ಕೊಲ್ಲಲು ವಿಫಲನಾದರೆ ನಿನ್ನ ಮುಖವನ್ನು ನನಗೆ ತೋರಿಸಬೇಡ ಎಂದು ಹೇಳಿದ ಸಾವರ್ಕರ್‌ ಇಲ್ಲಿ ನಾಪತ್ತೆಯಾಗಿದ್ದಾರೆ. ಬಲಿದಾನಕ್ಕೆ ಗಾಳಿ ತುಂಬಿಸಿ ಉಬ್ಬಿಸಿ ಆದರ್ಶಗೊಳಿಸಿ ಯುವಕರೊಳಗೆ ತುಂಬಿಸುತ್ತಿದ್ದ ಬ್ರಾಹ್ಮಣ ಕ್ರಾಂತಿಕಾರಿಯೂ ಇಲ್ಲಿ ಇಲ್ಲ. ಬ್ರಿಟಿಷ್‌ ವಿರೋಧವೂ ನಿಧಾನಕ್ಕೆ ಇಳಿಯುತ್ತಿರುವುದನ್ನು ಇಲ್ಲಿ ಗಮನಿಸಬಹುದು.

ಜೈಲಿನ ಹಿಂಸೆಯ ಕಥೆಗಳು ಹೊರಬಂದ ನಂತರ ಬ್ರಿಟಿಷ್‌ ಇಂಡಿಯಾ ಸರಕಾರದ ಹೋಂ ಮೆಂಬರ್‌ ಆಗಿದ್ದ ಸರ್‌ ರೆಜಿನಾಲ್ಡ್‌ ಹೆಚ್‌. ಕ್ರಡೋಕ್‌ ಅಂಡಮಾನ್‌ ಜೈಲು ಸಂದರ್ಶನ ನಡೆಸಲು ತೀರ್ಮಾನಿಸುತ್ತಾನೆ. ರಾಜಕೀಯ ಖೈದಿಗಳಲ್ಲಿ ಕೆಲವರನ್ನು ನೇರವಾಗಿ ಭೇಟಿಯಾಗಿ ಮಾತನಾಡುವುದು ಕ್ರಡೋಕ್‌ನ ಯೋಜನೆಯಾಗಿತ್ತು. ವಿ.ಡಿ. ಸಾವರ್ಕರ್‌, ಹೃಷಿಕೇಶ್‌ ಕಾಂಚಿಲಾಲ್‌, ಬಾರಿನ್‌ ಘೋಷ್‌, ನಂದ್‌ ಗೋಪಾಲ್, ಸುಧೀರ್‌ ಕುಮಾರ್‌ ಸರ್ಕಾರ್‌ ಅವರುಗಳು ತನ್ನನ್ನು ಬಂದು ಕಾಣುವಂತೆ ಕ್ರಡೋಕ್‌ ಕರೆಯುತ್ತಾನೆ. ಜೊತೆಗೆ, ಉಪೇಂದ್ರನಾಥ ಬ್ಯಾನರ್ಜಿ, ಹೋತಿಲಾಲ್‌ ವರ್ಮ, ಪುಲಿನ್‌ ಬಿಹಾರಿ ಅವರುಗಳನ್ನು ಅವರ ಜೈಲುಕೋಣೆಗಳಿಗೆ ಹೋಗಿ ಕ್ರಡೋಕ್‌ ಭೇಟಿಯಾಗುತ್ತಾನೆ.

ಈ ಭೇಟಿಯಲ್ಲಿ ಬ್ರಿಟಿಷ್‌ ವಿರೋಧವನ್ನು ತಾನು ಸಂಪೂರ್ಣವಾಗಿ ತೊರೆಯುತ್ತೇನೆಂದು ವಿನಾಯಕ್‌ ದಾಮೋದರ್‌ ಸಾವರ್ಕರ್‌ ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಸಾವರ್ಕರ್‌ ಅವರ ಅಲ್ಲಿಯ ತನಕದ ಚಿಂತನೆಗಳನ್ನೂ ಆತನನ್ನು ನಿಯಂತ್ರಿಸುತ್ತಿದ್ದ ಸೈದ್ಧಾಂತಿಕ ಹಿನ್ನೆಲೆಯನ್ನೂ ಒಟ್ಟಿಗೆ ಇಟ್ಟು ನೋಡುವುದಾದರೆ, ಬ್ರಿಟಿಷ್‌ ವಿರೋಧದ ಹಾದಿಯನ್ನು ತೊರೆಯಲು ನೀಡಿದ ಕಾರಣಗಳು ತೀರಾ ಬಾಲಿಶವೆಂದು ಅನಿಸುತ್ತವೆ. ಬ್ರಿಟಿಷ್‌ ಸರಕಾರ ನಡೆಸುತ್ತಿರುವ ಸುಧಾರಣೆಗಳನ್ನು ಮುಂದಿಟ್ಟುಕೊಂಡು ತಾನು ಮತ್ತು ತನ್ನ ಸಹಚರರು ಸಶಸ್ತ್ರ ದಾರಿ ಬಿಟ್ಟು ಶಾಂತಿಯ ಹಾದಿ ಸ್ವೀಕರಿಸುತ್ತೇವೆಂದು ಸಾವರ್ಕರ್‌ ಮಾತು ಕೊಡುತ್ತಾರೆ. ಇದಕ್ಕೆ ಸಾವರ್ಕರ್‌ ಎತ್ತಿಹಿಡಿಯುವುದು ಮಾತ್ರ ತಾನು ಅತ್ಯಂತ ಕಠಿಣವಾಗಿ ವಿರೋಧಿಸುತ್ತಿದ್ದ ಗೋಖಲೆಯವರನ್ನು. ಪ್ರಾಥಮಿಕ ವಿದ್ಯಾಭ್ಯಾಸ ಎಲ್ಲರಿಗು ಸಿಗುವಂತಾಗಲು ಒಂದು ಕಾನೂನು ತರಬೇಕೆಂದು ಗೋಖಲೆ ಬಹಳ ಪ್ರಯತ್ನ ಪಟ್ಟಿದ್ದರು. ಅವರ ಪ್ರಯತ್ನವನ್ನು ಗಮನಿಸಿದ ಬ್ರಿಟಿಷ್‌ ಸರಕಾರ ಅದಕ್ಕಾಗಿ ಐವತ್ತು ಲಕ್ಷ ರೂಪಾಯಿಗಳನ್ನು ಐದನೇ ಜಾರ್ಜ್‌ ದೊರೆಯ ಕೊಡುಗೆಯಾಗಿ ಮಂಜೂರು ಮಾಡಿತ್ತು. ಇದು ಮತ್ತು ಮಿಂಟೋ-ಮೋರ್ಲಿ ಸುಧಾರಣೆಗಳನ್ನು ಮುಂದಿಟ್ಟುಕೊಂಡು ಸಾವರ್ಕರ್‌ ಸಶಸ್ತ್ರ ಹಾದಿಯಿಂದ ಹೊರಬರುವ ಭರವಸೆಯನ್ನು ನೀಡಿದ್ದರು.

ಒಂದು ಕಾಲದಲ್ಲಿ ಗೋಖಲೆಯ ಸುಧಾರಣಾ ಹೋರಾಟವನ್ನು ತನ್ನ ಉಗುರು-ಹಲ್ಲು-ಬಂದೂಕುಗಳನ್ನು ಬಳಸಿ ವಿರೋಧಿದುತ್ತಿದ್ದ ವ್ಯಕ್ತಿ ಸಾವರ್ಕರ್.‌ ಸಮಾಜದ ವಿಷಯದಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದರ ವಿರುದ್ಧ ನಿಲುವು ತಾಳಿದ್ದ ತಿಲಕರ ಈ ಕಟ್ಟಾ ಅನುಯಾಯಿ, ಸಂದರ್ಭ ಬಂದಾಗಲೆಲ್ಲ ಗೋಖಲೆ ಸಹಿತ ಎಲ್ಲ ಸುಧಾರಣಾವಾದಿಗಳನ್ನು ನಿರಂತರವಾಗಿ ಪರಿಹಾಸ ಮಾಡುತ್ತಿದ್ದ ವ್ಯಕ್ತಿ. ಅಭಿನವ್‌ ಭಾರತ್ನ ಹುಟ್ಟಿನ ಹಿನ್ನೆಲೆಯಲ್ಲಿ ಕೇವಲ ಬ್ರಿಟಿಷ್‌ ವಿರೋಧ ಮಾತ್ರ ಇರಲಿಲ್ಲ. ಗೋಖಲೆಯಂತವರ ನಿಲುವುಗಳ ವಿರುದ್ಧದ ನವ-ಸಂಪ್ರದಾಯವಾದಿ ಭೂಗತ ಬ್ರಾಹ್ಮಣಿಕ ಸಂಘಟನೆಯೂ ಆಗಿತ್ತದು ಎಂಬುದನ್ನು ಮರೆಯಬಾರದು.

ಬದುಕು ಪೂರ್ತಿ ತಾನು ಎತ್ತಿ ಹಿಡಿದ ನಿಲುವುಗಳ ಕಾರಣ ತನಗೆ ಬಂದೊದಗಿದ ಪರಿಸ್ಥಿತಿಯ ಉಚ್ಛಾವಸ್ಥೆಯಲ್ಲಿ ಅದೆಲ್ಲವನ್ನು ಕಿತ್ತು ಬಿಸಾಡುತ್ತೇನೆಂದು ವಾಗ್ದಾನ ನೀಡಿದ ಸಾವರ್ಕರನ್ನು ನಂಬಲು ಕ್ರಡೋಕ್‌ ತಯಾರಿರಲಿಲ್ಲ. ಕುಟಿಲನಾಗಿದ್ದ ಕ್ರಡೋಕ್‌ ಈ ಹೊಸ ನಿಲುವನ್ನು ಪತ್ರದ ಮೂಲಕ ಸರಕಾರದ ಗಮನಕ್ಕೆ ತರಲು ಸಾವರ್ಕರ್‌ಗೆ ಸೂಚಿಸುತ್ತಾನೆ. ಬಹುಷ ತನ್ನ ಅನುಯಾಯಿಗಳ ನಡುವೆ ಅದು ಸೃಷ್ಠಿಸಬಹುದಾದ ಅವಮಾನವನ್ನು ನೆನೆದು, ಸಾವರ್ಕರ್‌ ಇನ್ನೊಂದು ಉಪಾಯವನ್ನು ಮುಂದಿಡುತ್ತಾರೆ. ಸರಕಾರಕ್ಕೆ ತಿಳಿಸುವ ಬದಲು ತನ್ನ ಪ್ರಸ್ತಾವನೆಯಾಗಿ ಈ ಮನಃಪರಿವರ್ತನೆಯನ್ನು ಹೊರಹಾಕಬಹುದು ಎಂಬುದಾಗಿತ್ತು ಅದು. ಆದರೆ, ಕ್ರಡೋಕ್‌ ಅದನ್ನೂ ತಳ್ಳಿ ಹಾಕುತ್ತಾನೆ.

ಏನೇ ಆದರೂ, ಒಂದು ಕ್ಷಮಾಪಣಾ ಪತ್ರವನ್ನು ಸರಕಾರದ ಮುಂದಿಡಲು ಕ್ರಡೋಕ್‌ ಸಾವರ್ಕರ್‌ಗೆ ಅವಕಾಶ ನೀಡಿದ. ಮೊದಲ ಕ್ಷಮಾಪಣಾ ಪತ್ರವನ್ನು ಜೈಲಿಗೆ ಬಂದ ಹೊಸದರಲ್ಲಿಯೇ ವಿನಾಯಕ್‌ ನೀಡಿದ್ದರು. ಆದರೆ, ಅದನ್ನು ತಳ್ಳಿ ಹಾಕಲಾಗಿತ್ತೆಂದು ನಾವು ಈಗಾಗಲೇ ನೋಡಿದೆವು.

೧೯೧೩ ನವೆಂಬರ್‌ ೧೪ರಂದು ನೀಡಿದ ಕ್ಷಮಾಪಣಾ ಪತ್ರದ ಪೂರ್ಣರೂಪ ಹೀಗಿತ್ತು.

ʼತಮ್ಮ ಪರಿಗಣನೆಗಾಗಿ ಈ ಕೆಳಗೆ ನೀಡಿರುವ ಸಂಗತಿಗಳನ್ನು ವಿನಯದಿಂದ ಸಮರ್ಪಿಸುತ್ತಿದ್ದೇನೆ.

೧. ೧೯೧೧ರ ಜೂನ್‌ ತಿಂಗಳಲ್ಲಿ ನಾನು ಇಲ್ಲಿಗೆ ತಲುಪಿದಾಗ ಗುಂಪಿನ ಉಳಿದವರ ಜೊತೆಗೆ ನನ್ನನ್ನು ಚೀಫ್‌ ಕಮಿಷನರ್‌ ಕಛೇರಿಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ನನ್ನನ್ನು ಡಿ ಕ್ಲಾಸಿಗೆ, ಅಂದರೆ ಆಪತ್ಕಾರಿ ಗುಂಪಿಗೆ (Dangerous), ಸೇರಿಸಿದರು. ಆದರೆ ಉಳಿದವರನ್ನು ಆ ಗುಂಪಿಗೆ ಸೇರಿಸಲಿಲ್ಲ. ಅದರ ನಂತರ ನಾನು ಆರು ತಿಂಗಳ ಕಾಲ ಏಕಾಂತ ಶಿಕ್ಷೆಗೆ ಗುರಿಯಾದೆ. ಉಳಿದವರಿಗೆ ಹಾಗೇನು ಇರಲಿಲ್ಲ. ಆ ಸಮಯದಲ್ಲಿ ಹಗ್ಗ ಹುರಿಗೊಳಿಸುವ ಕೆಲಸಕ್ಕೆ ನನ್ನನ್ನು ನೇಮಿಸಿದರು. ನನ್ನ ಕೈಗಳು ಸಿಡಿದು ರಕ್ತ ಹರಿದರೂ ನನ್ನನ್ನು ಅಲ್ಲಿಂದ ಜೈಲಿನ ಅತ್ಯಂತ ಕಠಿಣ ಕೆಲಸವಾದ ಎಣ್ಣೆಗಾಣದ ಕೆಲಸದಲ್ಲಿ ತೊಡಗಿಸಿದರು. ಈ ಕಾಲದಲ್ಲಿ ನನ್ನ ಸ್ವಭಾವ ಅಸಾಮಾನ್ಯ ರೀತಿಯಲ್ಲಿ ಉತ್ತಮಗೊಂಡಿದ್ದರೂ ಕೂಡ, ಆರು ತಿಂಗಳುಗಳು ಕಳೆದರೂ ಕೂಡ ನನ್ನನ್ನು ಜೈಲು ಕೋಣೆಯಿಂದ ಹೊರಗೆ ಬಿಡುತ್ತಿರಲಿಲ್ಲ. ನನ್ನ ಜೊತೆಗೆ ಬಂದಿದ್ದ ಉಳಿದ ಖೈದಿಗಳಿಗೆ ಆ ಸ್ವಾತಂತ್ರ್ಯವಿತ್ತು. ಅಲ್ಲಿಂದ ಇಂದಿನ ತನಕವೂ ನನ್ನ ಸ್ವಭಾವವನ್ನು ನನ್ನಿಂದಾದಷ್ಟು ಉತ್ತಮವಾಗಿರಿಸಲು ಶ್ರಮಿಸುತ್ತಲೇ ಬಂದಿದ್ದೇನೆ.

೨. ಶಿಕ್ಷೆಯಲ್ಲಿ ಕಡಿತಕ್ಕಾಗಿ ನಾನು ನಿವೇದನೆ ನೀಡಿದಾಗ, ವಿಶೇಷ ವಿಭಾಗದಲ್ಲಿ ಬರುವ ಖೈದಿಯಾದ ಕಾರಣ ಕಡಿತ ಸಾಧ್ಯವಲ್ಲವೆಂಬ ಉತ್ತರ ಬಂದಿತು. ನಮ್ಮಲ್ಲಿ ಯಾರಾದರು ಚೂರು ಒಳ್ಳೆಯ ಆಹಾರ ಅಥವಾ ವಿಶೇಷ ಉಪಚಾರವೋ ಕೇಳಿದರೆ ಆಗೆಲ್ಲ ಹೇಳುವ ಮಾತು ನೀವು ಸಾಮಾನ್ಯ ಖೈದಿಗಳಾದ ಕಾರಣ ನೀವು ಎಲ್ಲರು ತಿನ್ನುವ ಆಹಾರವನ್ನೇ ತಿನ್ನಬೇಕು ಎಂದು. ಈ ಮೂಲಕ ಗೌರವಯುತರಾದ ತಾವು ಅರ್ಥ ಮಾಡಿಕೊಳ್ಳಬೇಕಿರುವುದು ವಿಶೇಷ ಖೈದಿಗಳಾದ ನಮಗೆ ಇಲ್ಲಿ ವಿಶೇಷವಾದ ಅವಗಣನೆ ಇದೆ ಎಂದು.

೩. ಕೇಸಿನಲ್ಲಿ ಸಿಲುಕಿದ್ದ ಬಹುಪಾಲು ಜನರನ್ನು ಹೊರಗೆ ಬಿಟ್ಟಾಗ ನನ್ನ ಬಿಡುಗಡೆಯನ್ನೂ ನಾನು ಕೇಳಿಕೊಂಡಿದ್ದೆ. ಎರಡೋ ಮೂರೋ ಸಲ ಛಡಿಯೇಟು ಶಿಕ್ಷೆಗೆ ಗುರಿಯಾಗಿ ಕೂಡ, ಉಳಿದವರು ಒಂದು ಡಜನ್‌ಗಿಂತ ಹೆಚ್ಚು ಸಲ ಜೈಲು ಕೋಣೆಯಿಂದ ವಿಮೋಚನೆ ಪಡೆದುಕೊಂಡಿದ್ದರೂ, ನಾನು ಅವರಲ್ಲಿ ಒಬ್ಬನಾಗಿದ್ದರೂ ಕೂಡ, ನನ್ನನ್ನು ಬಿಡುಗಡೆಗೊಳಿಸಲಿಲ್ಲ. ನಂತರ ಜೈಲುಕೋಣೆಯಿಂದ ಹೊರಹೋಗಲು ನನಗೆ ಅನುಮತಿ ಸಿಕ್ಕಿತಾದರೂ ಹೊರಗಿದ್ದ ಕೆಲ ರಾಜಕೀಯ ಖೈದಿಗಳು ಮಾಡಿದ ತಾಪತ್ರಯಗಳಿಂದ ಮತ್ತೆ ನನ್ನನ್ನು ಜೈಲುಕೋಣೆಯೊಳಗೆ ಬಂಧಿಸಿಟ್ಟರು.

೪. ನಾನು ಭಾರತದ ಜೈಲಿನಲ್ಲಿ ಇರುತ್ತಿದ್ದರೆ ಈ ಹೊತ್ತಿಗಾಗಲೇ ಒಂದಷ್ಟು ಸೌಲಭ್ಯಗಳು ಸಿಕ್ಕಿರುತ್ತಿದ್ದವು. ಇನ್ನಷ್ಟು ಪತ್ರಗಳನ್ನು ಮನೆಗೆ ಬರೆಯಬಹುದಿತ್ತು. ಇನ್ನಷ್ಟು ಸಂದರ್ಶಕರ ಭೇಟಿ ಸಾಧ್ಯವಾಗಿರುತ್ತಿತ್ತು. ನಾನು ಗಡಿಪಾರು ಶಿಕ್ಷೆಗೆ ಗುರಿಯಾಗಿರುತ್ತಿದ್ದರೆ ಈ ಹೊತ್ತಿಗಾಗಲೆ ಶಿಕ್ಷೆಯಿಂದ ಬಿಡುಗಡೆ ಪಡೆದಿರುತ್ತಿದ್ದೆ. ಟಿಕೆಟ್‌ ಮತ್ತು ರಜೆಗೆ ಕಾಯುವ ಒಬ್ಬ ವ್ಯಕ್ತಿಯಾಗಿರುತ್ತಿದ್ದೆ. ಆದರೆ, ಈಗ ನನಗೆ ಭಾರತದ ಜೈಲುಗಳ ಸೌಲಭ್ಯಗಳೊಂದೂ ದೊರೆಯುತ್ತಿಲ್ಲ, ವಸಾಹತು ಪ್ರಕಾರದ ಸೌಲಭ್ಯಗಳೂ ದೊರೆಯುತ್ತಿಲ್ಲ. ಬದಲಿಗೆ ಈ ಎರಡರ ಅಸೌಲಭ್ಯಗಳನ್ನು ನಾನು ಅನುಭವಿಸುತ್ತಿದ್ದೇನೆ.

೫. ಆದ್ದರಿಂದ, ಬಹುಮಾನಿತರಾದ ತಾವು ಕರುಣೆ ತೋರಿಸಿ, ನನ್ನನ್ನು ತಂದಿಟ್ಟಿರುವ ಈ ಅಸಾಧಾರಣ ಸ್ಥಿತಿಗೆ ಅಂತ್ಯ ಹಾಡಬೇಕು. ಒಂದೋ ನನ್ನನ್ನು ಭಾರತದ ಜೈಲಿಗೆ ಹಾಕಬೇಕು. ಅಲ್ಲದಿದ್ದರೆ ಉಳಿದ ಖೈದಿಗಳಂತೆ ಗಡಿಪಾರಾದವನೆಂದು ಪರಿಗಣಿಸಬೇಕು. ನಾನು ಯಾವ ಪ್ರಾಧಾನ್ಯತೆಯನ್ನೂ ಕೇಳುವುದಿಲ್ಲ; ಒಬ್ಬ ರಾಜಕೀಯ ಖೈದಿ ಎಂಬ ನೆಲೆಯಲ್ಲಿ ಪ್ರಪಂಚದ ಸ್ವತಂತ್ರ ದೇಶಗಳ ನಾಗರಿಕ ಆಡಳಿತ ರೀತಿಗಳು ಅದನ್ನು ನೀಡುತ್ತವೆಯಾದರೂ ಕೂಡ. ಬದಲಿಗೆ ಅತ್ಯಂತ ಕ್ರೂರಿಗಳು ಮತ್ತು ನಿರಂತರವಾಗಿ ತಪ್ಪುಗಳನ್ನು ಮಾಡುವ ಆಕ್ರಮಣಕಾರಿ ಖೈದಿಗಳಿಗೆ ನೀಡುವ ಅನುಕೂಲತೆಗಳನ್ನು ಮಾತ್ರ ನಾನು ಕೇಳುತ್ತಿದ್ದೇನೆ. ಪುನಹ ಜೈಲು ಕೋಣೆಯೊಳಗೆ ಬಂಧಿಸಿಡುವ ಈ ತೀರ್ಮಾನ ನನ್ನ ಬದುಕು ಮತ್ತು ನಿರೀಕ್ಷೆಗಳನ್ನು ಹಿಡಿದಿಡುವ ಸಾಧ್ಯತೆಯನ್ನೂ ನುಚ್ಚುನೂರಾಗಿಸುತ್ತಿದೆ. ಒಂದು ನಿರ್ದಿಷ್ಟ ಸಮಯದ ಜೈಲು ಶಿಕ್ಷೆ ವಿಧಿಸಲ್ಪಟ್ಟವರ ಕಥೆ ಬೇರೆ. ಆದರೆ, ಸರ್‌, ನನಗೆ ನನ್ನ ಮುಖವನ್ನೇ ತಿವಿಯುವಂತೆ ನೋಡುತ್ತಿರುವ ಐವತ್ತು ವರ್ಷಗಳು ನನ್ನ ಕಣ್ಣ ಮುಂದಿದೆ. ಅತ್ಯಂತ ಕ್ರೂರಿ ಖೈದಿಗಳಿಗೂ ಕೇಳಬಹುದಾದ, ಅವರ ಬದುಕನ್ನು ಚೂರಾದರೂ ಬೆಳಗಿಸಬಹುದಾದ ಸೌಲಭ್ಯಗಳನ್ನು ಕೂಡ ನಿಷೇಧಿಸಲ್ಪಟ್ಟು ಜೈಲು ಕೋಣೆಯೊಳಗೆ ಆ ವರ್ಷಗಳನ್ನು ದಾಟಲು ಬೇಕಾದ ಶಕ್ತಿ ನನಗೆ ಸಿಗುವುದಾದರು ಎಲ್ಲಿಂದ? ಒಂದೋ ನನ್ನನ್ನು ಭಾರತದ ಜೈಲಿಗೆ ಕಳಿಸಿರಿ. ಅಲ್ಲಿ ನನಗೆ a) ಸೌಲಭ್ಯಗಳು ಸಿಗುತ್ತವೆ. b) ಪ್ರತಿ ನಾಲ್ಕು ತಿಂಗಳಿಗೊಮ್ಮೆ ಬಂಧುಮಿತ್ರಾದಿಗಳಿಗೆ ನನ್ನನ್ನು ಬಂದು ಕಾಣಲು ಅವಕಾಶ ದೊರೆಯುವುದರಿಂದ ದೌರ್ಭಾಗ್ಯಕರವಾಗಿ ಜೈಲಲ್ಲಿ ಬಂಧಿಸಲ್ಪಟ್ಟಿರುವವರಿಗೆ ತಮ್ಮ ಪ್ರೀತಿ ಪಾತ್ರರನ್ನು ಆಗಾಗ ಕಾಣುವ ಮೂಲಕ ಸಿಗುವ ವಿವರಿಸಲಾಗದ ನೆಮ್ಮದಿ ದೊರೆಯುತ್ತದೆ. c) ಎಲ್ಲಕ್ಕಿಂತ ಮುಖ್ಯವಾಗಿ ಹದಿನಾಲ್ಕು ವರ್ಷ ಕಳೆಯುವಾಗ ಬಿಡುಗಡೆ ಸಿಗಬಹುದಾದ ನೈತಿಕ, ಆದರೆ ಕಾನೂನಾತ್ಮಕವಲ್ಲದ, ಸಾಧ್ಯತೆ ಇದೆ. d) ಇವುಗಳ ಜೊತೆಗೆ ಇನ್ನಷ್ಟು ಪತ್ರಗಳು ಮತ್ತು ಅನುಕೂಲತೆಗಳು ದೊರೆಯುತ್ತವೆ. ನನ್ನನ್ನು ಭಾರತಕ್ಕೆ ಕಳುಹಿಸುವುದಿಲ್ಲದಿದ್ದರೆ, ಜೈಲು ಕೋಣೆಯಿಂದ ಬಿಡುಗಡೆಗೊಳಿಸಿ ಹೊರಗೆ ಕಳಿಸಿರಿ. ಉಳಿದ ಎಲ್ಲ ಖೈದಿಗಳಂತೆ ಐದು ವರ್ಷಗಳ ನಂತರದ ಸಂದರ್ಶನಗಳು, ಟಿಕೆಟ್‌ ರಜೆ, ನನ್ನ ಕುಟುಂಬಕ್ಕೆ ಇಲ್ಲಿ ಬಂದು ಭೇಟಿಯಾಗುವ ಅವಕಾಶ ಎಲ್ಲವೂ ದೊರೆಯಲಿದೆ. ಅದು ನನಗೆ ಸಿಗುವುದಾದರೆ ಒಂದೇ ಒಂದು ದುಃಖ ನನ್ನಲ್ಲಿ ಉಳಿದು ಬಿಡುತ್ತದೆ. ನನ್ನ ತಪ್ಪುಗಳಿಗೆ ನಾನೊಬ್ಬನೇ ಹೊಣೆಗಾರ, ಬೇರೆ ಯಾರೂ ಅಲ್ಲವೆಂಬ ಪಶ್ಚಾತಾಪ ಅದು. ಅದು ಪ್ರತಿಯೊಂದು ಮಾನವಜೀವಿಯ ಮೂಲಭೂತ ಹಕ್ಕು ಆಗಿರುವುದರಿಂದ ಅದಕ್ಕಾಗಿ ಬೇಡಿಕೊಳ್ಳುವುದು ಎಂತಹ ದಯನೀಯ ದುರವಸ್ಥೆ. ಒಂದು ಕಡೆ ಇಪ್ಪತ್ತರಷ್ಟು ಯುವ, ಸಕ್ರಿಯ, ಅಸ್ವಸ್ಥಗೊಂಡಿರುವ ರಾಜಕೀಯ ಖೈದಿಗಳು ಮತ್ತು ಇನ್ನೊಂದು ಕಡೆ ಕಾಲನಿ ಜೈಲು ಕಾನೂನುಗಳು. ಅವುಗಳ ನಿಜರೂಪ ಯೋಚನೆ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಅತ್ಯಂತ ಕ್ಷೀಣ ಮಟ್ಟಕ್ಕೆ ತರುತ್ತದೆ ಎಂಬುದು. ಆಗೊಮ್ಮೆ ಈಗೊಮ್ಮೆ ಅವರಲ್ಲಿ ಯಾರೋ ಒಬ್ಬರು ಒಂದೋ ಎರಡೋ ನಿಯಮ ಉಲ್ಲಂಘಿಸುವುದನ್ನು ತಡೆಯಲಾಗದು. ಆದರೆ, ಅದರ ಹೊಣೆಯನ್ನು ಎಲ್ಲರ ತಲೆಯ ಮೇಲೆ ಹೊರಿಸುವುದರಿಂದ, ಈಗ ನಡೆದಂತೆ ನನ್ನ ಮಟ್ಟಿಗೆ ಬಿಡುಗಡೆಗೊಳ್ಳುವುದನ್ನು ಅಸಾಧ್ಯವಾಗಿಸುತ್ತದೆ.

ಕೊನೆಯದಾಗಿ ಗೌರವಾನ್ವಿತರಾದ ತಮ್ಮ ಗಮನಕ್ಕೆ ನೆನಪಿಸುವುದೇನೆಂದರೆ ೧೯೧೧ರಲ್ಲಿ ನಾನು ಕಳುಹಿಸಿದ ಕ್ಷಮಾಪಣಾ ಪತ್ರವನ್ನು ಮತ್ತೊಮ್ಮೆ ಓದುವುದು ಒಳಿತು ಎಂಬುದು. ಅದನ್ನು ಸರಕಾರಕ್ಕೆ ಕಳುಹಿಸಲು ತಾವು ಅನುಮತಿ ನೀಡಿದಿರೇ? ಭಾರತದ ರಾಜಕಾರಣದ ಹೊಸ ಬೆಳವಣಿಗೆಗಳು ಮತ್ತು ಸರಕಾರ ಮುಂದಿಟ್ಟಿರುವ ಸೌಹಾರ್ದಯುತವಾದ ನೀತಿಗಳು ಮತ್ತೊಮ್ಮೆ ಸಂವಿಧಾನಾತ್ಮಕ ದಾರಿಯನ್ನು ತೆರೆದು ಕೊಡುತ್ತಿದೆ. ಈಗ ಭಾರತದ ಒಳಿತಿಗಾಗಿ ಕೆಲಸ ಮಾಡುವ, ಹೃದಯದಲ್ಲಿ ಮನುಷ್ಯತ್ವವಿರುವ ಯಾರು ಕೂಡ ೧೯೦೬-೧೯೦೭ರ ನಮ್ಮನ್ನು ಶಾಂತಿ ಮತ್ತು ಪ್ರಗತಿಯ ದಾರಿಯಿಂದ ಹಿಮ್ಮೆಟ್ಟಲು ಪ್ರಚೋದಿಸಿದ, ಮುಳ್ಳುಗಳೇ ತುಂಬಿದ ಹಾದಿಗೆ ಕಣ್ಣುಮುಚ್ಚಿ ಹೆಜ್ಜೆಯಿಡಲು ಆವೇಶಗೊಳಿಸಿದ, ಆ ನಿರಾಸೆ ತುಂಬಿದ ಪರಿಸ್ಥಿತಿ ಈಗಿಲ್ಲ. ಆದ್ದರಿಂದ ಸರಕಾರ ತನ್ನ ಉದಾರವಾದ ಹಾದಿಯಲ್ಲಿ ಒಳಗೊಳ್ಳಿಸಿ ನನ್ನನ್ನು ವಿಮೋಚನೆಗೊಳಿಸಲು ದಯೆ ತೋರಿಸುವುದೇ ಆದರೆ, ನನ್ನಂತೆ ಇಂಗ್ಲಿಷ್‌ ಸರಕಾರಕ್ಕೆ ವಿಧೇಯನು, ಸಾಂವಿಧಾನಿಕ ಪ್ರಗತಿಯ ಅತ್ಯಂತ ಶಕ್ತ ವಕ್ತರಾನು ಇನ್ನೊಬ್ಬರು ಇರಲಿಕ್ಕಿಲ್ಲ. ಅದಲ್ಲವೇ ಪ್ರಗತಿಯ ಪ್ರಾಥಮಿಕ ಅವಸ್ಥೆ? ನಾವು ಜೈಲೊಳಗೆ ಇರುವಷ್ಟು ಕಾಲವೂ ಗೌರವಾನ್ವಿತ ದೊರೆಯ ಪ್ರಜೆಗಳ ನೂರಾರು ಸಾವಿರಾರು ಮನೆಗಳಲ್ಲಿ ನಿಜವಾದ ಸಂತೋಷ ತುಂಬಿ ತುಳುಕುವುದಿಲ್ಲ. ಯಾಕೆಂದರೆ ನೆತ್ತರು ನೀರಿಗಿಂತ ಗಟ್ಟಿಯಾದದ್ದು. ಆದರೆ, ನಾವು ವಿಮೋಚಿತರಾಗುವುದೇ ಆದರೆ ಈ ಮನುಷ್ಯರು, ಆತ್ಮ ಪರಿವರ್ತನೆ, ಕ್ಷಮೆ ಕೇಳುವುದು ಎಲ್ಲವೂ ಕೆಟ್ಟ ದಾರಿಯನ್ನು ಎತ್ತಿಹಿಡಿಯುವುದಕ್ಕಿಂತ ಮತ್ತು ಪ್ರತಿಕಾರ ತೀರಿಸುವುದಕ್ಕಿಂತ ಮೇಲಿನದು ಎಂಬ ಅರಿವುಳ್ಳವರು, ಆನಂದ ತುಂಬಿದ ಒಂದು ದೊಡ್ಡ ನಗು ಹೊತ್ತವರು ಮತ್ತು ಸರಕಾರದೊಂದಿಗೆ ಕೃತಜ್ಞತೆ ವ್ಯಕ್ತಪಡಿಸುವವರಾಗುತ್ತಾರೆ. ಅದಕ್ಕಿಂತ ಮುಖ್ಯವಾಗಿ ಸಾಂವಿಧಾನಿಕವಾದ ದಾರಿಯೆಡೆಗಿನ ನನ್ನ ಬದಲಾವಣೆ ಭಾರತದಲ್ಲಿ ಮತ್ತು ವಿದೇಶದಲ್ಲಿ ತಪ್ಪಾಗಿ ಮುನ್ನಡೆಸಲ್ಪಟ್ಟ, ಒಂದೊಮ್ಮೆ ನನ್ನನ್ನು ಮಾರ್ಗದರ್ಶಕನಾಗಿ ಕಂಡ ಯುವಕರನ್ನು ಪೂರ್ತಿಯಾಗಿ ಸಾಂವಿಧಾನಿಕ ದಾರಿಗೆ ಮರಳಿ ತರುತ್ತದೆ. ಸರಕಾರ ಬಯಸುವ ಯಾವ ರೀತಿಯಲ್ಲೂ ಅವರಿಂದ ಸೇವೆ ಸಲ್ಲಿಸಲು ನಾನು ಸಿದ್ದನಾಗಿದ್ದೇನೆ. ನನ್ನ ಬದಲಾವಣೆ ಪೂರ್ಣಾರ್ಥದ ಬದಲಾವಣೆಯಾಗಿರುವುದರಿಂದ ಅದು ಮುಂದೆಯೂ ಹಾಗೆಯೇ ಇರುತ್ತದೆ. ನನ್ನನ್ನು ಜೈಲಿನಲ್ಲಿ ಬಂಧಿಸಿಡುವುದರಿಂದ, ಬಂಧಿಸಿಡದಿದ್ದರೆ ಸಿಗುವ ಲಾಭಗಳ ಜೊತೆಗೆ ಯಾವ ರೀತಿಯಲ್ಲೂ ತುಲನೆ ಮಾಡಲು ಸಾಧ್ಯವಿಲ್ಲ. ಧೀರರು ಮಾತ್ರವೇ ದಯಾಳುಗಳಾಗಿರುತ್ತಾರೆ. ಆದ್ದರಿಂದ ಸರಕಾರದ ರಕ್ಷಣೆಯ ಬಾಗಿಲುಗಳ ಕಡೆಗಲ್ಲದೆ ಬೇರೆಲ್ಲಿಗೆ ಧೂರ್ತಪುತ್ರನಿಗೆ ಮರಳಲು ಸಾಧ್ಯ?ʼ

ಫಾಡ್ಕೆ ಮತ್ತು ಚಾಪೇಕರ್‌ ಸಹೋದರರ ಕುರಿತು ಕವಿತೆ ಬರೆದ, ಅಭಿನವ್‌ ಭಾರತ್‌ ಎಂಬ ಬ್ರಿಟಿಷ್‌ ವಿರೋಧಿ ಸಂಘಟನೆ ಕಟ್ಟಿದ, ಕರ್ಜನ್‌ ವಿಲ್ಲಿ ಮತ್ತು ಜಾಕ್ಸನ್‌ನನ್ನು ಕೊಲ್ಲಲು ಪ್ರೇರೇಪಿಸಿದ, ಬ್ರಿಟಿಷ್‌ ವಿರೋಧಿ ಹೋರಾಟದಲ್ಲಿ ಕೊಲ್ಲಲು ಮತ್ತು ಸಾಯಲು ಯುವಕರನ್ನು ಪ್ರೇರೇಪಿಸಿದ ಸಾವರ್ಕರ್ ಎಂಬ ವ್ಯಕ್ತಿಯ ಸಂಪೂರ್ಣ ಶರಣಾಗತಿಯನ್ನು ನಾವಿಲ್ಲಿ ಕಾಣಬಹುದು. ಡಿಂಗ್ರನಿಗೆ ಸಾವರ್ಕರ್‌ ಬರೆದು ಕೊಟ್ಟದ್ದು ಎಂದು ಹೇಳುವ ಹೇಳಿಕೆಯೊಂದಿಗೆ ಇದನ್ನಿಟ್ಟು ನೋಡಿದರೆ ಇದರ ದಯನೀಯತೆ ಎಷ್ಟು ಆಳವಾದದ್ದು ಎಂದು ಅರ್ಥ ಮಾಡಿಕೊಳ್ಳಬಹುದು. ಅನುಯಾಯಿಗಳಿಗೋಸ್ಕರ ಮಾತನಾಡಬೇಕಾದ ನಾಯಕ ಇಲ್ಲಿ ಅವರು ಅನುಭವಿಸುತ್ತಿರುವ ಸುಖ ನೆಮ್ಮದಿಯನ್ನು ಕಂಡು ಅಸೂಯೆಗೊಂಡು ಅದು ತನಗೂ ಬೇಕು ಎಂದು ಕೇಳುತ್ತಿದ್ದಾನೆ. ಅಷ್ಟೇ ಅಲ್ಲ, ಬ್ರಾಹ್ಮಣರೊಂದಿಗೆ ಉತ್ತೇಜಕ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಇಲ್ಲಿ ದಯನೀಯವಾದ ಬಿಕ್ಕಳಿಕೆಯ ಭಾಷೆಯಲ್ಲಿ ತನ್ನ ಭಯ ಮತ್ತು ಆತಂಕವನ್ನು ವ್ಯಕ್ತಪಡಿಸುತ್ತಾನೆ. ಡಿಂಗ್ರ ಮತ್ತು ಅನಂತ್‌ ಕನ್ಹಾರೆಯ ಶವಗಳು ಇದನ್ನು ಅರಿಯುತ್ತವೆಯಾದರೆ, ತಮ್ಮ ಆತ್ಮಗಳು ಮಗ್ಗುಲು ಬದಲಾಯಿಸಿಕೊಳ್ಳುತ್ತವೆ ಎಂದು ಖಂಡಿತವಾಗಿ ಹೇಳಬಹುದಾದ ಅತ್ಯಂತ ನೀಚ ಶರಣಾಗತಿಯಾಗಿತ್ತು ಆ ಪತ್ರ. ಅದರಲ್ಲೂ ವಿಶೇಷವಾಗಿ ಕೊನೆಯ ಪ್ಯಾರಾ.

Related Articles

ಇತ್ತೀಚಿನ ಸುದ್ದಿಗಳು