Monday, September 2, 2024

ಸತ್ಯ | ನ್ಯಾಯ |ಧರ್ಮ

ಹಿಂದುತ್ವ ರಾಜಕಾರಣದ ಕಥೆ – 31 : ಸಾವರ್ಕರ್‌ ಸಾಹಿತ್ಯವೆಂದರೆ

“ಒಂದು ಹಿಡಿಯಷ್ಟು ಬೌದ್ಧಿಕವೂ ಭಾವನಾತ್ಮಕವೂ ಆದ ನಿಷ್ಠೆಯನ್ನು ಸಾವರ್ಕರ್‌ ಬದುಕು ಮತ್ತು ಬರಹಗಳಿಂದ ಹೆಕ್ಕಿ ತೆಗೆಯುವುದು ಅಸಾಧ್ಯವೆಂದು ಹೇಳಿದರೆ ಅದು ಅತಿಶಯೋಕ್ತಯಾಗಲಾರದು..” ಸುನೈಫ್ ಅವರ ಅನುವಾದದ 31 ನೇ ಅಧ್ಯಾಯ

ನಿರಂತರವಾಗಿ ಬರೆಯುತ್ತಿದ್ದ ವ್ಯಕ್ತಿಯಾಗಿದ್ದರು ಸಾವರ್ಕರ್.‌ ಕವಿತೆಗಳು, ನಾಟಕಗಳು, ಲೇಖನಗಳು, ಇತಿಹಾಸ ಪುಸ್ತಕಗಳು, ರಾಜಕೀಯ ವಾದಗಳು, ಕಾದಂಬರಿಗಳು ಎಲ್ಲವೂ ಸಾವರ್ಕರ್‌ ಹೆಸರಿನಲ್ಲಿವೆ. ಮರಾಠಿಯಲ್ಲಿ ತನ್ನ ಕಾಲದಲ್ಲಿ ಇಷ್ಟೊಂದು ಬರೆದ ಇನ್ನೊಬ್ಬ ಲೇಖಕನನ್ನು ಹುಡುಕುವುದು ಕಷ್ಟವೇ ಸರಿ.

ತನ್ನ ಲಂಡನ್‌ ಬದುಕಿನ ಕಾಲದಲ್ಲಿ ಸಾವರ್ಕರ್‌ ಒಬ್ಬ ಬರಹಗಾರನಾಗಿ ರೂಪುಗೊಂಡಿದ್ದರು ಎಂದು ನಾವು ಕಂಡೆವು. ಜೋಸೆಫ್‌ ಮಸ್ಸಿನಿಯ ಆತ್ಮಕತೆ ಮತ್ತು ೧೮೫೭ರ ಮೊದಲ ಸ್ವಾತಂತ್ರ್ಯ ಯುದ್ಧ ಪುಸ್ತಕಗಳು ಆ ಕಾಲದಲ್ಲಿ ಬರೆದ ಪ್ರಮುಖ ಪುಸ್ತಕಗಳಾಗಿದ್ದವು. ಇವೆರಡೂ ಪುಸ್ತಕಗಳನ್ನು ಬ್ರಿಟಿಷರು ಸಂಶಯಾಸ್ಪದವೆಂದು ಗುರುತಿಸಿ ಅದರ ಪ್ರಚಾರವನ್ನು ತಡೆಯಲು ಕೂಡ ಪ್ರಯತ್ನಿಸಿದ್ದರು. ತನ್ನ ಬ್ರಿಟಿಷ್‌ ವಿರೋಧಿ ಕಾಲದ ಹೆಗ್ಗುರುತುಗಳು ಆ ಪುಸ್ತಕಗಳಲ್ಲಿವೆ. ಆ ಕಾಲದಲ್ಲಿಯೇ ಸಾಗರ ತಲಮಾಲದಂತಹ ಕವಿತೆಗಳನ್ನೂ ಸಾವರ್ಕರ್‌ ಬರೆಯುವುದು. ಅವುಗಳ ಕುರಿತು ಒಂದಷ್ಟು ಸಂಗತಿಗಳನ್ನು ನಾವು ಈಗಾಗಲೇ ಚರ್ಚಿಸಿದೆವು. ೧೯೨೩ರಲ್ಲಿ ಕ್ಷಮಾಪಣಾ ಪತ್ರಗಳ ಕಾರಣದಿಂದ ಅಂಡಮಾನಿನ ಸೆಲ್ಯುಲಾರ್‌ ಜೈಲಿನಿಂದ ಭಾರತದ ಜೈಲಿಗೆ ವರ್ಗಾವಣೆಯಾದ ಸಮಯದಲ್ಲಿಯೇ ಸಾವರ್ಕರ್ ಮರಾಠ ಎಂಬ ನಕಲಿ ಹೆಸರಿನಲ್ಲಿ ಹಿಂದುತ್ವ ಎಂಬ ಪುಸ್ತಕವನ್ನು ಬರೆಯುವುದು. ನಂತರದ ಕಾಲದಲ್ಲಿ ಭಾರತೀಯರನ್ನು ಅಂಧಕಾರ ಯುಗಕ್ಕೆ ನಡೆಸುವಷ್ಟು ಶಕ್ತಿಯಿದೆಯೆಂದು ಸಾಬೀತು ಪಡಿಸಿದ ಆ ಪುಸ್ತಕವು ನಂತರ ಹಿಂದುತ್ವದ ಮೂಲಭೂತ ತತ್ವಗಳು ಎಂಬ ಹೆಸರಿನಲ್ಲಿ ಮರುಮುದ್ರಣವಾಗುತ್ತದೆ. ನಾವು ಅದನ್ನು ಕೂಲಂಕುಷವಾಗಿ ಚರ್ಚಿಸಿದೆವು. ಇದರ ನಂತರ ೧೯೩೭ರ ತನಕ ರತ್ನಗಿರಿ ಜಿಲ್ಲಾಬಂಧನದಲ್ಲಿದ್ದ ಸಮಯದಲ್ಲಿ ಕೂಡ ಬಹಳವೇ ಬರೆಯುತ್ತಾರೆ. ಶಿವಾಜಿಯ ಮರಾಠಾ ಸಾಮ್ರಾಜ್ಯ ಮತ್ತು ಅದರ ಮುಂದುವರಿಕೆಯಾದ ಪೇಶ್ವೆಗಳ ಆಡಳಿತ ಹಿಂದೂ ಸಾಮ್ರಾಜ್ಯವಾಗಿತ್ತೆಂದು ಸಮರ್ಥಿಸಿಕೊಳ್ಳಲು ಹಿಂದೂ ಪದ್‌ಪದಶಾಹಿ, ತನ್ನ ಅಂಡಮಾನ್‌ ಬದುಕಿನ ಕುರಿತು ಮೈ ಟ್ರಾನ್ಸ್‌ಪೋರ್ಟೇಷನ್‌ ಫಾರ್‌ ಲೈಫ್‌ (ನನ್ನ ಗಡಿಪಾರು), ಲ್ಯಾಂಗ್ವೇಜ್‌ ಪ್ಯೂರಿಫಿಕೇಷನ್‌ (ಭಾಷಾಶುದ್ಧಿ), ಸ್ಕ್ರಿಪ್ಟ್‌ ಪ್ಯೂರಿಫಿಕೇಷನ್‌ (ಲಿಪಿಶುದ್ಧ), ದಿ ರಿವೋಲ್ಟ್‌ ಆಫ್‌ ಮಾಪಿಳಾಸ್‌ (ಮಾಪಿಳ ಗಲಭೆ), ಕಾಲಾಪಾನಿ, ದಿ ಎಸ್ಸೇಸ್‌ ಆನ್‌ ಅಬೋಲಿಷನ್‌ ಆಫ್‌ ಕಾಸ್ಟ್‌ ಮೊದಲಾದ ಪುಸ್ತಕಗಳನ್ನು ಆ ಕಾಲಾವಧಿಯಲ್ಲಿ ಬರೆದು ಮುಗಿಸುತ್ತಾರೆ. ೨೨೨೫ಕ್ಕಿಂತಲೂ ಹೆಚ್ಚಿನ ಪುಟಗಳನ್ನು ಸಾವರ್ಕರ್‌ ಈ ಕಾಲಾವಧಿಯಲ್ಲಿ ಬರೆದಿದ್ದರೆಂದು ವಿಕ್ರಂ ಸಂಪತ್‌ ಹೇಳುತ್ತಾರೆ.  ಕೇಸರಿ, ಕಿರ್ಲೋಸ್ಕರ್‌ ಮ್ಯಾಗಸಿನ್‌, ಸ್ತ್ರೀ, ಮನೋಹರ್‌, ನಿರ್ಭೀತ್‌, ಶ್ರದ್ಧಾನಂದ್‌ ಮೊದಲಾದ, ಒಂದರ್ಥದಲ್ಲಿ ಬ್ರಾಹ್ಮಣ ಮಾಧ್ಯಮಗಳಲ್ಲಿ ಸಾವರ್ಕರ್‌ ಹೆಚ್ಚಾಗಿ ತನ್ನ ಲೇಖನಗಳನ್ನು ಪ್ರಕಟಿಸುತ್ತಿದ್ದರು.

ಇದರ ನಡುವೆ ೧೯೨೬ರಲ್ಲಿ ಪ್ರಕಟಗೊಂಡ ಒಂದು ಪುಸ್ತಕವು ವಿಶೇಷವಾಗಿ ಗಮನ ಸೆಳೆಯುತ್ತದೆ. ಸಾವರ್ಕರ್‌ ಅವರ ಮೊಟ್ಟ ಮೊದಲ ಆತ್ಮಕತೆ. ಲೈಫ್‌ ಆಫ್‌ ಬ್ಯಾರಿಸ್ಟರ್‌ ಸಾವರ್ಕರ್. ಇದರ ಲೇಖಕ ಚಿತ್ರಗುಪ್ತ ಎಂಬ ವ್ಯಕ್ತಿ. ಸಾವರ್ಕರ್‌ ಜಾಕ್ಸನ್‌ ಕೊಲೆ ಪ್ರಕರಣದಲ್ಲಿ ಎರಡು ಜೀವಾವಧಿ ಶಿಕ್ಷೆಗೆ ಗುರಿಯಾಗಿ ಅಂಡಮಾನಿನ ಜೈಲು ಸೇರುವ ತನಕದ ಬದುಕನ್ನು ಇದರಲ್ಲಿ ದಾಖಲಿಸಲಾಗಿದೆ. ಅದು ಆರಂಭವಾಗುವುದು ಚಿತ್ಪಾವನ ಬ್ರಾಹ್ಮಣ ಕುಲದ ಮಹಿಮೆಯನ್ನು ಕೊಂಡಾಡುವ ಮೂಲಕ.

ʼನಾವು ಚಿತ್ರಿಸಲು ಹೊರಟಿರುವ ಗೌರವಯುತರಾದ ದೇಶಪ್ರೇಮಿಯ ತಂದೆಯವರಾದ ಶ್ರೀ ದಾಮೋದರ್‌ ಪಂತ್‌ ಸಾವರ್ಕರ್‌ ಅವರು ಮರಾಠಾ ಬ್ರಾಹ್ಮಣರ ಉಪಪಂಗಡವಾದ ಚಿತ್ಪಾವನ ಬ್ರಾಹ್ಮಣ ಕುಲದ ಒಬ್ಬ ಗೌರವಾನ್ವಿತರಾಗಿದ್ದರು. ಕಳೆದ ಇನ್ನೂರು ವರ್ಷಗಳಿಂದ ನಿರಂತರವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಲು ಮುಂಚೂಣಿ ಹೋರಾಟಗಾರರನ್ನು ಉತ್ಪಾದಿಸಿಕೊಂಡು, ಕರ್ಜನ್‌ನಂತಹ ಬ್ರಿಟಿಷ್‌ ಸಾಮ್ರಾಜ್ಯವಾದಿಗಳಿಗೆ ಆರೋಪ ಹೊರಿಸಲೆಂದು ಮಾತ್ರ ನಿರಂತರವಾಗಿ ಬದುಕುತ್ತಿರುವ ಸಮುದಾಯವಿದು. ಮೊದಲ ಪೇಶ್ವೆ ಬಾಲಾಜಿ ವಿಶ್ವನಾಥ್‌ ಒಬ್ಬ ಚಿತ್ಪಾವನನಾಗಿದ್ದರು. ಭಾರತ ಸೃಷ್ಟಿಸಿದ ಸೈನ್ಯಾಧಿಪತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಬಾಜಿರಾವ್‌ ಒಬ್ಬ ಚಿತ್ಪಾವನನಾಗಿದ್ದರು. ನಾನಾ ಸಾಹೇಬ್‌ ಎಂಬ ಮಹಾನ್‌ ಭಾರತೀಯ ಆಡಳಿತಾಧಿಕಾರಿ, ೧೮೫೭ರ ಮೊದಲ ಸ್ವಾತಂತ್ರ್ಯ ಹೋರಾಟದಲ್ಲಿ ಉದಿಸಿ ಬಂದ ನಾನಾ ಸಾಹೇಬ್‌, ಬ್ರಿಟಿಷ್‌ ಸರಕಾರಕ್ಕೆದುರಾಗಿ ದಂಗೆಯೆದ್ದು ಭಾರತದ ಸ್ವಾತಂತ್ರ್ಯವನ್ನು ಗುರಿಯಾಗಿಸಿಕೊಂಡಿದ್ದ ವಾಸುದೇವ್‌ ಬಲವಂತ್‌ (ಫಾಡ್ಕೇ), ಪುಣೆಯಲ್ಲಿ ಪ್ಲೇಗ್‌ ನಿಯಂತ್ರಣಾಧಿಕಾರಿಗಳನ್ನು ಕೊಂದು ಗಲ್ಲಿಗೇರಿದ ಚಾಪೇಕರ್‌ ಸಹೋದರರು ಮತ್ತು ರಾಣಡೆ ಇವರೆಲ್ಲ ಚಿತ್ಪಾವನರಾಗಿದ್ದರು. ಶ್ರೀ ಗೋಖಲೆ, ಜಸ್ಟಿಸ್‌ ರಾಣಡೆ, ಮಹಾನರಾದ ತಿಲಕ್‌ ಇವರೆಲ್ಲರೂ ಚಿತ್ಪಾವನರು. ವ್ಯಾಲೆಂಟೈನ್‌ ಚಿರೋಲ್‌ ಮಾತುಗಳ ಮೂಲಕ ಹೇಳುವುದಾದರೆ, ಭಾರತದ ಕ್ರಾಂತಿಕಾರಿಗಳಲ್ಲಿ ಅತ್ಯುಜ್ವಲರಾದ ಒಬ್ಬರಿಗೆ ಜನ್ಮ ನೀಡಲು ಮತ್ತು ಬೆಳೆಸಲು ವಿಧಿಯು ಈ ವಿಶೇಷ ಜಾತಿಯನ್ನು ಆಯ್ದುಕೊಂಡಿರುವುದರಲ್ಲಿ ಯಾವುದೇ ವಿಶೇಷವಿಲ್ಲ.ʼ

ಹೀಗೆ ಸಾವರ್ಕರ್‌ ಮತ್ತು ಚಿತ್ಪಾವನ ಬ್ರಾಹ್ಮಣ ಕುಲವನ್ನು ಸುವರ್ಣಾಕ್ಷರಗಳಿಂದ ಹೊಗಳಿಕೊಂಡು ಮುಂದುವರಿಯುವ ಈ ಪುಸ್ತಕ ಒಂದು ಸ್ತುತಿಕಾವ್ಯದ ಧಾಟಿಯನ್ನು ಹೊಂದಿದೆ. ‌ʼಸಾವರ್ಕರ್ ಹುಟ್ಟಿನಿಂದಲೇ ನಾಯಕರಾಗಿದ್ದರು. ಸೋಲಿಗೆ ಹೆದರಿಕೊಂಡು ಜವಾಬ್ದಾರಿಗಳಿಂದ ನುಣುಚಿಕೊಳ್ಳುವವರನ್ನು ಅವರು ನಿರ್ದಾಕ್ಷಿಣ್ಯ ದೂರ ಮಾಡುತ್ತಿದ್ದರು. ಒಂದು ಸರಕಾರಿ ವ್ಯವಸ್ಥೆಯು ಅನೀತಿಯೆಸಗುತ್ತಿದೆಯೆಂದು ಮನಗಂಡರೆ, ಅದು ಸರಿಯೋ ತಪ್ಪೋ ಎಂಬುದಕ್ಕಿಂತ ಮೊದಲು, ಅದನ್ನು ಇಲ್ಲವಾಗಿಸಲು ಸರಿಯಲ್ಲದ ಮಾರ್ಗಗಳನ್ನು ಸ್ವೀಕರಿಸಲು ಕೂಡ ಅವರಿಗೆ ಯಾವ ಹಿಂಜರಿಕೆಯೂ ಇರುತ್ತಿರಲಿಲ್ಲ.ʼ

ಈ ಸ್ತುತಿಗಾನವು ಸಾವರ್ಕರ್‌ ಅವರ ಬದುಕಿನ ಅತ್ಯಂತ ಸಣ್ಣಪುಟ್ಟ ಕ್ಷಣಗಳನ್ನೂ ದಾಖಲಿಸಿತ್ತು. ಉದಾಹರಣೆಗೆ, ಜಾಕ್ಸನ್‌ ಕೊಲೆಯ ಕಾಲದಲ್ಲಿ ಸಾವರ್ಕರ್‌ ಒಬ್ಬಂಟಿಯಾಗಿ ಫ್ರಾನ್ಸಿಗೆ ಹೋಗಿದ್ದರಾದರೂ ಅಲ್ಲಿನ ಪ್ರತಿಯೊಂದು ದೃಶ್ಯವನ್ನೂ ಸಾವರ್ಕರ್‌ ಅವರ ಜೊತೆಗೆ ನಡೆದು ಕಂಡ ಹಾಗೆ ಅದರ ಲೇಖಕ ಚಿತ್ರಗುಪ್ತ ದಾಖಲಿಸುತ್ತಾನೆ. ೧೯೮೭ರಲ್ಲಿ ಸಾವರ್ಕರ್‌ ಮರಣಾನಂತರ ಈ ಆತ್ಮಕಥಾನಕದ ಎರಡನೇ ಆವೃತ್ತಿಯನ್ನು ಸಾವರ್ಕರ್‌ ಕೃತಿಗಳ ಪ್ರಕಾಶಕರಾದ ವೀರ್‌ ಸಾವರ್ಕರ್‌ ಪ್ರಕಾಶನ ಪ್ರಕಟಿಸುವಾಗ, ೧೯೮೬ ಫೆಬ್ರವರಿ ೨೬ರ ದಿನಾಂಕದಲ್ಲಿ ಡಾ. ರವೀಂದ್ರ ವಾಮನ್‌ ರಾಮ್ದಾಸ್‌ ಅದಕ್ಕೆ ಬರೆದ ಮುನ್ನುಡಿಯಲ್ಲಿ ಆ ರಹಸ್ಯವನ್ನು ಬಹಿರಂಗ ಪಡಿಸುತ್ತಾರೆ. ʼಚಿತ್ರಗುಪ್ರ ಎಂಬ ವ್ಯಕ್ತಿ ಸ್ವತಹ ಸಾವರ್ಕರ್‌ ಅವರೇ ಆಗಿದ್ದರು. ಅದು ಬೇರೆ ಯಾರೂ ಅಲ್ಲ.ʼ

ಸಾವರ್ಕರ್‌ ಅವರ ವ್ಯಕ್ತಿತ್ವವನ್ನೂ ಬಹರವನ್ನೂ ಕುರಿತ ಒಂದು ಕೀಲಿಕೈಯೆಂಬಂತೆ ಈ ಮೇಲಿನ ಮಾತನ್ನು ನಾವು ಗುರುತಿಸಬಹುದು. ಅತ್ಯಂತ ಉನ್ನತ ಪೀಠದಲ್ಲಿ ಸಾವರ್ಕರ್‌ ತನ್ನನ್ನು ತಾನು ಪ್ರತಿಷ್ಠಾಪಿಸಿಕೊಂಡಿದ್ದರು. ಸ್ವಯಂ ಮಹಾತ್ಮನಾಗಲು ಮತ್ತು ತನ್ನ ಬರಹಗಳನ್ನು ಮಹತ್ವಗೊಳಿಸಲು ಬೇಕಾಗಿಯೇ ಸಾವರ್ಕರ್‌ ತನ್ನ ಬರಹಗಳ ಬಹುಪಾಲನ್ನು ಬಳಸಿಕೊಂಡಿದ್ದರು. ವೈಯಕ್ತಿವಾಗಿ ತನ್ನ ಬದುಕನ್ನು ನಡೆಸುವುದು ಕೂಡ ಇದೇ ರೀತಿಯಲ್ಲಾಗಿತ್ತು. ವಿಲ್ಲಿಯನ್ನು ಕೊಲ್ಲಲು ಹೊರಡುವ ಮದನ್‌ ಲಾಲ್‌ ಡಿಂಗ್ರಾನ ಕೈಗೆ ಬಂದೂಕು ನೀಡಿ ʼಇದರಲ್ಲಿ ನೀನು ವಿಫಲನಾದರೆ ಮತ್ತೆಂದೂ ನಿನ್ನ ಮುಖವನ್ನು ನನಗೆ ತೋರಿಸದಿರುʼ ಎಂದು ಹೇಳುವ ಅದೇ ಸಾವರ್ಕರ್‌ ಗಲ್ಲುಗಂಬವೇರುವ ಮೊದಲು ನ್ಯಾಯಾಲಯದಲ್ಲಿ ನೀಡಲು ಹೇಳಿಕೆಯನ್ನು ಬರೆದುಕೊಡುವುದು. ತನ್ನ ಅಣ್ಣನಾದ ಬಾಬಾರಾವನ್ನು ಬಂಧಿಸಿದ್ದಕ್ಕೆ ಪ್ರತಿಕಾರ ತೀರಿಸಲು ಅನಂತ್‌ ಕನ್ಹಾರೆಯ ಮೂಲಕ ನಾಸಿಕ್‌ ಕಲೆಕ್ಟರ್‌ ಆಗಿದ್ದ ಜಾಕ್ಸನನ್ನು ಕೊಲೆ ಮಾಡಿಸುವುದು. ಅನಂತ್‌ ಕನ್ಹಾರೆ ಕೂಡ ಗಲ್ಲಿಗೇರುತ್ತಾನೆ. ಆದರೆ ಆ ಪ್ರಕರಣದ ಗೂಢಾಲೋಚನೆಯಲ್ಲಿ ಐವತ್ತು ವರ್ಷಗಳ ಜೈಲುಶಿಕ್ಷೆ ವಿಧಿಸಲ್ಪಟ್ಟ ಸಾವರ್ಕರ್‌ ಒಂದರ ಮೇಲೊಂದರಂತೆ ಬ್ರಿಟಿಷರಿಗೆ ಕ್ಷಮಾಪಣಾ ಪತ್ರಗಳನ್ನು ಬರೆಯುತ್ತಾರೆ. ಹತ್ತು ವರ್ಷಗಳು ತುಂಬುವ ಮೊದಲೇ ಅಂಡಮಾನಿಂದ ಭಾರತದ ಜೈಲಿಗೆ ವರ್ಗಾಯಿಸಲ್ಪಡುತ್ತಾರೆ. ಅಲ್ಲಿ ಮೂರು ವರ್ಷಗಳು ಕಳೆಯುವಷ್ಟರಲ್ಲಿ ರತ್ನಗಿರಿ ಜಿಲ್ಲಾಬಂಧನವೆಂದು ಜೈಲಿನಿಂದ ಬಿಡುಗಡೆಗೊಂಡು ನಂತರ ಸಂಪೂರ್ಣ ಬಿಡುಗಡೆಯನ್ನೂ ಪಡೆಯುತ್ತಾರೆ. ತನ್ನ ಅಂಡಮಾನ್‌ ಜೈಲುವಾಸದ ಕುರಿತು ಸಾವರ್ಕರ್‌ ಬರೆದ ಪುಸ್ತಕ, ಮೈ ಟ್ರಾನ್ಸ್‌ಪೋರ್ಟೇಷನ್‌ ಫಾರ್‌ ಲೈಫ್‌ ಅಲ್ಲಿ ಈ ಕ್ಷಮಾಪಣಾ ಪತ್ರಗಳ ಕುರಿತು ಒಂದೇ ಒಂದು ಮಾತನ್ನೂ ಬರೆಯುವುದಿಲ್ಲ. ಒಂದೊಮ್ಮೆ ಬ್ರಿಟಿಷ್‌ ವಿರೋಧಿ ಹೋರಾಟಗಾರನಾಗಿದ್ದ ಸಾವರ್ಕರ್‌ ಒಂದರ್ಥದಲ್ಲಿ ಈ ಕ್ಷಮಾಪಣಾ ಪತ್ರಗಳ ನಂತರ, ಅಂದರೆ ಸ್ವಾತಂತ್ರ್ಯ ಸಮರ ಉತ್ತುಂಗದ್ದಲ್ಲಿದ್ದ ಕಾಲದಲ್ಲಿ ಅದನ್ನು ಬುಡಮೇಲುಗೊಳಿಸಲು ಮತ್ತು ಬ್ರಿಟಿಷರ ಒಡೆದಾಳುವ ನೀತಿಗೆ ಸಹಕಾರಿಯಾಗುವ ಹಾಗೆಯೂ ತನ್ನ ನಿಲುವುಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಹಾಗಾಗಿ ಒಂದು ಹಿಡಿಯಷ್ಟು ಬೌದ್ಧಿಕವೂ ಭಾವನಾತ್ಮಕವೂ ಆದ ನಿಷ್ಠೆಯನ್ನು ಸಾವರ್ಕರ್‌ ಬದುಕು ಮತ್ತು ಬರಹಗಳಿಂದ ಹೆಕ್ಕಿ ತೆಗೆಯುವುದು ಅಸಾಧ್ಯವೆಂದು ಹೇಳಿದರೆ ಅದು ಅತಿಶಯೋಕ್ತಯಾಗಲಾರದು.

ಬ್ರಿಟಿಷ್‌ ಸಾಮ್ರಾಜ್ಯದ ಕಟ್ಟಾ ಬೆಂಬಲಿಗನಾದ ಸಾವರ್ಕರ್‌ ಹೇಗೆ ವೀರಾರಾದರು? ಎಂಬ ಲೇಖನದಲ್ಲಿ ಪವನ್‌ ಕುಲಕರ್ಣಿ ಅವರು ಚಿತ್ರಗುಪ್ತನ ಹೆಸರಿನಲ್ಲಿ ಸಾವರ್ಕರ್‌ ಬರೆದ ಬ್ಯಾರಿಸ್ಟರ್‌ ಸಾವರ್ಕರ್‌ ಅವರ ಆತ್ಮಕಥೆ ಪುಸ್ತಕದಲ್ಲಿ ಸಾವರ್ಕರ್‌ ಅವರ ಸ್ವಯಂ ಹೊಗಳಿಕೆಗಳನ್ನು ಉದಾಹರಿಸುತ್ತಾರೆ. ʼಆಶ್ಚರ್ಯಕರ ಮಾನಸಿಕತೆ, ಸೋಲಿಸಲಾಗದ ಧೈರ್ಯ, ಮಹತ್ತರವಾದ ಕಾರ್ಯಗಳನ್ನು ಸಾಧಿಸಲು ಬೇಕಾದ ಅಜೇಯ ಆತ್ಮವಿಶ್ವಾಸ ಮೊದಲಾದ ದೊಡ್ಡ ಗುಣಗಳುʼ ಸಾವರ್ಕರ್‌ ಅವರದ್ದಾಗಿತ್ತು ಎಂದು ಚಿತ್ರಗುಪ್ತ ಹೇಳುತ್ತಾನೆ. ಯಾರು ಹೇಳುತ್ತಿರುವುದು? ಚಿತ್ರಗುಪ್ತನ ಹೆಸರಿನಲ್ಲಿರುವ ಸಾಕ್ಷಾತ್ ಸಾವರ್ಕರ್.‌ ಅಲ್ಲಿಗೆ ನಿಲ್ಲಿಸುವುದಿಲ್ಲ. ʼಅವರ ಧೈರ್ಯ ಮತ್ತು ಮಾನಸಿಕ ಸ್ಥೈರ್ಯವನ್ನು ಕಂಡರೆ ಯಾರಿಗೆ ತಾನೇ ಅಭಿಮಾನ ಮೂಡುವುದಿಲ್ಲ?ʼ

ಸಾವರ್ಕರ್‌ ಅಂಡಮಾನಿನ ಜೈಲಿನಲ್ಲಿ ಅನುಭವಿಸಿದ ಯಾತನೆಗಳ ಕುರಿತು ಸಾವರ್ಕರ್‌ ಅವರ ಬರಹಗಳ ಮೂಲಕವೇ ನಮಗೆ ಮಾಹಿತಿ ದೊರೆಯುವುದು. ಮುಖ್ಯವಾಗಿ ಮೈ ಟ್ರಾನ್ಸ್‌ಪೋರ್ಟೇಷನ್‌ ಫಾರ್‌ ಲೈಫ್‌ ಮತ್ತು ಕಾಲಾಪಾನಿ ಪುಸ್ತಕಗಳಿಂದ. ನಂತರ ಸಾವರ್ಕರ್‌ ಜೊತೆ ಸಂಪರ್ಕ ಹೊಂದಿ ಧನಂಜಯ್ ಕೀರ್ ಬರೆದ ಜೀವನಚರಿತ್ರೆಯ ಮೂಲಕವೂ. ನಂತರದ ಕಾಲದ ಬಹುತೇಕ ಎಲ್ಲ ಜೀವನಚಿತ್ರಗಳೂ ಕೂಡ ಇವೇ ಮೂಲಗಳನ್ನು ಬಳಸಿಕೊಂಡು ಸಾವರ್ಕರ್ ಅವರ ಅಂಡಮಾನ್ ದಿನಗಳನ್ನು ದಾಖಲಿಸಿದವು. ಆದರೆ, ಈ ವಾದಗಳನ್ನು ಮುರಿದು ಹಾಕುವ ಪ್ರತಿವಾದಗಳೂ ಎದ್ದು ಬಂದಿವೆ. ಉದಾಹರಣೆಗೆ ಡಿ.ಎನ್ ಗೋಖಲೆ ಬರೆದ ಸ್ವಾತಂತ್ರ್ಯ ವೀರ್ ಸಾವರ್ಕರ್: ಏಕ್ ರಹಸ್ಯ ಎಂಬ ಪುಸ್ತಕದಲ್ಲಿ ಜೈಲಿನೊಳಗೆ ತಮ್ಮ ಹಕ್ಕುಗಳಿಗಾಗಿ ರಾಜಕೀಯ ಖೈದಿಗಳು ಹೋರಾಟ ನಡೆಸುವಾಗ ಸಾವರ್ಕರ್ ಸಹೋದರರು ಒಮ್ಮೆಯೂ ಅದರಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬೊಟ್ಟು ಮಾಡಿ ತೋರಿಸುತ್ತದೆ. ಅಷ್ಟೇ ಅಲ್ಲ, ಅಧಿಕಾರಿಗಳೊಂದಿಗೆ ಸ್ನೇಹ ಬೆಳೆಸಿಕೊಂಡ ಪರಿಣಾಮ ಜೈಲಿನಲ್ಲಿ ಗುಮಾಸ್ತ ಕೆಲಸವೂ ಸಾವರ್ಕರ್‌ಗೆ ಲಭಿಸಿತ್ತು. ನಂತರ ಸೂಪರ್ ವೈಸರ್ ಆಗಿ ನಿಯೋಗಿಸಲ್ಪಟ್ಟರು ಎಂದೂ ಹೇಳಲಾಗಿದೆ. ವಾಸ್ತವ ಅದೇನೇ ಆಗಿದ್ದರೂ ಸಾವರ್ಕರ್ ಅವರ ಬೌದ್ಧಿಕ ಮತ್ತು ಭಾವನಾತ್ಮಕ ಆತ್ಮನಿಷ್ಠೆಯ ಇನ್ನೊಂದು ಮುಖವನ್ನು ಪರಿಶೋಧಿಸಲು ಸಂಶೋಧಕರಿಗೆ ಪ್ರೇರೇಪಣೆ ನೀಡುತ್ತದೆ.

ಚರಿತ್ರೆ ಪುಸ್ತಕಗಳು ಎಂಬ ನೆಲೆಯಲ್ಲಿ ಸಾವರ್ಕರ್ ಬರೆದುದೆಲ್ಲವೂ ಸೈದ್ಧಾಂತಿಕ ಪ್ರಚಾರ ಸಾಮಾಗ್ರಿಗಳಾಗಿದ್ದವೆಂದು ಇತಿಹಾಸವನ್ನು ಗಂಭೀರವಾಗಿ ಅಧ್ಯಯನ ಮಾಡುವ ಎಲ್ಲರೂ ಅಭಿಪ್ರಾಯ ಪಡುತ್ತಾರೆ. ಸಾವರ್ಕರ್ ಅವರಿಗೆ ಇನ್ನಿಲ್ಲದ ಅನುಕೂಲತೆಗಳೊಂದಿಗೆ ಜೀವನ ಚರಿತ್ರೆ ಬರೆದ ವಿಕ್ರಂ ಸಂಪತ್ ಕೂಡ ಅವರ ಚರಿತ್ರೆ ಪುಸ್ತಕಗಳಲ್ಲಿ ಭಾವನಾತ್ಮಕತೆಯು ವಹಿಸುವ ಪಾಲು ಮತ್ತು ಅದರ ಅಪಾಯಗಳನ್ನು ಬೊಟ್ಟು ಮಾಡುತ್ತಾರೆ. ಆದರೆ, ಹಿಂದುತ್ವ ರಾಷ್ಟ್ರೀಯತೆಯಾಗಿ ರೂಪಾಂತರಗೊಂಡ ರಾಜಕೀಯ ಬ್ರಾಹ್ಮಣಿಸಮ್ಮಿನ ಸಿದ್ಧಾಂತಕ್ಕೆ ಚರಿತ್ರೆಯು ಆಯುಧವಾಗಬೇಕಾದರೆ ಅಂತಹದ್ದೊಂದು ಹಸ್ತಕ್ಷೇಪ ಸಾವರ್ಕರ್‌ಗೆ ಅನಿವಾರ್ಯವಾಗಿತ್ತು ಎಂಬುದನ್ನೂ ನಾವು ಗಮನಿಸಬೇಕು. ಸಾವರ್ಕರ್ ಅದನ್ನೇ ಮಾಡಿದರು.

ಉದಾಹರಣೆಗೆ ಬ್ರಿಟಿಷ್ ವಿರೋಧಿ ಕಾಲದಲ್ಲಿ ಬರೆದಿದ್ದ ೧೮೫೭ರ ಮೊದಲ ಸ್ವಾತಂತ್ರ್ಯ ಯುದ್ಧ ಎಂಬ ಪುಸ್ತಕವನ್ನು ಹಿಂದುತ್ವವಿರೋಧಿಗಳು ಕೂಡ ಕೆಲವೊಮ್ಮೆ ಒಪ್ಪಿಕೊಂಡು ಬಿಡುತ್ತಾರೆ. ಅದಕ್ಕೆ ಕಾರಣ ತನ್ನ ಬದುಕಿನಲ್ಲಿ ಮೊದಲ ಮತ್ತು ಕೊನೆಯ ಬಾರಿಗೆ ಹಿಂಧೂ-ಮುಸ್ಲಿಂ ಸೌಹಾರ್ದತೆಯನ್ನು ಸಾವರ್ಕರ್ ಬೆಂಬಲಿಸಿದ್ದ ಕಾಲವದು. ಬ್ರಿಟಿಷ್ ವಿರೋಧಿ ನೀತಿಯನ್ನೂ ಹಿಂದೂ-ಮುಸ್ಲಿಂ ಸೌಹಾರ್ದತೆಯನ್ನೂ ಅಪ್ಪಿಕೊಂಡಿದ್ದ ಕಾಲದಲ್ಲೂ ಸಾವರ್ಕರ್ ಅವರ ಸಿದ್ಧಾಂತ ಬ್ರಾಹ್ಮಣಿಸಂ ಮೂಲದ್ದೇ ಆಗಿತ್ತೆಂಬುದನ್ನು ಅರ್ಥ ಮಾಡಿಕೊಳ್ಳಲು ನಾವು ಹಿಂದಿನ ಅಧ್ಯಾಯಗಳಲ್ಲಿ ಚರ್ಚಿಸಿದೆವು. ೧೮೫೭ರ ಮೊದಲ ಸ್ವಾತಂತ್ರ್ಯ ಯುದ್ಧದ ಒಳಗೆ ಹೋಗಿ ನೋಡಿದರೆ ಬ್ರಾಹ್ಮಣಿಸಮ್ಮಿನ ಜಾತಿ ರಾಜಕಾರಣವನ್ನು ನಾವು ಸ್ಪಷ್ಟವಾಗಿ ಗಮನಿಸಬಹುದು. ಪವನ್ ಕುಲಕರ್ಣಿಯವರ ಲೇಖನ ಅದನ್ನು ಎತ್ತಿ ತೋರಿಸುತ್ತದೆ. ಇಲ್ಲಿ ಅನ್ಯರಾಗಿಸಿಕೊಂಡದ್ದು ಇಸ್ಲಾಂ ಧರ್ಮಕ್ಕೆ ಬದಲಾಗಿ ಕ್ರೈಸ್ತ ಧರ್ಮವನ್ನು ಎಂದು ಮಾತ್ರ.

ಉದಾಹರಣೆಗೆ, ಸಾವರ್ಕರ್ ಜಸ್ಟಿನ್ ಮಕಾರ್ತಿಯನ್ನು ಉಲ್ಲೇಖಿಸುತ್ತಾರೆ. ‘ಮುಹಮ್ಮದೀಯರು ಮತ್ತು ಹಿಂದೂಗಳು ಕ್ರೈಸ್ತರ ವಿರುದ್ಧ ತಮ್ಮ ಹಳೆಯ ಜಗಳವನ್ನು ಮರೆತು ಒಟ್ಟಾಗಿದ್ದಾರೆ.ʼ ಬ್ರಾಹ್ಮಣಿಸಮ್ಮಿನ ದೃಷ್ಟಿಕೋನದ ಮೂಲಕ ಬ್ರಿಟಿಷ್‌ ವಿರೋಧವನ್ನು ಗಟ್ಟಿಗೊಳಿಸಲೆಂದು ಬ್ರಿಟಿಷರು ವಿಗ್ರಹಾರಾಧನೆಯ ವಿರೋಧಿಗಳು ಎಂದು ಸಾವರ್ಕರ್‌ ಘೋಷಿಸುತ್ತಾರೆ. ʼಆಂಗ್ಲರು ವಿಗ್ರಹಾರಾಧನೆಯನ್ನು ಸತಿಯ ಹಾಗೆಯೇ ವಿರೋಧಿಸುತ್ತಾರೆ.ʼ ಹೆಣ್ಣುಮಕ್ಕಳ ಮದುವೆ ಪ್ರಾಯವನ್ನು ಹೆಚ್ಚಿಸಿದಾಗ ತಿಲಕ್‌ ಎತ್ತಿದ ವಿರೋಧ ಅವರಿಗೆ ಸಾಕಷ್ಟು ಜನಬೆಂಬಲವನ್ನು ಪಡೆಯಲು ಕಾರಣವಾಗಿತ್ತು ಎಂದು ನಾವು ನೋಡಿದೆವು. ಸತಿ ಪದ್ದತಿಯನ್ನು ನಿಷೇಧಿಸಿದ ಬ್ರಿಟಿಷ್‌ ನಿಯಮವು ತಪ್ಪು ಎಂದು ಸಾವರ್ಕರ್‌ ಈ ಮೇಲಿನ ಮಾತಿನಲ್ಲಿ ಹೇಳುತ್ತಿದ್ದಾರೆ.

ಅಂದರೆ ಸಾವರ್ಕರ್‌ ಬದುಕಿನಲ್ಲಿ ಒಂದು ಜಾತ್ಯಾತೀತ ಕಾಲವೆಂಬುದು ಇರಲೇ ಇಲ್ಲ. ರಾಜಕೀಯ ಬ್ರಾಹ್ಮಣಿಸಮ್ಮಿನ ದೃಷ್ಟಿಕೋನವೇ ಬ್ರಿಟಿಷ್‌ ವಿರೋಧದ ಕಾಲದಲ್ಲೂ ಮುಸ್ಲಿಂ ವಿರೋಧದ ಕಾಲದಲ್ಲೂ ಒಂದೇ ರೀತಿ ಸಾವರ್ಕರನ್ನು ನಿಯಂತ್ರಿಸುತ್ತಿದ್ದ ಪ್ರೇರಕ ಶಕ್ತಿಯೆಂದು ಇದರಿಂದ ನಾವು ಅರ್ಥೈಸಿಕೊಳ್ಳಬಹುದು.

ʼಹಿಂದೂಧರ್ಮ ಮತ್ತು ಇಸ್ಲಾಂ ಧರ್ಮದ ಅಡಿಪಾಯಗಳನ್ನು ಅಲುಗಾಡಿಸಲೆಂದು ಸರಕಾರವು ಒಂದರ ಹಿಂದೆ ಒಂದರಂತೆ ನಿಯಮಗಳನ್ನು ತರುತ್ತಲೇ ಇದೆ. ಹಿಂದೂಗಳ ಜಾತಿ ಪದ್ಧತಿಯನ್ನು ಕಡೆಗಣಿಸಿಕೊಂಡು ಈಗಾಗಲೇ ರೈಲು ಹಳಿಗಳನ್ನು ಸ್ಥಾಪಿಸಿಕೊಂಡು ರೈಲು ಬೋಗಿಗಳನ್ನು ಕೂಡ ನಿರ್ಮಿಸುತ್ತಿದೆ. ಸರಕಾರದ ದೊಡ್ಡ ಮಟ್ಟದ ಆರ್ಥಿಕ ಸಹಾಯದೊಂದಿಗೆ ದೊಡ್ಡ ದೊಡ್ಡ ಮಿಷನರಿ ಶಾಲೆಗಳು ತಲೆಯೆತ್ತುತ್ತಿವೆ. ಕಾನಿಂಗ್‌ ಪ್ರಭು ನೇರವಾಗಿ ಸಾವಿರಾರು ರೂಪಾಯಿಗಳನ್ನು ಮಿಷನರಿಗಳಿಗೆ ನೀಡುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಭಾರತವನ್ನು ಸಂಪೂರ್ಣ ಕ್ರೈಸ್ತ ದೇಶವಾಗಿ ಮತಾಂತರ ಮಾಡುವ ಯೋಜನೆಯು ಕಾನಿಂಗ್‌ ಪ್ರಭುವಿನ ಮನಸ್ಸಿನಲ್ಲಿ ಇದೆಯೆಂಬುದು ಸ್ಪಷ್ಟವಾಗುತ್ತದೆ.ʼ

ಸಾವರ್ಕರ್‌ ಅಭಿಪ್ರಾಯದಲ್ಲಿ ಬ್ರಿಟಿಷರಿಗೆ ಭಾರತವನ್ನು ಕ್ರೈಸ್ತ ದೇಶವಾಗಿ ಮತಾಂತರ ಮಾಡುವುದರ ವೇಗ ಹೆಚ್ಚಿಸಲು ಇದ್ದ ದೊಡ್ಡ ತಡೆಯಾಗಿ ಸಿಪಾಯಿಗಳನ್ನು ಕಂಡಿದ್ದರು ಎಂದು ಇಂತಹ ಉಲ್ಲೇಖಗಳನ್ನು ಬೊಟ್ಟು ಮಾಡಿ ಪವನ್‌ ಕುಲಕರ್ಣಿ ಹೇಳುತ್ತಾರೆ. ಅದಕ್ಕೆ ಉದಾಹರಣೆ ನೀಡಲು ಪುನಹ ಸಾವರ್ಕರ್‌ ಮಾತುಗಳನ್ನು ಉಲ್ಲೇಖಿಸುತ್ತಾರೆ.

ʼಸಿಪಾಯಿಗಳಲ್ಲಿ ಯಾರಾದರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಾರಾದರೆ, ಆತನನ್ನು ಗಟ್ಟಿ ದನಿಯಲ್ಲಿ ಹೊಗಳಲಾಗುತ್ತದೆ. ಅಭಿಮಾನದಿಂದ ಉಪರಿಚರಿಸಲಾಗುತ್ತದೆ. ಆ ಸಿಪಾಯಿ ಬಹಳ ಬೇಗನೆ ಪದೋನ್ನತಿ ಪಡೆದು, ಉಳಿದ ಸಿಪಾಯಿಗಳ ಅರ್ಹತೆಗಳನ್ನು ಗೇಲಿ ಮಾಡುವ ರೀತಿಯಲ್ಲಿ ಆತನ ಸಂಬಳವನ್ನು ಹೆಚ್ಚಿಸಲಾಗುತ್ತದೆ.ʼ

ಸಾವರ್ಕರ್‌ ಮತ್ತೂ ವಾದಿಸುತ್ತಾರೆ. ʼಎಲ್ಲ ಕಡೆಯೂ ಸರಕಾರವು ಭಾರತದ ಧರ್ಮಗಳನ್ನು ನಾಶಗೊಳಿಸಲು ಟೊಂಕ ಕಟ್ಟಿ ನಿಂತಿದೆಯೆಂದೂ ಭಾರತದ ಪ್ರಮುಖ ಧರ್ಮವಾಗಿ ಕ್ರೈಸ್ತ ಧರ್ಮವನ್ನು ಮುಂದಕ್ಕೆ ತರಲು ಹೊರಟಿದ್ದಾರೆಯೆಂದೂ ಸುದ್ದಿಗಳು ಹಬ್ಬಿದವು.ʼ ಅಷ್ಟೇ ಅಲ್ಲ, ೧೮೫೭ರ ಸಂಗ್ರಾಮದಲ್ಲಿ ʼಒಂದು ಕ್ರೈಸ್ತ ಇಗರ್ಜಿ ಉರುಳುವಾಗ, ಒಂದು ಶಿಲುಬೆ ಮುರಿದು ಬೀಳುವಾಗ, ಒಬ್ಬೊಬ್ಬ ಕ್ರೈಸ್ತನೂ ಸತ್ತು ಬೀಳುವ ಪ್ರತಿಯೊಂದು ಸಂದರ್ಭದಲ್ಲೂʼ ಸಿಪಾಯಿಗಳು ಉನ್ಮತ್ತರಾಗಿದ್ದರು ಎಂದು ಸಾವರ್ಕರ್‌ ಬರೆಯುತ್ತಾರೆ.

ಅಂದರೆ, ಜಾತ್ಯಾತೀತ ವ್ಯಕ್ತಿಗಳು ಕೂಡ ಕೆಲವೊಮ್ಮೆ ಒಪ್ಪಬಹುದೆಂಬ ನಿಲುವಿಗೆ ಬಂದಿದ್ದ ೧೮೫೭ರ ಸ್ವಾತಂತ್ರ್ಯ ಯುದ್ಧ ಎಂಬ ಆರಂಭ ಕಾಲದ ಪುಸ್ತಕವೂ ಬರೆಲಯ್ಪಟ್ಟಿರುವುದು ಸಾಮ್ರಾಜ್ಯಶಾಹಿ ವಿರೋಧದ ಆಧಾರದಲ್ಲಿ ಅಲ್ಲ, ಬದಲಿಗೆ ಕ್ರೈಸ್ತ ಧರ್ಮ ವಿರೋಧದ ಅಡಿಪಾಯದಲ್ಲಿ. ಇದನ್ನು ಸಂಪೂರ್ಣವಾಗಿ ಸುಳ್ಳುಸುಳ್ಳೇ ಇತಿಹಾಸವೆಂದು ಒತ್ತಿ ಹೇಳಬೇಕಾದ ಅಗತ್ಯ ಇಲ್ಲವಲ್ಲ. ಲ್ಯಾಟಿನ್ ಅಮೇರಿಕಾ ಮತ್ತು ಇತರ ಕಡೆಗಳಲ್ಲಿ ನಡೆದ ಸ್ಪಾನಿಷ್‌ ವಸಾಹತುಶಾಹಿಯ ರೀತಿಯಲ್ಲಿ ಭಾರತದಲ್ಲಿ ಬ್ರಿಟಿಷರು ಸಂಪೂರ್ಣ  ಕ್ರೈಸ್ತ ಮತವನ್ನು ತರುವ ಯೋಜನೆ ನಡೆಸಿರಲಿಲ್ಲವೆಂದು ಮಾತ್ರವಲ್ಲ, ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದ ಕ್ರೈಸ್ತ ಧರ್ಮೀಯರು ಆ ಕಾಲದಲ್ಲೂ ಅದರ ನಂತರವೂ ಆ ಹಂತದಿಂದ ಮೇಲಕ್ಕೆ ಬರಲೂ ಇಲ್ಲ.  ಇದೇ ಬ್ರಾಹ್ಮಣ ರಾಜಕಾರಣದ ಹಾದಿಯಲ್ಲಿ ಸಾವರ್ಕರ್ ಮುಂದುವರಿಯುತ್ತಾರೆ.  ಬ್ರಿಟಿಷರಿಗೆ ಅನುಕೂಲಕರವಾಗಿ ಬದಲಾದ ಕಾಲದಲ್ಲಿ ಕ್ರೈಸ್ತರ ಬದಲಿಗೆ ಅನ್ಯರ ಜಾಗದಲ್ಲಿ ಮುಸ್ಲಿಮರನ್ನು ತಂದು ನಿಲ್ಲಿಸಿದ್ದರು ಎಂದು ಮಾತ್ರ.  ಇದರ ಇನ್ನೊಂದು ಮುಖವು ಹಿಂದೂ ಧರ್ಮದ ಸೈನಿಕ ರೂಪಾಂತರ ಎಂಬುದಾಗಿತ್ತು.  ಸಾವರ್ಕರ್ ಅವರ ಎಲ್ಲಾ ಜಾತಿ ವಿರೋಧಿ ಯೋಜನೆಗಳು ಇದರಲ್ಲಿ ಅಡಕವಾಗಿತ್ತು. ಜನಾಂಗೀಯ ಕಲ್ಪನೆಯನ್ನು ಸಂಸ್ಕೃತಿಗೆ ಜೋಡಿಸುವ ಅತ್ಯಂತ ಕ್ರೂರವಾದ ಉದಾಹರಣೆಯನ್ನು ಕಾಣಬೇಕಾದರೆ ಸಾವರ್ಕರ್ ಕೊನೆಕಾಲದಲ್ಲಿ ಬರೆದ ಭಾರತೀಯ ಇತಿಹಾಸದ ಆರು ಸಯವರ್ಣ ಯುಗಗಳು (Six Glorious Epochs of Indian History) ಎಂಬ ಪುಸ್ತಕವನ್ನು ನೋಡಬೇಕಾಗುತ್ತದೆ. ೨೦೧೬ ಮೇ ೨೬ರಂದು ಸ್ಕ್ರೋಲ್‌ ಇನ್‌ ನಲ್ಲಿ ಅಜಾಸ್ ಅಶ್ರಫ್‌ ಬರೆದ ಲೇಖನದಲ್ಲಿ ಅದನ್ನು ಬೊಟ್ಟು ಮಾಡಿ ತೋರಿಸುತ್ತಾರೆ. ಹಿಂದುತ್ವ ಎಂಬ ಸಿದ್ದಾಂತದಲ್ಲೂ ಹಿಂದೂ ಜನಾಂಗೀಯ ರಾಜಕಾರಣದಲ್ಲೂ ಅತ್ಯಂತ ಶಕ್ತಿಶಾಲಿಯಾಗಿ ಬೇರೂರಿರುವ ಗಂಡಸ್ತನದ ಚರಿತ್ರೆಯನ್ನು ಆ ಪುಸ್ತಕವು ಎತ್ತಿ ಕೊಂಡಾಡುತ್ತದೆ. ಹಿಂದುತ್ವದ ಆಧುನಿಕ ವಿರೋಧಿ ಮುಖವನ್ನು ಯಾವ ಮುಚ್ಚುಮರೆಯಿಲ್ಲದೆ ಅದು ತೋರಿಸುತ್ತದೆ.  ಸಾವರ್ಕರ್ ಅವರ ಉಳಿದ ಇತಿಹಾಸ ಪುಸ್ತಕಗಳ ಹಾಗೆ ಇದೂ ಕೂಡ ʼಐತಿಹಾಸಿಕ ದಾಖಲೆಗಳುʼ ಎಂದು ಕರೆಯುವ ಸಂಗತಿಯೇ ಆಗಿದೆ. ಅಂತಹ ಐತಿಹಾಸಿಕ ದಾಖಲೆಗಳನ್ನು ಬಳಸಿಕೊಂಡು ಈ ಪುಸ್ತಕದಲ್ಲಿ ಬರೆಯುವುದೇನೆಂದರೆ:
ʼಪಶುಸಂಗೋಪನೆಯಲ್ಲಿ ಹೋರಿಗಳ ಸಂಖ್ಯೆಯು ಹಸುಗಳ ಸಂಖ್ಯೆಗಿಂತ ಹೆಚ್ಚಾಗಿದ್ದರೆ ಅಲ್ಲಿ ಜಾನುವಾರುಗಳ ಸಂಖ್ಯೆಯು ವೇಗವಾಗಿ ಬೆಳೆಯುವುದಿಲ್ಲ.  ಅದೇ ಹೊತ್ತು ಹೋರಿಗಳಿಗಿಂತ ಹಸುಗಳ ಸಂಖ್ಯೆ ಹೆಚ್ಚಿದ್ದರೆ ಅದು ಬಹಳ ಬೇಗನೆ ಬೆಳೆಯುತ್ತದೆ.ʼ

ಹೀಗೆ ಲೆಕ್ಕಗಳನ್ನು ಹೇಳುತ್ತಿರುವುದು, ಅತ್ಯಾಚಾರದಂತಹ ಆಧುನಿಕ ಲೋಕದ ಅಪರಾಧಗಳನ್ನು ಹಿಂದುತ್ವಕ್ಕೆ ಹೊಂದಿಸಿಕೊಂಡು ರಾಜಕೀಯ ಸಿದ್ಧಾಂತವಾಗಿ ಮುಂದಿಡಲು ಎಂಬುದು ನಮ್ಮನ್ನು ಆಶ್ಚರ್ಯಗೊಳಿಸುವ ಸಂಗತಿ. ಅದಕ್ಕೆ ಮುನ್ನುಡಿಯೆಂಬಂತೆ ಇನ್ನೊಂದು ʼಐತಿಹಾಸಿಕ ವಾಸ್ತವʼವನ್ನು ಸಾವರ್ಕರ್‌ ಮುಂದಿಡುತ್ತಾರೆ. ಆಫ್ರಿಕಾದ ಆದಿವಾಸಿ ಗೋತ್ರಗಳು ಅವರ ಶತ್ರುಗೋತ್ರದ ಗಂಡಸರನ್ನು ಮಾತ್ರ ಕೊಲ್ಲುತ್ತಾರೆ. ಯಾವ ಕಾರಣಕ್ಕೂ ಹೆಂಗಸರನ್ನು ಕೊಲ್ಲುವುದಿಲ್ಲ. ಗೆದ್ದವರ ನಡುವೆ ಆ ಮಹಿಳೆಯರನ್ನು ಪಾಲು ಮಾಡಲಾಗುತ್ತದೆ. ಯಾಕೆಂದರೆ, ಅವರ ಯೋಜನೆ ಸೋಲಿಸಲ್ಪಟ್ಟ ಮಹಿಳೆಯರ ಗರ್ಭದಲ್ಲಿ ತಮ್ಮ ಸಂತತಿಗಳನ್ನು ಹುಟ್ಟಿಸಿ ತಮ್ಮ ಜನಸಂಖ್ಯೆಯನ್ನು ವೃದ್ಧಿಸಬಹುದು ಎಂಬುದು. ಅದೇ ರೀತಿ ಭಾರತದ ಒಂದು ನಾಗಗೋತ್ರದ ಜನರು ತಾವು ಸೋಲಿಸಿದ ಗೋತ್ರದ ಹೆಣ್ಣುಗಳನ್ನು ಸಂಪೂರ್ಣವಾಗಿ ಕೊಂದು ನಾಶ ಮಾಡುತ್ತಾರೆ. ಯಾಕೆಂದರೆ ಹೆಂಗಸರ ಕೊರತೆಯಿಂದಾಗಿ ಆ ಗೋತ್ರದ ಜನಸಂಖ್ಯೆಯು ಬೆಳೆಯುವುದಿಲ್ಲ ಎಂದು ಅವರು ಭಾವಿಸುತ್ತಾರೆ.

ಇಂತಹ ಅನುಮಾನಾಸ್ಪದ ಐತಿಹಾಸಿಕ ವಾಸ್ತವಗಳ ಜೊತೆಗೆ, ಹಿಂದುತ್ವ ಮತ್ತು ಇತರ ಸಂದರ್ಭಗಳಲ್ಲಿ ನಾವು ಗಮನಿಸಿದ ಹಾಗೆ ಪೌರಾಣಿಕ ಕಥಾಪಾತ್ರಗಳನ್ನು ಐತಿಹಾಸಿಕ ಕಥಾಪಾತ್ರಗಳಾಗಿ ಇಲ್ಲೂ ನಿರೂಪಿಸುತ್ತಾರೆ. ಉದಾಹರಣೆಗೆ, ರಾವಣ ಇದ್ದಕ್ಕಿದ್ದಂತೆ ಇಲ್ಲಿ ಪ್ರತ್ಯಕ್ಷನಾಗುತ್ತಾನೆ. ಸೀತೆಯನ್ನು ಅಪಹರಿಸಿಕೊಂಡು ಹೋದ ರಾವಣನೊಂದಿಗೆ ಆತನ ಗೆಳೆಯರು ತಕರಾರು ಎತ್ತಿದಾಗ ಈ ರೀತಿ ಉತ್ತರಿಸುತ್ತಾನೆಂದು ಸಾವರ್ಕರ್‌ ಹೇಳುತ್ತಾರೆ. ʼಏನು? ವಿರೋಧಿ ಬಣದ ಮಹಿಳೆಯರನ್ನು ಅಪಹರಿಸುವುದು ಮತ್ತು ಅವರನ್ನು ಅತ್ಯಾಚಾರ ಮಾಡುವುದು ನೀವು ಧರ್ಮಬಾಹಿರವೆಂದು ಹೇಳುತ್ತಿದ್ದೀರೇನು? ಇದುವೇ ಪರಮಧರ್ಮ. ಪರಮೋನ್ನತ ಧರ್ಮ.ʼ

ನಾವು ಓದಿಕೊಂಡಿರುವ ಎಲ್ಲ ರಾಮಾಯಣಗಳಲ್ಲೂ ಸೀತೆಯ ಅನುಮತಿಯಿಲ್ಲದೆ ಆಕೆಯನ್ನು ಮುಟ್ಟಲು ಹಿಂದೇಟು ಹಾಕುವ ರಾವಣನನ್ನು ನಾವು ಕಾಣುತ್ತೇವೆ. ಆ ವಿಷಯ ಬಿಡಿ. ಒಂದು ಗೋತ್ರಕಾಲದ ನೇರ ಮುಂದುವರಿಕೆಯಾಗಿ ಆಧುನಿಕ ಕಾಲವನ್ನು ಸಾವರ್ಕರ್‌ ಪರಿಗಣಿಸುತ್ತಾರೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಗಂಡು ಹೆಣ್ಣು ʼಬೆರೆತು ಹುಟ್ಟುವʼ ಮಗುವನ್ನು ಯಾವ ಗೋತ್ರಕ್ಕೆ ಸೇರಿಸುವುದು? ಗಂಡಿನ ಗೋತ್ರದಲ್ಲೋ ಅಥವಾ ಹೆಣ್ಣಿನ ಗೋತ್ರದಲ್ಲೋ? ಸಾವರ್ಕರ್‌ ಅವರ ಹಿಂದುತ್ವ ಜನಾಂಗೀಯತೆ ಗಂಡಿನ ಮೇಲಾಧಿಕಾರದ ಮೇಲೆ ಕಟ್ಟಿಕೊಂಡ ಸಂಗತಿಯಾಗಿದೆ. ಇದನ್ನು ನಮಗೆ ಸಂಶಯಾತೀತವಾಗಿ ತೋರಿಸಿಕೊಡುವ ವಾದಗಳನ್ನು ಸಾವರ್ಕರ್‌ ಮುದಿಡುತ್ತಿರುವುದು.

ಅದಕ್ಕಿಂತಲೂ ವಿಚಿತ್ರವಾದದ್ದು ಸಾವರ್ಕರ್‌ ಅವರ ಅತ್ಯಾಚಾರದ ಕುರಿತು ವಾದಗಳು. ಕಲ್ಯಾಣಲ್ಲಿ ಶಿವಾಜಿ ಬಂಧಿಸಿದ ಮಹಿಳೆಯನ್ನು ಕಲ್ಯಾಣದ ರಾಜನಿಗೆ ಮರಳಿ ಒಪ್ಪಿಸಿದರು ಎಂಬ ಘಟನೆಯನ್ನು ಮುದಿಟ್ಟುಕೊಂಡು ಸಾವರ್ಕರ್‌ ಈ ಚರ್ಚೆಯನ್ನು ಆರಂಭಿಸುತ್ತಾರೆ. ಮುಸ್ಲಿಮರು ಭಾರತದ ಮಹಿಳೆಯರನ್ನು ಯಾವ ಮುಲಾಜೂ ಇಲ್ಲದೆ ಅತ್ಯಾಚಾರ ಎಸಗಲು ಧಾರ್ಮಿಕ ಕಾರಣಗಳು ಇದ್ದವು ಎಂದೂ ಅಂತಹ ಧಾರ್ಮಿಕ ಕಾರಣಗಳನ್ನು ಸಾಧಿಸಲು ಹಿಂದೂಗಳಿಗೆ ಸಂದರ್ಭ ಒದಗಿ ಬಂದಾಗ ಅವರು ಅದನ್ನು ಬಳಸಿಕೊಳ್ಳಲಿವೆಂದೂ ಸಾವರ್ಕರ್‌ ವಾದಿಸುತ್ತಾರೆ.

ಮೇಲೆ ಹೇಳಿದ ರಾವಣನ ಸಿದ್ಧಾಂತವನ್ನು, ಧಾರ್ಮಿಕ ಭಯೋತ್ಪಾದನೆಯನ್ನು, ಮುಸ್ಲಿಮರಲ್ಲಿ ಸುಲ್ತಾನನಿಂದ ಹಿಡಿದು ಸೈನಿಕರ ತನಕ ಹೊತ್ತುಕೊಂಡಿದ್ದರೆಂದು ಸಾವರ್ಕರ್‌ ವಾದಿಸುತ್ತಾರೆ. ಅವರು ರಾಜಕುಟುಂಬದ ಮತ್ತು ಉನ್ನತ ಕುಲದ ವಿವಾಹಿತ ಮಹಿಳೆಯರನ್ನೂ ಸೇರಿಸಿ ಹಲವಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದರೆಂದೂ ಆ ಮೂಲಕ ತಮ್ಮ ಧರ್ಮದ ಅನುಯಾಯಿಗಳ ಸಂಖ್ಯೆಯನ್ನು ವೃದ್ದಿಸಿಕೊಂಡರೆಂದೂ ಈ ಮೊದಲೇ ಹೇಳಿದ ಹಾಗೆ ಅನುಮಾನಾಸ್ಪದ ಇತಿಹಾಸವನ್ನು ಮುಂದಿಟ್ಟುಕೊಂಡು ಸಾವರ್ಕರ್‌ ಮಾತನಾಡುತ್ತಾರೆ. ಬೇಗಂ ಆದರೂ ಭಿಕ್ಷುಕಿಯಾದರೂ ಎಲ್ಲ ಮುಸ್ಲಿಂ ಮಹಿಳೆಯರು ತಮ್ಮ ಗಂಡಸರುಗಳು ನಡೆಸುತ್ತಿದ್ದ ಇಂತಹ ಕ್ರೌರ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು ಮತ್ತು ಅದರಲ್ಲಿ ಅಭಿಮಾನ ಹೊಂದಿದ್ದರು ಎಂದು ಸಾವರ್ಕರ್‌ ಅಭಿಪ್ರಾಯ ಪಡುತ್ತಾರೆ. ಜೊತೆಗೆ ಮುಸ್ಲಿಂ ಮಹಿಳೆಯರು ತಮ್ಮ ನೆರೆಹೊರೆಯ ಹಿಂದೂ ಮಹಿಳೆಯರನ್ನು ಬಂಧಿಸಿ ಪಕ್ಕದ ಮಸೀದಿಗಳಿಗೆ ಸಾಗಿಸುತ್ತಿದ್ದರು ಎಂದು ಕೂಡ ಸಾವರ್ಕರ್‌ ಬರೆಯುತ್ತಾರೆ.

ʼಮುಸ್ಲಿಂ ಗಂಡಸರು ಮಾತ್ರವೇ ಇಂತಹ ಕೆಲಸಗಳಿಗೆ ತಿರುಗೇಟು ತಿಂದು ಅವಮಾನಗೊಂಡಿರುವುದು. ಮುಸ್ಲಿಂ ಮಹಿಳೆಯರು ಒಮ್ಮೆಯೂ ಇದನ್ನು ಅನುಭವಿಸಿಲ್ಲ.ʼ

ಈ ಅತಿಕ್ರೂರ ಐತಿಹಾಸಿಕ ದರ್ಶನ ನಡೆಸಿದ ನಂತರ ಸಾವರ್ಕರ್‌ ಮತ್ತೆ ಮುಂದುವರಿಸುತ್ತಾರೆ. ʼಶಿವಾಜಿ ಮಹಾರಾಜ ಆಗಲಿ ಅಥವಾ ಚಿಮಾಜಿ ಅಪ್ಪಾ ಅವರೇ ಆಗಲಿ, ಮುಹಮ್ಮದ್ ಘಜ್ನಿ, ಮುಹಮ್ಮದ್‌ ಘೋರಿ ಮತ್ತು ಅಲಾವುದ್ದೀನ್‌ ಖಿಲ್ಜಿ ನಡೆಸಿದ ಅಕ್ರಮಗಳನ್ನೂ ಅತ್ಯಾಚಾರಗಳನ್ನೂ ಒಮ್ಮೆಯಾದರೂ ನೆನಪಿಸಿಕೊಂಡರೆ?ʼ

ʼಬಹುಷ ಲಕ್ಷಗಟ್ಟಲೆ ಬರುವ ಅಂತಹ (ಹಿಂದೂ) ಮಹಿಳೆಯರ ಆತ್ಮಗಳು ಹೇಳಿರಬಹುದು, ಛತ್ರಪತಿ ಶಿವಾಜಿ ಮಹಾರಾಜ, ಪ್ರೀತಿಯ ಚಿಮಾಜಿ ಅಪ್ಪಾ, ಸುಲ್ತಾನರು ಮತ್ತು ಮೌಲವಿಗಳು ನಮ್ಮ ಮೇಲೆ ನಡೆಸಿದ, ಮಾತಿನಲ್ಲಿ ವಿವರಿಸಲಾಗದ, ಚಿಕ್ಕದೂ ದೊಡ್ಡದೂ ಆದ ಅಕ್ರಮಗಳನ್ನೂ ಅನೀತಿಗಳನ್ನೂ ದ್ವೇಷವನ್ನೂ ಮರೆಯಬೇಡಿರಿ. ಒಂದೊಮ್ಮೆ ಹಿಂದೂ ದಿಗ್ವಿಜಯ ನಡೆಯುವುದೇ ಆದರೆ, ಹಿಂದೂ ರಾಜರುಗಳು ಮತ್ತು ಅವರ ಸೈನಿಕರು ನಮ್ಮ ಮೇಲಿನ ಅತ್ಯಾಚಾರಕ್ಕೆ ಮುಸ್ಲಿಂ ಮಹಿಳೆಯರ ಮೇಲೆ ಪ್ರತೀಕಾರ ತೀರಿಸಲಿ. ಒಂದು ಬಾರಿ ಮುಸ್ಲಿಂ ಹೆಣ್ಣುಗಳಿಗೂ ಇಂತಹ ಅಸಹ್ಯಕರ ಅಪಮಾನ ಕಾಡತೊಡಗಿದರೆ, ಭವಿಷ್ಯದಲ್ಲಿ ಇನ್ನೊಮ್ಮೆ ಮುಸ್ಲಿಂ ದಾಳಿಕೋರರು ಹಿಂದೂ ಮಹಿಳೆಯರ ಮೇಲೆ ಇಂತಹ ಅತ್ಯಾಚಾರ ಮಾಡುವ ಕುರಿತು ಯೋಚಿಸಲೂ ಮುಂದಾಗಲಾರರು.ʼ

ಶಿವಾಜಿ ಮತ್ತು ಚಿಮಾಜಿ ಅಪ್ಪಾ ಕಲ್ಯಾಣದಲ್ಲಿ ತೋರಿಸಿದ ಹೇಡಿತನ ಆತ್ಮಘಾತುಕತನದ್ದು. ಸಾವರ್ಕರ್‌ ಅಭಿಪ್ರಾಯಪಡುತ್ತಾರೆ. ಯಾಕೆಂದರೆ ʼಅದು ಹಿಂದೂ ಮಹಿಳೆಯರ ಮೇಲೆ ನಡೆದ ವಿವರಿಸಲಾಗದಂತಹ ಘೋರ ಅಪರಾಧಗಳಿಗೆ ಪ್ರತಿಕಾರವಾಗಿ ಮುಸ್ಲಿಂ ಮಹಿಳೆಯರಿಗೆ ಲಭಿಸಬೇಕಾಗಿದ್ದ ಶಿಕ್ಷೆಯಿಂದ ಅವರನ್ನು ಪಾರು ಮಾಡಿತ್ತುʼ

ಆದ್ದರಿಂದ ಶಿವಾಜಿ ಮಹಾರಾಜ ಕಲ್ಯಾಣದ ಆ ಮುಸ್ಲಿಂ ಮಹಿಳೆಯನ್ನು ತನ್ನ ಸೈನಿಕನೊಬ್ಬನಿಗೆ ಅತ್ಯಾಚಾರವೆಸಗಲು ಬಿಟ್ಟು ಕೊಡಬೇಕಾಗಿತ್ತು ಎಂದು ಅಭಿಪ್ರಾಯ ಪಟ್ಟುಕೊಂಡು ಸಾವರ್ಕರ್‌ ತನ್ನ ಅತ್ಯಾಚಾರದ ವಿಶ್ಲೇಷಣೆಯನ್ನು ಮುಗಿಸುತ್ತಾರೆ.

ಭಾರತದ ಸಂವಿಧಾನ ಮತ್ತು ಇಂಡಿಯನ್‌ ರಿಪಬ್ಲಿಕ್‌ ಪ್ರಾಬಲ್ಯಕ್ಕೆ ಬಂದು ಸುಮಾರು ಒಂದು ದಶಕ ಕಳೆದ ಮೇಲೆಯೂ ಸಾವರ್ಕರ್‌ ಇಂತಹದ್ದೊಂದು ಭಾಷೆಯಲ್ಲಿ ಆಲೋಚಿಸುತ್ತಿದ್ದಾರೆ ಮತ್ತು ಮಾತನಾಡುತ್ತಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬೇಕು. ರಾಜಾಡಳಿತ ಮುಗಿಯಿತು. ಪ್ರಜಾಸತ್ತಾತ್ಮಕ ಮೌಲ್ಯಗಳ ಒಂದು ಸೈದ್ಧಾಂತಿಕ ಲೋಕವೂ ಆಡಳಿತ ವ್ಯವಸ್ಥೆಯೂ ಅಸ್ತಿತ್ವಕ್ಕೆ ಬಂದಿತು. ಗಂಡು ಹೆಣ್ಣುಗಳು ಕಾನೂನಿನ ಪುಸ್ತಕದಲ್ಲಾದರೂ ಸಮಾನರಾದರು. ಅತ್ಯಾಚಾರ ಅತ್ಯಂತ ಹೇಯ ಅಪರಾಧವಾಯಿತು. ಇಂತಹ ಹೊತ್ತಿನಲ್ಲೂ ಹಿಂದುತ್ವದ ಪಿತಾಮಹನೂ ʼತತ್ವಜ್ಞಾನಿಯೂʼ ʼಸ್ವಾತಂತ್ರ್ಯವೀರನೂʼ ಆದ ವ್ಯಕ್ತಿಯೊಬ್ಬ ಇಲ್ಲದ ಭೂತವನ್ನು ದೊಡ್ಡದಾಗಿ ಚಿತ್ರಿಸಿಕೊಂಡು ತನ್ನ ಪ್ರಾಕೃತವಾದ ಬರಹಗಳ ಮೂಲಕ ದ್ವೇಷ ಕಾರುತ್ತಿರುವುದು. ವಿಷದ ಹಾವಿನ ಲಿಂಗವನ್ನು ಯಾರೂ ಹುಡುಕದ ಹಾಗೆ, ʼಎದುರಾಳಿ ಗೋತ್ರʼಗಳ ಗಂಡು ಹೆಣ್ಣುಗಳನ್ನು ಒಟ್ಟಿಗೆ ಆಕ್ರಮಿಸಿಕೊಂಡು ನಾಶಪಡಿಸಲು ಆಹ್ವಾನ ನೀಡುತ್ತಿರುವುದು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page