Friday, June 14, 2024

ಸತ್ಯ | ನ್ಯಾಯ |ಧರ್ಮ

ಹಿಂದುತ್ವ ರಾಜಕಾರಣದ ಕಥೆ – 5 : ಆಧುನಿಕ ಬ್ರಾಹ್ಮಣಿಸಂ: ತಿಲಕ್‌ ಮಸಾಲೆಗಳು

ಈ ಕಥಾಹಂದರಕ್ಕೆ ಸಮಕಾಲೀನ ರಾಜಕೀಯವನ್ನು ಬೆರೆಸುವಾಗ ವೈಸ್‌ರಾಯ್‌ ಲಾರ್ಡ್‌ ಕರ್ಜನ್‌ ಕೀಚಕನಾಗುತ್ತಾನೆ. ದ್ರೌಪದಿಯಾಗಿ ಬ್ರಿಟಿಷ್‌ ಆಡಳಿತದಲ್ಲಿ ಅತ್ಯಾಚಾರಗೊಳ್ಳುತ್ತಿರುವ ಭಾರತದ ಆತ್ಮ ಕಾಣಿಸಿಕೊಳ್ಳುತ್ತದೆ. ಏನನ್ನೂ ಮಾಡಲು ಶಕ್ತನಾಗದ ಯುಧಿಷ್ಠಿರನಾಗಿ ಅಗರ್ಕರ್‌ ಮತ್ತು ಗೋಖಲೆಯವರಂತಹ ಸುಧಾರಣಾವಾದಿಗಳು ಕಾಣಿಸಿಕೊಳ್ಳುತ್ತಾರೆ. ಕೀಚಕನನ್ನು ಕೊಲ್ಲುವ ಭೀಮನಾಗಿ ತಿಲಕರಂತಹ ತೀವ್ರವಾದಿ ಬ್ರಾಹ್ಮಣರನ್ನು ಚಿತ್ರಿಸಲಾಗುತ್ತದೆ.

ಇಲ್ಲಿಯವರೆಗೆ : ಬಾಲಗಂಗಾಧರ್‌ ತಿಲಕ್‌ ಮತ್ತು ರಾಜಕೀಯ ಬ್ರಾಹ್ಮನಿಸಮ್ಮಿನ ಬೆಳವಣಿಗೆ

ಗಣೇಶೋತ್ಸವ ಮತ್ತು ಶಿವಾಜಿ ಉತ್ಸವಗಳ ಮೂಲಕ ಧಾರ್ಮಿಕವೂ ಚಾರಿತ್ರಿಕವೂ ಆದ ಸ್ಮೃತಿಗಳ ಸುತ್ತ ಜನರ ಗುಂಪೊಂದನ್ನು ತಿಲಕ್ ತಯಾರು ಮಾಡಿದ್ದರು. ತಿಲಕರ ಬೆಳವಣಿಗೆಯ ಕುರಿತು ಆ ಕಾಲದ ಬ್ರಾಹ್ಮಣ ಸಮುದಾಯದವರೇ ಆದ ಒಬ್ಬರು ಹೀಗೆ ಹೇಳಿದ್ದರೆಂದು ವ್ಯಾಲೆಂಟೈನ್‌ ಚಿರೋಲ್‌ ದಾಖಲಿಸುತ್ತಾನೆ:

ʼಪುಣೆಯಲ್ಲಿ ರಾಣಡೆಯ ವಿರುದ್ಧ ತಿಲಕ್‌ ಆಯೋಜಿಸಿದ ದಾಳಿ, ಕಡು ಸಂಪ್ರದಾಯವಾದಿಗಳೊಂದಿಗಿನ ಅವರ ಒಗ್ಗಟ್ಟು, ಮೂಢನಂಬಿಕೆಯನ್ನು ಹರಡುವ ಹೊಸ ಗಣೇಶೋತ್ಸವ, ಜನಾಂಗೀಯ ದ್ವೇಷ ಹರಡುವ ಗೋಹತ್ಯಾ ವಿರೋಧಿ ಸಂಘಟನೆಗಳೊಂದಿಗಿನ ಸಖ್ಯ, ಮರಾಠ ಭಾವನೆಯನ್ನು ಬಡಿದೆಬ್ಬಿಸಲೆಂದೇ ಆಯೋಜಿಸಿದ ಶಿವಾಜಿ ಉತ್ಸವ, ಶಾಲಾ ಕಾಲೇಜು ವಿದ್ಯಾರ್ಥಿಗಳ ನಡುವೆ ಅವರಿಗೆ ಸಿಗುತ್ತಿರುವ ವ್ಯಾಪಕವಾದ ಪ್ರಚಾರ, ಅವರು ಸ್ಥಾಪಿಸಿದ ಜಿಮ್ನಾಸ್ಟಿಕ್‌ ಸಂಘಗಳು, ದೈಹಿಕ ತಾಲೀಮನ್ನು ಪ್ರೋತ್ಸಾಹಿಸುವ ಅವರ ಭಾಷಣಗಳು, ಕೊನೆಯದಾಗಿ ಮಾಧ್ಯಮಗಳ ಮೇಲೆ ಇರುವ ಹಿಡಿತ, ಪತ್ರಿಕೆಗಳಲ್ಲಿ ನಡೆಯುವ ಚರ್ಚೆಗಳ ಮೂಲಕ ನಡೆಸುವ ವೈಯಕ್ತಿಕ ತೇಜೋವಧೆಗಳು ಮೊದಲಾದವೆಲ್ಲ ಭಾರತದ ಅಶಾಂತಿಯ ವಕ್ತಾರರಿಗೆ ಮಾದರಿಯಾಗಿಸಬಹುದಾದ ಸುಸಂಘಟಿತವಾದ ದೊಡ್ಡದೊಂದು ಪ್ರಚಾರ ಕಾರ್ಯದ ಮೆಟ್ಟಿಲುಗಳಾಗಿವೆ.ʼ

ವ್ಯಾಲೆಂಟೈನ್‌ ಚಿರೋಲ್‌ ಸಾಮ್ರಾಜ್ಯಶಾಹಿ ಪರವಾಗಿದ್ದ ಬ್ರಿಟಿಷ್‌ ಪತ್ರಕರ್ತನಾಗಿದ್ದರಿಂದ ವಸಾಹತುಶಾಹಿ ದೃಷ್ಟಿಕೋನದ ಎಲ್ಲ ಆಯಾಮಗಳು ಆತನ ಬರಹಗಳಲ್ಲಿ ಗೋಚರಿಸುತ್ತವೆಯಾದರೂ, ತಿಲಕ್‌ ಬ್ರಿಟಿಷ್‌ ವಿರೋಧಿ ಹೋರಾಟಕ್ಕೆ ಬ್ರಾಹ್ಮಣ ಆಯಾಮವನ್ನು ಹೇಗೆ ನೀಡಿದ್ದರು ಎಂಬುದನ್ನು ಆತನ ಬರಹಗಳಿಂದ ಸ್ಪಷ್ಟವಾಗಿ ಗುರುತಿಸಬಹುದು. ಇದು ಮಹಾರಾಷ್ಟ್ರದಾಚೆ ಇದ್ದ, ವೇದಗಳಿಗೆ ಮರಳಿರಿ ಎಂಬ ದಯಾನಂದ ಸರಸ್ವತಿಯವರ ಬ್ರಾಹ್ಮಣಿಸಂ ಆಗಿರಲಿಲ್ಲ. ಗೋರಕ್ಷಣೆಯಂತಾ ಭಾವನಾತ್ಮಕ ಸಂಗತಿಗಳ ಮೇಲೆ ಮಾತ್ರ ನೆಲೆ ನಿಂತಿದ್ದೂ ಆಗಿರಲಿಲ್ಲ. ಇದು ಬ್ರಾಹ್ಮಣ ಮಿಥ್‌ಗಳನ್ನೂ ಮುದ್ರಣ ಮಾಧ್ಯಮದಂತ ಆಧುನಿಕತೆಯನ್ನೂ ಒಟ್ಟಿಗೆ ಆಶ್ರಯಿಸಿಕೊಂಡಿತ್ತು. ದೈಹಿಕವಾಗಿಯೂ ಬೌದ್ಧಿಕವಾಗಿಯೂ ಪ್ರೋತ್ಸಾಹಿಸಿತ್ತು. ಎಲ್ಲದಕ್ಕೂ ಗುರಿ ಮಾತ್ರ ಒಂದೇ; ಭಾರತ ಸ್ವಾತಂತ್ರ್ಯ ಹೋರಾಟದ ಅತ್ಯುಚ್ಛ ಮಾದರಿಯಾಗಿ ಬ್ರಾಹ್ಮಣಿಸಮ್ಮನ್ನು ಪರಿವರ್ತಿಸುವುದು. ಯುದ್ಧ ಸನ್ನಾಹದಲ್ಲಿರುವ ಒಂದು ಗಂಡು ಮಾದರಿ. ಆದರೆ, ಚಿತ್ಪಾವನ ವಂಶದಾಚೆ ಕಲಬೆರಕೆಯಿಲ್ಲದ ಬ್ರಾಹ್ಮಣಿಸಮ್ಮನ್ನು ವ್ಯಾಪಿಸುವುದು ಕೂಡ ಅತ್ಯಗತ್ಯವಾಗಿತ್ತು. ಆಧುನಿಕ ಯುಗದಲ್ಲಿ ತಲೆಯೆತ್ತಿ ನಿಂತಿರುವ ಬ್ರಾಹ್ಮಣಿಸಮ್ಮಿನ ವ್ಯಾಪ್ತಿ ಮತ್ತು ಬ್ರಾಹ್ಮಣರ ಜನಸಂಖ್ಯೆಯ ನಡುವಿನ ಅಂತರವನ್ನು ಯಾವ ಬೆಲೆ ತೆತ್ತಾದರೂ ಸರಿ ಮಾಡಬೇಕಿತ್ತು.

ಹೊಸ ಸಂದರ್ಭದಲ್ಲಿ ಕುಲೀನ ಬ್ರಾಹ್ಮಣರ ಪ್ರಾಬಲ್ಯ ಉಳಿಸಿಕೊಳ್ಳುವ ಯೋಜನೆ ರೂಪಿಸಲು ತಿಲಕ್‌ ಶ್ರಮಿಸಿದರು. ತನ್ನ ಹಿಂದಿನ ತಲೆಮಾರಿನ ಮರಾಠಾ ಪ್ರಾಂತ್ಯದ ಬ್ರಾಹ್ಮಣ ರಾಜಕಾರಣಕ್ಕೆ ಇಂಧನವಾಗಿದ್ದ ಪೇಶ್ವಾ ಸಾಮ್ರಾಜ್ಯದ ನಷ್ಟಪ್ರಜ್ಞೆಯನ್ನು ಮಾತ್ರ ಅವಲಂಬಿಸಿಕೊಂಡ ನಿಲುವು ಹೊಸ ಕಾಲದಲ್ಲಿ ಸಾಲದಾಗುತ್ತದೆ ಎಂದು ತಿಲಕ್‌ ಅರ್ಥ ಮಾಡಿಕೊಂಡಿದ್ದರು. ಸಾಮಾಜಿಕ ಬದಲಾವಣೆಗಳೊಂದಿಗೆ ಹೊಂದಿಕೊಂಡು ಹೋಗುವ ಬ್ರಾಹ್ಮಣಿಸಂ ರಾಜಕಾರಣ ಮಾತ್ರ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಈ ಹಂತದಲ್ಲಿ ತಿಲಕ್ ಕಲಿತುಕೊಳ್ಳುತ್ತಾರೆ. ಅಸ್ಪೃಶ್ಯತೆಯ ವಿರುದ್ಧ ಬರೋಡದ ಮಹಾರಾಜ ಮೂರನೇ ಸಯ್ಯಾಜಿರಾವ್‌ ಗಾಯಕವಾಡ್‌ ಬಾಂಬೆಯಲ್ಲಿ ಆಯೋಜಿಸಿದ್ದ ಸಮ್ಮೇಳನದಲ್ಲಿ ೧೯೧೮ ಮಾರ್ಚ್‌ ೨೪ ರಂದು ತಿಲಕ್‌ ಮಾಡಿದ ಭಾಷಣವನ್ನು ಈ ಕೋನದಿಂದ ಅರ್ಥ ಮಾಡಿಕೊಳ್ಳಬೇಕು. ಅಂದು ತಿಲಕ್‌ ಅಸ್ಪೃಶ್ಯತೆಯನ್ನು ಕಠುವಾಗಿ ವಿರೋಧಿಸುವ ನಿಲುವನ್ನು ಸ್ವೀಕರಿಸಿದ್ದರು. ʼದೇವರು ಅಸ್ಪೃಶ್ಯತೆಯನ್ನು ಸಹಿಸುವುದೇ ಆದರೆ ನಾನು ಅಂತಾ ದೇವರನ್ನು ದೇವರೆಂದು ಕರೆಯಲಾರೆ. ಯಾವುದೋ ಹಳೆಯ ಕಾಲದಲ್ಲಿ ಬ್ರಾಹ್ಮಣರ ಅಧಿಪತ್ಯ ಅದನ್ನು (ಅಸ್ಪೃಶ್ಯತೆ) ಜಾರಿಗೆ ತಂದಿತು ಎಂಬುದು ನಿಜ. ಅಸ್ಪೃಶ್ಯತೆ ಕತ್ತರಿಸಬೇಕಾದ ರೋಗವೇ ಆಗಿದೆ.ʼ

ಕೇಸರಿಯಲ್ಲಿ ತಿಲಕ್‌ ಬರೆದದ್ದು ಹೀಗೆ:

ʼಹಿಂದುಗಳು ಮತ್ತು ಮುಸ್ಲಿಮರು ಒಗ್ಗಟ್ಟಾಗಿ ನಿಂತು ಸ್ವರಾಜ್ಯಕ್ಕಾಗಿ ಆಗ್ರಹಿಸಿದರೆಂದರೆ, ಬ್ರಿಟಿಷ್‌ ಸರಕಾರದ ದಿನಗಳು ಎಣಿಸಲ್ಪಟ್ಟಿವೆ ಎಂದೇ ಲೆಕ್ಕ.‌ʼ ಇದರ ಮುಂದುವರಿಕೆಯಾಗಿ ತಿಲಕ್‌ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾಗ ೧೯೧೬ರಲ್ಲಿ ಮುಸ್ಲಿಂ ಲೀಗ್‌ ಜೊತೆಗೆ ಒಂದು ಒಪ್ಪಂದವನ್ನೂ ಮಾಡಿಕೊಂಡರು. ಲಖ್ನೋ ಒಪ್ಪಂದ ಎಂದು ಕರೆಯಲ್ಪಡುವ ಇದು ಬ್ರಿಟಿಷರು ಮಿಂಟೋ ಮೋರ್ಲಿ ಸುಧಾರಣೆಗಳು ಎಂದು ಕರೆಯಲ್ಪಡುತ್ತಿದ್ದ ಯೋಜನೆಯ ಮೂಲಕ ಹಿಂದೂ ಮುಸ್ಲಿಂ ವಿಭಜನೆಗೆ ಶ್ರಮಿಸುತ್ತಿದ್ದ ಕಾಲದಲ್ಲಿ ಅದಕ್ಕೆದುರಾದ ಗಮನಾರ್ಹ ರಾಜಕೀಯ ಮುನ್ನಡೆಯಾಗಿತ್ತು.

ಇದನ್ನೂ ಓದಿ : ಅಧ್ಯಾಯ 3 – ಚಿತ್ಪಾವನ ಬ್ರಾಹ್ಮನಿಸಮ್ಮಿನ ಆರಂಭಿಕ ರಾಜಕೀಯ ಚಟುವಟಿಕೆಗಳು

ಇವೆಲ್ಲ ತಿಲಕರ ಜಾತ್ಯಾತೀತ ರಾಜಕಾರಣಕ್ಕೆ ಉದಾಹರಣೆಗಳು ಎಂದು ಕೆಲವರು ವಾದಿಸುತ್ತಾರೆ. ಆದರೆ, ಈ ಘಟನೆಗಳ ಪೂರ್ವಾಪರ ಪೂರ್ತಿಯಾಗಿ ಜಾಲಾಡಿದರೆ ಮಾತ್ರವೇ ತಿಲಕರ ಸಾಮಾಜಿಕ ದೃಷ್ಟಿಕೋನ ಹೇಗಿತ್ತು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ. ಮೊದಲು ೧೯೧೮ರ ಅಸ್ಪೃಶ್ಯತೆ ವಿರೋಧಿ ಭಾಷಣದ ಪೂರ್ವಾಪರ ನೋಡೋಣ. ಕರ್ಮವೀರ್‌ ವಿಠಲ್‌ ರಾಮ್ಜೀ ಶಿಂಧೆ ತನ್ನ ಧರ್ಮ, ಬದುಕು, ತತ್ವಶಾಸ್ತ್ರ ಎಂಬ ಪುಸ್ತಕದಲ್ಲಿ ಅದನ್ನು ವಿವರಿಸುತ್ತಾರೆ. ಅಸ್ಪೃಶ್ಯತೆ ತೊಲಗಿಸಲು ಒಂದು ನಿರ್ಣಯ ಕೈಗೊಂಡು ಅದರಲ್ಲಿ ತಿಲಕರ ಸಹಿ ಪಡೆಯಲು ಕರ್ಮವೀರ್‌ ತಿಲಕರನ್ನು ಸಮೀಪಿಸುತ್ತಾರೆ. ಆದರೆ, ತಾನು ವಿದೇಶ ಪ್ರವಾಸ ಮುಗಿಸಿ ಬಂದ ಮೇಲೆ ಅದರಲ್ಲಿ ಸಹಿ ಹಾಕುತ್ತೇನೆಂದು ಹೇಳಿ ತಿಲಕ್‌ ಹಿಮ್ಮೆಟ್ಟುತ್ತಾರೆ. ೧೯೧೯ ಡಿಸೆಂಬರ್‌ ೧ ರಂದು ಮರಳಿ ಬಂದಾಗ ಬ್ರಾಹ್ಮಣೇತರ ಪ್ರಗತಿಪರ ಚಳುವಳಿಗಳ ವಿರೋಧವನ್ನು ತಿಲಕ್‌ ಎದುರಿಸಬೇಕಾಗಿ ಬಂದಿತ್ತು.

ಅಸ್ಪೃಶ್ಯತೆಯ ವಿರುದ್ಧ ತಿಲಕ್‌ ಗಟ್ಟಿದನಿಯಲ್ಲಿ ಮಾಡಿದ ಭಾಷಣಕ್ಕೆ ಸಿಕ್ಕ ಚಪ್ಪಾಳೆಯನ್ನು ಕರ್ಮವೀರ್‌ ಸ್ಮರಿಸುತ್ತಾರೆ. ತಿಲಕರ ಮಾತುಗಳನ್ನು ಕೂಡ. ʼಪೇಶ್ವೆಗಳು ಅಸ್ಪೃಶ್ಯರು ಸೇದುವ ನೀರನ್ನು ಕುಡಿಯುತ್ತಿದ್ದರು.ʼ ಆದರೆ, ಅದಕ್ಕೆ ಬೇಕಾದ ಪ್ರಾಯೋಗಿಕ ಕಾರ್ಯಕ್ರಮಗಳ ಜೊತೆಗೆ ಸಹಕರಿಸಲು ತಿಲಕ್‌ ತಯಾರಿರಲಿಲ್ಲ.

ಪೇಶ್ವೆಗಳು; ಅಂದರೆ ಚಿತ್ಪಾವನ ಬ್ರಾಹ್ಮಣರು ತಲುಪಿದ್ದ ರಾಜಕೀಯ ಔನ್ನತ್ಯವೇ ತಿಲಕರ ಗೋಪ್ಯ ಗುರಿ ಎಂದು ಕರ್ಮವೀರ್‌ ನೆನೆಯುವ ಈ ಮಾತುಗಳಿಂದ ಸ್ಪಷ್ಟವಾಗುತ್ತದೆ. ಅಸ್ಪೃಶ್ಯತೆ ತೊಲಗಿಸುವುದು ಸೇವಕರನ್ನು ಸೃಷ್ಠಿಸಲೇ ಹೊರತು ಸಮಾನತೆಗಾಗಿ ಅಲ್ಲ. ʼವಿಧಾನಸಭೆಯಲ್ಲಿ ರೈತರು ನೆಲ ಉಳುತ್ತಾರೆಯೇ? ದರ್ಜಿಗಳು ರಾಜಕಾರಣದಲ್ಲಿ ಕತ್ತರಿ ಪ್ರಯೋಗಿಸುತ್ತಾರೆಯೇ? ವ್ಯಾಪಾರಿಗಳು ತಮ್ಮ ವ್ಯಾಪಾರಿ ಬುದ್ಧಿಯನ್ನು ವಿಧಾನಸಭೆಯಲ್ಲಿ ಉಪಯೋಗಿಸುತ್ತಾರೆಯೇ?ʼ ಎಂದು ೧೯೧೭ ನವೆಂಬರ್‌ ೧ ರಂದು ಸಮಾಜದ ಕೆಳಸ್ತರದ ಮನುಷ್ಯರ ಸಮಾನ ರಾಜಕೀಯ ಸ್ವಾತಂತ್ರ್ಯದ ವಿರುದ್ಧವಾಗಿ ಮಾಡಿದ ಭಾಷಣಕ್ಕಿಂತ ಅಸ್ಪೃಶ್ಯತೆ ನಿವಾರಣೆ ವಿಷಯದಲ್ಲೂ ತಿಲಕ್‌ ಭಿನ್ನವಾಗಿರಲಿಲ್ಲ. ಸಂಪ್ರದಾಯವಾದಿ ಬ್ರಾಹ್ಮಣರು ಮನುಸ್ಮೃತಿಯನ್ನು ಹಿಡಿದುಕೊಂಡು, ಆಚಾರಗಳ ಮೂಲಕ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದ್ದಾಗ, ರಾಜಕೀಯ ಪ್ರಾಬಲ್ಯದ ಮೇಲಂತಸ್ತಿನಲ್ಲಿ ಬ್ರಾಹ್ಮಣರನ್ನು ತಂದು ಕೂರಿಸುವ ರಾಜಕಾರಣ ತಿಲಕ್‌ ಅವರ ಗುರಿಯಾಗಿತ್ತು. ಸಂಸ್ಥಾನಗಳ ಒಕ್ಕೂಟವಾಗಿ ದೇಶ ಬದಲಾಗುತ್ತಿರುವ ಹೊತ್ತಲ್ಲಿ ಪ್ರಾಬಲ್ಯ ಹೊಂದಬೇಕಾದರೆ ಬ್ರಾಹ್ಮಣಿಸಮ್ಮಿಗೆ ಸುಧಾರಣೆ ಬೇಕೆಂದು ಮೊದಲಿಗೆ ಕಂಡುಕೊಂಡ ಬ್ರಾಹ್ಮಣ ನಾಯಕ ತಿಲಕ್‌ ಆಗಿದ್ದರು. ಭೂತವನ್ನು ಮತ್ತೆ ತಂದು ಕೂರಿಸಿ ಭವಿಷ್ಯ ಹೆಣೆಯುವ ಪ್ರಯತ್ನವಾಗಿರಲಿಲ್ಲ ತಿಲಕ್‌ ಅವರದ್ದು. ಅದು ಭೂತದ ಗಟ್ಟಿ ಅಡಿಪಾಯದ ಮೇಲೆ ಭವಿಷ್ಯ ಕಟ್ಟುವ ಯೋಜನೆಯಾಗಿತ್ತು.

ಲಖ್ನೋ ಒಪ್ಪಂದದ ವಿಷಯದಲ್ಲೂ ನಾವು ಅದನ್ನು ಗಮನಿಸಬೇಕಾಗುತ್ತದೆ. ರಾಜ್ಯ ನಷ್ಟ ಹೊಂದಿದ ಚಿತ್ಪಾವನ ಬ್ರಾಹ್ಮಣರು ತಾವು ತ್ರಿಕೋನ ಹೋರಾಟ ನಡೆಸಬೇಕೆಂಬ ಬ್ರಾಹ್ಮಣ ಪ್ರಜ್ಞೆಯನ್ನು ತಿಲಕ್‌ ತಿದ್ದಲು ಶ್ರಮಿಸಿದರು. ಬ್ರಿಟಿಷರು ಪ್ರಧಾನ ಶತ್ರುಗಳು. ಸದ್ಯಕ್ಕೆ ತಮ್ಮ ಸಾಮ್ರಾಜ್ಯವನ್ನು ಸೋಲಿಸಿದ ಮ್ಲೇಚ್ಛರು. ಅವರನ್ನು ಸೋಲಿಸಲು ಮುಸ್ಲಿಮರೊಂದಿಗೆ ತಾತ್ಕಾಲಿಕ ಒಪ್ಪಂದಕ್ಕೆ ಬರುವುದು ತಪ್ಪಲ್ಲ ಎಂಬ ದೃಷ್ಟಿಕೋನ ತಿಲಕರಿಗಿತ್ತು. ಅಂದರೆ, ೧೮೫೭ರ ಮೊದಲ ಸ್ವಾತಂತ್ರ್ಯ ಹೋರಾಟ ಸೃಷ್ಟಿಸಿದ ಹೊಸ ಸಾಧ್ಯತೆಗಳಿಗೆ ಒಂದು ಕಾರಣ, ಆ ಹೋರಾಟ ನಿಧಾನಕ್ಕೆ ಒಳಗಿಳಿಸಿಕೊಂಡ ಹಿಂದೂ-ಮುಸ್ಲಿಂ ಸಾಮರಸ್ಯವೇ ಆಗಿತ್ತು ಎಂದು ತಿಲಕ್‌ ಗುರುತಿಸಿದ್ದರು. ಆದರೆ, ಸಂಪ್ರದಾಯವಾದಿ ಬ್ರಾಹ್ಮಣರಿಗೆ ಇದನ್ನು ಅರಗಿಸಿಕೊಳ್ಳಲಾಗಲಿಲ್ಲ. ಲಖ್ನೋ ಒಪ್ಪಂದವನ್ನು ವಿರೋಧಿಸಿದ ಮದನ್‌ ಮೋಹನ್‌ ಮಾಲವೀಯ ಮತ್ತು ನಂತರದ ಕಾಲದಲ್ಲಿ ಆರ್‌ಎಸ್‌ಎಸ್‌ ಹುಟ್ಟಿನಲ್ಲಿ ದೊಡ್ಡ ಪಾತ್ರ ವಹಿಸಿದ್ದ ಬಿ.ಎಸ್.‌ ಮುನ್ಜೇ ಅವರಿಗೆ ತಿಲಕ್‌ ಕೊಟ್ಟ ಉತ್ತರವನ್ನು ಒಮ್ಮೆ ನೋಡೋಣ:

ಇದನ್ನೂ ಓದಿ : ಯಾಕಾಗಿ ಈ ಕಥನ?

ʼಮಹಮ್ಮದೀಯರಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿರುವ ಕುರಿತು ಕೆಲವು ಪ್ರಧಾನ ವ್ಯಕ್ತಿಗಳು ಟೀಕಿಸುತ್ತಿದ್ದಾರೆ. ಮುಸ್ಲಿಮರಿಗೆ ಮಾತ್ರವಾಗಿ ಒಂದು ಸ್ವರಾಜ್ಯ ನೀಡುವುದಾದರೆ ವೈಯಕ್ತಿಕವಾಗಿ ನನಗೆ ಅದರಲ್ಲಿ ಯಾವ ತಕರಾರು ಇಲ್ಲ ಎಂದು ಬೇಕಾದರೂ ನಾನು ಹೇಳಬಲ್ಲೆ. ರಜಪೂತರಿಗೂ ಅಂತಹದೊಂದು ಅವಕಾಶ ಸಿಗುವುದಾದರೆ ನಾನದನ್ನೂ ವಿರೋಧಿಸುವುದಿಲ್ಲ. ಹಿಂದೂಗಳಲ್ಲಿಯೂ ಅತ್ಯಂತ ಹಿಂದುಳಿದ ವರ್ಗದವರಿಗೆ ಹೀಗೊಂದು ಅವಕಾಶ ಕೊಡುವುದಾದರೆ ಅದಕ್ಕೂ ನನ್ನ ವಿರೋಧವಿಲ್ಲ. ನನ್ನ ಈ ಪ್ರಸ್ತಾವನೆ ಪೂರ್ತಿ ಇಂಡಿಯಾದ ರಾಜಕೀಯ ಭಾವನಾತ್ಮಕತೆಯನ್ನು ಪ್ರತಿಫಲಿಸುತ್ತಿದೆ. ಮೂರನೇ ಶಕ್ತಿಯೊಂದಿಗೆ ಹೋರಾಡುವಾಗ ಎಲ್ಲಕ್ಕಿಂತ ಮುಖ್ಯವಾಗಿ ಒಗ್ಗಟ್ಟು ಬೇಕು. ಜಾತಿ, ಧರ್ಮ, ರಾಜಕಾರಣ, ಸಿದ್ಧಾಂತ ಎಲ್ಲದರಲ್ಲೂ ಒಗ್ಗಟ್ಟು ಅತ್ಯಗತ್ಯ. ಈ ಹೊತ್ತು ಹೋರಾಟ ತ್ರಿಕೋನ ಸ್ವರೂಪದಲ್ಲಿದೆ.ʼ

ತಿಲಕ್‌ ಇಲ್ಲಿ ತೋರಿಸುವ ಒಗ್ಗಟ್ಟು ಐತಿಹಾಸಿಕ ಕಾರಣಗಳಿಗಾಗಿ ಮಾತ್ರವೇ ತೆಗೆದುಕೊಂಡ ತಂತ್ರವೆಂದು ಅರ್ಥ ಮಾಡಿಕೊಳ್ಳಬೇಕು. ಬ್ರಾಹ್ಮಣ ರಾಜಕೀಯ ದೃಷ್ಟಿಕೋನದಲ್ಲಿ ಬ್ರಿಟಿಷರ ಆಗಮನಕ್ಕಿಂತ ಮೊದಲು ಹಿಂದೂಗಳು ಮತ್ತು ಮುಸ್ಲಿಮರು ಮಾತ್ರವೇ ಭಾರತ ಉಪಖಂಡವನ್ನು ಆಳುತ್ತಿದ್ದರು. ಮೊಗಲರು ಮತ್ತು ಮರಾಠರ ಆಡಳಿತವನ್ನು ಸಂಪ್ರದಾಯವಾದಿ ಬ್ರಾಹ್ಮಣರು ಆ ರೀತಿಯಾಗಿಯೇ ಕಂಡಿದ್ದರು ಎಂದು ನಾವು ಈಗಾಗಲೇ ನೋಡಿದ್ದೇವೆ. ಆದರೆ, ಬ್ರಿಟಿಷರು ಈ ಎರಡೂ ವಂಶಗಳಿಂದ ಅಧಿಕಾರವನ್ನು ಕಿತ್ತುಕೊಂಡರು. ಹಾಗಾಗಿ, ತಿಲಕರ ದೃಷ್ಟಿಯಲ್ಲಿ ಈಗ ಮೂರು ಪಕ್ಷಗಳು ರಾಜಕೀಯ ಅಧಿಕಾರದ ಆಟದಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದಲೇ ಹಿಂದೂಗಳ ಮತ್ತು ಮುಸ್ಲಿಮರ ಸಮಾನ ಶತ್ರುವಾದ ಬ್ರಿಟಿಷರ ವಿರುದ್ಧ ಒಗ್ಗಟ್ಟಾಗಿ ನಿಲ್ಲಲು ಸದ್ಯಕ್ಕೆ ಬೇಕಾದಷ್ಟು ಕಾರಣಗಳು ತಿಲಕರಂತಹ ನವರಾಜಕೀಯ ಬ್ರಾಹ್ಮಣಿಸಮ್ಮಿನ ವಕ್ತಾರರಿಗೆ ಇದ್ದವು. ಆದರೆ, ಮನುಸ್ಮೃತಿಯಂತ ಪುರಾತನ ಸ್ಮೃತಿಗಳ ಆಧಾರದಲ್ಲಿ ಮಾತ್ರವೇ ನಿಲ್ಲುವ ಬ್ರಾಹ್ಮಣ ಪ್ರಾಬಲ್ಯದ ಬಗ್ಗೆ ಅತಿಯಾದ ನಂಬಿಕೆಯಿದ್ದ ಸಂಪ್ರದಾಯವಾದಿ ಬ್ರಾಹ್ಮಣರಿಗೆ ಇದನ್ನು ಅರಗಿಸಿಕೊಳ್ಳಲಾಗಿರಲಿಲ್ಲ.

ಈ ವಿಭಾಗದ ಬ್ರಾಹ್ಮಣರನ್ನೂ ಸೇರಿಸಿಕೊಂಡು ರಾಜಕೀಯ ಬ್ರಾಹ್ಮಣಿಸಮ್ಮಿನ ಅಡಿಪಾಯವನ್ನು ವಿಶಾಲಗೊಳಿಸುವ ತಿಲಕರ ಪ್ರಯತ್ನ ಈ ಕೆಳಗಿನ ಉತ್ತರದಿಂದ ಅರ್ಥ ಮಾಡಿಕೊಳ್ಳಬಹುದು:

ʼಮುಸ್ಲಿಮರಿಗೆ ಅರ್ಹತೆಗಿಂತ ಹೆಚ್ಚು ಪ್ರಾಶಸ್ತ್ಯ ಕೊಡಲಾಗುತ್ತಿದೆಯೆಂಬ ಭಾವನೆ ಹಿಂದೂಗಳ ನಡುವೆ ಇದೆ. ಒಬ್ಬ ಹಿಂದೂ ಎಂಬ ನೆಲೆಯಲ್ಲಿ ಈ ತಪ್ಪೊಪ್ಪಿಗೆ ಮಾಡಿಕೊಳ್ಳುವುದರಲ್ಲಿ ನನಗೆ ಯಾವ ಸಂಕೋಚವೂ ಇಲ್ಲ. ಒಂದು ಕ್ಲಿಷ್ಟಕರವಾದ ಕೋರ್ಟ್‌ ದಾವೆಯೊಂದರಲ್ಲಿ ಅದನ್ನು ಗೆಲ್ಲಬೇಕಾಗಿ ಕಕ್ಷಿದಾರ ಒಬ್ಬ ವಕೀಲನನ್ನು ನೇಮಿಸುತ್ತಾನೆ ಮತ್ತು ಗೆದ್ದರೆ ತನಗೆ ಸಿಗುವ ಸೊತ್ತಿನ ಅರ್ಧ ಪಾಲನ್ನು ವಕೀಲನಿಗೆ ಉಡುಗೊರೆಯಾಗಿ ಕೊಡುತ್ತೇನೆಂದು ವಾಗ್ದಾನ ಮಾಡುತ್ತಾನೆ. ಅದುವೇ ಇಲ್ಲಿಯೂ ನಡೆಯುತ್ತಿರುವುದು. ಇಂದಿನ ಅಸಹನೀಯವಾದ ಪರಿಸ್ಥಿತಿಯಲ್ಲಿ ಮುಸ್ಲಿಮರ ಸಹಾಯವಿಲ್ಲದೆ ನಮಗೆ ಎದ್ದು ನಿಲ್ಲಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಮಹತ್ವಾಕಾಂಕ್ಷೆಯ ಅಂತಿಮ ಗುರಿ ತಲುಪಲು ಮುಸ್ಲಿಮರಿಗೆ ಒಂದು ಪಾಲು, ಅರ್ಹಿಸುವುದಕ್ಕಿಂತಲೂ ದೊಡ್ಡ ಪಾಲು ಕೊಡುವುದರಲ್ಲಿ ತಪ್ಪಿಲ್ಲ. ಅವರಿಗೆ ನೀವು ನೀಡುವ ಪ್ರಾತಿನಿಧ್ಯದ ಪಾಲು ಅರ್ಹತೆಗಿಂತ ಹೆಚ್ಚಾಗಿದ್ದರೆ, ಅವರ ಜವಾಬ್ದಾರಿಯೂ ಹೆಚ್ಚಿರಬೇಕು. ಆ ಮೂಲಕ ನಿಮಗೋಸ್ಕರ ಮತ್ತು ನಿಮ್ಮ ಜೊತೆ ನಿಂತು ಮತ್ತಷ್ಟು ಶಕ್ತಿ ಮತ್ತು ಉತ್ಸಾಹದಿಂದ ಹಿಂದೆಂದೂ ಕಂಡಿರದ ರೀತಿಯಲ್ಲಿ ಹೋರಾಡಲು ಅವರು ಇನ್ನಷ್ಟು ಬದ್ಧರಾಗುತ್ತಾರೆ. ಈಗ ಹೋರಾಟ ತ್ರಿಕೋನ ರೂಪದಲ್ಲಿದೆ.ʼ

ಅಂದರೆ, ರಾಜಕೀಯ ಅಧಿಕಾರ ಹೊಂದಿರುವ ಬ್ರಿಟಿಷರನ್ನು ಹೊಡೆದೋಡಿಸಿ ಬ್ರಾಹ್ಮಣ ರಾಜಕೀಯ ಅಧಿಕಾರವನ್ನು ಸ್ಥಾಪಿಸಲು ಮಾತ್ರವೇ ʼಅವರನ್ನುʼ ಜೊತೆಗೆ ತೆಗೆದುಕೊಂಡು ಹೋಗುವುದು. ತಮಗೆ ರಾಜಕೀಯ ಅಧಿಕಾರ ಸಿಗಬೇಕೆಂದರೆ ʼಅವರʼ ಸಹಾಯ ಅತ್ಯಗತ್ಯವಾಗಿ ಬೇಕು. ಬ್ರಾಹ್ಮಣಿಸಮ್ಮನ್ನು ದೇಶದ ಸಮಕಾಲೀನ ಪರಿಸ್ಥಿತಿಗೆ ಸರಿಹೊಂದಿಸಬೇಕಾದರೆ ಹಳೆಯ ವಾದದಲ್ಲಿಯೇ ಮುಳುಗುವುದು ಸರಿಯಲ್ಲವೆಂಬುದು ತಿಲಕರ ವಾದ. ಆದರೆ, ಈ ವಾದ ಸಹಜವಾಗಿಯೇ ಬ್ರಾಹ್ಮಣ್ಯದ ಪರಿವರ್ತೆನೆಯೊಂದಿಗೆ ಸಂಬಂಧ ಹೊಂದಿರುವುದರಿಂದ ಒಳಗೊಳಗೆ ಸಂಘರ್ಷಗಳನ್ನೂ ಹುಟ್ಟು ಹಾಕಿತು.

ತಿಲಕರದ್ದು ಬ್ರಾಹ್ಮಣಿಸಮ್ಮಿನ ವ್ಯಾಪ್ತಿಯೊಳಗೆ ಸೀಮಿತಗೊಳ್ಳುವ ವಾದವಾಗಿತ್ತು ಎಂದು ಅರ್ಥ ಮಾಡಿಕೊಳ್ಳಲು ಇನ್ನೂ ಸುಲಭದ ದಾರಿ ತೋರಿಸುತ್ತೇನೆ. ಮೇಲೆ ಹೇಳಿದ ಮಾತುಗಳು ಯಾರನ್ನು ಉದ್ದೇಶಿಸಿ ಹೇಳಲಾಗಿತ್ತು ಎಂಬುದನ್ನು ಗಮನಿಸಿದರೆ ಅದು ಸ್ಪಷ್ಟವಾಗುತ್ತದೆ. ಮುಸ್ಲಿಮರೊಂದಿಗೆಯೇ? ಅಲ್ಲ. ಹಿಂದೂ ಧರ್ಮದ ಕೆಳಜಾತಿ ಜನರೊಂದಿಗೆಯೇ? ಅಲ್ಲ. ಹಾಗಾದರೆ ಯಾರಿಗೆ ಹೇಳಿರಬಹುದು? ತನ್ನ ಪ್ರಾಯೋಗಿಕ ವಲಯದ ಬ್ರಾಹ್ಮಣರು ಮತ್ತು ಹೆಚ್ಚೆಂದರೆ ಸವರ್ಣ ಹಿಂದೂಗಳಿಗೆ ಮಾತ್ರ. ತಿಲಕರ ಒಟ್ಟು ಬರಹಗಳನ್ನು ತೆಗೆದು ನೋಡಿದರೆ ನಮಗೆ ಅರ್ಥವಾಗುವ ಮುಖ್ಯ ಸಂಗತಿ ಇದುವೇ ಆಗಿದೆ. ತಿಲಕ್‌ ಮಾತನಾಡುತ್ತಿರುವುದು ಬ್ರಾಹ್ಮಣರೊಂದಿಗೆ. ಹೊಸ ರಾಜಕೀಯ ಬ್ರಾಹ್ಮಣಿಸಮ್ಮನ್ನು ಪರಿಚಯಿಸುವುದರ ಫಲವಾಗಿ ಸೈದ್ಧಾಂತಿಕ ಸಂಘರ್ಷಗಳು ಉಂಟಾಗುತ್ತವೆ. ಹಾಗಾಗಿ, ಚಿತ್ಪಾವನರ ನಡುವಿನಿಂದಲೇ ಬಂದ ಅಗರ್ಕರ್‌ ಅಥವಾ ಗೋಖಲೆ ಅವರುಗಳ ಹಾಗೆ ಧರ್ಮಾತೀತವಾದ ಒಂದು ಸಮಾಜದೊಂದಿಗೆ ತಿಲಕ್‌ ಸಂವಾದಿಸಲೇ ಇಲ್ಲ.

೧೯೧೬ರ ಲಖ್ನೋ ಒಪ್ಪಂದ ಸಾಧ್ಯವಾದುದರ ಹಿನ್ನೆಲೆಯಲ್ಲಿ ಒಂದು ವೈಯಕ್ತಿಕ ಅಜೆಂಡಾ ಕೂಡ ಕೆಲಸ ಮಾಡಿರುವುದನ್ನು ಕಾಣಬಹುದು. ತಿಲಕರ ಮೇಲೆ ಹಲವು ಸಲ ದಾಖಲಾದ ದೇಶದ್ರೋಹದ ಕೇಸುಗಳನ್ನು ವಾದಿಸಿದ್ದು ಬ್ಯಾರಿಸ್ಟರ್‌ ಮುಹಮ್ಮದ್‌ ಅಲಿ ಜಿನ್ನಾ ಆಗಿದ್ದರು. ೧೯೦೮ರ ಕೋಲಾಹಲ ಸೃಷ್ಠಿಸಿದ ದೇಶದ್ರೋಹ ಆಪಾದನೆಯಲ್ಲಿ ಜಿನ್ನಾ ತಿಲಕರಿಗೋಸ್ಕರ ಶಕ್ತಿಮೀರಿ ವಾದಿಸಿದರಾದರೂ ತಿಲಕರಿಗೆ ಶಿಕ್ಷೆ ವಿಧಿಸಿ ಬರ್ಮಾದ ಮಂಡಾಲೆ ಜೈಲಿಗೆ ಹಾಕಲಾಯಿತು. ಇನ್ನೊಂದು ಪ್ರಕರಣದಲ್ಲಿ ತಿಲಕರನ್ನು ಕೋರ್ಟಿನಿಂದ ಬಿಡಿಸಲು ಜಿನ್ನಾ ಶಕ್ತರಾಗಿದ್ದರು. ೧೯೧೪ರಲ್ಲಿ ಜೈಲಿನಿಂದ ಹೊರ ಬಂದ ಮೇಲೆ ಜಿನ್ನಾ-ತಿಲಕ್‌ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ. ೧೯೧೬ರ ಲಖ್ನೋ ಒಪ್ಪಂದ ಈ ಗೆಳೆತನದ ಆಧಾರದಲ್ಲಿಯೇ ನಡೆದಿತ್ತು. ಎಂ.ಸಿ. ಛಗ್ಲೆ ಮತ್ತು ಏ.ಜಿ. ನೂರಾನಿ ಈ ಗೆಳೆತನದ ಆಳದ ಬಗ್ಗೆ ಬರೆದಿದ್ದಾರೆ. ಜೊತೆಗೆ ಸ್ವತಹ ಜಿನ್ನಾ ೧೯೧೬ರಲ್ಲಿ ತಿಲಕ್‌ ತಾತ್ಕಾಲಿಕವಾಗಿಯಾದರೂ ತನ್ನ ಬ್ರಾಹ್ಮಣವಾದದ ನಿಲುವನ್ನು ಬದಿಗಿರಿಸಿದ್ದರ ಬಗ್ಗೆ ಹೊಗಳಿದ್ದಾರೆ.

ಧರ್ಮ ಮತ್ತು ರಾಜಕಾರಣದ ಭೂತಕಾಲ ಮಹಾತ್ಮೆಗಳನ್ನು ಒಟ್ಟಿಗೇ ಪ್ರಚುರಪಡಿಸುತ್ತಾ ತಿಲಕ್‌ ಬ್ರಾಹ್ಮಣರ ನಡುವೆ ಜನಪ್ರಿಯರಾಗುತ್ತಾರೆ. ಚಿತ್ಪಾವನ ಬ್ರಾಹ್ಮಣ ಪ್ರಾಬಲ್ಯದ ಪೇಶ್ವಾ ಸಾಮ್ರಾಜ್ಯವನ್ನು ಪುನಃ ಸ್ಥಾಪಿಸುವ ವಾದ ತಿಲಕರ ದೃಷ್ಟಿಯಲ್ಲಿ ಹಳತಾಗಿತ್ತು. ಹೊಸ ಬ್ರಾಹ್ಮಣಿಸಮ್ಮಿಗೆ ಇನ್ನಷ್ಟು ದೊಡ್ಡದಾದ ಸಾಮಾಜಿಕ ಬೆಂಬಲ ಅಗತ್ಯವಾಗಿತ್ತು. ಪೇಶ್ವೆಗಳ ಕಾಲದಲ್ಲಿ ಚಿತ್ಪಾವನರಿಗೆ ಲಭಿಸಿದ ವಿಶೇಷ ಪರಿಗಣನೆ ಚಿತ್ಪಾವನರು ಮತ್ತು ಇತರ ಬ್ರಾಹ್ಮಣ ಸಮುದಾಯಗಳ ನಡುವೆ ಬಿರುಕನ್ನು ಸೃಷ್ಟಿಸಿತ್ತು. ಅದರಲ್ಲೂ ವಿಶೇಷವಾಗಿ ಬಹುಸಂಖ್ಯಾತ ಬ್ರಾಹ್ಮಣರಾಗಿದ್ದ ದೇಶಸ್ತ ಬ್ರಾಹ್ಮಣರೊಂದಿಗೆ. ಭವಿಷ್ಯದಲ್ಲಿ ತಮಗಾಗಿ ರಾಜಾಡಳಿತ ಇರುವುದಿಲ್ಲವೆಂಬುದನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾದ ಕಾರಣ ಎಲ್ಲ ಬ್ರಾಹ್ಮಣರನ್ನು ನವರಾಜಕೀಯ ಬ್ರಾಹ್ಮಣಿಸಮ್ಮಿನ ಅಡಿಯಲ್ಲಿ ತರಲು ತಿಲಕ್‌ ಶ್ರಮಿಸಿದರು. ಅದಕ್ಕಾಗಿ ದೇಶಸ್ತ, ಕಾರಡೆ, ಸಾರಸ್ವತ ಮೊದಲಾದ ಹಲವು ವಿಭಾಗಗಳಲ್ಲಿ ಉಪಜಾತಿಗಳಾಗಿ ಹಂಚಿಹೋಗಿದ್ದವರನ್ನು ಪಂಕ್ತಿಭೋಜನ ಸಹಿತ ಹಲವು ಕಾರ್ಯಕ್ರಮಗಳ ಮೂಲಕ ಒಟ್ಟುಗೂಡಿಸಿದರು. ಬ್ರಾಹ್ಮಣ ನಾಯಕತ್ವವನ್ನು ತೆರೆಯ ಹಿಂದೆ ನಿಲ್ಲಿಸಿಕೊಂಡು ಹಿಂದೂ ರಾಜಕಾರಣವಾಗಿ ನವಬ್ರಾಹ್ಮಣಿಸಮ್ಮನ್ನು ಪರಿಚಯಿಸಿದರು. ಯುದ್ಧ ಸನ್ನಾಹವನ್ನು ಜನಪ್ರಿಯಗೊಳಿಸಲು ಬ್ರಿಟಿಷರಿಗೆದುರಾಗಿ ಜಿನ್ನಾರೊಂದಿಗೆ ಒಪ್ಪಂದ ಮಾಡಿಕೊಂಡರು. ಎಲ್ಲ ಒಪ್ಪಂದಗಳೂ ತಾತ್ಕಾಲಿಕವಾಗಿದ್ದರಿಂದ ಅಧಿಕಾರಕ್ಕೇರಲು ಎಲ್ಲ ತರದ ರಾಜಿಗಳನ್ನೂ ಮಾಡಿಕೊಳ್ಳಬಹುದು ಎಂಬುದು ತಿಲಕ್‌ ನಿಲುವಾಗಿತ್ತು. ೧೯೧೬ರ ಲಖ್ನೋ ಒಪ್ಪಂದದ ಸಮಯದಲ್ಲಿ ಜಿನ್ನಾ ಇನ್ನೂ ದ್ವಿರಾಷ್ಟ್ರ ವಾದವನ್ನು ಮುಂದಿಟ್ಟಿರಲಿಲ್ಲ ಎಂಬುದನ್ನೂ ಇಲ್ಲಿ ನೆನಪಿಟ್ಟುಕೊಳ್ಳಬೇಕು.

೧೮೫೭ರಲ್ಲಿ ಮುಸ್ಲಿಮರೊಂದಿಗೆ ಸೇರಿಕೊಂಡು ಬ್ರಿಟಿಷರನ್ನು ಅಲ್ಲಾಡಿಸಲು ಸಾಧ್ಯವಾಗಿದ್ದರೆ, ಆ ಸಾಧ್ಯತೆ ಈಗಲೂ ಇದೆಯೆಂಬ ಎಚ್ಚರ ೧೯೧೬ರ ಒಪ್ಪಂದದಲ್ಲಿ ತಿಲಕರನ್ನು ಮುನ್ನಡೆಸಿತ್ತು. ವರ್ಷಗಳ ನಂತರ ಜಿನ್ನಾ ಪಾಕಿಸ್ತಾನಕ್ಕೋಸ್ಕರ ದನಿಯೆತ್ತಿದ್ದ ಹೊತ್ತಲ್ಲೇ ಸಾವರ್ಕರ್‌ ನೇತೃತ್ವದ ಹಿಂದೂ ಮಹಾಸಭಾ ಸಿಂಧ್‌ ಸರಕಾರದಲ್ಲಿ ಮುಸ್ಲಿಂಲೀಗ್‌ ಜೊತೆ ಮೈತ್ರಿ ಮಾಡಿಕೊಂಡಿತ್ತು. ಜಿನ್ನಾರ ಮುಸ್ಲಿಂಲೀಗಿನಿಂದ ಹೊರಬಂದಿದ್ದ, ಕೃಷಕ್‌ ಸಮಾಜ್‌ ಪಕ್ಷದ ನಾಯಕನಾಗಿದ್ದ, ಮುಸ್ಲಿಂ ಕೋಮುವಾದಿಯೆಂದು ತಾವು ಒಂದು ಕಾಲದಲ್ಲಿ ಕರೆಯುತ್ತಿದ್ದ ಫಸಲುಲ್‌ ಹಕ್‌ರ ಬಂಗಾಲ ಮಂತ್ರಿ ಮಂಡಲದಲ್ಲಿ ಹಿಂದೂ ಮಹಾಸಭಾ ಮೈತ್ರಿ ಮಾಡಿಕೊಂಡಿದ್ದು ಮಾತ್ರವಲ್ಲ, ಸಾವರ್ಕರ್‌ ಬಿಟ್ಟರೆ ಹಿಂದೂ ಮಹಾಸಭಾದಲ್ಲಿ ಪ್ರಬಲ ನಾಯಕನಾಗಿದ್ದ ಶ್ಯಾಂ ಪ್ರಸಾದ್‌ ಮುಖರ್ಜಿ ಆ ಮಂತ್ರಿ ಮಂಡಲದಲ್ಲಿ ಉಪಪ್ರಧಾನಿ ಹುದ್ದೆಯನ್ನೂ ನಿರ್ವಹಿಸಿದ್ದರು. ಹಿಂದೂಗಳಿಗೆ ಯಾವ ರೀತಿಯಲ್ಲೂ ಬಹುಮತ ದೊರೆಯದ ಕಡೆಗಳಲ್ಲಿ ಯಾರ ಜೊತೆ ಸೇರಿಕೊಂಡಾದರು ಸರಿ, ಅಧಿಕಾರ ನಡೆಸುವ ಅವಕಾಶವನ್ನು ಕೈ ಬಿಡಬಾರದು ಎಂದು ಹೇಳಿಕೊಂಡು ಸಾವರ್ಕರ್‌ ಅದನ್ನು ಸಮರ್ಥಿಸಿಕೊಂಡಿದ್ದ. ಹಿಂದುತ್ವದ ಇತಿಹಾಸದ ಉದ್ದಕ್ಕೂ ಅಧಿಕಾರಕ್ಕಾಗಿ ಮಾಡಿಕೊಂಡ ಇಂತಹ ತಾತ್ಕಾಲಿಕ ರಾಜಿಗಳನ್ನು ಕಾಣಬಹುದು. ಮುಸ್ಲಿಂ ವಿರೋಧಿಯಾಗಿದ್ದರೂ, ಕಾಂಗ್ರೆಸ್ಸಿನ ಒಳಗಿದ್ದರೂ ತಿಲಕರು ಜಿನ್ನಾರೊಂದಿಗೆ ಒಪ್ಪಂದಕ್ಕೆ ತಯಾರಾದರು. ಸಾವರ್ಕರ್‌ ಬ್ರಿಟಿಷರೊಂದಿಗೆ ಮತ್ತು ಒಂದು ಹಂತದಲ್ಲಿ ಜಿನ್ನಾರ ಮುಸ್ಲಿಂಲೀಗ್‌ ಜೊತೆಗೆ ಒಪ್ಪಂದ ಮಾಡಿಕೊಂಡ. ರಾಜಕೀಯ ಬ್ರಾಹ್ಮಣಿಸಂ ಬರಿಯ ಕೋಮುವಾದವಲ್ಲ, ಅದರ ಗುರಿ ಫ್ಯಾಸಿಸಂ ಆಗಿತ್ತು ಎಂಬುದಕ್ಕೆ ಸ್ಪಷ್ಟ ಸಾಕ್ಷಿಗಳು ಇವೆಲ್ಲ.

ಗಣೇಶೋತ್ಸವ ಮತ್ತು ಶಿವಾಜಿ ಉತ್ಸವಗಳ ಮೂಲಕ ಕಟ್ಟಿದ ಸಾಂಸ್ಕೃತಿಕ ರಾಜಕಾರಣವನ್ನು ನಾಟಕಗಳ ಮೂಲಕ ತಿಲಕ್‌ ಮುಂದಕ್ಕೆ ಕೊಂಡು ಹೋದರು. ಪುರಾಣಗಳ ಆಧಾರದಲ್ಲಿ ರಚಿಸಿದ ನಾಟಕಗಳನ್ನು ತಿಲಕ್‌ ರಂಗಕ್ಕೇರಿಸಿದರು. ಪೌರಾಣಿಕ ಘಟನೆಗಳೊಂದಿಗೆ ಎಷ್ಟರ ಮಟ್ಟಿಗೆ ನ್ಯಾಯಯುತವಾಗಿದ್ದರೋ, ಅಷ್ಟೇ ಆಧುನಿಕ ರಾಜಕೀಯ ಸಂದರ್ಭದೊಂದಿಗೆ ಕಟಿಬದ್ಧರಾಗಿರಲೂ ಅವು ಶ್ರಮಿಸಿದವು. ಪೌರಸ್ತ್ಯವಾದ (Orientalism) ಎಂಬ ಪರಿಕಲ್ಪನೆಯನ್ನು ಸಾಮಾನ್ಯವಾಗಿ ಪಾಶ್ಚಿಮಾತ್ಯರ ದೃಷ್ಟಿಕೋನದ ಪೌರಸ್ತ್ಯ ದೇಶಗಳನ್ನು ಕುರಿತು ವಿವರಿಸಲು ಉಪಯೋಗಿಸಲಾಗುತ್ತದೆ. ಆದರೆ, ತಿಲಕರಂತವರು ಇದನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಉಪಯೋಗಿಸಿದ್ದರ ಬಗ್ಗೆ ಪಿ.ಪಿ. ರವೀಂದ್ರನ್‌ ಮತ್ತಿತರು ಬರೆದಿದ್ದಾರೆ. ಸ್ವಾತಂತ್ರ್ಯ ಹೋರಾಟದ ನಾಯಕರಾಗಿದ್ದ ಬ್ರಾಹ್ಮಣರಿಗೆ ಪರಂಪರೆಯ ಪರಿಶುದ್ಧಿಯನ್ನು ನೀಡಲು ಅದನ್ನು ಬಳಸಲಾಗಿತ್ತು ಎಂಬುದನ್ನು ನಾವಿಲ್ಲಿ ಅರ್ಥಮಾಡಿಕೊಳ್ಳಬೇಕು. ಪೌರಾಣಿಕ ಘಟನೆಗಳನ್ನು ಸಮಕಾಲೀನಗೊಳಿಸುವುದಕ್ಕಿಂತ ಹೆಚ್ಚಾಗಿ ಸಮಕಾಲೀನ ಘಟನೆಗಳನ್ನು ಪೌರಾಣಿಕಗೊಳಿಸುವುದರಲ್ಲಿ ತಿಲಕರ ನಾಟಕಗಳು ಮುಳುಗಿದ್ದವು. ಅಂಥಹದ್ದೊಂದು ರಂಗವನ್ನು ಆ ಕಾಲದ ಮರಾಠ ಸಾಂಸ್ಕೃತಿಕ ವಲಯದಲ್ಲಿ ರೂಪುಗೊಳಿಸುವುದರಲ್ಲಿ ತಿಲಕ್‌ ಮಹತ್ವದ ಪಾತ್ರ ವಹಿಸಿದರು.

ಕೇಸರಿಯಲ್ಲಿ ಪ್ರಕಟವಾಗಿದ್ದ ಒಂಭತ್ತು ಸಂಪಾದಕೀಯಗಳ ಮೂಲಕ ತಿಲಕ್‌ ಅದಕ್ಕೆ ಆರಂಭ ನೀಡಿದ್ದರು. ಮರಾಠ ರಂಗಭೂಮಿಯ ಇಬ್ಬರು ದೈತ್ಯರುಗಳಾದ ಕೆ.ಪಿ. ಖಾದಿಲ್ಖರ್‌ ಮತ್ತು ಬಾಲಗಂಧರ್ವ ಎಂಬ ಹೆಸರಿನಲ್ಲಿ ಪ್ರಸಿದ್ಧನಾಗಿದ್ದ ನಾರಾಯಣ ಶ್ರೀಪದ್‌ ರಾಜಹಂಸ ಇಬ್ಬರೂ ತಿಲಕರ ಪ್ರಿಯ ಶಿಷ್ಯರುಗಳಾಗಿದ್ದರು. ತಿಲಕರೇ ಸ್ವತಹ ನಾರಾಯಣ ಶ್ರೀಪದ್‌ ರಾಜಹಂಸಗೆ ಬಾಲಗಂಧರ್ವ ಎಂಬ ಬಿರುದನ್ನು ನೀಡಿದ್ದರು. ೧೯೧೨ ಸೆಪ್ಟೆಂಬರ್‌ ೨ ರಂದು ಗಣೇಶೋತ್ಸವದ ಪ್ರಯುಕ್ತ ನಡೆದಿದ್ದ ಆತನ ಸಂಗೀತ ಕಾರ್ಯಕ್ರಮದ ನಂತರ ತಿಲಕ್‌ ಆ ಬಿರುದನ್ನು ನೀಡಿದ್ದರು. ನಂತರದ ಕಾಲದಲ್ಲಿ ಆತ ಜನಪ್ರಿಯನಾದದ್ದು ಕೂಡ ಅದೇ ಹೆಸರಿನಲ್ಲಾಗಿತ್ತು. ಬಾಂಬೆ ಪ್ರಸಿಡೆನ್ಸಿಯ ಭಾಗವಾಗಿದ್ದ ಬೆಳಗಾವಿಯ ಕರಾಡೆ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಅಣ್ಣಾ ಸಾಹೇಬ್‌ ಕಿರ್ಲೋಸ್ಕರ್‌ ಮರಾಠ ಪ್ರದೇಶದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ನಾಟಕ ಕಂಪೆನಿಗಳಾದ ಭಾರತ ಶಾಸ್ತ್ರೋತ್ತೇಜಕ ಮಂಡಲಿ ಮತ್ತು ಕಿರ್ಲೋಸ್ಕರ್‌ ನಾಟಕ ಮಂಡಲಿಗಳನ್ನು ಸ್ಥಾಪಿಸಿದವರು. ಇವರುಗಳ ವಿಕಾಸದಲ್ಲೂ ತಿಲಕ್‌ ದೊಡ್ಡ ಪಾತ್ರ ವಹಿಸಿದರು. ಕೆ.ಪಿ. ಖಾದಿಲ್ಖರನ್ನು ಕೇಸರಿಯ ಸಂಪಾದಕ ಮಂಡಳಿಗೆ ೧೮೯೬ರಲ್ಲಿ ತಿಲಕ್‌ ಅವಿರೋಧವಾಗಿ ಆಯ್ಕೆ ಮಾಡಿದ್ದರು.

ತಿಲಕರ ಬೆಂಬಲದೊಂದಿಗೆ ಖಾದಿಲ್ಖರ್‌ ಬರೆದ ನಾಟಕ ಕೀಚಕವಧೆ. ಹೆಸರೇ ಸೂಚಿಸುವಂತೆ ಮಹಾಭಾರತ ಘಟನೆಯನ್ನು ಆಧಾರವಾಗಿರಿಸಿದ ನಾಟಕವಾಗಿತ್ತು. ವಿರಾಟ ರಾಜಧಾನಿಯಲ್ಲಿ ಪಾಂಡವರು ಅಜ್ಞಾತವಾಸದಲ್ಲಿದ್ದ ಕಾಲ. ದಾಸಿಯ ವೇಷದಲ್ಲಿ ಬದುಕುತ್ತಿದ್ದ ದ್ರೌಪದಿಯನ್ನು ಕೀಚಕ ಮೋಹಿಸುತ್ತಾನೆ. ಆತನ ಉಪಟಳದ ಬಗ್ಗೆ ಅಲ್ಲಿಯೇ ಮಾರುವೇಷದಲ್ಲಿ ಬದುಕುತ್ತಿದ್ದ ಭೀಮಸೇನನ ಬಳಿ ದ್ರೌಪದಿ ಹೇಳಿಕೊಳ್ಳುತ್ತಾಳೆ. ನಂತರ ದ್ರೌಪದಿ ವಶೀಕರಣದ ಮೂಲಕ ಕರೆದುಕೊಂಡು ಬಂದ ಕೀಚಕನನ್ನು ಭಿಮಸೇನ ವಧಿಸುತ್ತಾನೆ. ಈ ಕಥಾಹಂದರಕ್ಕೆ ಸಮಕಾಲೀನ ರಾಜಕೀಯವನ್ನು ಬೆರೆಸುವಾಗ ವೈಸ್‌ರಾಯ್‌ ಲಾರ್ಡ್‌ ಕರ್ಜನ್‌ ಕೀಚಕನಾಗುತ್ತಾನೆ. ದ್ರೌಪದಿಯಾಗಿ ಬ್ರಿಟಿಷ್‌ ಆಡಳಿತದಲ್ಲಿ ಅತ್ಯಾಚಾರಗೊಳ್ಳುತ್ತಿರುವ ಭಾರತದ ಆತ್ಮ ಕಾಣಿಸಿಕೊಳ್ಳುತ್ತದೆ. ಏನನ್ನೂ ಮಾಡಲು ಶಕ್ತನಾಗದ ಯುಧಿಷ್ಠಿರನಾಗಿ ಅಗರ್ಕರ್‌ ಮತ್ತು ಗೋಖಲೆಯವರಂತಹ ಸುಧಾರಣಾವಾದಿಗಳು ಕಾಣಿಸಿಕೊಳ್ಳುತ್ತಾರೆ. ಕೀಚಕನನ್ನು ಕೊಲ್ಲುವ ಭೀಮನಾಗಿ ತಿಲಕರಂತಹ ತೀವ್ರವಾದಿ ಬ್ರಾಹ್ಮಣರನ್ನು ಚಿತ್ರಿಸಲಾಗುತ್ತದೆ. ಪುರಾಣಗಳ ಇಂತಹ ಭಾವವ್ಯತ್ಯಾಸವನ್ನು ಗಮನಿಸಿದ ಬ್ರಿಟಿಷರು ಆ ನಾಟಕವನ್ನು ನಿಷೇಧಿಸಿದರು. ಕಾಳಿ ಚಾ ನಾರದ್‌ ಎಂಬ ನಾಟಕದಲ್ಲಿ ಪೌರಾಣಿಕ ಪಾತ್ರಗಳು ಹೇಳುವ ಸಂಭಾಷಣೆಗಳಲ್ಲಿ ಹಲವು ತಿಲಕರ ಮಾತುಗಳೇ ಆಗಿದ್ದವು. ಮಾಧವರಾವ್‌ ಪಡ್ಕರ್‌ ಬರೆದ ಭಸ್ಮಾಸುರ ತಿಲಕರನ್ನು ಹೋಲುವ ಪಾತ್ರಗಳನ್ನು ಹೊಂದಿತ್ತು. ಸೀತಾಸ್ವಯಂವರ ಬ್ರಿಟಿಷ್‌ ಸಾಮ್ರಾಜ್ಯದೊಂದಿಗೆ ತಿಲಕರ ಆಕ್ರಮಣಕಾರಿ ಹೋರಾಟವನ್ನು ಚಿತ್ರಿಸಿತ್ತು. ಅಚ್ಯುತ್‌ ರಾವ್‌ ಕೋಲತ್ಕರ್‌ ರಚಿಸಿದ ಸುಂದೋಪಸುಂದ್‌, ಆನಂದ್‌ ಬಾರ್ವೇ ರಚಿಸಿದ ಚಂದ್ರಸೇನ ಮೊದಲಾದವು ಕೂಡ ತಿಲಕರ ತೀವ್ರವಾದಿ ಬ್ರಾಹ್ಮಣಿಸಂ ಮತ್ತು ರಾಜಕೀಯ ಪ್ರಾಬಲ್ಯವನ್ನು ಮುಕ್ತವಾಗಿ ಪ್ರದರ್ಶಿಸಿದವು. ಮಹಾರಾಣ ಪ್ರತಾಪನನ್ನು ಹಿಂದೂ ಪುನರುತ್ಥಾನದ ಪ್ರತಿರೂಪವಾಗಿ ಚಿತ್ರೀಕರಿಸುವ ಐತಿಹಾಸಿಕ ನಾಟಕಗಳ ಸಹಿತ ಹಲವು ನಾಟಕಗಳು ಬ್ರಿಟಿಷರ ನಿಷೇಧಕ್ಕೆ ಒಳಗಾದವು.

ಬ್ರಿಟಿಷ್‌ ಸಾಮ್ರಾಜ್ಯವನ್ನು ಬಲವಾಗಿ ವಿರೋಧಿಸುವಾಗಲೂ ಆ ವಿರೋಧದ ಬಲವಾದ ಅಡಿಪಾಯ ಬ್ರಾಹ್ಮಣಿಸಂ ಮಾತ್ರವೇ ಎಂದು ಚಿತ್ರೀಕರಿಸಲು ಈ ನಾಟಕಗಳು ಗಮನಹರಿಸಿದ್ದವು. ತಿಲಕರ ಸಿದ್ಧಾಂತಗಳನ್ನು ಅತ್ಯಂತ ಗಾಢವಾಗಿ ಮೈವೆತ್ತಿಕೊಂಡಿದ್ದ ಜನಪ್ರಿಯ ನಾಟಕಕಾರ ಕೆ.ಪಿ. ಖಾದಿಲ್ಖರ್‌ ತನ್ನ ಬದುಕಿನ ಒಂದು ಹಂತದಲ್ಲಿ ಪ್ರಪಂಚದ ಏಕೈಕ ಹಿಂದೂ ರಾಷ್ಟ್ರವಾಗಿದ್ದ ನೇಪಾಳಕ್ಕೆ ಭೇಟಿ ನೀಡಿ, ನೇಪಾಳದ ರಾಜನೊಂದಿಗೆ ಬ್ರಿಟಿಷರನ್ನು ಸಶಸ್ತ್ರ ಹೋರಾಟದ ಮೂಲಕ ಸೋಲಿಸುವ ಕುರಿತು ಚರ್ಚೆ ನಡೆಸಿದ್ದರು. ಆ ದಾಳಿ ಸಾಧ್ಯವಾದರೆ ತಿಲಕರ ಅನುಯಾಯಿಗಳು ಬ್ರಿಟಿಷ್‌ ಇಂಡಿಯಾದ ಒಳಗೆ ಆಡಳಿತವನ್ನು ಅಸ್ಥಿರಗೊಳಿಸಲು ಬೇಕಾದ ಚಟುವಟಿಕೆಗಳನ್ನು ಸಮಾನಾಂತರವಾಗಿ ನಡೆಸುವುದು ಖಾದಿಲ್ಖರ್‌ ಮುಂದಿಟ್ಟ ಯೋಜನೆಯಾಗಿತ್ತು. ಅದರೊಂದಿಗೆ ಬ್ರಿಟಿಷರು ಸೋತು ಮರಳುತ್ತಾರೆ ಮತ್ತು ಬೃಹತ್ತಾದ ಹಿಂದೂ ಸಾಮ್ರಾಜ್ಯವೊಂದು ಹುಟ್ಟುತ್ತದೆ. ಖಾದಿಲ್ಖರ್‌ ರೂಪಿಸಿದ ಈ ಯೋಜನೆ, ತಿಲಕರು ಮುಂದಿಟ್ಟಿದ್ದ ʼಸ್ವರಾಜ್ಯʼವನ್ನು ಸ್ಪಷ್ಟವಾಗಿ ತೋರಿಸಿಕೊಡುವ ಯೋಜನೆಯೇ ಆಗಿತ್ತು.

Related Articles

ಇತ್ತೀಚಿನ ಸುದ್ದಿಗಳು