Wednesday, December 10, 2025

ಸತ್ಯ | ನ್ಯಾಯ |ಧರ್ಮ

RTO ಕಚೇರಿಯ ಮಧ್ಯವರ್ತಿಗಳ ಹಾವಳಿ ತಡೆಗೆ ಕಠಿಣ ಕ್ರಮ – ರಾಮಲಿಂಗಾರೆಡ್ಡಿ

ಬೆಳಗಾವಿ : ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಧ್ಯವರ್ತಿಗಳ (Brokers) ಹಾವಳಿಗೆ ಅವಕಾಶ ನೀಡಿದರೆ ಆರ್.ಟಿ.ಓ (RTO) ಕಚೇರಿಗಳ ಅಧಿಕಾರಿಗಳನ್ನೇ ಹೊಣೆಯಾಗಿಸಿ, ಶಿಸ್ತುಕ್ರಮಕ್ಕೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿ ಕ್ರಮವಹಿಸಲಾಗುತ್ತಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ (Ramalinga reddy) ಅವರು ತಿಳಿಸಿದರು.

ಮೇಲ್ಮನೆಯಲ್ಲಿ ಡಿ.10ರಂದು ಸದಸ್ಯರಾದ ಡಾ.ಉಮಾಶ್ರೀ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 342ರ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಚಿವರು, ಆರ್ಟಿಓ ಕಚೇರಿಗಳಲ್ಲಿ ಶಿಸ್ತು ತರಲು ಅನೇಕ ಕ್ರಮವಹಿಸಲಾಗಿದೆ. ಕಚೇರಿಯಲ್ಲಿ ಸ್ವೀಕೃತವಾಗುವ ಎಲ್ಲಾ ಅರ್ಜಿ /ಸ್ವೀಕೃತಿಗಳನ್ನು ನಿಗದಿಪಡಿಸಿದ ನಮೂನೆಯಲ್ಲಿ ಕಡ್ಡಾಯವಾಗಿ ವಹಿಗಳನ್ನು ವಿಷಯ ನಿರ್ವಾಹಕರು ನಿರ್ವಹಿಸುವುದು. ಅಧೀಕ್ಷಕರುಗಳು ಪ್ರತಿ ವಾರಕ್ಕೊಮ್ಮೆ ವಹಿಗಳನ್ನು ಪರಿಶೀಲಿಸುವುದು ಹಾಗೂ ತಿಂಗಳಿಗೊಮ್ಮೆ ಮೇಜು ತಪಾಸಣೆಯನ್ನು ನಡೆಸಿ ಮೇಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸುವಂತೆ ಸಾರಿಗೆ ಆಯುಕ್ತರು ಸುತ್ತೋಲೆ ಹೊರಡಿಸಿ ಸೂಚನೆ ನೀಡಿದ್ದಾರೆ. ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ಯಾವುದೇ ರೀತಿಯ ಅವಕಾಶ ಕಲ್ಪಿಸದಂತೆ ಕರ್ತವ್ಯ ನಿರ್ವಹಿಸುವಂತೆ ಒಂದು ವೇಳೆ ಯಾವುದೇ ಕಚೇರಿಯಲ್ಲಿ ಮಧ್ಯವರ್ತಿಗಳು ಕಂಡುಬಂದಲ್ಲಿ ಆಯಾ ಕಚೇರಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದ್ದೇವೆ.

ಸಾರ್ವಜನಿಕರು ಮಧ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಕಛೇರಿಯ ಅಧಿಕಾರಿ/ ಸಿಬ್ಬಂದಿಯವರನ್ನು ಭೇಟಿ ಮಾಡಿ ಅವರ ಕೆಲಸಗಳನ್ನು ಮಾಡಿಸಿಕೊಳ್ಳಬೇಕೆಂದು ಆರ್ಟಿಓ ಕಚೇರಿಗಳ ಆವರಣದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಲೋಕಾಯುಕ್ತರವರ ಕಚೇರಿ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳ ವಿವರಗಳ ಮಾಹಿತಿಯನ್ನು ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲಾಗಿದೆ. ದಿನಾಂಕ 01-11-2021 ರಿಂದ ಸಾರಿಗೆ ಇಲಾಖೆಯಲ್ಲಿನ 52 ಸೇವೆಗಳನ್ನು ಆನ್ ಲೈನ್ ಮುಖಾಂತರ ಒದಗಿಸುತ್ತ ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page