Wednesday, January 7, 2026

ಸತ್ಯ | ನ್ಯಾಯ |ಧರ್ಮ

ಅಪ್ರಾಪ್ತ ಮಕ್ಕಳ ಮದುವೆ ತಡೆಗೆ ಕಠಿಣ ಶಿಕ್ಷೆ ಅಗತ್ಯ: ಹೈಕೋರ್ಟ್

ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿಸುವ ಹಾಗೂ ಅದಕ್ಕೆ ಕುಮ್ಮಕ್ಕು ನೀಡುವ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಸಂಬಂಧ ಜಾರಿಯಲ್ಲಿರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ನ್ಯಾಯಾಂಗ ಬಂಧನದಲ್ಲಿರುವ ಪಶ್ಚಿಮ ಬಂಗಾಳ ಮೂಲದ ಆರೋಪಿ ಹಬೀಬ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ನಡೆಸಿತು. ಕಾನೂನಿಗೆ ವಿರುದ್ಧವಾಗಿ ಅಪ್ರಾಪ್ತ ಮಕ್ಕಳ ಮದುವೆ ಮಾಡಿಸುವ ಪೋಷಕರ ನಡೆ ಆತಂಕಕಾರಿ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.

ಅರ್ಜಿದಾರರ ಪರ ವಕೀಲರು, ಆರೋಪಿ ಮತ್ತು ಸಂತ್ರಸ್ತೆ ಈಗಾಗಲೇ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ಸಂತ್ರಸ್ತೆಯ ವಯಸ್ಸು 17 ವರ್ಷ 10 ತಿಂಗಳು ಇತ್ತು ಎಂದು ತಿಳಿಸಿದರು. ಸಂತ್ರಸ್ತೆ ಈಗ ಗರ್ಭಿಣಿಯಾಗಿದ್ದು, ಪರಸ್ಪರ ಒಪ್ಪಂದದ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲು ಆಕೆ ಸಿದ್ಧಳಾಗಿದ್ದಾಳೆ. ಹೀಗಾಗಿ ಆರೋಪಿ ಮೇಲೆ ದಾಖಲಾಗಿರುವ ಪೋಕ್ಸೊ ಪ್ರಕರಣದಿಂದ ಮುಕ್ತಗೊಳಿಸಬೇಕು ಎಂದು ಮನವಿ ಮಾಡಿದರು.

ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ಇಂತಹ ಪ್ರಕರಣದಲ್ಲಿ ಸೆಟಲ್‌ಮೆಂಟ್‌ ಸ್ವೀಕರಿಸುವುದು ಸರಿಯಲ್ಲ ಎಂದರು. ಪೋಷಕರೇ ಮುಂದಾಗಿ ಅಪ್ರಾಪ್ತ ವಯಸ್ಸಿನ ಮದುವೆ ಮಾಡಿಸಿರುವುದು ಗಂಭೀರ ವಿಚಾರವಾಗಿದ್ದು, ಅವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ನ್ಯಾಯಪೀಠ, ಇಂತಹ ಪ್ರಕರಣಗಳಲ್ಲಿ ಸಲುಗೆ ತೋರಿಸುವುದು ಸರಿಯಲ್ಲ. ಅಪ್ರಾಪ್ತ ಮಕ್ಕಳ ಮದುವೆಗಳಿಗೆ ಅವಕಾಶ ನೀಡಿದರೆ ಬಾಲ್ಯ ವಿವಾಹ ನಿಷೇಧ ಕಾಯ್ದೆಗೆ ಬೆಲೆ ಉಳಿಯುತ್ತದೆಯೇ ಎಂದು ಪ್ರಶ್ನಿಸಿತು. ಈ ಸಂಬಂಧ ವಿಸ್ತೃತ ತೀರ್ಪು ಪ್ರಕಟಿಸಲಾಗುವುದು ಎಂದು ತಿಳಿಸಿ, ವಿಚಾರಣೆಯನ್ನು ಮುಂದೂಡಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page