Home ರಾಜಕೀಯ ಕಸ್ತೂರಿ ರಂಗನ್ ಚರ್ಚೆಗೆ ಬಂದ ವೇದಿಕೆಯಲ್ಲಿ ‘ವಂದೇ ಮಾತರಂ’ ವಿವಾದ ಎಬ್ಬಿಸಿದ ಶಾಸಕ ಚೆನ್ನಬಸಪ್ಪ; ಶಾಸಕನ...

ಕಸ್ತೂರಿ ರಂಗನ್ ಚರ್ಚೆಗೆ ಬಂದ ವೇದಿಕೆಯಲ್ಲಿ ‘ವಂದೇ ಮಾತರಂ’ ವಿವಾದ ಎಬ್ಬಿಸಿದ ಶಾಸಕ ಚೆನ್ನಬಸಪ್ಪ; ಶಾಸಕನ ನಡೆಗೆ ಸಾರ್ವಜನಿಕರ ತೀವ್ರ ಆಕ್ಷೇಪ

0

ತೀರ್ಥಹಳ್ಳಿ: ಮಲೆನಾಡಿನ ಜನರು ಎದುರಿಸುತ್ತಿರುವ ಕಸ್ತೂರಿ ರಂಗನ್ ವರದಿಯ ಆತಂಕ ಹಾಗೂ ಅದರ ಪರಿಣಾಮಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ತೀರ್ಥಹಳ್ಳಿಯಲ್ಲಿ ನಡೆದ ಮಹತ್ವದ ಸಾರ್ವಜನಿಕ ಸಂವಾದ ಕಾರ್ಯಕ್ರಮ ಕೆಲಕಾಲ ‘ವಂದೇ ಮಾತರಂ’ ಗೀತೆಯ ವಿವಾದದಿಂದಾಗಿ ಗೊಂದಲದ ವೇದಿಕೆಯಾಯಿತು.

ಕಸ್ತೂರಿ ರಂಗನ್ ವರದಿ ಜಾರಿಯಿಂದ ತಮ್ಮ ಕೃಷಿ, ಭೂಮಿ ಹಾಗೂ ಬದುಕಿನ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸರ್ಕಾರದ ಮುಂದೆ ಅಹವಾಲು ಸಲ್ಲಿಸಲು ಮಲೆನಾಡಿನ ವಿವಿಧ ಭಾಗಗಳಿಂದ ಜನರು ತೀರ್ಥಹಳ್ಳಿಯ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇಂತಹ ಮಹತ್ವದ ವಿಚಾರದ ಚರ್ಚೆ ಆರಂಭವಾಗಬೇಕಿದ್ದ ಸಂದರ್ಭದಲ್ಲೇ ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ವಂದೇ ಮಾತರಂ ಗೀತೆಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸಿದ್ದ ಬಗ್ಗೆ ಕಿರಿಕ್ ತೆಗೆದಿದ್ದಾರೆ.

ವಂದೇ ಮಾತರಂ ಪೂರ್ಣವಾಗಿ ಹಾಡಬೇಕು ಎಂದು ಒತ್ತಾಯಿಸಿದ ಚನ್ನಬಸಪ್ಪ ಅವರು ವೇದಿಕೆಯಲ್ಲೇ ಮೈಕ್ ಪಡೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಕಸ್ತೂರಿ ರಂಗನ್ ವರದಿಯಂತಹ ಗಂಭೀರ ಜನಜೀವನದ ವಿಚಾರದ ಕುರಿತು ನಡೆಯಬೇಕಿದ್ದ ಚರ್ಚೆಯ ಗಮನ ಕೆಲಕಾಲ ಬೇರೆಡೆಗೆ ತಿರುಗಿತು.

ಚನ್ನಬಸಪ್ಪ ಅವರ ಈ ನಡೆಗೆ ಕಾರ್ಯಕ್ರಮದಲ್ಲಿದ್ದ ಕೆಲವರು ಮತ್ತು ವೇದಿಕೆ ಮುಂಭಾಗದಲ್ಲಿದ್ದವರಿಂದಲೇ ಆಕ್ಷೇಪ ವ್ಯಕ್ತವಾಯಿತು. “ಕಸ್ತೂರಿ ರಂಗನ್ ವರದಿ ವಿಚಾರ ಚರ್ಚಿಸಲು ಬಂದಿದ್ದೇವೆ, ಇಲ್ಲಿ ರಾಜಕೀಯ ಯಾಕೆ?” ಎಂಬ ರೀತಿಯಲ್ಲಿ ಸಭಿಕರಿಂದ ಪ್ರತಿಕ್ರಿಯೆಗಳು ಕೇಳಿಬಂದವು. ಪ್ರಮುಖ ವಿಚಾರದ ಚರ್ಚೆ ಸಂದರ್ಭದಲ್ಲಿ ಶಾಸಕ ಚೆನ್ನಬಸಪ್ಪ ಮಧ್ಯಪ್ರವೇಶಕ್ಕೆ ಪ್ರೇಕ್ಷಕರೂ ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವೇದಿಕೆಯಿಂದ ನಿರ್ಗಮಿಸಬೇಕು ಎಂದು ಕೂಗಾಡಿದ ಘಟನೆ ನಡೆಯಿತು. ವೇದಿಕೆಯಲ್ಲಿದ್ದ ರಾಜಕೀಯ ಮುಖಂಡರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು.

ಈ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಧ್ಯಪ್ರವೇಶಿಸಿ, ಕಾರ್ಯಕ್ರಮದ ಉದ್ದೇಶವನ್ನು ನೆನಪಿಸಿದರು. “ಇಂತಹ ವೇದಿಕೆಯಲ್ಲಿ ರಾಜಕಾರಣ ಬೇಡ. ಕಾರ್ಯಕ್ರಮದ ಮುಖ್ಯ ವಿಷಯದ ಬಗ್ಗೆ ಮಾತನಾಡೋಣ” ಎಂದು ಚನ್ನಬಸಪ್ಪ ಅವರಿಗೆ ತಿರುಗೇಟು ನೀಡಿದರು.

ಜನರ ಬದುಕು, ಕೃಷಿ ಹಾಗೂ ಭೂಮಿಗೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿ ಕುರಿತು ತಮ್ಮ ಅಹವಾಲುಗಳನ್ನು ನೇರವಾಗಿ ಮುಖ್ಯಮಂತ್ರಿಗಳ ಮುಂದೆ ಹೇಳಲು ಮಲೆನಾಡಿನ ಜನರು ಕಾದಿದ್ದ ಸಂದರ್ಭದಲ್ಲಿ, ವಂದೇ ಮಾತರಂ ಗಾಯನದ ವಿಚಾರವನ್ನು ಮುಂದಿಟ್ಟಿರುವುದು ಕಾರ್ಯಕ್ರಮದ ಉದ್ದೇಶದ ಬಗ್ಗೆಯೇ ಪ್ರಶ್ನೆ ಮೂಡಿಸುವಂತಾಯಿತು.

ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಜನರ ಆತಂಕವನ್ನು ಆಲಿಸುವ ಉದ್ದೇಶದಿಂದಲೇ ಮುಖ್ಯಮಂತ್ರಿ ತೀರ್ಥಹಳ್ಳಿಗೆ ಆಗಮಿಸಿದ್ದರು. ಶಿವಮೊಗ್ಗ ಜಿಲ್ಲೆಯಲ್ಲೇ ವರದಿ ವ್ಯಾಪ್ತಿಯ 1,449 ಗ್ರಾಮಗಳಲ್ಲಿ 447 ಗ್ರಾಮಗಳು ಒಳಗೊಂಡಿವೆ ಎಂದು ಕಾರ್ಯಕ್ರಮದ ಕುರಿತು ವರದಿಯಾಗಿದೆ.

ಹೀಗಾಗಿ ಮಲೆನಾಡಿನ ಜನರ ಭವಿಷ್ಯಕ್ಕೆ ಸಂಬಂಧಿಸಿದ ವೇದಿಕೆಯನ್ನು ವಂದೇ ಮಾತರಂ ವಿಚಾರದ ರಾಜಕೀಯ ಚರ್ಚೆಯತ್ತ ತಿರುಗಿಸುವ ಪ್ರಯತ್ನ ನಡೆದಿರುವ ಬಗ್ಗೆ ಕಾರ್ಯಕ್ರಮದಲ್ಲಿ ಅಸಮಾಧಾನ ವ್ಯಕ್ತವಾಯಿತು. ಜನರ ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕಿದ್ದ ವೇದಿಕೆಯಲ್ಲಿ ಬೇರೆ ವಿಚಾರವನ್ನು ಮುನ್ನೆಲೆಗೆ ತಂದ ಶಾಸಕ ಚನ್ನಬಸಪ್ಪ ಅವರ ನಡೆಗೆ ಸ್ಥಳದಲ್ಲೇ ಆಕ್ಷೇಪ ವ್ಯಕ್ತವಾದ ಬಳಿಕ, ಕಾರ್ಯಕ್ರಮ ಮತ್ತೆ ಕಸ್ತೂರಿ ರಂಗನ್ ವರದಿ ಕುರಿತ ಸಂವಾದದತ್ತ ಮರಳಿತು.

ಮುಂದುವರಿದ ಸಭೆಯಲ್ಲಿ ರೈತರು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಕಸ್ತೂರಿ ರಂಗನ್ ವರದಿಯಿಂದ ಉಂಟಾಗಬಹುದಾದ ಸಮಸ್ಯೆಗಳು ಮತ್ತು ತಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದೆ ಮಂಡಿಸಿದರು.

You cannot copy content of this page

Exit mobile version