Sunday, June 16, 2024

ಸತ್ಯ | ನ್ಯಾಯ |ಧರ್ಮ

ವಿದ್ಯಾರ್ಥಿನಿ ಖಾಸಗಿ ವಿಡಿಯೋ ಚಿತ್ರೀಕರಣ ; ಆಪಾದಿತರ ಅಮಾನತು : ಆಡಳಿತ ಮಂಡಳಿ ಸ್ಪಷ್ಟನೆ

ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳ ವಿಡಿಯೋ ಚಿತ್ರೀಕರಣ ಮಾಡಿದ್ದಾರೆನ್ನಲಾದ ಘಟನೆ ಇದೀಗ ವಾರದ ಬಳಿಕ ವಿವಾದವಾಗಿ ಮಾರ್ಪಟ್ಟಿದೆ. ಈ ಸಂಬಂಧ ಸಂತ್ರಸ್ತ ಯುವತಿ ದೂರು ನೀಡದೇ ಇದ್ದರೂ ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿದೆ.

ಸಂತ್ರಸ್ತ ಯುವತಿಯ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದ ಮೂವರು ಯುವತಿಯರನ್ನು ಕಾಲೇಜು ಆಡಳಿತ ಮಂಡಳಿ ಕಾಲೇಜಿನಿಂದ ಅಮಾನತು ಮಾಡಿದೆ. ವಿದ್ಯಾರ್ಥಿನಿಯರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎನ್ನಲಾದ, ಅವರ ಬಳಿಯಿದ್ದ ಮೊಬೈಲ್‌ನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಆದರೆ ತನಿಖೆಗೆ ಒಳಪಡಿಸಿದಾಗ ಮೊಬೈಲ್‌ನಲ್ಲಿ ಯಾವುದೇ ವಿಡಿಯೋ ಸಿಗಲಿಲ್ಲ ಹಾಗೂ ವಿಡಿಯೋ ಫಾರ್ವರ್ಡ್ ಆದ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ಸ್ಪಷ್ಟನೆ ನೀಡಿದ್ದಾರೆ

‘ಇವರು ಮೂವರು ಒಂದೇ ವರ್ಷದ ಬೇರೆ ಬೇರೆ ಕೋರ್ಸ್‌ಗಳ ವಿದ್ಯಾರ್ಥಿ ಗಳಾಗಿದ್ದು, ಇವರ ಮಧ್ಯೆ ಸಲುಗೆ ಇತ್ತು. ಆ ಕಾರಣಕ್ಕಾಗಿ ತಮಾಷೆಗಾಗಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆಂದು ಸಂತ್ರಸ್ತ ಯುವತಿ ಸಹ ತಿಳಿಸಿದ್ದಾರೆ. ಅಷ್ಟೆ ಅಲ್ಲದೆ ತನ್ನ ಭವಿಷ್ಯದ ಕಾರಣಕ್ಕಾಗಿ ನಾನು ಯಾವುದೇ ದೂರನ್ನು ನೀಡುವುದಿಲ್ಲ ಎಂದು ಸಹ ಪೊಲೀಸರಿಗೆ ತಿಳಿಸಿದ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನಮ್ಮಲ್ಲಿ ಎಲ್ಲಾ ಧರ್ಮದ ಮಕ್ಕಳಿದ್ದಾರೆ. ಇಲ್ಲಿ ಯಾವುದೇ ಕೋಮು ದ್ವೇಷಕ್ಕೆ ಆಸ್ಪದವಿಲ್ಲ. ನಮ್ಮಲ್ಲಿ ನಡೆದ ಘಟನೆಗೆ ಧರ್ಮದ ಲೇಪ ಹಚ್ಚಬಾರದು. ಈ ಘಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಯರ ಧರ್ಮಕ್ಕೆ ಸೇರಿದ ಹಲವು ಮಕ್ಕಳು ನಮ್ಮಲ್ಲಿ ಇದ್ದಾರೆ. ಅವರೂ ಸಹ ಈ ಬಗ್ಗೆ ಗಟ್ಟಿ ದನಿಯಲ್ಲಿ ಪ್ರತಿಭಟಿಸಿದ್ದಾರೆ. ಅವರ ಭವಿಷ್ಯವೂ ಇಲ್ಲಿ ಮುಖ್ಯ. ಹಾಗಾಗಿ ನಾವು ಕೋಮು ಸಾಮರಸ್ಯ ಉಳಿಸಿಕೊಳ್ಳಬೇಕು’ ಎಂದು ಕಾಲೇಜಿನ ಮುಖ್ಯ ಶೈಕ್ಷಣಿಕ ಸಂಯೋಜನಾಧಿಕಾರಿ ಬಾಲಕೃಷ್ಣ ತಿಳಿಸಿದ್ದಾರೆ.

ಘಟನೆ ಸಂಬಂಧ ಕೆಲವಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಹಿಂದೆ ಯಾವಾಗಲೂ ಇಂತಹ ಘಟನೆ ನಡೆದಿಲ್ಲ. ಯಾವುದೇ ರೀತಿಯ ವಿಷಯವನ್ನು ಸತ್ಯಾಂಶ ತಿಳಿದುಕೊಳ್ಳದೆ ಸುಳ್ಳು ಸುದ್ದಿ ಮತ್ತು ಗೊಂದಲ ಉಂಟು ಮಾಡುವ ವಿಚಾರಗಳನ್ನು ಯಾರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು. ಇಲ್ಲಿ ಎಲ್ಲರ ಭವಿಷ್ಯ ಕೂಡಾ ನಮಗೆ ಮುಖ್ಯ ಎಂದು ಕಾಲೇಜು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು