ವಿದ್ಯಾರ್ಥಿಗಳು ಸಮಾಜದಲ್ಲಿ ಭಗತ್ ಸಿಂಗ್ ಅವರ ಹಾದಿಯಲ್ಲಿ ಪ್ರಶ್ನಿಸುವುದನ್ನು ಕಲಿಸಯಬೇಕು – ಡಾ. ರಾಜಪ್ಪ ದಳವಾಯಿ

ಹಾಸನ : ಮನುಷ್ಯನಿಗಿಂತ ಧರ್ಮ, ದೇವರು, ದೇವಾಲಯಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಮುಖ್ಯವಾಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಮನುಷ್ಯನ ಬದುಕು, ಸ್ವಾತಂತ್ರ್ಯ ಮತ್ತು ವಿಚಾರಶಕ್ತಿಯೇ ಸಮಾಜದ ಕೇಂದ್ರವಾಗಬೇಕು ಎಂದು ಡಾ. ರಾಜಪ್ಪ ದಳವಾಯಿ ಹೇಳಿದರು.ಹಾಸನ ನಗರದಲ್ಲಿ ನಡೆದ ‘ನಾನೇಕೆ ನಾಸ್ತಿಕ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಗತ್ ಸಿಂಗ್ ಅವರ “ನಾನು ಏಕೆ ನಾಸ್ತಿಕ?” ಎಂಬ ಬರಹದ ಮಹತ್ವವನ್ನು ವಿವರಿಸಿದರು.“ಭಗತ್ ಸಿಂಗ್ ಅವರು ತಮ್ಮ ಕಾಲದಲ್ಲಿಯೇ ದೇವರು, ಧರ್ಮ, ಸಮಾಜ ಹಾಗೂ ಮನುಷ್ಯನ ನಡುವಿನ ಸಂಬಂಧವನ್ನು ಪ್ರಶ್ನಿಸಿದ್ದರು. ಅವರು ಓದಿದ ಪುಸ್ತಕಗಳು, ಮಾಡಿರುವ ಉಲ್ಲೇಖಗಳು ಹಾಗೂ ಅವರ ಡೈರಿಯಲ್ಲಿನ ವಿಚಾರಗಳನ್ನು ಗಮನಿಸಿದರೆ ಅವರ ಚಿಂತನೆಯ ಆಳವನ್ನು ಅರ್ಥಮಾಡಿಕೊಳ್ಳಬಹುದು” ಎಂದು ಹೇಳಿದರು.

ಅಧಿಕಾರ ಮತ್ತು ಧರ್ಮದ ನಡುವಿನ ಸಂಬಂಧವನ್ನು ಕುರಿತು ಮಾತನಾಡಿದ ಡಾ. ದಳವಾಯಿ, “ಇತಿಹಾಸದಲ್ಲಿ ಅನೇಕ ಸಂದರ್ಭಗಳಲ್ಲಿ ರಾಜಕೀಯ ಅಧಿಕಾರವು ಧರ್ಮವನ್ನು ತನ್ನ ಉದ್ದೇಶಗಳಿಗೆ ಬಳಸಿಕೊಂಡಿರುವುದನ್ನು ಕಾಣಬಹುದು. ಕೆಲವೊಮ್ಮೆ ರಾಜಕೀಯ ಮತ್ತು ಧಾರ್ಮಿಕ ಅಧಿಕಾರಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಮನುಷ್ಯನ ಸ್ವತಂತ್ರ ಚಿಂತನೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು” ಎಂದರು.

“ನಮ್ಮ ಜೀವನದಲ್ಲಿ ನಡೆಯುವ ಎಲ್ಲವೂ ನಮ್ಮ ಕರ್ಮದ ಫಲ, ಹಿಂದಿನ ಜನ್ಮದ ಕರ್ಮದ ಪರಿಣಾಮ” ಎಂದು ಪ್ರತಿಯೊಂದು ಘಟನೆಗೂ ವಿವರಣೆ ನೀಡುವ ಮನೋಭಾವ ಮನುಷ್ಯನ ಪ್ರಶ್ನಿಸುವ ಶಕ್ತಿಯನ್ನು ಕುಂಠಿತಗೊಳಿಸಬಹುದು. ಯಾವುದನ್ನೂ ಕುರುಡಾಗಿ ನಂಬುವುದಕ್ಕಿಂತ ‘ಏಕೆ? ಹೇಗೆ? ಇದಕ್ಕೆ ಸಾಕ್ಷಿ ಏನು?’ ಎಂದು ಪ್ರಶ್ನಿಸುವುದು ವೈಜ್ಞಾನಿಕ ಮನೋಭಾವದ ಮೂಲವಾಗಿದೆ” ಎಂದು ವಿವರಿಸಿದರು.“ನಾಸ್ತಿಕರಾಗಿರುವುದು ಎಂದರೆ ಅಪಾಯಕಾರಿಯಾಗುವುದು ಅಥವಾ ನೈತಿಕತೆಯನ್ನು ಕಳೆದುಕೊಳ್ಳುವುದು ಎಂದಲ್ಲ. ದೇವರನ್ನು ನಂಬದ ವ್ಯಕ್ತಿಯೂ ಅತ್ಯಂತ ಜವಾಬ್ದಾರಿಯುತವಾಗಿ, ನೈತಿಕವಾಗಿ ಮತ್ತು ಮಾನವೀಯತೆಯಿಂದ ಬದುಕಬಹುದು. ಮನುಷ್ಯನ ಒಳ್ಳೆಯತನಕ್ಕೆ ದೇವರ ನಂಬಿಕೆಯೇ ಏಕೈಕ ಆಧಾರವಲ್ಲ ಎಂದು ಡಾ. ದಳವಾಯಿ ಅಭಿಪ್ರಾಯಪಟ್ಟರು.ಭಾರತದ ಸಂವಿಧಾನ ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ತನ್ನ ಧರ್ಮವನ್ನು ಆಚರಿಸುವುದಷ್ಟೇ ಅಲ್ಲದೆ, ಯಾವುದೇ ಧರ್ಮವನ್ನು ಆಚರಿಸದಿರುವ ಸ್ವಾತಂತ್ರ್ಯವೂ ವ್ಯಕ್ತಿಗೆ ಇದೆ. ಆದರೆ ಈ ಸ್ವಾತಂತ್ರ್ಯವನ್ನು ಸಮಾಜದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲು ಎಲ್ಲವನ್ನೂ ದೇವರ ಮೇಲೆ ಬಿಟ್ಟುಬಿಡುವ ಮನೋಭಾವಕ್ಕೆ ಬಳಸಬಾರದು ಎಂದರು.

“ಸಮಾಜದಲ್ಲಿ ಅಪರಾಧ, ಅನ್ಯಾಯ, ಬಡತನ, ಅಸಮಾನತೆ ಮತ್ತು ಶೋಷಣೆಗಳಿದ್ದಾಗ ದೇವರು ಬಂದು ಅವುಗಳನ್ನು ಪರಿಹರಿಸುತ್ತಾನೆಂದು ಕಾಯುವುದಕ್ಕಿಂತ, ಅವುಗಳ ಕಾರಣಗಳನ್ನು ಮನುಷ್ಯನೇ ಹುಡುಕಿ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳಬೇಕು. ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳ ಸಾಮಾಜಿಕ, ಐತಿಹಾಸಿಕ ಹಾಗೂ ರಾಜಕೀಯ ಪಾತ್ರವನ್ನೂ ಪ್ರಶ್ನಾತ್ಮಕವಾಗಿ ಪರಿಶೀಲಿಸುವ ಅಗತ್ಯವಿದೆ” ಎಂದು ಹೇಳಿದರು.

“ಭಗತ್ ಸಿಂಗ್ ಅವರ ನಾಸ್ತಿಕವಾದವನ್ನು ಕೇವಲ “ದೇವರನ್ನು ನಂಬುವುದಿಲ್ಲ” ಎಂಬ ಸರಳ ಅರ್ಥದಲ್ಲಿ ನೋಡಬಾರದು. ಅದರ ಹಿಂದಿರುವುದು ಮನುಷ್ಯನನ್ನು ಕೇಂದ್ರದಲ್ಲಿಟ್ಟುಕೊಂಡು ಯೋಚಿಸುವುದು, ಪ್ರಶ್ನಿಸುವುದು, ಸಾಕ್ಷ್ಯವನ್ನು ಹುಡುಕುವುದು ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಎಂಬ ವಿಶಾಲ ಚಿಂತನೆಯಾಗಿದೆ” ಎಂದು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು