Thursday, June 13, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿಯೊಳಗೆ ಆಂತರಿಕ ಪ್ರಜಾಪ್ರಭುತ್ವವಿಲ್ಲ – ಸುಬ್ರಮಣಿಯನ್‌ ಸ್ವಾಮಿ ದೂರು

ಒಂದು ತಿಂಗಳೊಳಗೆ ಪ್ರತಿಕ್ರಿಯಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ನಡ್ಡಾರಿಗೆ ಪತ್ರ ಬರೆದು ಬೆದರಿಸಿದ ಸ್ವಾಮಿ

ದೆಹಲಿ: ಈ ಹಿಂದೆ ಕಾಂಗ್ರೆಸ್‌ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದ ಹಿರಿಯ ರಾಜಕಾರಣಿ ಸುಬ್ರಹ್ಮಣ್ಯ ಸ್ವಾಮಿ ಈಗ ಬಿಜೆಪಿಯ ಪಾಲಿಗೆ ಮಗ್ಗಲ ಮುಳ್ಳಾಗಿ ಕಾಡುತ್ತಿದ್ದಾರೆ. ಮೊನ್ನೆಯಷ್ಟೇ ಕತಾರಿನಿಂದ ವಾಯುಪಡೆಯ ಮಾಜಿ ನೌಕರರನ್ನು ಬಿಡಿಸಿದ್ದ ಮೋದಿಯಲ್ಲ ಶಾರುಖ್‌ ಖಾನ್‌ ಎಂದಿದ್ದ ಸುಬ್ರಮಣ್ಯ ಸ್ವಾಮಿ ಈಗ ಬಿಜೆಪಿ ಅಧ್ಯಕ್ಷರ ಅಧಿಕಾರವಧಿಯ ವಿಸ್ತರಣೆ ಅಸಾಂವಿಧಾನಿಕ ಎನ್ನುವ ಮೂಲಕ ಮತ್ತೊಮ್ಮೆ ಪಕ್ಷಕ್ಕೆ ಮುಜುಗರ ತಂದಿದ್ದಾರೆ.

ಈ ಹಿಂದಿನ ಅವರ ಹೇಳಿಕೆಯ ಪ್ರಭಾವ ಯಾವ ಮಟ್ಟಿಗಿತ್ತೆಂದರೆ ಶಾರುಖ್‌ ಸ್ವತಃ ಮುಂದೆ ಬಂದು ಅಧಿಕಾರಿಗಳ ಬಿಡುಗಡೆಯಲ್ಲಿ ತನ್ನದೇನೂ ಪಾತ್ರವಿಲ್ಲ ಎನ್ನುವ ಹೇಳಿಕೆಯನ್ನು ನೀಡಬೇಕಾಗಿ ಬಂದಿತ್ತು. ಈಗ ಸ್ವಾಮಿಯ ಈ ಪತ್ರ ಎಂತಹ ಹಂಗಾಮ ಸೃಷ್ಟಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಪತ್ರದಲ್ಲೇನಿದೆ?

ಸ್ವಾಮಿ ತನ್ನ ಪತ್ರದಲ್ಲಿ “ಸಂವಿಧಾನ ಮತ್ತು ಪ್ರಜಾಪ್ರತಿನಿಧಿ ಕಾಯಿದೆ, 1951ರಲ್ಲಿ ಹೇಳಿರುವಂತೆ ಶಾಸನಬದ್ಧ ಮತ್ತು ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆಯಾಗಿದ್ದು, ಬಿಜೆಪಿಯಲ್ಲಿ ಆಂತರಿಕ ಪಕ್ಷದ ಚುನಾವಣೆಗಳ ಕೊರತೆಯಿದೆಯೆಂದು ನಾನು ಚುನಾವಣಾ ಆಯೋಗಕ್ಕೆ (ನವೆಂಬರ್ 13, 2023 ರಂದು) ಬರೆದ ಪತ್ರವನ್ನು ನಾನು ಇಲ್ಲಿ ಲಗತ್ತಿಸುತ್ತಿದ್ದೇನೆ.

ಬಿಜೆಪಿ ಅಧ್ಯಕ್ಷರ ಅಧಿಕಾರವಧಿ ವಿಸ್ತರಣೆಯು ಪ್ರಸ್ತುತ ಪಕ್ಷದ ಸಂವಿಧಾನದ XXI ಪರಿಚ್ಛೇದಕ್ಕೆ ವಿರುದ್ಧವಾಗಿದೆ, ಇದು ಅಧ್ಯಕ್ಷರ ಅಧಿಕಾರವಧಿಯನ್ನು ಕೇವಲ 3 ವರ್ಷಗಳಿಗೆ ನಿಗದಿಪಡಿಸುತ್ತದೆ, ನಂತರ ಹೊಸ ಚುನಾವಣೆ ನಡೆಸಿ ಅಧಿಕಾರವನ್ನು ವಿಸ್ತರಿಸಬಹುದು ಎನ್ನುತ್ತದೆ:

ಈ ವಿಷಯವು ಚುನಾವಣಾ ಆಯೋಗದ ಮುಂದಿರುವ ಕಾರಣ ಮತ್ತು ನನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ದೆಹಲಿ ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಬಹುದಾದ ಕಾರಣ, ಇಂದಿನ ದಿನಾಂಕದಿಂದ ಒಂದು ತಿಂಗಳ ನಂತರ ಅಗತ್ಯ ಪರಿಹಾರಗಳಿಗಾಗಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶವನ್ನು ನಾನು ಈ ಮೂಲಕ ನಿಮಗೆ ತಿಳಿಸುತ್ತಿದ್ದೇನೆ.

ಎಂದಿನಂತೆ, ಪದಾಧಿಕಾರಿಗಳು ಮತ್ತು ಸಮಿತಿಗಳನ್ನು ಆಯ್ಕೆ ಮಾಡುವಲ್ಲಿ ಕಾನೂನುಬದ್ಧ ಪಕ್ಷದ ಚುನಾವಣೆಗಳನ್ನು ನಡೆಸುವಲ್ಲಿ ವಿಫಲರಾಗಿದ್ದಕ್ಕೆ ಎದುರಾಗುವ ಪರಿಣಾಮದ ಬಗ್ಗೆ ನಿಮಗೆ ವೈಯಕ್ತಿಕವಾಗಿ ತಿಳಿಸಲು ನಾನು ಸಿದ್ಧನಿದ್ದೇನೆ.” ಎಂದು ಸ್ವಾಮಿ ತನ್ನ ಪತ್ರದಲ್ಲಿ ತಿಳಿಸಿದ್ದಾರೆ.

ಕಾನೂನು ತೊಡಕಿಗೆ ಬಿಜೆಪಿ ಹೇಗೆ ಪ್ರತಿಕ್ರಿಯಿಸಲಿದೆ?

ಲೋಕಸಭಾ ಚುನಾವಣಾ ಹೊಸ್ತಿಲಿನಲ್ಲಿರುವ ಬಿಜೆಪಿಗೆ ಪಕ್ಷದ ಹಿರಿಯ ನಾಯಕನೇ ಹೀಗೆ ಪದೇ ಪದೇ ಅಡ್ಡಗಾಲು ಇಡುತ್ತಿರುವುದು ಪಕ್ಷದ ಕಾರ್ಯಕರ್ತರು ಮತ್ತು ಮುಜುಗರ ಸೃಷ್ಟಿಸುತ್ತಿದೆ. ಯುಪಿಎ 2 ಸರ್ಕಾರದ ಕೊನೆಯ ಹಂತದಲ್ಲಿ ಕಾಂಗ್ರೆಸ್ಸನ್ನು ಕಾಡಿದ್ದಂತೆಯೇ ಈಗ ಬಿಜೆಪಿಯನ್ನು ಕಾಡುತ್ತಿರುವುದು ಆಶ್ಚರ್ಯ ಮೂಡಿಸಿದ್ದರೆ, ಶಿಸ್ತಿನ ಪಕ್ಷವೆಂದು ಕರೆದುಕೊಳ್ಳುವ ಬಿಜೆಪಿ ತನ್ನ ಪಕ್ಷದ ನಾಯಕ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಸಹ ಪಕ್ಷದ ಕಾರ್ಯಕರ್ತರಲ್ಲಿ ಆಶ್ಚರ್ಯ ಮೂಡಿಸಿದೆ.

ಸ್ವಾಮಿಯವರ ಪತ್ರದಲ್ಲಿ ಕಾನೂನು ಕ್ರಮದ ಕುರಿತಾಗಿಯೂ ಉಲ್ಲೇಖವಿರುವುದರಿಂದಾಗಿ ಬಿಜೆಪಿ ಇದನ್ನು ಹೇಗೆ ನಿಭಾಯಿಸುತ್ತದೆಯೆನ್ನುವುದನ್ನು ಕಾದು ನೋಡಬೇಕಿದೆ.

ಪಕ್ಷದಲ್ಲಿ ಇನ್ನಷ್ಟು ಪ್ರಜಾಪ್ರಭುತ್ವವನ್ನು ತರಲು ಮತ್ತು ಕಾರ್ಯಕರ್ತರು ಹೆಚ್ಚು ಹೆಚ್ಚು ಪಕ್ಷದಲ್ಲಿ ತೊಡಗಿಕೊಳ್ಳುವಂತಾಗಲು ತಾನು ಈ ಪತ್ರ ಬರೆದಿರುವುದಾಗಿ ಸುಬ್ರಮಣಿಯನ್‌ ಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು