Monday, June 17, 2024

ಸತ್ಯ | ನ್ಯಾಯ |ಧರ್ಮ

ಅಮಿತಾಭ್ ಬಚ್ಚನ್‌ ಎನ್ನುವ ಸ್ವಾರ್ಥಿಯೂ, ಸುಬ್ರತಾ ರಾಯ್‌ ಎನ್ನುವ ಸೋತ ಉದ್ಯಮಿಯೂ

ಮುಂಬಯಿ: ಅಮಿತಾಭ್ ಬಚ್ಚನ್‌ ಎನ್ನುವ ಹೆಸರು ಮತ್ತು ಸ್ವಾರ್ಥ ಎರಡೂ ಕೈ ಕೈ ಬೆಸೆದುಕೊಂಡು ಸಾಗುತ್ತವೆ. ಅಮಿತಾಭ್ ಇಂದಿಗೂ ಉಪಕಾರ ಪಡೆದವರ ಪರವಾಗಿ ನಿಂತಿಲ್ಲ. ಅದು ಸಮಾಜವಾದಿ ಪಕ್ಷವಾಗಿರಬಹುದು ಅಥವಾ ಗಾಂಧಿ ಕುಟುಂಬವಾಗಿರಬಹುದು. ಮೊನ್ನೆಯಷ್ಟೇ ತೀರಿಕೊಂಡ ಸಹರಾ ಗ್ರೂಪಿನ ಅಧ್ಯಕ್ಷ ಸುಬ್ರತಾ ರಾಯ್‌ ಕೂಡಾ ಅಮಿತಾಭ್ ಬಚ್ಚನ್‌ ಕಷ್ಟದಲ್ಲಿದ್ದಾಗ ಕೈಹಿಡಿದವರು. ಕೊನೆಗೆ ತನ್ನ ಗುರು ಮೆಹಮೂದ್‌ ಅವರಿಗೂ ಅವರು ಎಂದೂ ನಿಷ್ಟರಾಗಿರಲಿಲ್ಲ.

ಹೌದು, ಬಚ್ಚನ್‌ ಮಾಲಿಕತ್ವದ ABCL ಆರ್ಥಿಕವಾಗಿ ಮುಳುಗಿ ಇನ್ನೇನು ಅಮಿತಾಬ್‌ ಮುಳುಗಿಯೇ ಹೋದರು ಎನ್ನುವ ಹಂತದಲ್ಲಿ ಅವರ ಕೈ ಹಿಡಿದವರು ಸಹರಾ ಗ್ರೂಪ್‌ ಮಾಲಿಕ ಸುಬ್ರತಾ ರಾಯ್.‌

ಜಯಾ ಬಚ್ಚನ್‌ ಇಂದಿಗೂ ಸಮಾಜವಾದಿ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ. ಆದರೆ ಅಮಿತಾಭ್ ಬಚ್ಚನ್‌ ತನ್ನ ವ್ಯವಹಾರದ ಲಾಭಕ್ಕೋಸ್ಕರ ಬಿಜೆಪಿ ಮತ್ತು ಮೋದಿ ಪಟಾಲಂ ಜೊತೆ ಸೇರಿಕೊಂಡರು. ವೈಬ್ರೆಂಟ್‌ ಗುಜರಾತ್‌ ಎನ್ನುವ ಜಾಹೀರಾತಿನ ಮುಖಾಂತರ ಕೋಟಿ ಕೋಟಿ ಸಂಪಾದಿಸಿದರು. ಇದೇ ಅಮಿತಾಬ್‌ ಯುಪಿಎ ಸರ್ಕಾರವಿದ್ದಾಗಲೂ ಹಲವು ಸರ್ಕಾರಿ ಜಾಹೀರಾತುಗಳಲ್ಲಿ ಮಿಂಚಿದವರು. ಅಂದ ಹಾಗೆ ಸುಬ್ರತಾ ರಾಯ್‌ ಹಾಗೂ ಅಮಿತಾಭ್ ಬಚ್ಚನ್‌ ಸ್ನೇಹ ಸೇತುವೆ ಬೆಸೆದವರು ಸಮಾಜವಾದಿ ಪಕ್ಷದ ಅಮರಸಿಂಗ್!‌

ಒಂದು ಕಾಲದಲ್ಲಿ ಸುಬ್ರತಾ ರಾಯ್‌ ಮನೆಯ ಕಾರ್ಯಕ್ರಮಗಳಲ್ಲಿ ಕುಟುಂಬ ಸಮೇತ ನಿಂತು ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಸ್ವಾಗತಿಸುತ್ತಿದ್ದ ಅಮಿತಾಭ್‌ ಬಚ್ಚನ್‌ ಇಂದು ಅವರು ತೀರಿಕೊಂಡಾಗ ಕನಿಷ್ಟ ಒಂದು ಟ್ವೀಟ್‌ ಮಾಡುವ ಸೌಜನ್ಯವನ್ನೂ ತೋರಲಿಲ್ಲ!

ಈ ಕುರಿತು ಟ್ವಿಟರ್‌ (X) ವೇದಿಕೆಯಲ್ಲೂ ಚರ್ಚೆಗಳು ಟೀಕೆಗಳು ವ್ಯಕ್ತವಾಗುತ್ತಿವೆ. 2014ರ ನಂತರದ ಮೋದಿ ಯುಗದ ಹಿಂದುತ್ವದ ಅಡಿಯಲ್ಲಿ ಲಾಭ ಗಳಿಸಿಕೊಳ್ಳುತ್ತಿರುವ ನಟರಲ್ಲಿ ಅಮಿತಾಭ್‌ ಕೂಡಾ ಒಬ್ಬರು. ಕೇಂದ್ರ ಸರ್ಕಾರ ಅಗತ್ಯವಿದ್ದಾಗಲೆಲ್ಲ ಅಮಿತಾಭ್‌, ಸಚಿನ್‌, ಶಾರುಖ್‌ ಮೊದಲಾದವರ ಟ್ವಿಟರ್‌ ಖಾತೆಗಳನ್ನು ತನ್ನ ಇಮೇಜ್‌ ಡ್ಯಾಮೇಜ್‌ ಕಂಟ್ರೋಲ್‌ ಮಾಡಿಕೊಳ್ಳಲು ಬಳಸಿಕೊಂಡಿದೆ.

ಈ ಕುರಿತು ಉದ್ಯಮಿ ಹರ್ಷ್‌ ಗೊಯೆಂಕಾ ಕೂಡಾ ಟ್ವೀಟ್‌ ಮಾಡಿದ್ದು, “ಸುಬ್ರತೋ ರಾಯ್‌ ಯಶಸ್ಸಿನ ದಿನಗಳಲ್ಲಿ ಅವರ ಹಿಂದೆ ರಾಶಿ ರಾಶಿ ನಟರು ಮತ್ತು ರಾಜಕಾರಣಿಗಳಿರುತ್ತಿದ್ದರು. ಆದರೆ ಅವರ ಸೋತ ತಕ್ಷಣ ಆ ಗುಂಪುಗಳು ಕರಗಿ ಹೋದವು. ಯಾರ ಬದುಕಿನಲ್ಲಿ ಈ ರೀತಿ ಆಗಬಾರು ಎನ್ನಿಸುತ್ತದೆ ನನಗೆ. ಆದರೆ ಏನು ಮಾಡುವುದು? ಬದುಕು ಇರುವುದೇ ಹಾಗೆ” ಎಂದು ಬೇಸರದಿಂದ ಬರೆದುಕೊಂಡಿದ್ದಾರೆ.

ಸುಬ್ರತ ರಾಯ್‌ ಅವರಿಂದ ನಷ್ಟಕ್ಕೊಳಗಾಗಿರುವ ಜನರು ಅವರಿಗೆ ಶಾಪ ಹಾಕುತ್ತಿದ್ದರೆ, ಅವರಿಂದ ಲಾಭಕ್ಕೊಳಗಾದ ರಾಜಕಾರಣಿಗಳು ಹಾಗೂ ಚಿತ್ರನಟರು ತಮ್ಮ ಐಷಾರಾಮಿ ಬದುಕು ಬದುಕುತ್ತಾ ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ಇದ್ದಾರೆ.

Related Articles

ಇತ್ತೀಚಿನ ಸುದ್ದಿಗಳು