Sunday, June 23, 2024

ಸತ್ಯ | ನ್ಯಾಯ |ಧರ್ಮ

ಚೈತ್ರಾ ಕುಂದಾಪುರ: ಕಸ್ಟಡಿಯಲ್ಲೂ ಹೈಡ್ರಾಮಾ, ಆತ್ಮಹತ್ಯೆ ಪ್ರಯತ್ನ!

ಉಡುಪಿ/ಬೆಂಗಳೂರು: ನಿನ್ನೆ ತಡರಾತ್ರಿ ಬಂಧಿತಳಾಗಿರುವ ಬಾಡಿಗೆ ಭಾಷಣಕಾರ್ತಿ ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ರಂಪಾಟಗಳನ್ನು ನಡೆಸಿರುವುದು ಬೆಳಕಿಗೆ ಬಂದಿದೆ.

ಪ್ರಸ್ತುತ ಪೊಲೀಸರು ಆಕೆಯನ್ನು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದು, ದಾರಿಯುದ್ದಕ್ಕೂ ರಂಪಾಟ ನಡೆಸಿರುವುದು ತಿಳಿದು ಬಂದಿದೆ. ಅದೂ ಸಾಲದೆಂಬಂತೆ ಉಂಗುರ ನುಂಗಿ ಆತ್ಮಹತ್ಯೆಗೂ ಪ್ರಯತ್ನಿಸಿದ ಕುರಿತು ವರದಿಯಾಗಿದೆ.

ಬಾಬು ಗೋವಿಂದ ಪೂಜಾರಿ ಎನ್ನುವ ಉದ್ಯಮಿಯೊಬ್ಬರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಎಮ್ಮಲ್ಲೆ ಟಿಕೆಟ್‌ ಕೊಡಿಸುವುದಾಗಿ ಹೇಳಿ ಏಳು ಕೋಟಿ ವಂಚಿಸಿದ ಪ್ರಕರಣದಲ್ಲಿ ಪೊಲೀಸರು ಚೈತ್ರಾ ಕುಂದಾಪುರ ಹಾಗೂ ಆಕೆಯ ಸಹಚರರನ್ನು ವಶಕ್ಕೆ ಪಡೆದಿರುತ್ತಾರೆ.

ಹೀಗೆ ಬಂಧಿಸಿದ ಆಕೆಯನ್ನು ಬೆಂಗಳೂರಿಗೆ ಕರೆದೊಯ್ಯುವಾಗ ಮೇಲಿನ ಘಟನೆ ನಡೆದಿದೆಯೆಂದು ತಿಳಿದುಬಂದಿದೆ. ಪೊಲೀಸರು ಆಕೆಯ ಪ್ರಯತ್ನವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿದೆ.

ಅಲ್ಲದೆ ಆಕೆ ತನ್ನನ್ನು ಒಯ್ಯುತ್ತಿದ್ದ ಕಾರಿನ ಗಾಜನ್ನೂ ಒಡೆಯಲು ಪ್ರಯತ್ನಿಸಿದ್ದಾಗಿ ಸುದ್ದಿ ಬರುತ್ತಿದೆ. ಪ್ರಸ್ತುತ ಆಕೆಯನ್ನು ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದು, ಸಂಜೆ ನ್ಯಾಯಾಧೀಶರ ಮುಂದೆ ಹಾಜರಿಪಡಿಸುವ ಸಾಧ್ಯತೆಯಿದೆ.

Related Articles

ಇತ್ತೀಚಿನ ಸುದ್ದಿಗಳು