Friday, June 14, 2024

ಸತ್ಯ | ನ್ಯಾಯ |ಧರ್ಮ

ಜೆಡಿಎಸ್‌, ಬಿಜೆಪಿ ಮೈತ್ರಿ ಹಿನ್ನೆಲೆ; ಕಾಂಗ್ರೆಸ್ಸಿನತ್ತ ಮುಖ ಮಾಡಿದ ಸುಮಲತಾ ಅಂಬರೀಷ್

ಮಂಡ್ಯ: ಲೋಕಸಭಾ ಚುನಾವಣೆಗೆ ರಂಗ ಸಿದ್ಧವಾಗುತ್ತಿರುವಂತೆ ರಾಜ್ಯದ ಸಂಸತ್‌ ಅಭ್ಯರ್ಥಿಗಳು ಚುರುಕಾಗುತ್ತಿದ್ದಾರೆ. ಒಬ್ಬೊಬ್ಬರೇ ತಮ್ಮ ಕ್ಷೇತ್ರಗಳನ್ನು ಆರಿಸಿಕೊಳ್ಳುವುದರ ಜೊತೆಗೆ, ಎಲ್ಲಿ ನಿಂತರೆ ಕ್ಷೇಮ, ಯಾರೆದುರು ನಿಂತರೆ ಕ್ಷೇಮ ಎಂದೆಲ್ಲಾ ಯೋಚಿಸತೊಡಗಿದ್ದಾರೆ.

ಕಳೆದ ಬಾರಿ ದೇಶದ ಗಮನ ಸೆಳೆದ ಕ್ಷೇತ್ರಗಳಲ್ಲಿ ಮಂಡ್ಯ ಸಂಸತ್‌ ಕ್ಷೇತ್ರವೂ ಒಂದಾಗಿತ್ತು. ಖ್ಯಾತ ನಟ ಅಂಬರೀಷ್‌ ಅವರ ಪತ್ನಿ ಸುಮಲತಾ ಅಂಬರೀಷ್‌ ಅವರು ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿದ್ದರು. ಯಶ್‌, ದರ್ಶನ್‌ ಅವರಂತಹ ನಟರು ಅವರ ಪರ ಪ್ರಚಾರಕ್ಕೆ ಬರುವ ಮೂಲಕ ಚುನಾವಣೆಗೆ ಒಂದಷ್ಟು ಗ್ಲಾಮರ್‌ ರಂಗೂ ಅಂಟಿಕೊಂಡಿತ್ತು.

ಸುಮಲತಾ ಎದುರು ನಿಂತಿದ್ದ ನಿಖಿಲ್‌ ಕುಮಾರಸ್ವಾಮಿ ಹೇಳ ಹೆಸರಿಲ್ಲದಂತೆ ಸೋತಿದ್ದರು. ಮನೆಯಲ್ಲಿ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ, ಮಂತ್ರಿ ಎಲ್ಲರೂ ಇದ್ದರೂ ನಿಖಿಲ್‌ ಪಾಲಿಗೆ ಮಂಡ್ಯ ಕ್ಷೇತ್ರ ಗಗನ ಕುಸುಮವಾಗಿ ಪರಿಗಣಿಸಿತ್ತು. ಗೌಡರ ಕುಟುಂಬ ತೀರಾ ಮುಜುಗರದ ಪರಿಸ್ಥಿತಿ ಎದುರಿಸಿತ್ತು. ಅಂದು ಬಿಜೆಪಿ ಸುಮಲತಾ ಅವರನ್ನು ಪರೋಕ್ಷವಾಗಿ ಬೆಂಬಲಿಸುವ ಮೂಲಕ ಅವರ ಗೆಲುವಿಗೆ ತನ್ನ ಕೊಡುಗೆಯನ್ನು ಸಹ ಕೊಟ್ಟಿತ್ತು. ಜೊತೆಗೆ ಇತ್ತೀಚೆಗೆ ಋಣ ತೀರಿಸಲೆಂಬಂತೆ ಸುಮಲತಾ ಮೋದಿಯವರನ್ನು ಹಾಡಿ ಹೊಗಳಿದ್ದರು. ಮತ್ತು ತಾನು ಬಿಜೆಪಿ ಸೇರಲಿದ್ದೇನೆ ಎನ್ನುವ ಸೂಚನೆಯನ್ನು ಪರೋಕ್ಷವಾಗಿ ನೀಡಿದ್ದರು.

ಆದರೆ ಈಗ ಬದಲಾದ ಪರಿಸ್ಥಿತಿಯಲ್ಲಿ ಕಳೆದ ಬಾರಿ ಶತ್ರುವಾಗಿದ್ದ ಜೆಡಿಎಸ್‌ ಕೂಡಾ ಈಗ ಬಿಜೆಪಿ ತೆಕ್ಕೆಗೆ ಮರಳಿದೆ. ರಾಮನಗರದಲ್ಲಿ ಮಗನ ಸೋಲಿನ ನಂತರ ಕಂಗಾಲಾಗಿರುವ ಕುಮಾರಸ್ವಾಮಿ ಶತಾಯ ಗತಾಯ ಮಗನನ್ನು ರಾಜಕೀಯವಾಗಿ ನೆಲೆ ಕಾಣಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಏನು ಮಾಡಿದರೂ ಅದು ಅವರಿಂದ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರು ಇತ್ತೀಚೆಗೆ ಹಿಂದುತ್ವದ ರಥವೇರಿ ಮಗನಿಗೆ ಸಾರಥಿಯಾಗಿದ್ದಾರೆ.

ಕುಮಾರಸ್ವಾಮಿಯವರಿಗೆ ಮಗನನ್ನು ಗೆಲ್ಲಿಸಲು ಎರಡು ಸುರಕ್ಷಿತ ಕ್ಷೇತ್ರಗಳಿವೆ. ಅವುಗಳಲ್ಲಿ ಹಾಸನ ಒಂದು, ಇನ್ನೊಂದು ಮಂಡ್ಯ. ಆದರೆ ಹಾಸನದಲ್ಲಿ ನಿಖಿಲ್‌ ತಾತ ದೇವೇಗೌಡರು ನಿಲ್ಲುವ ಸಾಧ್ಯತೆ ಹೆಚ್ಚಿದೆ, ಅಲ್ಲದೆ ಪ್ರಜ್ವಲ್‌ ರೇವಣ್ಣ ಕೂಡಾ ಅಲ್ಲಿಂದ ಸ್ಪರ್ಧಿಸುವ ಸಾಧ್ಯತೆಗಳು ಕಾಣಿಸುತ್ತಿವೆ. ಹೀಗಿರುವಾಗ ಅವರಿಗೆ ಇರುವ ಇನ್ನೊಂದು ಆಯ್ಕೆಯೆಂದರೆ ಮಂಡ್ಯ.

ಮಂಡ್ಯದಲ್ಲಿ ಬಿಜೆಪಿಗೆ ಒಂಟಿಯಾಗಿ ಗೆಲ್ಲುವುದು ಕಷ್ಟವಿದೆ. ಹೀಗಾಗಿಯೇ ಅದು ಸುಮಲತಾ ಅವರ ಮೂಲಕ ಹಿಂಬಾಗಿಲಿನಿಂದ ಆ ಸೀಟನ್ನು ತನ್ನದಾಗಿಸಿಕೊಂಡಿತ್ತು. ಹೀಗಿರುವಾಗ ನಿಖಿಲ್‌ ಇಲ್ಲಿನ ಟಿಕೆಟ್‌ ಆಕಾಂಕ್ಷಿಯಾಗಿರುವುದು ಸುಮಲತಾ ಪಾಲಿಗೆ ಬಿಸಿತುಪ್ಪವಾಗಿದೆ. ಬಿಜೆಪಿ ಸುಮಲತಾ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್‌ ಕೊಡುವುದಾಗಿ ಹೇಳಿದೆಯಾದರೂ, ಸುಮಲತಾ ತಾನು ಮಂಡ್ಯದಿಂದಲೇ ನಿಲ್ಲುವುದಾಗಿ ಹಟ ಹಿಡಿದು ಕುಳಿತಿದ್ದಾರೆ. ಆದರೆ ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟು ಜೆಡಿಎಸ್‌ ಜೊತೆ ಕೂಡಿಕೆ ಮಾಡಿಕೊಂಡಿರುವ ಬಿಜೆಪಿಗೆ ಕುಮಾರಣ್ಣನ ಪುತ್ರ ವಾತ್ಸಲ್ಯಕ್ಕೆ ಕರಗದೆ ಬೇರೆ ದಾರಿಯೇ ಇಲ್ಲ.

ಇನ್ನೊಂದೆಡೆ ಕಳೆದ ಬಾರಿಯ ಚುನಾವಣೆಯಲ್ಲಿ ಸುಮಲತಾ ವಿರುದ್ಧ ತೀರಾ ಕೆಳಮಟ್ಟದ ಭಾಷೆಗಳನ್ನು ಬಳಸಿ ಪ್ರಚಾರ ಮಾಡಿತ್ತು. ಅದನ್ನು ಸುಮಲತಾ ಇಂದಿಗೂ ಮರೆತಿಲ್ಲ. ಹೀಗಿರುವಾಗ ಸುಮಲತಾ ಅವರಿಗೆ ನಿಖಿಲ್‌ಗೆ ಸೀಟನ್ನು ಬಿಟ್ಟುಕೊಡುತ್ತಾರೆ ಎನ್ನುವುದು ಕನಸಿನ ಮಾತು. ಅಲ್ಲದೆ ಮಂಡ್ಯ ಕ್ಷೇತ್ರವೆನ್ನುವುದು ಅಂಬರೀಷ್‌ ಕುಟುಂಬಕ್ಕೆ ಪ್ರತಿಷ್ಟೆಯ ವಿಷಯವೂ ಹೌದು.

ಸುಮಲತಾರತ್ತ ದೃಷ್ಟಿ ನೆಟ್ಟ ಕಾಂಗ್ರೆಸ್

ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್‌ಗೆ ಬಿಜೆಪಿ ಸ್ಥಾನ ನೀಡುವ ಸಾಧ್ಯತೆ ತೀರಾ ಕಡಿಮೆ ಎಂಬ ಅಂಶ ಬೆಳಕಿಗೆ ಬಂದಿದೆ. ಸುಮಲತಾ ಅಂಬರೀಶ್ ಅವರು ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಾರೆ ಮಂಡ್ಯದ ಜನ. ಬಿಜೆಪಿ ಟಿಕೆಟ್‌ಗಿಂತ ಸ್ವಂತ ಬಲದಿಂದ ಗೆಲ್ಲುವ ಸಾಧ್ಯತೆ ಇಲ್ಲದ ಕಾರಣ ಈಗ ಸುಮಲತಾ ಗೊಂದಲದಲ್ಲಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮಾಸ್ಟರ್ ಪ್ಲಾನ್ ಮಾಡಿರುವುದು ಬೆಳಕಿಗೆ ಬಂದಿದೆ.

ಒಂದು ವೇಳೆ ಬಿಜೆಪಿ ಟಿಕೆಟ್ ನೀಡದಿದ್ದಲ್ಲಿ ಸುಮಲತಾ ಅವರು‌ ಆ ಪಕ್ಷದೊಂದಿಗಿನ ಸಂಬಂಧ ಮುರಿದುಕೊಂಡು ಹೊರಬಂದರೆ ಅವರಿಗೆ ಎಂಪಿ ಟಿಕೆಟ್ ನೀಡಲು ಕಾಂಗ್ರೆಸ್ ಮುಖಂಡರು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸುಮಲತಾ ಅವರ ಪತಿ, ರೆಬೆಲ್ ಸ್ಟಾರ್ ಅಂಬರೀಶ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಂಸದರಾಗಿ, ಶಾಸಕರಾಗಿ ಯಶಸ್ವಿಯಾಗಿದ್ದರು. ಕೇಂದ್ರ ಸಚಿವರಾಗಿ, ಕರ್ನಾಟಕದ ಸಚಿವರಾಗಿ ಸೇವೆ ಸಲ್ಲಿಸಿದ್ದ ಅಂಬರೀಶ್ ನಂತರ ಅನಾರೋಗ್ಯದಿಂದ ನಿಧನರಾದರು. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಸುಮಲತಾ ಅವರಿಗೆ ಸ್ಥಾನ ನೀಡದೆ ನಿಖಿಲ್ ಕುಮಾರಸ್ವಾಮಿ ಅವರನ್ನು ಬೆಂಬಲಿಸಿತ್ತು.

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕರು ಕೂಡ ಸುಮಲತಾ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕೆಜಿಎಫ್ ಹೀರೋ ಯಶ್ ಕೂಡ ಸುಮಲತಾ ಬೆಂಬಲಕ್ಕೆ ನಿಂತಿದ್ದಾರೆ. ಸುಮಲತಾ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಜನರು ನಮಗೇ ಒಲವು ತೋರುವ ಸಾಧ್ಯತೆ ಇದೆ ಎನ್ನುತ್ತಾರೆ ಆ ಪಕ್ಷದ ಮುಖಂಡರು.

ಆದರೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಥಾನ ಸಿಗದಿದ್ದರೆ ಬಿಜೆಪಿ ಹೈಕಮಾಂಡ್ ಸುಮಲತಾ ಅವರಿಗೆ ಬೆಂಗಳೂರಿನ ಯಾವುದಾದರೂ ಕ್ಷೇತ್ರವನ್ನು ಮೀಸಲಿಡುತ್ತದೆ ಅಥವಾ ಬೇರೆಡೆ ಅವಕಾಶ ನೀಡಲಿದೆ ಎಂದು ಬಿಜೆಪಿ ಅಭಿಮಾನಿಗಳು ಹೇಳುತ್ತಾರೆ. ಸುಮಲತಾ ಅಂಬರೀಶ್ ಕಾಂಗ್ರೆಸ್ ಪಕ್ಷದಿಂದ ಹೊರ ಬಂದರೂ ಮಂಡ್ಯ ಜಿಲ್ಲೆಯ ಆ ಪಕ್ಷದ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸುಮಲತಾ ಅಂಬರೀಷ್ ಸಂಪರ್ಕದಲ್ಲಿದ್ದಾರೆ. ಸುಮಲತಾ ಅಂಬರೀಷ್ ಅವರಿಗೆ ಮಂಡ್ಯ ಲೋಕಸಭಾ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಆಫರ್ ಬಂದಿದೆ ಎನ್ನುವ ಆಂತರಿಕ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಚಿತ್ರ ನಟಿ ರಮ್ಯಾ ಕೂಡಾ ಈ ಕ್ಷೇತ್ರದ ಟಿಕೆಟ್ಟಿನ ಮೇಲೆ ಕಣ್ಣಿಟ್ಟಿದ್ದಾರೆನ್ನುವ ಗುಸುಗುಸು ಕೇಳಿಬರುತ್ತಿದ್ದು, ಸ್ಪಷ್ಟ ಚಿತ್ರಣಕ್ಕಾಗಿ ಕನಿಷ್ಟ ಎಪ್ರಿಲ್‌ ತನಕವಾದರೂ ಕಾಯಬೇಕಾಗಬಹುದು.

Related Articles

ಇತ್ತೀಚಿನ ಸುದ್ದಿಗಳು