Tuesday, June 18, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಟಿಕೆಟ್ಟಿಗಾಗಿ ಪ್ರಧಾನಿ ಭೇಟಿ ಮಾಡಿದ ಸುಮಲತಾ: ನಿಖಿಲ್‌ ಕುಮಾರಸ್ವಾಮಿಗೆ ಮಂಡ್ಯ ಟಿಕೆಟ್‌ ಅನುಮಾನ?

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಸಂಸದೆ ಸುಮಲತಾ ಅಂಬರೀಶ್ ಶುಕ್ರವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಸಭೆಯ ನಂತರ ಸುಮಲತಾ ಪ್ರಧಾನಿಯನ್ನು ಹೊಗಳುತ್ತಾ ‘ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ’ ಎಂದು ತಿಳಿಸಿದರು. ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸುಮಲತಾ ಅವರು ಬಿಜೆಪಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.

ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರನ್ನು ಸುಮಲತಾ ಭೇಟಿಯಾದ ಕೆಲವೇ ದಿನಗಳಲ್ಲಿ ಈ ಸಭೆ ನಡೆದಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಸುಮಲತಾ ʼನಾವು ಒಟ್ಟಿಗೆ ಕೆಲಸ ಮಾಡುವುದನ್ನು ಮುಂದುವರೆಸುತ್ತೇವೆʼ ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ಪಕ್ಷಕ್ಕೆ ನೀಡಲಾಗುತ್ತದೆ ಎನ್ನುವ ಸುದ್ದಿ ಚಾಲ್ತಿಯಲ್ಲಿತ್ತು. ಕಳೆದ ಬಾರಿ ಸುಮಲತಾ ಅವರೆದುರು ಸೋತಿದ್ದ ನಿಖಿಲ್‌ ಕುಮಾರಸ್ವಾಮಿಯೇ ಈ ಬಾರಿಯ ಅಲ್ಲಿನ ಬಿಜೆಪಿ ಅಭ್ಯರ್ಥಿ ಎನ್ನುವ ಮಾತೂ ಕೇಳಿ ಬಂದಿತ್ತು. ಆದರೆ ಈಗ ಸುಮಲತಾ ಮೋದಿಯವರನ್ನು ಭೇಟಿಯಾಗುವುದರೊಂದಿಗೆ ಮಂಡ್ಯ ರಾಜಕಾರಣದ ಚಿತ್ರಣವನ್ನೇ ಬದಲಿಸಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಬಿಜೆಪಿ ಟಿಕೆಟ್ ಮೇಲೆ ಸುಮಲತಾ ಕಣ್ಣಿಟ್ಟಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರೊಂದಿಗಿನ ಸಭೆ ಮಹತ್ವ ಪಡೆದುಕೊಂಡಿದೆ.

ಜೆಡಿಎಸ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಸೇರುವ ಮುನ್ನ ಮಂಡ್ಯದಲ್ಲಿ ಬಿಜೆಪಿ ಟಿಕೆಟ್‌ಗೆ ಸುಮಲತಾ ಅವರೇ ಸ್ವಾಭಾವಿಕ ಆಯ್ಕೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೈತ್ರಿ ನಂತರ ಮಂಡ್ಯದಲ್ಲಿ ಜೆಡಿಎಸ್‌ ಬಲಿಷ್ಠ ಎಂಬ ಲೆಕ್ಕಾಚಾರದಲ್ಲಿದ್ದು, ಸೀಟು ಹಂಚಿಕೆ ಮಾತುಕತೆಯಂತೆ ಕ್ಷೇತ್ರವನ್ನು ಅದು ತನ್ನದಾಗಿಸಿಕೊಂಡಿತ್ತು.

ಅಂದಿನಿಂದ ಸುಮಲತಾಗೆ ಮಂಡ್ಯದಿಂದ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಕ್ಷೀಣಿಸಿದೆ. ಅವರು ಬೇರೆ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ್ದಾರೆ.

ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ಜೊತೆಗಿನ ಸಭೆಯಲ್ಲಿ ಸುಮಲತಾ ಅವರು ಮಂಡ್ಯದಿಂದ ಟಿಕೆಟ್ ಕೇಳಿದ್ದಾರೆ ಎನ್ನಲಾಗಿದೆ. ಫೆಬ್ರವರಿ 10ರಂದು ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ತೀವ್ರ ಹಣಾಹಣಿ ನಡೆಸಿ ಸುಮಲತಾ ಮಂಡ್ಯ ಕ್ಷೇತ್ರದಲ್ಲಿ ಗೆದ್ದಿದ್ದರು.

Related Articles

ಇತ್ತೀಚಿನ ಸುದ್ದಿಗಳು