ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಾವಧಿಯಲ್ಲಿ ನಡೆದ ಪ್ರಕರಣವೊಂದು ಈಗ ಮತ್ತೆ ಮರುಜೀವ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಗೆ ಭ್ರಷ್ಟಾಚಾರ ನಿಗ್ರಹ ದಳ ಸಮನ್ಸ್ ಜಾರಿ ಮಾಡಿದೆ.
ಸರ್ಕಾರಿ ಶಾಲೆಗಳ ತರಗತಿಗಳ ಕಟ್ಟಡ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗೆ ಸಂಬಂಧಿಸಿದಂತೆ 2,000 ಕೋಟಿ ಮೊತ್ತದ ಹಗರಣದ ಬಗ್ಗೆ ಆರೋಪ ಬಂದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಗೆ ಸಮನ್ಸ್ ಜಾರಿ ಮಾಡಿದೆ. ಸತ್ಯೇಂದ್ರ ಜೈನ್ ಜೂನ್ 6 ಕ್ಕೆ ಮತ್ತು ಮನೀಶ್ ಸಿಸೋಡಿಯಾ ಜೂನ್ 9 ಕ್ಕೆ ಪ್ರತ್ಯೇಕವಾಗಿ ದೆಹಲಿಯ ಬ್ಯೂರೋ ಕಛೇರಿಗೆ ಭೇಟಿ ನೀಡುವಂತೆ ಸಮನ್ಸ್ ಜಾರಿ ಮಾಡಲಾಗಿದೆ.
ದೆಹಲಿಯಲ್ಲಿ ಹಿಂದಿನ ಎಎಪಿ ಸರ್ಕಾರದ ಅವಧಿಯಲ್ಲಿ 12,748 ತರಗತಿ ಕೊಠಡಿಗಳು ಮತ್ತು ಕಟ್ಟಡಗಳ ನಿರ್ಮಾಣವನ್ನು ಹೆಚ್ಚಿನ ವೆಚ್ಚದಲ್ಲಿ ಮಾಡಲಾಗಿದೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳವು ಏಪ್ರಿಲ್ 30 ರಂದು ಇಬ್ಬರು ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಎಎಪಿ ಆಡಳಿತದಲ್ಲಿ ಸಿಸೋಡಿಯಾ ಶಿಕ್ಷಣ ಸಚಿವರಾಗಿದ್ದರೆ, ಜೈನ್ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಖಾತೆಯನ್ನು ಹೊಂದಿದ್ದರು.
ಎಫ್‌ಐಆರ್ ದಾಖಲಿಸುವಾಗ, ಭ್ರಷ್ಟಾಚಾರ ವಿರೋಧಿ ಸಮಿತಿಯು “ಗಮನಾರ್ಹ ವ್ಯತ್ಯಾಸಗಳು ಮತ್ತು ವೆಚ್ಚ ಹೆಚ್ಚಳ” ಕಂಡುಬಂದಿದೆ ಆದರೆ “ನಿಗದಿತ ಅವಧಿಯಲ್ಲಿ ಒಂದೇ ಒಂದು ಕೆಲಸವನ್ನು ಪೂರ್ಣಗೊಳಿಸಲಾಗಿಲ್ಲ” ಎಂದು ಹೇಳಿದೆ. “ಸೂಕ್ತ ಕಾರ್ಯವಿಧಾನವನ್ನು ಅನುಸರಿಸದೆ ಸಲಹೆಗಾರ ಮತ್ತು ವಾಸ್ತುಶಿಲ್ಪಿಯನ್ನು ನೇಮಿಸಲಾಯಿತು ಮತ್ತು ಅವರ ಮೂಲಕ ವೆಚ್ಚ ಹೆಚ್ಚಳವನ್ನು ಕೈಗೊಳ್ಳಲಾಯಿತು. ಸಕ್ಷಮ ಪ್ರಾಧಿಕಾರದಿಂದ 17-ಎ ಪೋಕ್ ಕಾಯ್ದೆಯಡಿ ಅನುಮತಿ ಪಡೆದ ನಂತರ ಪ್ರಕರಣ ದಾಖಲಿಸಲಾಗಿದೆ” ಎಂದು ಅದು ಹೇಳಿದೆ.