Saturday, January 31, 2026

ಸತ್ಯ | ನ್ಯಾಯ |ಧರ್ಮ

ಮಹಾರಾಷ್ಟ್ರದ ಡಿಸಿಎಂ ಆಗಿ ಸುನೇತ್ರಾ ಪವಾರ್? ಇಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ

ದೆಹಲಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರು ಬುಧವಾರ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನಿಧನರಾಗಿದ್ದರು. ಅವರ ಸ್ಥಾನಕ್ಕೆ ಅವರ ಪತ್ನಿ ಸುನೇತ್ರಾ ಪವಾರ್ ಅವರು ಶನಿವಾರ ನೂತನ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಮತ್ತು ಅವರ ಹೆಸರನ್ನು ಅಂತಿಮಗೊಳಿಸಲು ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆಯು ಶನಿವಾರ ಮುಂಬೈನ ವಿಧಾನ ಭವನದಲ್ಲಿ ನಡೆಯಲಿದೆ. ತದನಂತರ ಸಂಜೆ ಸುನೇತ್ರಾ ಪವಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ. ಒಂದೊಮ್ಮೆ ಅವರು ಅಧಿಕಾರ ವಹಿಸಿಕೊಂಡರೆ, ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಅಜಿತ್ ಪವಾರ್ ಅವರ ನಿಧನದಿಂದ ತೆರವಾದ ಸ್ಥಾನವನ್ನು ಸುನೇತ್ರಾ ಅವರೇ ತುಂಬಲಿದ್ದಾರೆ ಎಂದು ಮಹಾರಾಷ್ಟ್ರ ಸಚಿವ ಛಗನ್ ಭುಜಬಲ್ ಸುಳಿವು ನೀಡಿದ್ದಾರೆ. “ಉಪಮುಖ್ಯಮಂತ್ರಿ ಜವಾಬ್ದಾರಿಯನ್ನು ಸುನೇತ್ರಾ ಅವರಿಗೆ ವಹಿಸಬೇಕೆಂಬುದು ಹಲವರ ಒತ್ತಾಯವಾಗಿದ್ದು, ಅವರ ಬೇಡಿಕೆ ಸಮಂಜಸವಾಗಿದೆ. ಸದ್ಯ ಖಾಲಿ ಇರುವ ಸ್ಥಾನವನ್ನು ಸುನೇತ್ರಾ ಪವಾರ್ ಅವರಿಂದ ಭರ್ತಿ ಮಾಡುವುದು ನಮ್ಮ ಉದ್ದೇಶ,” ಎಂದು ಭುಜಬಲ್ ತಿಳಿಸಿದ್ದಾರೆ. ಶನಿವಾರದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ ಎಂದು ಅವರು ಹೇಳಿದರು.

ಸುನೇತ್ರಾ ಪವಾರ್ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದಾರೆ. ಅವರು ಮಹಾರಾಷ್ಟ್ರ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಲ್ಲ. ಅಜಿತ್ ಪವಾರ್ ನಿಧನದಿಂದ ಪುಣೆ ಜಿಲ್ಲೆಯ ಬಾರಾಮತಿ ವಿಧಾನಸಭಾ ಕ್ಷೇತ್ರ ತೆರವಾಗಿದೆ. ಇನ್ನು, ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಸುನೇತ್ರಾ ಪವಾರ್ ಆಯ್ಕೆಯಾಗಲು ಪಕ್ಷದಲ್ಲಿ ಯಾರಿಂದಲೂ ಯಾವುದೇ ವಿರೋಧವಿಲ್ಲ ಎಂದು ಎನ್‌ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page