Thursday, June 20, 2024

ಸತ್ಯ | ನ್ಯಾಯ |ಧರ್ಮ

ನಾಮಪತ್ರ ವಾಪಸ್‌ ತೆಗೆದುಕೊಳ್ಳಿ, ಅಥವಾ ಶಿಸ್ತುಕ್ರಮ ಎದುರಿಸಿ; ರಘುಪತಿ ಭಟ್‌ಗೆ ಪಕ್ಷದ ಎಚ್ಚರಿಕೆ

ಉಡುಪಿ : ವಿಧಾನಸಭಾ ಟಿಕೆಟ್ ವಂಚಿತರಾಗಿದ್ದ ಮಾಜಿ ಶಾಸಕ ರಘುಪತಿ ಭಟ್ ಇದೀಗ ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇವರ ಈ ನಿರ್ಧಾರಕ್ಕೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. 24 ಗಂಟೆಯೊಳಗೆ ಚುನಾವಣೆ ಕಣದಿಂದ ಹಿಂದಕ್ಕೆ ಸರಿಯದಿದ್ದರೆ ಶಿಸ್ತುಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇಂದು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 24 ಗಂಟೆಯೊಳಗಾಗಿ ರಘುಪತಿ ಭಟ್ ಅವರು ವಿಧಾನಪರಿಷತ್ ಚುನಾವಣಾ ಕಣದಿಂದ ನಿವೃತ್ತರಾಗದಿದ್ದರೆ ಪಕ್ಷದಿಂದ ಶಿಸ್ತುಕ್ರಮ ಅನಿವಾರ್ಯ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ರಘುಪತಿ ಭಟ್ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಅವರ ಜೊತೆ ನಾನು ಮಾತನಾಡಿದ್ದೇನೆ. ಪಕ್ಷದ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಏನು ಬೇಕೋ ಅದನ್ನೆಲ್ಲ ನಾವು ಪಕ್ಷದ ವತಿಯಿಂದ ಮಾಡುತ್ತೇವೆ. ರಘುಪತಿ ಭಟ್ ಆಗಲಿ ಯಾರೇ ಆಗಲಿ, ಪಕ್ಷಕ್ಕೆ ಮುಜುಗರ ತರುವ ಕೆಲಸವನ್ನು ಯಾರೇ ಮಾಡಿದರೂ ಪಕ್ಷ ಶಿಸ್ತುಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ರಘುಪತಿ ಭಟ್‌ ಯಾವುದೇ ಕಾರಣಕ್ಕೂ ಕಣದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಸವಾಲ್‌ ಎಸೆದಿದ್ದರು. ಈಗಲೂ ಅವರು ತಮ್ಮ ನಿಲುವನ್ನೇ ಮುಂದುವರೆಸಲಿದ್ದಾರೆಯೇ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ. ಈ ನಡುವೆ ಈಶ್ವರಪ್ಪ ಕೂಡಾ ರಘುಪತಿ ಭಟ್‌ ಅವರಿಗೆ ಬೆಂಬಲ ಘೋಷಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು