Saturday, June 15, 2024

ಸತ್ಯ | ನ್ಯಾಯ |ಧರ್ಮ

ದ್ವೇಷದ ಮಾತು ಆಡಿದವರ ಮೇಲೆ ಸುಮೋಟೋ ಕೇಸ್‌ ದಾಖಲಿಸಿಕೊಳ್ಳಿ: ಸುಪ್ರೀಂಕೋರ್ಟ್ ಖಡಕ್‌ ಆದೇಶ

ಹೊಸದಿಲ್ಲಿ: ʼಬೇರೆ ಬೇರೆಯ ಧಾರ್ಮಿಕ ಸಮುದಾಯಗಳ ನಡುವೆ ಸಹಬಾಳ್ವೆ ಇಲ್ಲದೇ ಹೋದರೆ ಬ್ರಾತೃತ್ವ ಉಳಿಯಲು ಸಾಧ್ಯವಿಲ್ಲʼ ಎಂದು ತಿಳಿಸಿರುವ ಸುಪ್ರೀಂಕೋರ್ಟ್‌ ಯಾರೇ ದ್ವೇಷದ ಮಾತುಗಳನ್ನು ಆಡಿದರೂ ಅವರ ಮೇಲೆ ಕೂಡಲೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ. ದೇಶದಲ್ಲಿ ಹೆಚ್ಚುತ್ತಿರುವ ದ್ವೇಷದ ಮಾತುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನ್ಯಾಯಾಲಯವು ನಿರ್ದೇಶನಗಳನ್ನು ಹೊರಡಿಸಿದೆ.

ನ್ಯಾ. ಕೆ.ಎಂ.ಜೋಸೆಫ್‌ ಮತ್ತು ಹೃಷಿಕೇಶ್‌ ರಾಯ್‌ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್‌ ಪೀಠವು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ, ಉತ್ತರಾಖಂಡ್‌ ಮತ್ತು ಉತ್ತರ ಪ್ರದೇಶ ರಾಜ್ಯಗಳ ಸರ್ಕಾರಗಳಿಗೆ ತಾವು ತಮ್ಮ ವ್ಯಾಪ್ತಿಯಲ್ಲಿ ದ್ವೇಷದ ಮಾತುಗಳ ಅಪರಾಧಗಳಿಗೆ ಕೈಗೊಂಡಿರುವ ಕ್ರಮಗಳ ವರದಿ ನೀಡುವಂತೆ ತಿಳಿಸಿದೆ.

ದ್ವೇಷದ ಮಾತು ಎಂದರೆ ಯಾವುದೇ ಮಾಧ್ಯಮದ ಮುಖಾಂತರ ಒಂದು ನಿರ್ದಿಷ್ಟ ಧರ್ಮಕ್ಕೆ ಅಥವಾ ಸಮುದಾಯಕ್ಕೆ ಸೇರಿದ ವ್ಯಕ್ತಿಗಳನ್ನು ಗುರಿಪಡಿಸಿ, ಹಿಂಸೆಗೆ ಪ್ರೇರೇಪಣೆಯಾಗುವ ರೀತಿಯಲ್ಲಿ ಆಡುವ ಮಾತುಗಳು ಎಂದು ಹಿಂದೆಯೇ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

ಮುಖ್ಯವಾಗಿ, ಈ ಸರ್ಕಾರಗಳು ಯಾವುದೇ ದೂರು ಸಲ್ಲಿಕೆಗೆ ಕಾಯದೇ ಸುಮೊಟೊ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸತಕ್ಕದ್ದು ಎಂದು ನಿರ್ದೇಶನ ನೀಡಿದೆ. ದ್ವೇಷದ ಮಾತುಗಳನ್ನು ಆಡಿರುವವರ ಧಾರ್ಮಿಕ ಹಿನ್ನೆಲೆ ಯಾವುದೇ ಇದ್ದರೂ ಗಣನೆಗೆ ತೆಗೆದುಕೊಳ್ಳದೇ ಕ್ರಮ ತೆಗೆದುಕೊಳ್ಳಬೇಕು ಎಂದು ಅದು ಹೇಳಿದೆ. ಒಂದು ವೇಳೆ ಯಾವುದೇ ವ್ಯಕ್ತಿ ದ್ವೇಷದ ಮಾತಾಡಿದ ಸಂದರ್ಭದಲ್ಲಿ ಅಂತಹ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕಿದ ಪ್ರಕರಣವನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುತ್ತದೆ ಎಂದೂ ನ್ಯಾಯಾಲಯ ಸರ್ಕಾರಗಳಿಗೆ ಎಚ್ಚರಿಸಿದೆ.

ʼಭಾರತದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಪಡಿಸಿಕೊಂಡು ನಡೆಯುತ್ತಿರುವ ದ್ವೇಷಮಾತಿನ (Hate Speech) ದಾಳಿಯನ್ನು ನಿಲ್ಲಿಸಲು ಕೋರಿ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಮೇಲಿನ ನಿರ್ದೇಶನ ನೀಡಿದೆ.

“ಭಾರತದ ಸಂವಿಧಾನವು ಭಾರತ ದೇಶವನ್ನು ಒಂದು ಜಾತ್ಯತೀತ ದೇಶವಾಗಿ ವ್ಯಾಖ್ಯಾನಿಸಿರುವುದಲ್ಲದೇ ಭ್ರಾತೃತ್ವ, ವ್ಯಕ್ತಿಗತ ಗೌರವದ ಖಾತರಿ ಹಾಗೂ ದೇಶದ ಐಕ್ಯತೆ ಮತ್ತು ಸಮಗ್ರತೆಗಳನ್ನು ಮಾರ್ಗದರ್ಶಿ ತತ್ವಗಳಾಗಿ ತನ್ನ ಪೀಠಿಕೆಯಲ್ಲಿ ತಿಳಿಸಿದೆ. ಬೇರೆ ಬೇರೆ ಧರ್ಮ, ಜಾತಿಗಳ ಜನರು ಬೆರೆತು ಅನ್ಯೋನ್ಯವಾಗಿ ಸಹಬಾಳ್ವೆ ನಡೆಸದಿದ್ದರೆ ಭ್ರಾತೃತ್ವ ಇರಲು ಸಾಧ್ಯವಿಲ್ಲʼ ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.

ʼಸುಪ್ರೀಂ ಕೋರ್ಟ್‌ ಈ ಹಿಂದೆ ದ್ವೇಷದ ಮಾತುಗಳ ವಿಷಯದಲ್ಲಿ ನಿರ್ದೇಶನ ನೀಡದ ಮೇಲೂ ಅಂತಹ ಪ್ರಕರಣಗಳ ಕುರಿತು ಯಾವುದೇ ಕ್ರಮ ಜರುಗಿಲ್ಲ ಎಂದು ಅರ್ಜಿದಾರರು ದೂರಿದರು. ಈ ಆತಂಕವನ್ನು ಪರಿಗಣಿಸಿದ ಕೋರ್ಟು, ʼನ್ಯಾಯಾಲಯವು ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಕರ್ತವ್ಯ ಹೊಂದಿದೆ. ಸಾಂವಿಧಾನಿಕ ಮೌಲ್ಯಗಳನ್ನು ಅದರಲ್ಲೂ ಕಾನೂನಿನ ಆಳ್ವಿಕೆ ಮತ್ತು ರಾಷ್ಟ್ರದ ಜಾತ್ಯತೀತ ಪ್ರಜಾತಾಂತ್ರಿಕ ಲಕ್ಷಣವನ್ನು ರಕ್ಷಿಸುವ ಕರ್ತವ್ಯ ಘನ ನ್ಯಾಯಾಲಯಕ್ಕಿದೆʼ ಎಂದು ಆದೇಶದಲ್ಲಿ ತಿಳಿಸಿದೆ.

ಪೀಠವು ನೀಡಿರುವ ನಿರ್ದೇಶನಗಳು:

  1. ಪ್ರತಿವಾದಿಗಳು (ದೆಹಲಿ, ಯುಪಿ ಮತ್ತು ಉತ್ತರಾಖಂಡ್ ಸರ್ಕಾರಗಳು) ಈ ರಿಟ್‌ ಪಿಟಿಶನ್‌ಗೆ ಸಂಬಂದಿಸಿದಂತೆ ತಾವು ತೆಗೆದುಕೊಂಡಿರುವ ಕ್ರಮಗಳ ಕುರಿತು ವರದಿ ನೀಡಬೇಕು.
  2. ಪ್ರತಿವಾದಿಗಳು ಐಪಿಸಿ 153A,153B,295A ಮತ್ತು 506 ಸೆಕ್ಷನ್‌ಗಳ ಅಡಿ ಅಪರಾಧಗಳನ್ನು ದಾಖಲಿಸುವಂತ ಯಾವುದೇ ಭಾಷಣ ಅಥವಾ ಕ್ರಿಯೆ ನಡೆದ ಸಂದರ್ಭದಲ್ಲಿ ಸುಮೊಟೊ ಪ್ರಕರಣ ದಾಖಲಿಸಿಕೊಂಡು ಅಪರಾಧಿಗಳ ಮೇಲೆ ಕೂಡಲೇ ಕ್ರಮ ಜರುಗಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಕ್ರಮ ಜರುಗಿಸಲು ಯಾವುದೇ ಬಗೆಯ ಹಿಂಜರಿಕೆ ಸರ್ಕಾರಗಳಲ್ಲಿ ಕಂಡುಬಂದ ಪಕ್ಷದಲ್ಲಿ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ತಪಿತಸ್ಥ ಅಧಿಕಾರಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು.

Related Articles

ಇತ್ತೀಚಿನ ಸುದ್ದಿಗಳು