Thursday, June 13, 2024

ಸತ್ಯ | ನ್ಯಾಯ |ಧರ್ಮ

ಉತ್ತರ ಕನ್ನಡಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರಿಂದ ಸ್ಥಳ ಪರಿಶೀಲನೆ

ಉತ್ತರ ಕನ್ನಡ ಜಿಲ್ಲೆಯ ಜನರ ಒತ್ತಾಸೆಯಂತೆಯೇ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಕುಮಟದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಶೀಘ್ರದಲ್ಲೇ ಈ ಯೋಜನೆಗೆ ಅನುಮೋದನೆ ನೀಡಿ ಅನುದಾನ ನಿಗದಿ ಮಾಡಲಾಗುವುದು. ಈ ಹಿಂದೆ ಆಯ್ಕೆ ಮಾಡಿದ್ದ 3 ಸ್ಥಳಗಳ ಪೈಕಿ ಮಿರ್ಜಾನ್‌ ಬಳಿಯಿರುವ ಸ್ಥಳವನ್ನು ಅಂತಿಮ ಮಾಡಲು ಚರ್ಚೆಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಕುಮಟದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸಂಬಂಧ ಹಾಗೂ ಆರೋಗ್ಯ ಇಲಾಖೆ ಪರಿಶೀಲನೆ ಸಂಬಂಧ ಸಚಿವ ಡಾ.ಕೆ.ಸುಧಾಕರ್‌ ಅವರು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಕಾರವಾರದಲ್ಲಿ ಸಭೆ ನಡೆಸಿದರು. ಜೊತೆಗೆ ಕುಮಟದಲ್ಲಿ ಸ್ಥಳ ಪರಿಶೀಲನೆ ನಡೆಸಿದರು. ಇದೇ ವೇಳೆ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಜನರು ಹೋರಾಟ ಮಾಡಿದ್ದರು. ಅಧಿವೇಶನದಲ್ಲಿ ಸರ್ಕಾರ ಭರವಸೆಯನ್ನು ನೀಡಿತ್ತು. ಈಗ ಬಿಜೆಪಿ ಸರ್ಕಾರ ನುಡಿದಂತೆ ನಡೆದಿದೆ. ಅಷ್ಟೇ ಅಲ್ಲ ಕಾರಾವಾರ ವೈದ್ಯಕೀಯ ಕಾಲೇಜನ್ನು ಮೇಲ್ದರ್ಜೆಗೆ ಏರಿಸಿ, ಎಂಆರ್ಐ ಉಪಕರಣಗಳಿಗೆ ಸ್ಥಳದಲ್ಲೇ ಮಂಜೂರಾತಿ ಮಾಡಲಾಗಿದೆ. ಕ್ರಿಟಿಕಲ್ ಕೇರ್ ಆಸ್ಪತ್ರೆಯನ್ನು ಕೂಡ ವೈದ್ಯಕೀಯ ಕಾಲೇಜು ಆವರಣದಲ್ಲಿ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.

ಸೂಪರ್‌ ಸ್ಪೆಶಲೈಸೇಶನ್‌ ಆರೋಗ್ಯ ವ್ಯವಸ್ಥೆ ಉತ್ತರ ಕನ್ನಡದಲ್ಲಿ ಇಲ್ಲ. ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಎಂಟು ಹುದ್ದೆಗಳ ನೇಮಕಕ್ಕೆ ಅನುಮತಿ ನೀಡಲಾಗಿದೆ. ಆದರೆ ನೆಫ್ರಾಲಜಿಸ್ಟ್‌ ಮಾತ್ರ ಭರ್ತಿಯಾಗಿದೆ.

ಜಯದೇವ, ಕಿದ್ವಾಯಿ, ನಿಮ್ಹಾನ್ಸ್‌ ಆಸ್ಪತ್ರೆಗಳಲ್ಲಿರುವಂತೆ ಮಲ್ಟಿ ಸ್ಪೆಶಲೈಸೇಶನ್‌ ತಜ್ಞರು ಇರುವಂತಹ ವ್ಯವಸ್ಥೆಯನ್ನು ಇಲ್ಲಿ ತರಲಾಗುವುದು ಎಂದು ತಿಳಿಸಿದರು.

11.50 ಲಕ್ಷ ಆಯುಷ್ಮಾನ್‌ ಕಾರ್ಡ್‌ ನೀಡುವ ಗುರಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ 2 ಲಕ್ಷ ಆಯುಷ್ಮಾನ್‌ ಕಾರ್ಡ್‌ಗಳನ್ನು ನೀಡಿದ್ದು, ಡಿಸೆಂಬರ್‌ ಅಂತ್ಯದೊಳಗೆ 11.50 ಲಕ್ಷ ಕಾರ್ಡ್‌ ವಿತರಿಸಲಾಗುವುದು. ಈವರೆಗೆ ರಾಜ್ಯದಲ್ಲಿ 38.75 ಲಕ್ಷ ಜನರಿಗೆ ಈ ಯೋಜನೆಯಡಿ ವಿಮೆ ಸೇವೆ ದೊರೆತಿದ್ದು, 5,133 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಕಾರವಾರ ಆಸ್ಪತ್ರೆಗೆ ಎಂಆರ್‌ಐ ಯಂತ್ರವನ್ನು ಕೂಡಲೇ ಮಂಜೂರು ಮಾಡಲಾಗಿದೆ. ಹಾಗೆಯೇ, ಡಯಾಲಿಸಿಸ್‌ ಯಂತ್ರ, 10 ಐಸಿಯು, ಆರ್ಥೊಸ್ಕೋಪಿ ಉಪಕರಣ ಮಂಜೂರು ಮಾಡಲಾಗಿದೆ. ಹಾಗೆಯೇ ಕ್ರಿಟಿಕಲ್‌ ಕೇರ್‌ ಆಸ್ಪತ್ರೆ ಮಂಜೂರು ಮಾಡಿದ್ದು, ಶೀಘ್ರ ಭೂಮಿ ಪೂಜೆ ನಡೆಯಲಿದೆ. ಶಿರಸಿ ತಾಲೂಕು ಕೇಂದ್ರದಲ್ಲಿ 250 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದ್ದು, ಕೆಲವೇ ವಾರಗಳಲ್ಲಿ ಭೂಮಿ ಪೂಜೆ ನಡೆಯಲಿದೆ ಎಂದರು.

ಶಿರಸಿ, ಅಂಕೋಲ, ಯಲ್ಲಾಪುರ, ಕಾರವಾರ, ಸಿದ್ದಾಪುರದಲ್ಲಿ ಮೆಡಿಕಲ್‌ ಮೊಬೈಲ್‌ ಘಟಕ ಮಾಡಲಾಗುತ್ತಿದೆ. ಕೋವಿಡ್‌ ಸಂದರ್ಭದಲ್ಲಿ 37 ಎಂಬಿಬಿಎಸ್‌, 15 ತಜ್ಞ ವೈದ್ಯರನ್ನು ನಿಯೋಜಿಸಲಾಗಿದೆ. ಕಡ್ಡಾಯ ಸೇವೆಯಡಿ 81 ಎಂಬಿಬಿಎಸ್‌, 10 ತಜ್ಞ ವೈದ್ಯರನ್ನು ಸೆಪ್ಟೆಂಬರ್‌ನಿಂದ ನಿಯೋಜಿಸಲಾಗಿದೆ. 27 ತಜ್ಞ ವೈದ್ಯರ ಕೊರತೆ ಇದ್ದು, ಇದಕ್ಕೂ ಕ್ರಮ ವಹಿಸಲಾಗುವುದು ಎಂದರು.

ಎರಡು ತಾಲೂಕು ಆಸ್ಪತ್ರೆಗಳಲ್ಲಿ ಮಾತ್ರ ಜನ ಔಷಧಿ ಕೇಂದ್ರವಿದ್ದು, ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಜನ ಔಷಧಿ ಕೇಂದ್ರಗಳನ್ನು ಒಂದು ತಿಂಗಳೊಳಗೆ ಆರಂಭಿಸಲು ಸೂಚಿಸಲಾಗಿದೆ ಎಂದರು.

ಕಾಂಗ್ರೆಸ್ ಆಶ್ವಾಸನೆಗೆ ಮಾತ್ರ ಸೀಮಿತ

ಸಂಕಲ್ಪ ಮತ್ತು ಮಹಾತ್ವಕಾಂಕ್ಷೆ ಇಟ್ಟುಕೊಂಡು ಜನರ ಸ್ಥಿತಿಗತಿಯನ್ನು ಬದಲಾವಣೆ ಮಾಡುವ ಎಲ್ಲಾ ಕೆಲಸಗಳನ್ನು ಯಶಸ್ವಿಯಾಗಿ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಅನೇಕ ವರ್ಷಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳನ್ನು ಉದ್ದಾರ ಮಾಡುವ ಆಶ್ವಾಸನೆ ಮಾತ್ರ ಕೊಟ್ಟಿತ್ತು. ಆದರೆ ಬಿಜೆಪಿ ಸರ್ಕಾರ ತರ್ಕಬದ್ಧವಾಗಿ ಈ ಕೆಲಸವನ್ನು ಮಾಡಿದೆ. ಜನರು ಮೋದಿ ನಾಯಕತ್ವವನ್ನು ಮತ್ತು ಬಿಜೆಪಿಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಪ್ರಧಾನಿಯವರು ಅಹಿಂದಾದ ದೊಡ್ಡ ನಾಯಕರು. ಆದರೆ ಅದನ್ನು ಎಲ್ಲೂ ಹೇಳಿಕೊಳ್ಳದೆ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುತ್ತಿದ್ದಾರೆ. ಅದೇ ದಾರಿಯಲ್ಲಿ ರಾಜ್ಯ ಸರ್ಕಾರ ನಡೆಯುತ್ತಿದೆ ಎಂದು ಹೇಳಿದರು.

ಬಿಜೆಪಿಗೆ ಬಹುಮತ

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಲಿದೆ. ಜನರು ಕೋವಿಡ್ ಸಮಯದಲ್ಲಿ ಸರ್ಕಾರ ಹೇಗೆ ನಡೆದುಕೊಂಡಿತ್ತು ಅನ್ನುವುದನ್ನು ನೋಡಿದ್ದಾರೆ. ಆರ್ಥಿಕ ದುಃಸ್ಥಿತಿಯಿಂದ ಚೇತರಿಕೆ ಕಡೆಗೆ ಸಾಗುತ್ತಿದ್ದೇವೆ. ಕಾಂಗ್ರೆಸ್ 1947ರಲ್ಲಿ ಭಾರತ್ ತೋಡೋ ಕಾರ್ಯಕ್ರಮ ಆರಂಭಿಸಿತ್ತು. ಆದರೆ ಈಗ ಭಾರತ್ ಜೋಡೋ ನಾಟಕ ಮಾಡುತ್ತಿದೆ ಎಂದು ಸಚಿವರು ಟೀಕಿಸಿದರು.

Related Articles

ಇತ್ತೀಚಿನ ಸುದ್ದಿಗಳು