Home ದೇಶ ತೆಲಂಗಾಣದಲ್ಲಿ ‘ಮಾರ್ವಾಡಿ ಗೋ ಬ್ಯಾಕ್’ ಅಭಿಯಾನಕ್ಕೆ ಹೆಚ್ಚಿದ ಬೆಂಬಲ

ತೆಲಂಗಾಣದಲ್ಲಿ ‘ಮಾರ್ವಾಡಿ ಗೋ ಬ್ಯಾಕ್’ ಅಭಿಯಾನಕ್ಕೆ ಹೆಚ್ಚಿದ ಬೆಂಬಲ

0

ಹೈದರಾಬಾದ್: “ಜಹಾ ನಾ ಪಹುಂಚೆ ಬೈಲ್‌ಗಾಡಿ ವಹಾ ಪಹುಂಚೆ ಮಾರ್ವಾಡಿ” (ಎಲ್ಲಿಗೆ ಎತ್ತಿನ ಗಾಡಿಗಳು ತಲುಪುವುದಿಲ್ಲವೋ, ಅಲ್ಲಿಗೆ ಮಾರ್ವಾಡಿಗಳು ತಲುಪುತ್ತಾರೆ) ಎಂಬ ನಾಣ್ಣುಡಿಯು ರಾಜಸ್ಥಾನ ಮತ್ತು ಗುಜರಾತ್‌ನ ವ್ಯಾಪಾರಿಗಳ ಉದ್ಯಮಶೀಲತೆಯನ್ನು ಪ್ರತಿಬಿಂಬಿಸುತ್ತದೆ. ಆದರೆ ತೆಲಂಗಾಣದಲ್ಲಿ ಇದು ವಿಪರೀತ ಪರಿಣಾಮ ಬೀರಿದೆ.

ಈಗ, “ಮಾರ್ವಾಡಿ ಗೋ ಬ್ಯಾಕ್” (ಮಾರ್ವಾಡಿಗಳು ಹಿಂದಕ್ಕೆ ಹೋಗಿ) ಎಂಬ ಕೂಗು ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಧ್ವನಿಸುತ್ತಿದೆ.

ಆರ್ಯ ವೈಶ್ಯರು ಸೇರಿದಂತೆ ವ್ಯಾಪಾರ ಸಮುದಾಯದಲ್ಲಿ ಮಾರ್ವಾಡಿ ವಿರೋಧಿ ಭಾವನೆ ಮೊದಲಿನಿಂದಲೂ ಇತ್ತು. ಆದರೆ ಕಳೆದ ತಿಂಗಳು, ಮೋಂಡಾ ಮಾರುಕಟ್ಟೆಯಲ್ಲಿ ವಾಹನ ನಿಲುಗಡೆ ವಿಚಾರದಲ್ಲಿ ದಲಿತ ಯುವಕರು ಮತ್ತು ಮಾರ್ವಾಡಿಗಳ ನಡುವೆ ನಡೆದ ಜಗಳದ ನಂತರ ಈ ಕೂಗು ಮತ್ತಷ್ಟು ಹೆಚ್ಚಾಯಿತು.

ಈ ಘಟನೆಯು ಮಾರ್ವಾಡಿ ವಿರೋಧಿ ಕೂಗನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಇತರ ಚರ್ಚೆಗಳಲ್ಲಿ “ಮಾರ್ವಾಡಿ ಗೋ ಬ್ಯಾಕ್” ಕುರಿತ ಪೋಸ್ಟರ್ಸ್ ಕಾಣುತ್ತಿವೆ.

ರಂಗಾರೆಡ್ಡಿ ಜಿಲ್ಲೆಯ ಅಮಂಗಲ್ ಪಟ್ಟಣದಲ್ಲಿ, ಸ್ಥಳೀಯ ವ್ಯಾಪಾರಿಗಳು ವ್ಯಾಪಾರ ಮತ್ತು ವ್ಯವಹಾರ ಚಟುವಟಿಕೆಗಳಲ್ಲಿ ಮಾರ್ವಾಡಿಗಳ ಪ್ರಾಬಲ್ಯವನ್ನು ವಿರೋಧಿಸಿ ಆಗಸ್ಟ್ 18ರಂದು ಬಂದ್‌ಗೆ ಕರೆ ನೀಡಿದ್ದರು. ಆದರೆ, ಸ್ಥಳೀಯ ನಾಯಕರ ಮಧ್ಯಪ್ರವೇಶದಿಂದಾಗಿ ಕೊನೆಯ ಕ್ಷಣದಲ್ಲಿ ಮುಷ್ಕರವನ್ನು ಹಿಂಪಡೆಯಲಾಯಿತು.

ಈ ವಿಷಯದ ಕುರಿತು ಹೈದರಾಬಾದ್‌ನಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ, ಹೊರ ರಾಜ್ಯದವರು ಸ್ಥಾಪಿಸಿದ ಉದ್ಯಮಗಳು ಮತ್ತು ಕೈಗಾರಿಕೆಗಳು ಸ್ಥಳೀಯರಿಗೆ ಶೇ.89ರಷ್ಟು ಉದ್ಯೋಗ ನೀಡಬೇಕೆಂಬ ಬೇಡಿಕೆಯೂ ಸೇರಿದೆ.

ಈ ವೇದಿಕೆಯು ಸ್ಥಳೀಯ ವ್ಯವಹಾರಗಳನ್ನು ರಕ್ಷಿಸಲು ಮತ್ತು ತೆಲಂಗಾಣದ ಹೊರಗಿನವರು ಇಲ್ಲಿ ಭೂಮಿ ಖರೀದಿಸುವುದನ್ನು ತಡೆಯಲು ಕಾನೂನು ರೂಪಿಸುವಂತೆ ಒತ್ತಾಯಿಸಿದೆ. ಅಲ್ಲದೆ, ಗುಜರಾತಿ ಮತ್ತು ರಾಜಸ್ಥಾನಿ ವ್ಯಾಪಾರಿಗಳಿಗೆ ನೆರವು ನೀಡದಿರಲು ಮತ್ತು ಅವರ ಸರಕುಗಳನ್ನು ಬಹಿಷ್ಕರಿಸಲು ತೆಲಂಗಾಣದ ನಿವಾಸಿಗಳಿಗೆ ಮನವಿ ಮಾಡಿದೆ.

“ನಾವು ಎಲ್ಲಾ ಮಾರ್ವಾಡಿಗಳನ್ನು ಹಿಂದಕ್ಕೆ ಕಳುಹಿಸುವುದಕ್ಕೆ ಬಯಸುವುದಿಲ್ಲ. ಸಣ್ಣ ವ್ಯಾಪಾರಿಗಳಾದ ನಮ್ಮ ಸಂಪನ್ಮೂಲಗಳನ್ನು ಬಳಸಿಕೊಂಡು ಶೋಷಣೆ ಮಾಡುವುದರ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಐದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪಟ್ಟಣಗಳು ಮತ್ತು ಸ್ಥಳಗಳಲ್ಲಿ ಹೊರಗಿನವರು ವ್ಯವಹಾರಗಳನ್ನು ಪ್ರಾರಂಭಿಸದಂತೆ ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಅವರು ಸ್ಥಳೀಯರಿಗೆ ಉದ್ಯೋಗವನ್ನೂ ನೀಡುವುದಿಲ್ಲ” ಎಂದು ತೆಲಂಗಾಣ ಕ್ರಾಂತಿ ದಳದ ಅಧ್ಯಕ್ಷ ಸಂಗಾರೆಡ್ಡಿ ಪೃಥ್ವಿರಾಜ್ ಹೇಳಿರುವುದಾಗಿ ಪತ್ರಿಕೆಯೊಂದು ಹೇಳಿದೆ.

ಆರ್ಯ ವೈಶ್ಯ, ವಿಶ್ವಬ್ರಾಹ್ಮಣ ಮತ್ತು ವಿಶ್ವಕರ್ಮ ಸಂಘಗಳ ಪ್ರತಿನಿಧಿಗಳು, ಮಾರ್ವಾಡಿಗಳು ತೆಲಂಗಾಣದ ಹಳ್ಳಿಗಳಿಗೆ ನುಸುಳಿ ತಮ್ಮ ಜೀವನೋಪಾಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಆದರೆ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು ಮಾರ್ವಾಡಿ ಸಮುದಾಯಕ್ಕೆ ಬಲವಾಗಿ ಬೆಂಬಲ ನೀಡಿದ್ದಾರೆ. ಅವರು, ಕಮ್ಯುನಿಸ್ಟ್ ಸಿದ್ಧಾಂತದ ಸೋಗಿನಲ್ಲಿ ಕಾಂಗ್ರೆಸ್, ಬಿಆರ್‌ಎಸ್ ಮತ್ತು ಎಐಎಂಐಎಂ ನಾಯಕರು ಆಯೋಜಿಸುತ್ತಿರುವ ‘ನಾಟಕಗಳನ್ನು’ ಟೀಕಿಸಿದ್ದಾರೆ.

“ಮಾರ್ವಾಡಿಗಳು ವ್ಯವಹಾರ ನಡೆಸಿದರೆ ತಪ್ಪೇನು? ಮಾರ್ವಾಡಿಗಳು ಎಂದಿಗೂ ರಾಜಕೀಯ ಅಧಿಕಾರಕ್ಕಾಗಿ ಹಂಬಲಿಸಿಲ್ಲ, ಅಥವಾ ತೆಲಂಗಾಣವನ್ನು ಲೂಟಿ ಮಾಡಿಲ್ಲ. ಅವರು ವ್ಯಾಪಾರದ ಮೂಲಕ ಸಂಪತ್ತನ್ನು ಸೃಷ್ಟಿಸಿ ಜಿಡಿಪಿ ಬೆಳವಣಿಗೆಗೆ ಗಣನೀಯವಾಗಿ ಕೊಡುಗೆ ನೀಡಿದ್ದಾರೆ. ಅವರು ಹಿಂದೂ ಸನಾತನ ಧರ್ಮದ ರಕ್ಷಣೆಗಾಗಿ ಕೆಲಸ ಮಾಡುತ್ತಾರೆ. ಮಾರ್ವಾಡಿಗಳು ಯಾಕೆ ತೆಲಂಗಾಣವನ್ನು ಬಿಡಬೇಕು?” ಎಂದು ಅವರು ಪ್ರಶ್ನಿಸಿದರು.

ಹಿಂದೂ ಸಮುದಾಯವನ್ನು ವಿಭಜಿಸಲು ಪಿತೂರಿಗಳು ಆರಂಭವಾಗಿವೆ ಎಂದು ಬಂಡಿ ಸಂಜಯ್ ಆರೋಪಿಸಿದರು.

ಕಾಂಗ್ರೆಸ್ ಮತ್ತು ಬಿಆರ್‌ಎಸ್ ‘ಮಾರ್ವಾಡಿ ಗೋ ಬ್ಯಾಕ್’ ಚಳುವಳಿಯನ್ನು ಮುಂದುವರಿಸಿದರೆ, ಬಿಜೆಪಿ ಹಿಂದೂಗಳ ಜಾತಿ ಆಧಾರಿತ ವೃತ್ತಿಗಳನ್ನು ರಕ್ಷಿಸಲು ದೊಡ್ಡ ಪ್ರಮಾಣದ ಆಂದೋಲನಗಳನ್ನು ಪ್ರಾರಂಭಿಸುತ್ತದೆ ಎಂದು ಅವರು ಎಚ್ಚರಿಸಿದರು.

ನಿರ್ದಿಷ್ಟವಾಗಿ, ಒಂದು ಗುಂಪು ನಡೆಸುವ ಮಟನ್ ಅಂಗಡಿಗಳು ಮತ್ತು ಡ್ರೈ-ಕ್ಲೀನಿಂಗ್ ಅಂಗಡಿಗಳನ್ನು ವಿರೋಧಿಸುವುದಾಗಿ ಹೇಳಿದರು. ‘ರೋಹಿಂಗ್ಯಾ ಗೋ ಬ್ಯಾಕ್’ ಆಂದೋಲನವನ್ನೂ ತೀವ್ರಗೊಳಿಸುವುದಾಗಿ ಅವರು ಪ್ರಕಟಿಸಿದರು.

You cannot copy content of this page

Exit mobile version