ದೇಶದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ತುರ್ತು ನಿಗಾ ಘಟಕಗಳ (ICU) ಸೌಲಭ್ಯಗಳು ಲಭ್ಯವಿಲ್ಲದಿರುವ ಕಾರಣ ಇಡೀ ದೇಶದ ಆರೋಗ್ಯ ವ್ಯವಸ್ಥೆ ಅತ್ಯಂತ ದಯನೀಯ ಸ್ಥಿತಿಯಲ್ಲಿದೆ ಎಂದು ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ದೇಶಾದ್ಯಂತ ಇರುವ ಎಲ್ಲಾ ಆಸ್ಪತ್ರೆಗಳ ಐಸಿಯು ಮತ್ತು ಕ್ರಿಟಿಕಲ್ ಕೇರ್ ಸೇವೆಗಳಿಗೆ ಕನಿಷ್ಠ ಗುಣಮಟ್ಟದ ಮಾನದಂಡಗಳನ್ನು ಕಡ್ಡಾಯಗೊಳಿಸುವ ರಾಷ್ಟ್ರೀಯ ನೀತಿಗೆ ಜಸ್ಟೀಸ್ ಅಹಸನುದ್ದೀನ್ ಅಮಾನುಲ್ಲಾ ಮತ್ತು ಜಸ್ಟೀಸ್ ಆರ್. ಮಹದೇವನ್ ಅವರನ್ನೊಳಗೊಂಡ ಪೀಠ ಬುಧವಾರ ಅಧಿಕೃತ ಆಂಗೀಕಾರ ನೀಡಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ವೈದ್ಯಕೀಯ ನಿರ್ಲಕ್ಷ್ಯ ಹಾಗೂ ದೇಶಾದ್ಯಂತ ಏಕರೂಪದ ಐಸಿಯು ವ್ಯವಸ್ಥೆ ಇಲ್ಲದಿರುವುದನ್ನು ಪ್ರಶ್ನಿಸಿ 2016 ರಿಂದ ಬಾಕಿ ಉಳಿದಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿದೆ. ಮೂಲ ಅಪೀಲು 2024 ರಲ್ಲೇ ಮುಕ್ತಾಯಗೊಂಡಿದ್ದರೂ, ದೇಶದ ಆರೋಗ್ಯ ಹಿತದೃಷ್ಟಿಯಿಂದ ಸುಪ್ರೀಂಕೋರ್ಟ್ ಈ ಐಸಿಯು ಮೂಲಸೌಕರ್ಯಗಳ ಮೇಲ್ವಿಚಾರಣೆಯನ್ನು ಮುಂದುವರಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ವೈದ್ಯಕೀಯ ತಜ್ಞರ ಸಮಿತಿಯೊಂದಿಗೆ ಚರ್ಚಿಸಿ ಐಸಿಯು ಪ್ರವೇಶ, ನೈರ್ಮಲ್ಯ ಮತ್ತು ಸಿಬ್ಬಂದಿ ನಿಯಂತ್ರಣಕ್ಕೆ ಮೂರು ಹಂತದ ಸಮಗ್ರ ಯೋಜನೆಯನ್ನು ಕೋರ್ಟ್ ಸಿದ್ಧಪಡಿಸಿದೆ.
ಈ ಹೊಸ ನೀತಿಯ ಭಾಗವಾಗಿ ಜಿಪಿಎಸ್ (GPS) ಟ್ರ್ಯಾಕಿಂಗ್, ಟೆಲಿ-ಐಸಿಯು (Tele-ICU) ಅನುಸಂಧನ ಹಾಗೂ ರಾಷ್ಟ್ರೀಯ ಆರೋಗ್ಯ ಗ್ರಿಡ್ (Healthcare Grid) ಸ್ಥಾಪಿಸಲು ಸುಪ್ರೀಂಕೋೋರ್ಟ್ ಕರೆ ನೀಡಿದೆ. ತುರ್ತು ಸಂದರ್ಭಗಳಲ್ಲಿ ಸ್ಥಳೀಯ ಮಟ್ಟದಲ್ಲೇ ಕನಿಷ್ಠ ಐಸಿಯು ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳಲು ರಾಜ್ಯಗಳಿಗೆ ಆದೇಶಿಸಿದೆ.
ನರ್ಸಿಂಗ್ ಕಾಲೇಜುಗಳ ಅವ್ಯವಸ್ಥೆಗೆ ಕೋರ್ಟ್ ತರಾಟೆ:
ಐಸಿಯು ಸೌಲಭ್ಯವಿರುವ ಆಸ್ಪತ್ರೆಗಳು ಬರೋಬ್ಬರಿ 30 ಕಿಲೋಮೀಟರ್ ದೂರದಲ್ಲಿದ್ದರೂ ಅಂತಹ ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ನೀಡಿರುವ ವ್ಯವಸ್ಥೆಯ ವಿರುದ್ಧ ಧರ್ಮಾಸನ ತೀವ್ರ ಅಸಮಾಧಾನ ಹೊರಹಾಕಿದೆ. “ಐಸಿಯು ರೋಗಿಗಳನ್ನು ನೋಡಿಕೊಳ್ಳಬೇಕಾದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಆಸ್ಪತ್ರೆಗಳಿಂದ ಇಷ್ಟು ದೂರದಲ್ಲಿ ತರಬೇತಿ ನೀಡಲು ಸಾಧ್ಯವಿಲ್ಲ. ಕೊನೆಗೆ ಇವರು ನಿಜವಾದ ರೋಗಿಗಳ ಪ್ರಾಣದೊಂದಿಗೆ ಕೆಲಸ ಮಾಡಬೇಕಾಗುತ್ತದೆ, ಸೂಕ್ತ ಪ್ರಾಯೋಗಿಕ ತರಬೇತಿ ಇಲ್ಲದೆ ಇಂತಹ ಜವಾಬ್ದಾರಿಯನ್ನು ಅವರಿಗೆ ನೀಡಲಾಗದು” ಎಂದು ಕೋರ್ಟ್ ಖಡಕ್ ಆಗಿ ಹೇಳಿದೆ. ಇನ್ಮುಂದೆ ನರ್ಸಿಂಗ್ ಸಂಸ್ಥೆಗಳು ಐಸಿಯು ಆಸ್ಪತ್ರೆಗಳೊಂದಿಗೆ ಕಡ್ಡಾಯವಾಗಿ ಅನುಸಂಧನ ಹೊಂದಿರಬೇಕು ಅಥವಾ ಆಸ್ಪತ್ರೆಯ 1 ಕಿಲೋಮೀಟರ್ ವ್ಯಾಪ್ತಿಯಲ್ಲೇ ಇರಬೇಕು ಎಂದು ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.
ಸುಪ್ರೀಂಕೋರ್ಟ್ ಜಾರಿಗೊಳಿಸಿರುವ ಪ್ರಮುಖ ಆದೇಶಗಳು:
- ಎಲ್ಲಾ ರಾಜ್ಯಗಳು 2 ತಿಂಗಳ ಒಳಗಾಗಿ ತಮ್ಮ ವ್ಯಾಪ್ತಿಯ ಆರೋಗ್ಯ ಸೌಲಭ್ಯಗಳ ಕೊರತೆಗಳ ಕುರಿತು ಸಮೀಕ್ಷೆ (Assessment) ನಡೆಸಿ ವರದಿ ಸಿದ್ಧಪಡಿಸಬೇಕು.
- ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ತುರ್ತು ಸ್ಥಳಾಂತರಕ್ಕಾಗಿ ಎಲ್ಲಾ ಅಗತ್ಯ ಸೌಕರ್ಯಗಳು ಹಾಗೂ ಕನಿಷ್ಠ 5 ವೆಂಟಿಲೇಟರ್‌ಗಳನ್ನು ಹೊಂದಿರುವ ಅಂಬುಲೆನ್ಸ್‌ಗಳನ್ನು ನಿರ್ವಹಿಸುವ ಸಾಧ್ಯತೆಯನ್ನು ರಾಜ್ಯಗಳು ಪರಿಶೀಲಿಸಬೇಕು.
- ದೇಶದಲ್ಲಿ ಲಭ್ಯವಿರುವ ಎಲ್ಲಾ ಆರೋಗ್ಯ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸೌಲಭ್ಯಗಳನ್ನು ಮ್ಯಾಪ್ ಮಾಡಲು ಕೇಂದ್ರ ಸರ್ಕಾರವು ರಾಷ್ಟ್ರಮಟ್ಟದ ಜಿಪಿಎಸ್ (GPS) ಆಧಾರಿತ ವ್ಯವಸ್ಥೆಯನ್ನು ಸಿದ್ಧಪಡಿಸಬೇಕು.
- ಆಸ್ಪತ್ರೆಗಳಲ್ಲಿ ಸದ್ಯ ಖಾಲಿ ಇರುವ ಐಸಿಯು ಬೆಡ್‌ಗಳ (ICU Beds) ಮಾಹಿತಿಯನ್ನು ಸಾರ್ವಜನಿಕರಿಗೆ ತೋರಿಸುವ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆಯನ್ನು ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯಗಳು ಕ್ರಮಕೈಗೊಳ್ಳಬೇಕು.
ಮುಂದಿನ ವಿಚಾರಣೆಯೊಳಗೆ ಈ ನಿಯಮಗಳ ಜಾರಿ ಹಾಗೂ ಕಾರ್ಯನಿರ್ವಹಣಾ ಯೋಜನೆಯ ಅಫಿಡವಿಟ್ ಸಲ್ಲಿಸುವಂತೆ ಎಲ್ಲಾ ರಾಜ್ಯಗಳ ಆರೋಗ್ಯ ಇಲಾಖೆಯ ಮುಖ್ಯಸ್ಥರಿಗೆ ಸುಪ್ರೀಂಕೋೋರ್ಟ್ ನಿರ್ದೇಶನ ನೀಡಿದೆ. ಈ ಐತಿಹಾಸಿಕ ಪ್ರಕ್ರಿಯೆಯು ದೇಶದ ಸಾಮಾನ್ಯ ನಾಗರಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಸಿಗುವಂತೆ ಮಾಡಲಿದೆ ಎಂದು ಕೋರ್ಟ್ ಆಶಯ ವ್ಯಕ್ತಪಡಿಸಿದೆ.
