Thursday, July 24, 2025

ಸತ್ಯ | ನ್ಯಾಯ |ಧರ್ಮ

ಧರ್ಮಸ್ಥಳದ ಪ್ರಕರಣ, ಯೂಟ್ಯೂಬರ್‌ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌ ?

ನವದೆಹಲಿ : ಧರ್ಮಸ್ಥಳ (Dharmasthala) ದೇಗುಲದ ಬಗ್ಗೆ ಹಾಗೂ ಧರ್ಮಾಧಿಕಾರಿ ಡಿ. ವಿರೇಂದ್ರ ಹೆಗ್ಗಡೆ ಮತ್ತವರ ಸೋದರ ಡಿ. ಹರ್ಷೇಂದ್ರ ಹೆಗಡೆಯವರ ಬಗ್ಗೆ ಯಾವುದೇ ಸುದ್ದಿ ಪ್ರಕಟಿಸಿದಂತೆ ವಿಧಿಸಲಾಗಿದ್ದ ನಿರ್ಬಂಧದ ತೆರವು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme court) ವಜಾ ಮಾಡಿದೆ. ಥರ್ಡ್‌ ಐ ಎಂಬ ಯೂಟ್ಯೂಬ್‌ (Third eye youtube channel) ಚಾನೆಲ್‌ ಸುಪ್ರೀಂ ಕೋರ್ಟ್‌ ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಈ ಗ್ಯಾಗ್‌ ಆದೇಶವು ಪತ್ರಿಕಾ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯದ ಹರಣವಾಗಿದೆ ಎಂದು ವಾದಿಸಿತ್ತು. ಪ್ರಕರಣವನ್ನು ವಿಚಾರಣೆಗೊಳಪಡಿಸಿದ ನ್ಯಾಯಾಲಯ ಮುಖ್ಯ ನ್ಯಾಯಮೂರ್ಗಿಗಳಾದ ಬಿ.ಆರ್‌.ಗವಾಯಿ ಮತ್ತು ವಿನೋದ್‌ ಚಂದ್ರನ್‌, ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಈ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್‌ ಅನ್ನು ಮೊದಲು ಸಂಪರ್ಕಿಸಿ . ಬಳಿಕ ನಮ್ಮ ಬಳಿಗೆ ಬನ್ನಿ ಎಂದು ಯೂಟ್ಯೂಬರ್‌ ಪರ ವಕೀಲರಿಗೆ ಹೇಳಿದೆ.

ನಮ್ಮದೇ ದೇಶದ ಹೈಕೋರ್ಟ್‌ ಗಳ ಆಜ್ಞೆಯನ್ನು ನಾವು ತೆಗೆದುಹಾಕಲು ಸಾಧ್ಯವಿಲ್ಲ. ಹೀಗಾಗಿ ನೀವು ಮೊದಲು ಹೈಕೋರ್ಟ್‌ ನಲ್ಲಿ ನಿಮ್ಮ ಅರ್ಜಿ ಸಲ್ಲಿಸಿ. ಅಲ್ಲಿಯೂ ನ್ಯಾಯ ದೊರಕದೆಂದು ನೀವು ಭಾವಿಸಿದರೆ ಇಲ್ಲಿಗೆ ಬರಬಹುದು ಎಂದು ನ್ಯಾಯಾಧೀಶರು ಹೇಳಿದರು.

ಧರ್ಮಸ್ಥಳ ತೀರ್ಥ ಕ್ಷೇತ್ರವು ಪ್ರಭಾವಿ ಹಿಂದೂ ಯಾತ್ರಾಸ್ಥಳವಾಗಿದೆ. ಇಲ್ಲಿ ಹಲವರನ್ನು ಕೊಂದು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬ ಶರಣಾಗಿದ್ದು ಆತ ತನಗೆ ಧರ್ಮಸ್ಥಳದ ಆಡಳಿತ ಮಂಡಳಿಯಿಂದ ಪ್ರಾಣ ಬೆದರಿಕೆಯಿದೆ ಎಂದು ಹೇಳಿದ್ದಾನೆ. ಈ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕವೇ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡಕ್ಕೆ ಪ್ರಕರಣವನ್ನು ವಹಿಸಿದೆ ಎಂದು ಥರ್ಡ್‌ ಐ ಯೂಟ್ಯೂಬ್‌ ಚಾನಲ್‌ ಪರ ವಕೀಲರು ವಾದಿಸಿದ್ದರು. ಅಲ್ಲದೇ , 9 ಸಾವಿರ ವಿಡಿಯೋ ಲಿಂಕ್‌ ಗಳನ್ನು ತೆಗೆದು ಹಾಕಲು ಹೇಳಿರುವುದು ಅಂತ್ಯತ ಘೋರವಾಗಿದೆ ಎಂದು ಉಲ್ಲೇಖಿಸಿದ್ದರು.

ಧರ್ಮಸ್ಥಳದ ನಿಗೂಢ ಶವಗಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸ್ವಚ್ಛತಾ ಕಾರ್ಮಿಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ಧರ್ಮಸ್ಥಳ ದೇವಸ್ಥಾನ ಮತ್ತು ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಅವರು ಸಲ್ಲಿಸಿದ ಮಾನಹಾನಿ ಮೊಕದ್ದಮೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ವಿಜಯ ಕುಮಾರ್ ರೈ ಧರ್ಮಸ್ಥಳ ಹಾಗೂ ಡಿ. ಹರ್ಷೇಂದ್ರ ಕುಮಾರ್ ಹಾಗೂ ಅವರ ಕುಟುಂಬ ಜೊತೆಗೆ ಶ್ರೀಕ್ಷೇತ್ರ ಧರ್ಮಸ್ಥಳ ನಡೆಸುತ್ತಿರುವ ಸಂಸ್ಥೆಗಳ ವಿರುದ್ಧ ಮಾಧ್ಯಮಗಳ ಮೂಲಕ ಅವಹೇಳನಕಾರಿ ವರದಿ ಮಾಡದಂತೆ ಮಧ್ಯಂತರ ತಡೆಯಾಜ್ಞೆ ಹೊರಡಿಸಿದೆ ಹಾಗೂ ಈಗಾಗಲೇ ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇನ್ನಿತರೆ ಮಾಧ್ಯಮಗಳು ಮಾಡಿರುವ ಅವಹೇಳನಕಾರಿ ವರದಿಗಳನ್ನು ಅಳಿಸಿ ಹಾಕುವಂತೆ ಹೈಕೋರ್ಟ್‌  ಸೂಚಿಸಿತ್ತು.

ಧಾರ್ಮಿಕ ಕ್ಷೇತ್ರ ಹಾಗೂ ಅದರ ಆಡಳಿತಕ್ಕೆ ಒಳಪಡುವ ಒಂದು ಸಂಸ್ಥೆಗಳ ಮೇಲೆ ಆರೋಪ ಬಂದರೆ ಅಲ್ಲಿನ ಸಿಬ್ಬಂದಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಕ್ಷೇತ್ರದ ಅಡಿಯಲ್ಲಿ ನಾನಾ ವಿದ್ಯಾ ಸಂಸ್ಥೆಗಳು ಕಾರ್ಯಾಚಾರಿಸುತ್ತಿದೆ. ಈ ಬೆಳವಣಿಗೆಯಿಂದ ವಿವಿಧ ಕಾಲೇಜುಗಳು ಮತ್ತು ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಸೇರಿದಂತೆ ಅಪಾರ ಪ್ರಮಾಣದ ಭಕ್ತರ ಭಾವನೆಯ ಮೇಲೆ ಮೇಲೆ ಪರಿಣಾಮ ಬೀರುತ್ತದೆ. ಒಂದು ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳು ಸಂಸ್ಥೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಗಣನೆಗೆ ತೆಗೆದುಕೊಂಡು ಈ ಆದೇಶವನ್ನು ಹೊರಡಿಸಲಾಗಿದೆ.

ಗ್ಯಾಗ್ ಆದೇಶದ ಅನ್ವಯ ಶ್ರೀ ಕ್ಷೇತ್ರ ಧರ್ಮಸ್ಥಳ, ಹೆಗ್ಗಡೆ ಕುಟುಂಬ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಡೆಸುತ್ತಿರುವಂತಹ ಸಂಸ್ಥೆಗಳು ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ ಆ್ಯಪ್‌, ಫೇಸ್‌ ಬುಕ್‌, ಇನ್ಸ್ಟಾಗ್ರಾಮ್‌, ಯೂ–ಟ್ಯೂಬ್‌, ಟಿ.ವಿ.ಚಾನೆಲ್‌ ಹಾಗೂ ಇತರೆ ಯಾವುದೇ ರೀತಿಯ ಮಾಧ್ಯಮ ಪ್ರಕಾರಗಳಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ, ಅವಹೇಳನಕಾರಿ ವರದಿ ಅಥವಾ ಮಾತನಾಡಬಾರದು ಎಂದು ನಿರ್ಬಂಧ ಹೇರಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಸೋಷಿಯಲ್ ಮೀಡಿಯಾಗಳಲ್ಲಿ ಅಪಪ್ರಚಾರ ಮಾಡಿರುವ, 4,140 ಯೂಟ್ಯೂಬ್ ವಿಡಿಯೋಗಳು, 3,584 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, 932 ಫೇಸ್‌ಬುಕ್ ಪೋಸ್ಟ್‌ಗಳು ಮತ್ತು 108 ಸುದ್ದಿ ಲೇಖನಗಳು ಸೇರಿದಂತೆ ಒಟ್ಟು 8,842 ಲಿಂಕ್‌ಗಳ ಪಟ್ಟಿಯನ್ನು ಹರ್ಷೇಂದ್ರ ಕುಮಾರ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಅವೆಲ್ಲಾವನ್ನು ಡಿಲೀಟ್ ಮಾಡುವಂತೆ ಹೈಕೋರ್ಟ್‌  ಆದೇಶಿಸಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page