Monday, January 12, 2026

ಸತ್ಯ | ನ್ಯಾಯ |ಧರ್ಮ

ಇಲೆಕ್ಟೋರಲ್ ಬಾಂಡ್‌ ಕುರಿತು 24 ಗಂಟೆಗಳ ಒಳಗೆ ಮಾಹಿತಿ ನೀಡಿ, ಎಸ್‌ಬಿಐಗೆ ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಆದೇಶ

ಇಲೆಕ್ಟೋರಲ್ ಬಾಂಡ್‌ ಅಂದರೆ ರಾಜಕೀಯ ಪಕ್ಷಗಳಿಗೆ ಚುನಾವಣಾ ದೇಣಿಗೆಗಳ ಬಗ್ಗೆ ಮಾಹಿತಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಎಸ್‌ಬಿಐಗೆ ಸುಪ್ರೀಂ ಕೋರ್ಟ್‌ನಿಂದ ಯಾವುದೇ ಪರಿಹಾರ ಸಿಕ್ಕಿಲ್ಲ.

ಈ ಆದೇಶವನ್ನು ತಕ್ಷಣವೇ ಪಾಲಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮಾರ್ಚ್ 12ರೊಳಗೆ ಅಂದರೆ ನಾಳೆಯೊಳಗೆ ಚುನಾವಣಾ ಆಯೋಗಕ್ಕೆ ನೀಡಬೇಕು. ಇದರೊಂದಿಗೆ ಚುನಾವಣಾ ಆಯೋಗವು ಮಾರ್ಚ್ 15ರಂದು ಸಂಜೆ 5 ಗಂಟೆಯೊಳಗೆ ಈ ಮಾಹಿತಿಯನ್ನು ಪೋರ್ಟಲ್‌ನಲ್ಲಿ ಸಾರ್ವಜನಿಕಗೊಳಿಸಬೇಕು ಎಂದು ಕೋರ್ಟ್‌ ಕಟ್ಟುನಿಟ್ಟಾಗಿ ತಿಳಿಸಿದೆ.

ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ವಿವರಗಳನ್ನು ಒದಗಿಸಲು ಎಸ್‌ಬಿಐ ಸುಪ್ರೀಂ ಕೋರ್ಟ್‌ನಿಂದ ಜೂನ್ 30ರವರೆಗೆ ವಿಸ್ತರಣೆಯನ್ನು ಕೋರಿತ್ತು. ಇದಕ್ಕೂ ಮೊದಲು, ಫೆಬ್ರವರಿ 15ರಂದು, ಸುಪ್ರೀಂ ಕೋರ್ಟ್ ರಾಜಕೀಯ ಪಕ್ಷಗಳಿಗೆ ನೀಡಲಾದ ದೇಣಿಗೆಗೆ ಸಂಬಂಧಿಸಿದ ಇಲೆಕ್ಟೋರಲ್ ಬಾಂಡ್‌ ವ್ಯವಸ್ಥೆಯನ್ನು ಅಸಂವಿಧಾನಿಕ ಎಂದು ಪರಿಗಣಿಸಿ ನಿಷೇಧಿಸಿತ್ತು.

ದೇಶದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಇದರೊಂದಿಗೆ ಮಾರ್ಚ್ 6ರೊಳಗೆ ಯಾವ ಪಕ್ಷಕ್ಕೆ ಯಾರು ಎಷ್ಟು ದೇಣಿಗೆ ನೀಡಿದ್ದಾರೆ ಎಂಬ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ದೇಶದ ಸುಪ್ರೀಂ ಕೋರ್ಟ್ ಎಸ್‌ಬಿಐಗೆ ಸೂಚಿಸಿತ್ತು, ಆದರೆ ಮಾರ್ಚ್ 6ರಂದು ಸಮಯ ಕೋರಿ ಎಸ್‌ಬಿಐ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು, ಅದರಲ್ಲಿ ದೇಣಿಗೆಗೆ ಸಂಬಂಧಿಸಿದ ಮಾಹಿತಿ ನೀಡಲು ಜೂನ್ 30ರವರೆಗೆ ಕಾಲಾವಕಾಶ ಕೇಳಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page