Sunday, July 27, 2025

ಸತ್ಯ | ನ್ಯಾಯ |ಧರ್ಮ

ತಮಿಳುನಾಡು | ಮಾಜಿ ಸಚಿವ ಸೆಂಥಿಲ್ ಬಾಲಾಜಿಯವರಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್

ತಮಿಳುನಾಡು ಸರಕಾರದ ಸಚಿವ ಸೆಂಥಿಲ್ ಬಾಲಾಜಿಯವರಿಗೆ ಭಾರೀ ರಿಲೀಫ್ ಸಿಕ್ಕಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೊನೆಗೂ ಅವರಿಗೆ ಜಾಮೀನು ದೊರಕಿದೆ.

ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ವಾರದಲ್ಲಿ ಎರಡು ಬಾರಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವುದು, ಸಾಕ್ಷಿಗಳನ್ನು ನಾಶ ಮಾಡಬಾರದು ಮತ್ತು ಪಾಸ್‌ಪೋರ್ಟ್ ಹಸ್ತಾಂತರಿಸಬೇಕು ಎಂಬ ಷರತ್ತುಗಳೊಂದಿಗೆ ಜಾಮೀನು ನೀಡಲಾಗಿದೆ. ಸುಪ್ರೀಂ ತೀರ್ಪಿನೊಂದಿಗೆ ಸುಮಾರು 15 ತಿಂಗಳ ನಂತರ ಅವರು ಜೈಲಿನಿಂದ ಹೊರಬರಲಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಳೆದ ವರ್ಷ ಜೂನ್ 14ರಂದು ಜಾರಿ ನಿರ್ದೇಶನಾಲಯ (ಇಡಿ) ಬಾಲಾಜಿಯವರನ್ನು ಬಂಧಿಸಿತ್ತು. ಕಳೆದ ಎಐಎಡಿಎಂಕೆ ಸರ್ಕಾರದ ಅವಧಿಯಲ್ಲಿ ಚೆನ್ನೈ ಕ್ರೈಂ ಬ್ರಾಂಚ್ ಪೊಲೀಸರು ಬಾಲಾಜಿ ವಿರುದ್ಧ ಕ್ಯಾಶ್ ಫಾರ್ ಜಾಬ್ಸ್ ಕೇಸ್ ದಾಖಲಿಸಿದ್ದರು.

ಈ ಪ್ರಕರಣದಲ್ಲಿ ದೊಡ್ಡ ಮೊತ್ತದ ಹಣ ಕೈ ಬದಲಾಯಿಸಿದ ಆರೋಪದ ಮೇಲೆ ಇಡಿ ಬಾಲಾಜಿಯನ್ನು ಬಂಧಿಸಿತ್ತು. ಜೈಲಿನಲ್ಲಿದ್ದರೂ ಬಾಲಾಜಿಯನ್ನು ಸಿಎಂ ಸ್ಟಾಲಿನ್ ತಮ್ಮ ಸಂಪುಟದಲ್ಲಿ ಇಟ್ಟುಕೊಂಡಿದ್ದರು. ಆದರೆ ಖಾತೆ ಮಂಜೂರು ಮಾಡಿರಲಿಲ್ಲ. ಅಂದು ಈ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.

ಬಾಲಾಜಿ ಅವರನ್ನು ಸಚಿವರಾಗಿ ಮುಂದುವರಿಸುವ ವಿಚಾರವನ್ನು ಮರುಪರಿಶೀಲಿಸುವಂತೆ ಸಿಎಂ ಸ್ಟಾಲಿನ್ ಅವರಿಗೆ ನ್ಯಾಯಾಲಯ ಸಲಹೆ ನೀಡಿತ್ತು. ನಂತರ ಜಾಮೀನು ಅರ್ಜಿಯು ಎರಡನೇ ಬಾರಿಗೆ ಹೈಕೋರ್ಟ್ ಮುಂದೆ ವಿಚಾರಣೆಗೆ ಬರಲಿರುವ ಹಿನ್ನೆಲೆಯಲ್ಲಿ ಬಾಲಾಜಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page