Home ಇನ್ನಷ್ಟು ಕೋರ್ಟು - ಕಾನೂನು ಶಾಸಕರಿಗೆ ಪಿಂಚಣಿ ಮತ್ತು ಇತರೆ ಸೌಲಭ್ಯಗಳು ಏಕೆ?: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್,...

ಶಾಸಕರಿಗೆ ಪಿಂಚಣಿ ಮತ್ತು ಇತರೆ ಸೌಲಭ್ಯಗಳು ಏಕೆ?: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್, ನಾಲ್ಕು ವಾರಗಳಲ್ಲಿ ಉತ್ತರಿಸಲು ಆದೇಶ

0
ಸುಪ್ರೀಂ ಕೋರ್ಟ್

ಉತ್ತರ ಪ್ರದೇಶದ ಹಾಲಿ ಮತ್ತು ಮಾಜಿ ಶಾಸಕರಿಗೆ ನೀಡಲಾಗುತ್ತಿರುವ ಪಿಂಚಣಿ ಹಾಗೂ ಇತರೆ ಸೌಲಭ್ಯಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ‘ಲೋಕ ಪ್ರಹರಿ’ ಎಂಬ ಎನ್‌ಜಿಒ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಉತ್ತರ ಪ್ರದೇಶದ ಶಾಸಕರು (ಎಂಎಲ್‌ಎ) ಮತ್ತು ವಿಧಾನ ಪರಿಷತ್ ಸದಸ್ಯರಿಗೆ (ಎಂಎಲ್‌ಸಿ) ನೀಡಲಾಗುತ್ತಿರುವ ಪಿಂಚಣಿ, ಭತ್ಯೆಗಳು ಮತ್ತು ಇತರೆ ಸೌಲಭ್ಯಗಳನ್ನು ಪ್ರಶ್ನಿಸಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ನಾಲ್ಕು ವಾರಗಳ ಒಳಗಾಗಿ ಉತ್ತರಿಸುವಂತೆ ನಿರ್ದೇಶನ ನೀಡಿದೆ.

ಲೈವ್ ಲಾ ವರದಿಯ ಪ್ರಕಾರ, ಉತ್ತರ ಪ್ರದೇಶ ರಾಜ್ಯ ವಿಧಾನಮಂಡಲ (ಸದಸ್ಯರ ವೇತನ ಮತ್ತು ಪಿಂಚಣಿ) ಕಾಯ್ದೆ 1980ರ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಅಲಹಾಬಾದ್ ಹೈಕೋರ್ಟ್ ಈ ಹಿಂದೆ ವಜಾಗೊಳಿಸಿತ್ತು. ಹೈಕೋರ್ಟ್‌ನ ಆ ತೀರ್ಪನ್ನು ಪ್ರಶ್ನಿಸಿ ಲೋಕ ಪ್ರಹರಿ ಸಂಸ್ಥೆಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಶಾಸಕಾಂಗವು ತನ್ನ ಹಾಲಿ ಮತ್ತು ಮಾಜಿ ಸದಸ್ಯರಿಗೆ ಪಿಂಚಣಿ ಹಾಗೂ ಸಾಮಾಜಿಕ ಭದ್ರತೆಯಂತಹ ಸೌಲಭ್ಯಗಳನ್ನು ಕಲ್ಪಿಸುವ ಅಧಿಕಾರವನ್ನು ಹೊಂದಿದೆ ಎಂದು ಹೈಕೋರ್ಟ್ ಹೇಳಿತ್ತು.

1980ರ ಕಾಯ್ದೆಯ ಸೆಕ್ಷನ್ 4, 5, 9, 13(3), 13(4), 15(2), 17-ಎ ಮತ್ತು ಅಧ್ಯಾಯ VIII ಅನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಈ ನಿಬಂಧನೆಗಳು ಹಾಲಿ ಸದಸ್ಯರಿಗೆ ವಿವಿಧ ಭತ್ಯೆಗಳು ಮತ್ತು ಸೌಲಭ್ಯಗಳನ್ನು ಹಾಗೂ ಮಾಜಿ ಸದಸ್ಯರು, ಅವರ ಕುಟುಂಬಗಳು ಮತ್ತು ಅವಲಂಬಿತರಿಗೆ ಪಿಂಚಣಿ, ಕುಟುಂಬ ಪಿಂಚಣಿ ಸೇರಿದಂತೆ ಇತರೆ ಪ್ರಯೋಜನಗಳನ್ನು ಒದಗಿಸುತ್ತವೆ.

ಸಂವಿಧಾನದ 195ನೇ ವಿಧಿಯು ರಾಜ್ಯ ಶಾಸಕರ ವೇತನ ಮತ್ತು ಭತ್ಯೆಗಳ ಬಗ್ಗೆ ತಿಳಿಸುತ್ತದೆಯೇ ಹೊರತು ಅದರಲ್ಲಿ ಪಿಂಚಣಿಯ ಕುರಿತು ಯಾವುದೇ ಉಲ್ಲೇಖವಿಲ್ಲ ಎಂದು ಲೋಕ ಪ್ರಹರಿ ವಾದಿಸಿದೆ. ಒಬ್ಬ ವ್ಯಕ್ತಿ ಶಾಸಕ ಅಥವಾ ವಿಧಾನ ಪರಿಷತ್ ಸದಸ್ಯನಾಗಿ ಉಳಿಯದೇ ಹೋದಾಗಲೂ, ಆತನಿಗೆ ಸಾರ್ವಜನಿಕ ಬೊಕ್ಕಸದಿಂದ ನಿರಂತರವಾಗಿ ಆರ್ಥಿಕ ಪ್ರಯೋಜನಗಳನ್ನು ಏಕೆ ನೀಡಬೇಕು ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

1952ರಲ್ಲಿ ಶಾಸಕರ ವೇತನ ಕೇವಲ 200 ರೂ. ಇತ್ತು

1952ರಲ್ಲಿ ಶಾಸಕರಿಗೆ ಕೇವಲ 200 ರೂಪಾಯಿ ವೇತನ ಹಾಗೂ ಸೀಮಿತ ಭತ್ಯೆಗಳು ಮಾತ್ರ ಲಭಿಸುತ್ತಿದ್ದವು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಆದರೆ ಈಗ ಈ ಮೊತ್ತವು ತಿಂಗಳಿಗೆ 1.25 ಲಕ್ಷ ರೂಪಾಯಿಗಿಂತಲೂ ಹೆಚ್ಚಾಗಿದೆ. ಇದಲ್ಲದೆ ಉಚಿತ ಪ್ರಯಾಣ, ವಸತಿ, ವೈದ್ಯಕೀಯ ಚಿಕಿತ್ಸೆ, ದೂರವಾಣಿ ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನೂ ನೀಡಲಾಗುತ್ತಿದೆ.

ಈ ರೀತಿಯ ಸೌಲಭ್ಯಗಳನ್ನು ನೀಡುವುದು ಸಂವಿಧಾನದ 14ನೇ ವಿಧಿ ಅಡಿಯಲ್ಲಿನ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ಲೋಕ ಪ್ರಹರಿ ವಾದಿಸಿದೆ.

ಆದಾಗ್ಯೂ, ಅಲಹಾಬಾದ್ ಹೈಕೋರ್ಟ್ ಈ ಎಲ್ಲಾ ವಾದಗಳನ್ನು ತಿರಸ್ಕರಿಸಿತ್ತು. ಶಾಸಕರು ಕಾನೂನು ರಚನೆ ಮತ್ತು ಸರ್ಕಾರದ ಮೇಲ್ವಿಚಾರಣೆಯಂತಹ ಸಾಂವಿಧಾನಿಕ ಜವಾಬ್ದಾರಿಗಳನ್ನು ನಿರ್ವಹಿಸುವುದರಿಂದ ಅವರನ್ನು ಪ್ರತ್ಯೇಕ ವರ್ಗವೆಂದು ಪರಿಗಣಿಸಬೇಕಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದೀಗ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರದ ವಿವರಣೆಯನ್ನು ಆಲಿಸಲಿದ್ದು, ನಾಲ್ಕು ವಾರಗಳ ನಂತರ ಮುಂದಿನ ವಿಚಾರಣೆ ನಡೆಯಲಿದೆ.

You cannot copy content of this page

Exit mobile version