Friday, October 24, 2025

ಸತ್ಯ | ನ್ಯಾಯ |ಧರ್ಮ

ಸುರತ್ಕಲ್: ಕಾನ ಪೆಟ್ರೋಲ್ ಪಂಪ್ ಬಳಿ ಇಬ್ಬರಿಗೆ ಚೂರಿ ಇರಿತ; ಓರ್ವನ ಸ್ಥಿತಿ ಗಂಭೀರ

ಸುರತ್ಕಲ್: ಗುರುವಾರ ತಡರಾತ್ರಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನ ಪೆಟ್ರೋಲ್ ಪಂಪ್ ಬಳಿ ನಾಲ್ಕು ಮಂದಿ ದುಷ್ಕರ್ಮಿಗಳ ತಂಡವು ಇಬ್ಬರು ಯುವಕರಿಗೆ ಚೂರಿಯಿಂದ ಇರಿದು ಪರಾರಿಯಾದ ಘಟನೆ ನಡೆದಿದೆ. ಚೂರಿ ಇರಿತಕ್ಕೊಳಗಾದವರನ್ನು ಸುರತ್ಕಲ್‌ನ ಚೊಕ್ಕಬೆಟ್ಟು ನಿವಾಸಿ ನಿಝಾಮ್ (23) ಮತ್ತು ಕೃಷ್ಣಾಪುರ ಹಿಲ್ ಸೈಡ್ ನಿವಾಸಿ ಹಸನ್ ಮುರ್ಷಿದ್ (18) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ನಿಝಾಮ್ ಅವರ ಹೊಟ್ಟೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಕೂಡಲೇ ಅವರಿಗೆ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮುರ್ಷಿದ್ ಅವರಿಗೆ ಸಣ್ಣ ಪ್ರಮಾಣದ ಇರಿತದ ಗಾಯಗಳಾಗಿದ್ದು, ಅವರು ಮುಕ್ಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ನಡೆದ ಸಂದರ್ಭದಲ್ಲಿ, ಐದು ಮಂದಿ ಸ್ನೇಹಿತರು ಎರಡು ದ್ವಿಚಕ್ರ ವಾಹನಗಳಲ್ಲಿ ಕೃಷ್ಣಾಪುರದ ಕಡೆಗೆ ಹೋಗುತ್ತಿದ್ದರು. ಈ ವೇಳೆ ನಿಝಾಮ್ ಮತ್ತು ಮುರ್ಷಿದ್ ಇದ್ದ ವಾಹನದ ಪೆಟ್ರೋಲ್ ಖಾಲಿಯಾದ ಕಾರಣ ರಸ್ತೆ ಬದಿಯಲ್ಲಿ ನಿಂತಿದ್ದರು. ಇನ್ನೊಂದು ವಾಹನದಲ್ಲಿದ್ದ ಅವರ ಸ್ನೇಹಿತರು ಪೆಟ್ರೋಲ್ ತರಲೆಂದು ಪೆಟ್ರೋಲ್ ಪಂಪ್‌ಗೆ ಹೋಗಿದ್ದರು. ಈ ಸಂದರ್ಭದಲ್ಲಿ ಸಮೀಪದ ಬಾರ್‌ನಿಂದ ಬಂದ ನಾಲ್ವರು ಅಪರಿಚಿತರು “ಹನೀಫ್ ಗೊತ್ತಾ?” ಎಂದು ಕೇಳಿ ಮಾತು ಆರಂಭಿಸಿದ್ದಾರೆ. ಬಳಿಕ ಎರಡೂ ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ದುಷ್ಕರ್ಮಿಗಳಲ್ಲಿ ಓರ್ವ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ ಎಂದು ಗಾಯಾಳುಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಸುರತ್ಕಲ್ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಆಸ್ಪತ್ರೆಗೆ ತೆರಳಿ ಸಂತ್ರಸ್ತರಿಂದ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page