ಹೊಸದಿಲ್ಲಿ: ಕೇರಳದ ತ್ರಿಶೂರ್‌ನಿಂದ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಅವರು ಭಾನುವಾರ ಕೇಂದ್ರ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಈಗ ಪ್ರಮಾಣ ವಚನ ಸ್ವೀಕರಿಸಿ ಒಂದು ದಿನವೂ ಕಳೆದಿಲ್ಲ.ಆಗಲೇ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರದ ಬಾಕಿ ಉಳಿದಿರುವ ಚಿತ್ರೀಕರಣವನ್ನು ಪೂರ್ಣಗೊಳಿಸಲು ಸುರೇಶ್ ಗೋಪಿ ಅವರು ಸಚಿವ ಸ್ಥಾನದಿಂದ ಕೆಳಗಿಳಿಯಲು ಬಯಸಿದ್ದಾರೆ ಎಂದು ಮಲಯಾಳಂ ಮಾಧ್ಯಮವೊಂದು ಸುದ್ದಿ ಮಾಡಿದೆ.
ಕೇರಳದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಸುರೇಶ್ ಗೋಪಿಗೆ ಸಹಾಯಕ ಸಚಿವ ಸ್ಥಾನ ನೀಡಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ಊಹಾಪೋಹಗಳು ಈ ನಡುವೆ ಕೇಳಿ ಬರುತ್ತಿವೆ. ಕೇಂದ್ರ ಸಚಿವ ಸ್ಥಾನದಿಂದ ಮುಕ್ತಿ ಸಿಗುತ್ತದೆ ಎಂದು ಭಾವಿಸಿದ್ದೇನೆ, ಸಿನಿಮಾಗಳನ್ನು ಪೂರ್ಣಗೊಳಿಸಬೇಕು, ಕೇಂದ್ರ ನಾಯಕತ್ವ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ, ಸಂಸದನಾಗಿ ತ್ರಿಶೂರ್‌ನಲ್ಲಿ ಉತ್ತಮ ಸೇವೆ ನೀಡುತ್ತೇನೆ. ನನಗೆ ಸಚಿವ ಸ್ಥಾನದ ಅಗತ್ಯವಿಲ್ಲ ಎಂದು ಸುರೇಶ್ ಗೋಪಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ದೆಹಲಿಗೆ ಬರಲು ಕರೆದಾಗ ಸುರೇಶ್ ಗೋಪಿ ಅವರು ತಮ್ಮ ಸಿನಿಮಾ ಕಮಿಟ್ ಮೆಂಟ್ ಗಳ ಬಗ್ಗೆ ಬಿಜೆಪಿ ಕೇಂದ್ರ ನಾಯಕರಿಗೂ ಹೇಳಿದ್ದಾರಂತೆ. ಸುರೇಶ್ ಗೋಪಿ ಸದ್ಯ ನಾಲ್ಕು ಚಿತ್ರಗಳಲ್ಲಿ ನಟಿಸಲು ಸಜ್ಜಾಗಿದ್ದಾರೆ. ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದ ಐತಿಹಾಸಿಕ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.
ಚಿತ್ರಗಳನ್ನು ನಿಲ್ಲಿಸಿದರೆ ಚಿತ್ರರಂಗದ ಸಿಬ್ಬಂದಿ ಬಿಕ್ಕಟ್ಟಿಗೆ ಸಿಲುಕುವ ಸಾಧ್ಯತೆಗಳಿವೆ ಎಂದು ಸುರೇಶ್ ಗೋಪಿ ಹೇಳಿದ್ದಾರೆ. ಇತ್ತ ಸಿನಿಮಾಗಳಿಗಾಗಿ ಕೇಂದ್ರ ಸಚಿವ ಸ್ಥಾನವನ್ನು ತ್ಯಾಗ ಮಾಡುವುದು ಮೂರ್ಖತನ ಎಂದು ಕೆಲವರು ಸುರೇಶ್ ಗೋಪಿಗೆ ಹೇಳಿದ್ದಾರಂತೆ.