ಬಿಜೆಪಿಯ 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿದ ಸ್ಪೀಕರ್ ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ವರ್ತಿಸಿದ್ದಾರೆ. 18 ಶಾಸಕರ ಅಮಾನತು ಕಾನೂನು ಬಾಹಿರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಬೆಂಗಳೂರಿನ ವಿಧಾನ ಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ, ಸರ್ಕಾರದ ಬೆಲೆಯೇರಿಕೆ ಮತ್ತು ಸ್ಪೀಕರ್ ನಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, “ಜನಪ್ರತಿನಿಧಿಯನ್ನು 6 ತಿಂಗಳ ಕಾಲ ಅಮಾನತು ಮಾಡಿ, ವಿಧಾನಸೌಧದ ಮೊಗಸಾಲೆಗೂ ಬರಬಾರದೆಂದು ಆದೇಶ ಮಾಡಿದ್ದಾರೆ. ಸ್ಪೀಕರ್ ಅವರು ಖಂಡಿತವಾಗಿ ಆಡಳಿತ ಪಕ್ಷದ ಕೈಗೊಂಬೆಯಾಗಿ ಹಾಗೂ ಮುಖ್ಯಮಂತ್ರಿಗಳನ್ನು ತೃಪ್ತಿಪಡಿಸಲು ಕಾನೂನು ಬಾಹಿರವಾಗಿ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿ ಈ ರೀತಿ ಆದೇಶ ಮಾಡಿದ್ದಾರೆ” ಎಂದು ಟೀಕಿಸಿದರು.
ಅಮಾನತು ಪ್ರಕ್ರಿಯೆ ಹಿಂತೆಗೆದುಕೊಳ್ಳುವ ಬಗ್ಗೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ. ಆ ಮೂಲಕ ತಮ್ಮ ನಿರ್ಣಯ ಸಂವಿಧಾನವಿರೋಧಿ ಎಂಬುದು ಸ್ಪೀಕರ್ ಅವರಿಗೂ ಅರ್ಥವಾಗಿದೆ. ಆದರೂ ಕೂಡ ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಸ್ಪೀಕರ್ ಅವರು ಭಂಡತನ ಪ್ರದರ್ಶಿಸುತ್ತಿದ್ದಾರೆ. ಇದು ಮತದಾರರಿಗೆ ಮಾಡಿದ ಅವಮಾನ ಎಂದರಲ್ಲದೆ, 18 ಶಾಸಕರ ಅಮಾನತನ್ನು ತಕ್ಷಣ ಹಿಂದಕ್ಕೆ ಪಡೆಯಲು ಆಗ್ರಹಿಸಿದರು. ಅಮಾನತು ಹಿಂಪಡೆಯುವ ವರೆಗೆ ಬಿಜೆಪಿಯ ಶಾಸಕರು ಕಮಿಟಿ ಮೀಟಿಂಗ್‍ನಲ್ಲಿ ಭಾಗವಹಿಸುವುದಿಲ್ಲ ಎಂದು ಪಕ್ಷದ ನಿರ್ಧಾರವನ್ನು ತಿಳಿಸಿದರು.