ದೆಹಲಿ: ಅಮೆರಿಕದಲ್ಲಿ ಮತದಾರರ ಗುರುತಿನ ಚೀಟಿ ನಿಯಮಗಳನ್ನು ಬಿಗಿಗೊಳಿಸುವ ಉದ್ದೇಶಕ್ಕೆ ಭಾರತದ ಚುನಾವಣಾ ವ್ಯವಸ್ಥೆಯನ್ನು ಉಲ್ಲೇಖಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸಂಸದ ಪವನ್ ಖೇರಾ ಮಂಗಳವಾರ ತೀವ್ರ ವ್ಯಂಗ್ಯವಾಡಿದ್ದಾರೆ.
ಅಮೆರಿಕದಲ್ಲಿ ‘ಸೇವ್ ಅಮೆರಿಕ ಆಕ್ಟ್’ (SAVE America Act) ಕಾಯ್ದೆ ಜಾರಿಗೆ ಒತ್ತಾಯಿಸುತ್ತಿರುವ ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿರುವ ಖೇರಾ, ಭಾರತದ ಸಿಇಸಿ ಮತ್ತು ಮತಯಂತ್ರಗಳನ್ನು (EVM) ಅಮೆರಿಕಕ್ಕೇ ಕರೆದೊಯ್ಯುವಂತೆ ಕಾಲೆಳೆದಿದ್ದಾರೆ.
“ಆತ್ಮೀಯ ಡೊನಾಲ್ಡ್ ಟ್ರಂಪ್, ದಯವಿಟ್ಟು ಜ್ಞಾನೇಶ್ ಕುಮಾರ್ ಗುಪ್ತಾ ಅವರನ್ನು ಅಮೆರಿಕಕ್ಕೆ ಕರೆದೊಯ್ದು ಅಲ್ಲೇ ಇಟ್ಟುಕೊಳ್ಳಿ. ಮುಂದಿನ ವಿಮಾನದಲ್ಲೇ ನಮ್ಮ ಇವಿಎಂಗಳನ್ನೂ ಕಳುಹಿಸಿಕೊಡುತ್ತೇವೆ. ನೀವು ನಮಗೆ ತೋರಿದ ಬೆದರಿಕೆ ಮತ್ತು ಅವಮಾನಗಳಿಗೆ ಭಾರತದ ಪರವಾಗಿ ಪ್ರೀತಿಯಿಂದ ನಾವು ನೀಡಬಹುದಾದ ಕನಿಷ್ಠ ಕಾಣಿಕೆ ಇದು. ‘ಟು ಸರ್ (SIR – ಮತದಾರರ ಗಣತಿ ಪರಿಷ್ಕರಣೆ), ವಿತ್ ಲವ್, ಫ್ರಮ್ ಇಂಡಿಯಾ’,” ಎಂದು ಖೇರಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಭಾರತದ ಮತದಾರರ ಪಟ್ಟಿ ವಿವಾದವನ್ನೂ ಪ್ರಸ್ತಾಪಿಸಿ ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದಿದ್ದಾರೆ.
ಸೇವ್ ಅಮೆರಿಕ ಕಾಯ್ದೆಗೆ ಭಾರತದ ಉದಾಹರಣೆ ನೀಡಿದ ಟ್ರಂಪ್
ಅಮೆರಿಕದಲ್ಲಿ ‘ಸೇವ್ ಅಮೆರಿಕ ಆಕ್ಟ್’ ಜಾರಿಗೆ ತರಲು ಟ್ರಂಪ್ ಭಾರತದ 2024ರ ಲೋಕಸಭಾ ಚುನಾವಣೆಯನ್ನು ಉದಾಹರಿಸಿದ್ದಾರೆ. “ಮಾನ್ಯತೆ ಪಡೆದ ಫೋಟೋ ಐಡಿ ಇಲ್ಲದೆ ಅಮೆರಿಕದಲ್ಲಿ ಚುನಾವಣೆಗಳನ್ನು ಹೇಗೆ ನಡೆಸುತ್ತೀರಿ ಎಂದು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನಮ್ಮ ಆಡಳಿತವನ್ನು ಪ್ರಶ್ನಿಸಿದ್ದರು. ಭಾರತದ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ 64.6 ಕೋಟಿ ಮತದಾರರು ಪಾಲ್ಗೊಂಡಿದ್ದು, ಶೇ. 1ಕ್ಕಿಂತ ಕಡಿಮೆ ಮಂದಿ ಮಾತ್ರ ಅಂಚೆ ಮತದಾನ ಮಾಡಿದ್ದಾರೆ ಮತ್ತು ಪ್ರತಿಯೊಬ್ಬ ಮತದಾರರೂ ತಮ್ಮ ಗುರುತನ್ನು ಸಾಬೀತುಪಡಿಸಬೇಕಿತ್ತು. ಆದ್ದರಿಂದ ನಾವು ತಕ್ಷಣವೇ ಸೇವ್ ಅಮೆರಿಕ ಕಾಯ್ದೆಯನ್ನು ಜಾರಿಗೊಳಿಸಬೇಕು,” ಎಂದು ಟ್ರಂಪ್ ತಮ್ಮ ‘ಟ್ರೂತ್ ಸೋಷಿಯಲ್’ ವೇದಿಕೆಯಲ್ಲಿ ಬರೆದುಕೊಂಡಿದ್ದರು.
ಏನಿದು ಸೇವ್ ಅಮೆರಿಕ ಕಾಯ್ದೆ?
ಫೆಡರಲ್ ಚುನಾವಣೆಗಳಲ್ಲಿ ಮತದಾರರ ನೋಂದಣಿಗೆ ಅಮೆರಿಕದ ಪೌರತ್ವದ ದಾಖಲೆ ಪುರಾವೆಯನ್ನು ಕಡ್ಡಾಯಗೊಳಿಸಲು ಈ ಕಾಯ್ದೆಯನ್ನು ತರಲಾಗುತ್ತಿದೆ. ಫೋಟೋ ಗುರುತಿನ ಚೀಟಿ ಕಡ್ಡಾಯ ಮತ್ತು ಅನಾರೋಗ್ಯ, ಅಂಗವೈಕಲ್ಯ, ಸೇನಾ ಸೇವೆ ಹಾಗೂ ಪ್ರಯಾಣದಂತಹ ವಿನಾಯಿತಿಗಳನ್ನು ಹೊರತುಪಡಿಸಿ ಅಂಚೆ ಮತದಾನಕ್ಕೆ (Mail-in voting) ಕಠಿಣ ನಿರ್ಬಂಧ ವಿಧಿಸುವುದನ್ನು ಟ್ರಂಪ್ ಆಡಳಿತ ಬಲವಾಗಿ ಪ್ರತಿಪಾದಿಸುತ್ತಿದೆ. ಆದರೆ ಡೆಮಾಕ್ರಟ್‌ಗಳು ಈ ಕಾಯ್ದೆಯನ್ನು ವಿರೋಧಿಸುತ್ತಿದ್ದು, ಕಠಿಣ ದಾಖಲಾತಿ ನಿಯಮಗಳಿಂದಾಗಿ ಅರ್ಹ ಅಮೆರಿಕನ್ ನಾಗರಿಕರಿಗೂ ಮತದಾನ ಕಷ್ಟವಾಗಬಹುದು ಎಂದು ವಾದಿಸುತ್ತಿದ್ದಾರೆ.
