ರೈಲು ಪ್ರಯಾಣಿಕರೇ ಗಮನಿಸಿ – ಟಿಕೆಟ್‌ ರದ್ದುಗೊಳಿಸಿದ್ರೆ ರಿಫಂಡ್‌ ಇಲ್ಲ

ನವದೆಹಲಿ : ಭಾರತೀಯ ರೈಲ್ವೆ (Indian Railways) ತನ್ನ ಟಿಕೆಟ್ ರದ್ದತಿ (Ticket Cancellation) ನಿಯಮಗಳನ್ನು ಬಿಗಿಗೊಳಿಸಿದೆ. ಮರುಪಾವತಿ (Refund) ರಹಿತ ಅವಧಿಯನ್ನು ದ್ವಿಗುಣಗೊಳಿಸಿದೆ ಮತ್ತು ಈ ಹಿಂದೆ ಮಾಡಿದ ರದ್ದತಿಗಳಿಗೆ ಶೇಕಡಾವಾರು ಆಧಾರಿತ ದಂಡವನ್ನು ವಿಸ್ತರಿಸಿದೆ. ರೈಲು ಹೊರಡುವ ಕೊನೇ ಕ್ಷಣದಲ್ಲಿ ಅಥವಾ 8 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಟಿಕೆಟ್‌ ಅನ್ನು ರದ್ದುಗೊಳಿಸಿದರೆ ಇನ್ನುಮುಂದೆ ಮರುಪಾವತಿ ಸಿಗುವುದಿಲ್ಲ ಎಂದು ಹೇಳಿದೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ರದ್ದತಿ ದಂಡದ ಹೊಸ ರಚನೆಯನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಅತ್ಯಂತ ಮಹತ್ವದ ಬದಲಾವಣೆಯೆಂದರೆ ಮರುಪಾವತಿ ರಹಿತ ಅವಧಿ. ಇದು ಮೊದಲಿನ ನಾಲ್ಕು ಗಂಟೆಯಿಂದ ಎಂಟು ಗಂಟೆಗೆ ವಿಸ್ತರಿಸಲಾಗಿದೆ. ಈ ಮೊದಲು ಎಂದರೆ 2015 ರಲ್ಲಿ ಜಾರಿಗೆ ತಂದಿದ್ದ ನಿಯಮದಲ್ಲಿ, ಮಾರಾಟವಾಗದ ಟಿಕೆಟ್‌ಗಳನ್ನು ಮರುಪಾವತಿ ಸಹಿತ ರದ್ದುಗೊಳಿಸಲು ರೈಲು ಹೊರಡುವ ನಾಲ್ಕು ಗಂಟೆ ಮೊದಲು ಅವಕಾಶ ಇತ್ತು. ಜೊತೆಗೆ ಅದರ 50% ಪಾವತಿಯನ್ನು ರೈಲ್ವೆ ಮುಟ್ಟುಗೋಲು ಹಾಕಬಹುದಿತ್ತು. ಆದರೆ ಈಗ ಈ ಅವಧಿಯನ್ನು ಎಂಟು ಗಂಟೆಗೆ ವಿಸ್ತರಿಸಲಾಗಿದೆ.

ದುರುಪಯೋಗವನ್ನು ನಿಯಂತ್ರಿಸಲು ಮತ್ತು ನಿಜವಾದ ಪ್ರಯಾಣಿಕರು ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಈ ಸುಧಾರಣೆಗಳನ್ನು ತರಲಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ. ಮುಖ್ಯವಾಗಿ ಕೆಲವರು ಇತರರಿಗೆ ಹೆಚ್ಚಿನ ದರದಲ್ಲಿ ಟಿಕೆಟ್‌ ಮಾರಾಟ ಮಾಡಲು ನಿಯಮಿತವಾಗಿ ಹೆಚ್ಚಿನ ಟಿಕೆಟ್‌ಗಳನ್ನು ಬುಕ್ ಮಾಡುತ್ತಾರೆ. ಮತ್ತು ರೈಲು ಹೊರಡುವುದಕ್ಕೂ 4 ಗಂಟೆ ಮೊದಲು ಮಾರಾಟವಾಗದ ಟಿಕೆಟ್‌ಗಳನ್ನು ರದ್ದುಗೊಳಿಸುತ್ತಿದ್ದರು. ಆದರೆ ಈಗ ಈ ವಂಚನೆಗೆ ಕಡಿವಾಣ ಹಾಕಲು ಅವಧಿಯನ್ನು 8 ಗಂಟೆಗೆ ವಿಸ್ತರಿಸಲಾಗಿದೆ.

ರೈಲು ನಿರ್ಗಮನದ ಎಂಟು ಗಂಟೆಗಳ ಒಳಗೆ ಟಿಕೆಟ್ ರದ್ದುಗೊಳಿಸಿದರೆ, ಮರುಪಾವತಿಗೆ ಅವಕಾಶವಿಲ್ಲ. ಕೊನೆಯ ಕ್ಷಣದ ಕಪ್ಪು ಮಾರುಕಟ್ಟೆಗೆ ಪ್ರೋತ್ಸಾಹವನ್ನು ಕೊನೆಗೊಳಿಸಲು ಈ ನಿಯಮ ತರಲಾಗಿದೆ. ಈ ಕಪ್ಪು ಮಾರುಕಟ್ಟೆಯಲ್ಲಿ ಜನರು ಯಾವುದೇ ಬೆಲೆಯಲ್ಲಿ ಟೆಕೆಟ್‌ ಖರೀದಿಸಲು ಸಿದ್ಧರಿರುತ್ತಾರೆ ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು