Wednesday, June 19, 2024

ಸತ್ಯ | ನ್ಯಾಯ |ಧರ್ಮ

‘ಫೋಟೋ’ ತೆಗೆಸಿಕೊಳ್ಳುವುದೇ ಒಂದು ಕನಸು!

ಕೊರೋನಾ ಲಾಕ್ ಡೌನ್ ನಿಂದ ಯಾವ ರೀತಿಯ ಸಮಸ್ಯೆ ಉಂಟಾಯಿತು ಎಂಬ ಚಿತ್ರಣವನ್ನು ನಿರ್ದೇಶಕರು ಸಿನಿಪ್ರಿಯರ ಮುಂದೆ ತಂದಿದ್ದಾರೆ. ಚಿತ್ರ ಅಂತೂ ಭಾವುಕತೆಯಿಂದ ಕೂಡಿದ್ದು ನೋಡುಗರಿಗೆ ಕಣ್ಣೀರು ತರಿಸುತ್ತದೆ – ಪ್ರದೀಪ್ ಕೊಲ್ಪೆದಬೈಲ್, ಪತ್ರಿಕೋದ್ಯಮ ವಿದ್ಯಾರ್ಥಿ

ಉತ್ತರ ಕರ್ನಾಟಕ ಭಾಷೆಯ ಸೊಗಡು, ರೊಟ್ಟಿಯ ಘಮಲು, ಕೋರೋನಾದ ದಾಳಿ! ಎಲ್ಲವನ್ನೂ ತೋರಿಸುವುದು ಫೋಟೋ ಸಿನೆಮಾ. ಸ್ಯಾಂಡಲ್ ವುಡ್ ಸಿನೆಮಾ ಅಂದಾಕ್ಷಣ ಆ್ಯಕ್ಷನ್, ರೋಮ್ಯಾನ್ಸು ಒಳಗೊಂಡ ಸಿನಿಮಾಗಳೇ ಇರುವಾಗ ಇತ್ತೀಚಿಗೆ ಹಲವು ಸಿನೆಮಾಗಳು ರೋಮ್ಯಾನ್ಸ್, ಫೈಟು ಇಲ್ಲದೇ ತನ್ನ ಕಥೆಯಿಂದಾಗಿಯೇ ಜನರ ಮನ ಗೆದ್ದಿರುವ ನಿದರ್ಶನಗಳಿವೆ. ಅಂತಹ ಸಾಲಿಗೆ ಸೇರುವುದು ಈ ‘ಫೋಟೋ’ ಸಿನೆಮಾ. 

ಕಥೆಯೊಳಗೆ ಹೊಕ್ಕರೆ….

ಪುಟ್ಟ ಬಾಲಕ ತನ್ನ ತಂದೆ ತಾಯಿಯೊಟ್ಟಿಗೆ ಬಡತನದೊಂದಿಗೆ ಜೀವನ ಕಳೆಯುತ್ತಾನೆ. ಅವನಿಗೋ ಬೆಂಗಳೂರಿಗೆ ಹೋಗೋದೆಂದರೆ ಬಹಳ ಇಷ್ಟ. ಬೆಂಗಳೂರಿಗೆ ಹೋಗುವುದೇನೋ ಓಕೆ, ಆದರೆ ಅಲ್ಲಿಗೆ ಹೋದೆನೆಂದು ತನ್ನ ಫ್ರೆಂಡ್ಸ್ ಗಳಿಗೆ ತೋರಿಸಲು ಸಾಕ್ಷಿ ಬೇಕಲ್ವ? ಅದಕ್ಕಾಗಿ ಬೆಂಗಳೂರಿನ ವಿಧಾನಸೌಧದ ಬಳಿ ಫೋಟೋ ತೆಗೆಸಿಕೊಳ್ಳುವುದು ಅವನ ಕನಸು.

ಕನಸು ಕಾಣಲು ಸುಲಭ, ಆದರೆ ಅದನ್ನು ನನಸಾಗಿಸಲು ಹೇಳಿದಷ್ಟು ಸುಲಭವಲ್ಲ. ಆ ಪುಟ್ಟ ಬಾಲಕ ತನ್ನ ತಾಯಿಯೊಂದಿಗೆ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಎನ್ನುವ ಪ್ರಸ್ತಾಪ ಮಾಡುತ್ತಾನೆ. ತಾಯಿಗೆ ಕರೆದುಕೊಂಡು ಹೋಗಲು ಮನಸ್ಸಿದ್ದರೂ ಮನೆಯ ಪರಿಸ್ಥಿತಿ, ಬಡತನ ಎದುರು ಬಂದು ಅಷ್ಟು ದೂರ ಹೋಗುವುದು ಬೇಡ ಎಂಬ ಉತ್ತರವನ್ನು ಅವಳ ಬಾಯಿಂದ ತರಿಸುತ್ತದೆ. ಮಗ ಊಟ ಮಾಡಲು ನಿರಾಕರಿಸುತ್ತಾನೆ, ತಂದೆಯನ್ನು ಬಲವಂತ ಮಾಡುತ್ತಾನೆ. ಕೊನೆಗೆ ತಂದೆಯ ಮನಸ್ಸನ್ನು ಒಪ್ಪಿಸುವಲ್ಲಿ ಗೆಲ್ಲುತ್ತಾನೆ.

 ಬೆಂಗಳೂರಿಗೆ ಹೋದರೂ ತನ್ನ ಕನಸಿನಂತೆ ವಿಧಾನ ಸೌಧದ ಬಳಿ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದೇ ಸಮಯಕ್ಕೆ ಕೊರೋನಾ ಸಾಂಕ್ರಾಮಿಕ ರೋಗದಿಂದ ಲಾಕ್ ಡೌನ್ ಘೋಷಣೆ ಆಗುತ್ತದೆ. ಇದು ಅವನ ಕನಸಿಗೆ ಇನ್ನಷ್ಟು ಹೊಡೆತ ನೀಡುತ್ತದೆ. ಲಾಕ್ ಡೌನ್ ನಿಂದಾಗಿ ತನ್ನ ಊರಿಗೆ ವಾಪಾಸ್ಸಾಗ ಬೇಕಾದ ಪರಿಸ್ಥಿತಿ ಎದುರಾದರೂ ಅದು ಅವನ ಅರಿವಿಗೆ ಬಂದಿರುವುದಿಲ್ಲ. ತಂದೆಗೆ ಮಗನ ಕನಸನ್ನು ಪೂರೈಸಲಾಗಿಲ್ಲ ಎಂಬ ಬೇಸರ ಉಂಟಾಗುವುದನ್ನು ಸಿನೆಮಾದಲ್ಲಿ ಕಾಣಬಹುದು. ಹೀಗೆ ಕಥೆ ಮುಂದುವರೆದು ಮುಂದಕ್ಕೆ ಕೊರೋನಾ ಲಾಕ್ ಡೌನ್ ನಿಂದ ಯಾವ ರೀತಿಯ ಸಮಸ್ಯೆ ಉಂಟಾಯಿತು ಎಂಬ ಚಿತ್ರಣವನ್ನು ನಿರ್ದೇಶಕರು ಸಿನಿಪ್ರಿಯರ ಮುಂದೆ ತಂದಿದ್ದಾರೆ. ಚಿತ್ರ ಅಂತೂ ಭಾವುಕತೆಯಿಂದ ಕೂಡಿದ್ದು ನೋಡುಗರಿಗೆ ಕಣ್ಣೀರು ತರಿಸುತ್ತದೆ. ನಿರ್ದೇಶಕರು ಕೋವಿಡ್ ಸಂದರ್ಭದಲ್ಲಿ ಜನರು ಪಟ್ಟ ತೊಂದರೆಯನ್ನು ಸೂಕ್ಷ್ಮವಾಗಿ ಜನರೆದುರು ತೆರೆದಿಟ್ಟಿದ್ದಾರೆ. ಇಂತಹ ಸಿನೆಮಾವನ್ನು ನಮ್ಮ ಮುಂದೆ ತಂದಿದ್ದಕ್ಕಾಗಿ ನಿರ್ದೇಶಕರಿಗೆ ವಂದನೆಗಳು.

ಕೋವಿಡ್-19 ಸಂದರ್ಭದಲ್ಲಿ ಪ್ರತಿಯೊಬ್ಬರ ಜೀವನವು ಕೂಡ ಒಂದೊಂದು ರೀತಿಯ ಸಮಸ್ಯೆಗಳನ್ನು ಎದುರಿಸಿದೆ. ಲಾಕ್ ಡೌನ್ ಘೋಷಿಸಿದಾಗಿನಿಂದ ಹಳ್ಳಿಯಲ್ಲಿರುವವರು ಪಟ್ಟಣಕ್ಕೆ ಹೋಗಿದ್ದರೆ, ವಾಪಾಸು ಬರುವುದೇ ಕಷ್ಟವಾಗಿತ್ತು. ಇನ್ನು ನಾವಂತು ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದು ಬಾಲ್ಯದಲ್ಲಾಡುತ್ತಿದ್ದ ಆಟಗಳನ್ನು ಆಡುತ್ತಿದ್ದೆವು. ಸಂಜೆ ಆದರೆ ಮನೆಯ ಪಕ್ಕದಲ್ಲಿರುವ ಸಣ್ಣ ಮೈದಾನದಲ್ಲಿ ಕ್ರಿಕೆಟ್ ಆಡುವ ಮೂಲಕ ಸಮಯ ಕಳೆದೆವು. ರಾಜಕಾರಣಿಗಳು ಹಲವು ಯೋಜನೆ, ಕಿಟ್ ಗಳನ್ನು ಘೋಷಿಸಿದರೂ ಅದು ಪ್ರತಿಯೊಬ್ಬರ ಮನೆಗೆ ತಲುಪಿರಲಿಲ್ಲ ಎನ್ನುವುದಂತು ವಾಸ್ತವ! ಆರ್ಥಿಕವಾಗಿ ಹೊಡೆತ ಬಿದ್ದಿದ್ದು ಅದೇ ಸಮಯದಲ್ಲಿ!

ಸುದ್ದಿ ಮಾಧ್ಯಮಗಳಲ್ಲಿ ತೋರಿಸುತ್ತಾ ಇದ್ದಂತೆ ಕೋವಿಡ್ ನಿಂದಾಗಿ ಆದ ಸಾವುಗಳು ಭಯಭೀತ ಗೊಳಿಸುತ್ತಿದ್ದವು.. ಸತ್ತರೆ ಮೃತದೇಹವನ್ನು ಸಹ ನೀಡುತ್ತಿರಲಿಲ್ಲ. ಹೆಣಕ್ಕೆ ಕುಟುಂಬದವರೇ ಇಲ್ಲದಂತೆ ಬಿಸಾಕುತ್ತಿದ್ದರು. ಇದನ್ನು ನೋಡಿದಾಗ ಕಣ್ಣಂಚಲ್ಲಿ ಕಣ್ಣೀರು ಬರುತ್ತಿತ್ತು. ಈ ರೀತಿ ಹಲವು ನೋವುಗಳನ್ನು ಆ ಸಮಯದಲ್ಲಿ ಅನುಭವಿಸಿದೆವು‌. 

ಇನ್ನು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೊಡೆತ ಬಿತ್ತು. ಕೋವಿಡ್ ಸಂದರ್ಭದಲ್ಲಿ ಆನ್ ಲೈನ್ ತರಗತಿ ಆರಂಭಿಸಿದಾಗ, ನೆಟ್ವರ್ಕ್ ಸಮಸ್ಯೆಯೇ ಹೆಚ್ಚಿತ್ತು. ಆರ್ಥಿಕವಾಗಿ ಹಿಂದುಳಿದವರಿಗೆ ಮೊಬೈಲ್ ಖರೀದಿಸೋದೆ ಕಷ್ವವಾಯಿತು. ಖರೀದಿಸಿದರೂ ನೆಟ್ವರ್ಕ್ ಸಮಸ್ಯೆ, ಸರಿಯಾಗಿ ವಿದ್ಯಾರ್ಥಿಗಳಿಗೆ ತರಗತಿ ಅರ್ಥ ಆಗದ್ದು ಎಲ್ಲವೂ ಅವರ ರಿಸಲ್ಟ್ ಮೇಲೆ ಪರಿಣಾಮ ಬೀರಿತು. ಶಿಕ್ಷಣ ಸಂಸ್ಥೆಗಳು ಪಾಸ್ ಮಾಡಿದ್ದರೂ ಸಹ ಪುಸ್ತಕದಲ್ಲಿರುವ ವಿಷಯಗಳು ವಿದ್ಯಾರ್ಥಿಗಳಿಗೆ ತಲುಪದಾಯಿತು. ಮುಖತಃ ಭೇಟಿ ಆಗದೇ ಇರುವ ಕಾರಣ ಆನ್ಲೈನ್ ಮುಖಾಂತರ ಪಾಠ ಮಾಡಲು ಟೀಚರ್ಸ್ ಗಳಿಗೂ ಕಷ್ಟವಾಯಿತು.

ಇನ್ನು ಶಾಲಾ ಮಕ್ಕಳಿಗೆ ಆನ್ಲೈನ್ ತರಗತಿಗಾಗಿ ಹೆತ್ತವರು ಕಷ್ಟಪಟ್ಟು ಮೊಬೈಲ್ ತೆಗೆದುಕೊಟ್ಟರೆ ಅವರು ಫ್ರೀ ಫೈರ್ ನಂತಹ ಆನ್ಲೈನ್ ಗೇಮ್ಸ್ ಗಳಿಗೆ ಜೋತುಬಿದ್ದು ತಮ್ಮ ಪಾಠದ ಕಡೆ ಹೆಚ್ಚು ಗಮನ ಹರಿಸದಿದ್ದುದು ಬೇಸರದ ಸಂಗತಿ. ಆನ್ಲೈನ್ ತರಗತಿ ಮುಗಿದ ಮೇಲೆ ತರಗತಿಗೆ ಹೋಗಿ ಕ್ಲಾಸ್ ಕೇಳ ಬೇಕಾದರೆ ಪಾಠದ ಮುಂದುವರಿಕೆ ವಿದ್ಯಾರ್ಥಿಗಳಿಗೆ ಅರ್ಥೈಸಿಕೊಳ್ಳಲು ಅಸಾಧ್ಯವಾಯಿತು. ಜತೆಗೆ ವಿದ್ಯಾರ್ಥಿ ಜೀವನದ ಸಂತೋಷವಾಗಿ ಕಳೆಯಬೇಕಾದ ದಿನಗಳನ್ನು ಅದು ದೂರ ಮಾಡಿತು.

ಇನ್ನು ಸಾಮಾಜಿಕವಾಗಿ ನೋಡುವುದಾದರೆ, ದಿನಾಲೂ ನೋಡುತ್ತಿದ್ದ ಪರಸ್ಪರರು ಒಬ್ಬರನ್ನೊಬ್ಬರು ಉಗ್ರಗಾಮಿಗಳಂತೆ ನೋಡುತ್ತಿದ್ದರು. ದಿನ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಅವಕಾಶ ನೀಡಿದಾಗ 2-3 ಮೀಟರ್ ಅಂತರ ಕ್ಯೂ ನಿಂತು ಸಾಮಗ್ರಿಗಳನ್ನು ಖರೀದಿಸಬೇಕಾಗಿತ್ತು. ಇನ್ನು ದೂರದ ಊರಿನಿಂದ ಬಂದವರನ್ನಂತು ಇವರು ಯಾಕೆ ಬಂದ್ರು ಎಂಬಂತೆ ಭಾವಿಸಿದ್ದು ಕೂಡ ಇದೆ. ಏನೇ ಇದ್ದರೂ, ಸರ್ಕಾರ ಕೆಲವೊಂದು ಕ್ರಮ ಅಚ್ಚುಕಟ್ಟಾಗಿ ನಿರ್ವಹಿಸದಿದ್ದದ್ದು ಸಹ ಜನ ಜೀವನ ಅಸ್ತವ್ಯಸ್ತ ಆಗಲು ಕಾರಣ. ದೇಶದ ಪ್ರಧಾನಿಯವರು ಸಂಜೆ ಆದಾಗ ನಿಮ್ಮ ಮನೆಯ ಬಾಲ್ಕನಿಗೆ ಬಂದು ದೀಪ ಹಚ್ಚಿ, ಬಟ್ಟಲು, ಪ್ಲೇಟು ಬಾರಿಸಿ, ಕೊರೋನಾ ಹೋಗುವಲ್ಲಿ ಜೊತೆಯಾಗಿ ಎಂದಿದ್ದು ಹಾಸ್ಯಾಸ್ಪದವಾಗಿದೆ. ಪ್ರಧಾನಿಯಾದವರು ಈ ರೀತಿಯ ಮೌಢ್ಯ ತುಂಬಿದ ಮಾತನ್ನಾಡಿದ್ದು ಸಮಂಜಸವಲ್ಲ.

ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ʼಫೋಟೋʼ ಮೂಲಕ ಸೂಕ್ಷ್ಮವಾಗಿ ಅದನ್ನು ಪ್ರಸ್ತುತ ಪಡಿಸಿದ ನಿರ್ದೇಶಕರಿಗೆ ವಂದನೆಗಳು.

ಪ್ರದೀಪ್ ಕೊಲ್ಪೆದಬೈಲ್, ಬೆಳ್ತಂಗಡಿ

ಪತ್ರಿಕೋದ್ಯಮ ವಿದ್ಯಾರ್ಥಿ

ಇದನ್ನೂ ಓದಿ-http://ಪ್ರೀತಿ-ಸೌಹಾರ್ದತೆಯ ಒರತೆಯನ್ನು ತಲುಪುವ ಬಹುದೂರದ ದಾರಿಯಲ್ಲಿನ ಒಯಸಿಸ್:’ಡೇರ್ ಡೆವಿಲ್ ಮುಸ್ತಾಫಾ’ https://peepalmedia.com/dare-devil-mustafa-movie/

Related Articles

ಇತ್ತೀಚಿನ ಸುದ್ದಿಗಳು