Monday, April 14, 2025

ಸತ್ಯ | ನ್ಯಾಯ |ಧರ್ಮ

‘ಜೈ ಶ್ರೀರಾಮ್’ ಘೋಷಣೆ ವಿವಾದದಲ್ಲಿ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ

ಮೂರು ವರ್ಷಗಳಿಗೂ ಹೆಚ್ಚು ಕಾಲ 10 ಮಸೂದೆಗಳಿಗೆ ಅನುಮೋದನೆ ನೀಡದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರ ವಿರುದ್ಧ ಸುಪ್ರೀಂ ಕೋರ್ಟ್ ಇತ್ತೀಚೆಗೆ ತನ್ನ ಆಕ್ರೋಶ ವ್ಯಕ್ತಪಡಿಸಿದ್ದು ತಿಳಿದಿದೆ.

ಪರಿಣಾಮವಾಗಿ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯಪಾಲರ ಅನುಮೋದನೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸಲಾಯಿತು. ಈ ಮಧ್ಯೆ, ರಾಜ್ಯಪಾಲ ರವಿ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿದ್ದಾರೆ. ತಮಿಳುನಾಡಿನಲ್ಲಿ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳಿಗೆ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುವಂತೆ ಹೇಳುವ ಮೂಲಕ ಈಗ ಅವರು ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು “ಜೈ ಶ್ರೀ ರಾಮ್” ಎಂದು ಹೇಳುವಂತೆ ಆರ್.ಎನ್.ರವಿ ಕೇಳಿದ್ದಾರೆ ಎಂಬ ಆರೋಪದಡಿ ವಿವಾದ ಭುಗಿಲೆದ್ದಿದೆ. ಅವರ ಕ್ರಮವನ್ನು ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳ ಮುಖಂಡರು ಖಂಡಿಸುತ್ತಿದ್ದಾರೆ. ಒಂದು ಶಿಕ್ಷಣ ಸಂಸ್ಥೆಯವರು ಅವರನ್ನು ಅಧಿಕಾರದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ.

SPCSS-TN (ಸ್ಟೇಟ್‌ ಫ್ಲಾಟ್‌ಫಾರ್ಮ್‌ ಫಾರ್‌ ಕಾಮನ್‌ ಸ್ಕೂಲ್‌ ಸಿಸ್ಟಮ್ – ತಮಿಳುನಾಡು) ಹೇಳಿಕೆಯಲ್ಲಿ, “ಶ್ರೀ ಆರ್.ಎನ್. ರವಿ ಅವರು ತಮ್ಮ ಅಧಿಕಾರ ಪ್ರಮಾಣ ವಚನವನ್ನು ಉಲ್ಲಂಘಿಸಿದ್ದಾರೆ. ಸಂವಿಧಾನವನ್ನು ಎತ್ತಿಹಿಡಿಯುವಲ್ಲಿ, ಅದರ ಆದರ್ಶಗಳು ಮತ್ತು ಸಂಸ್ಥೆಗಳನ್ನು ಗೌರವಿಸುವಲ್ಲಿ ವಿಫಲರಾಗಿದ್ದಾರೆ. “ಭಾರತದ ಸಂವಿಧಾನದ 159 ನೇ ವಿಧಿಯನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಕ್ಕಾಗಿ ತಮಿಳುನಾಡು ರಾಜ್ಯಪಾಲರನ್ನು ತಕ್ಷಣವೇ ತೆಗೆದುಹಾಕಬೇಕು” ಎಂದು ಒತ್ತಾಯಿಸಿದೆ.

ಹಿರಿಯ ಕಾಂಗ್ರೆಸ್ ನಾಯಕ ಶಶಿಕಾಂತ್ ಸೆಂಥಿಲ್ ಕೂಡ ಎಕ್ಸ್ ವೇದಿಕೆಯಲ್ಲಿ ರವಿಯನ್ನು ಟೀಕಿಸಿದ್ದಾರೆ. “ಸುಪ್ರೀಂ ಕೋರ್ಟ್ ಟೀಕೆಯ ನಂತರ, ಅವರು ಈಗ ವ್ಯವಸ್ಥೆಯನ್ನು ಕೆರಳಿಸಲು ವಿದ್ಯಾರ್ಥಿಗಳನ್ನು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿಸುವಂತಹ ತಂತ್ರಗಳನ್ನು ಮಾಡುತ್ತಿದ್ದಾರೆ, ಅವರು ಹತಾಶರಾಗಿದ್ದಾರೆ. ಆದರೂ, ತನ್ನ ಅಜೆಂಡಾವನ್ನು ಮುನ್ನಡೆಸಲು ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದ್ದಾರೆ” ಎಂದು ಅವರು ವ್ಯಂಗ್ಯವಾಡಿದರು.

ಇದು ದುರಹಂಕಾರ ಮತ್ತು ಪ್ರತಿಭಟನೆಯ ಅಪಾಯಕಾರಿ ಮಿಶ್ರಣವಾಗಿದ್ದು, ಇದು ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಸಾಂವಿಧಾನಿಕ ತತ್ವಗಳನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page