Saturday, August 17, 2024

ಸತ್ಯ | ನ್ಯಾಯ |ಧರ್ಮ

ತಂಗಲಾನ್: ಬಹುಜನರ ʼಕಪ್ಪುಕಾವ್ಯʼ

ವಿಕಾಸ್‌ ಆರ್‌ ಮೌರ್ಯ
‘ತಂಗಲಾನ್’ ಸಿನೆಮಾ ಪಾ.ರಂಜಿತ್ ಎಂಬ ದೈತ್ಯನ ದೃಶ್ಯಕಾವ್ಯ. ಅವರು ತಮಗಿರುವ ತಾಕತ್ತನ್ನು ಸಾಬೀತುಪಡಿಸಿ ಒಂದು ದಶಕವೇ ಕಳೆದುಹೋಗಿದೆ. ಆದರೆ ಈ ಸಿನೆಮಾದಲ್ಲಿ ಬಹುಜನರು ಮರೆತುಹೋದ ಇತಿಹಾಸವನ್ನು ನೆನಪು ಮಾಡಿಸಲು ಅವರು ಹುಡುಕಿಕೊಂಡದ್ದು ಬಾಬಾಸಾಹೇಬ್‌ ಅಂಬೇಡ್ಕರ್‌ರವರ ’ಕ್ರಾಂತಿ ಮತ್ತು ಪ್ರತಿಕ್ರಾಂತಿʼಎಂಬ ಥಿಯರಿಯನ್ನು ಎಂಬುದೇ ವಿಶೇಷ. ಈ ಥಿಯರಿಯನ್ನು ಪೊರೆಯಲು ಹಾಗೂ ಸ್ಕ್ರೀನ್ ಮೇಲೆ ಮೈಜುಮ್ಮೆನ್ನಿಸುವಂತೆ ಮೂಡಿಸಲು ಪಾ.ರಂಜಿತ್‌ ಜೊತೆಗೆ ನಟ/ನಟಿಯರಾದ ವಿಕ್ರಮ್ ಮಾಳವಿಕ, ಪಾರ್ವತಿ, ಪಸುಪತಿ, ಡೇನಿಯಲ್,‌ ,ಅರ್ಜುನ್‌ ಸಂಗೀತ ನಿರ್ದೇಶಕ ಜಿ.ವಿ.ಪ್ರಕಾಶ್, ನಿರ್ಮಾಪಕ ಜ್ಞಾನವೇಲು, ಮೇಕಪ್ ಮ್ಯಾನ್/ವುಮೆನ್‌ಗಳು, ಲೈಟ್‌ ಬಾಯ್/ಗರ್ಲ್ ಗಳು, ಛಾಯಾಗ್ರಾಹಕ, ತಾಂತ್ರಿಕ ತಂಡ ಸೇರಿದಂತೆ ಬಹುದೊಡ್ಡ ಸೈನ್ಯವೇ ಸೇರಿಕೊಂಡಿದೆ. ಆಡಿಯೋ ಲಾಂಚ್‌ನಲ್ಲಿ ಮಾತನಾಡುತ್ತಾ ನಟಿ ಪಾರ್ವತಿಯವರು ʼಪಾ.ರಂಜಿತ್‌ ಒಂದು ಸೈನ್ಯವನ್ನೇ ಕಟ್ಟಿದ್ದಾರೆ. ಆ ಸೈನ್ಯದಲ್ಲಿ ನಾನೂ ಒಬ್ಬಳು ಸೈನಿಕಳಾಗಿರುತ್ತೇನೆ’ ಎಂದಿರುವುದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದು.

ʼತಂಗಲಾನ್ʼ ಎಂಬುದು ನಾಯಕನ ಹೆಸರು. ಈ ನಾಯಕನ ಇತಿಹಾಸವೇನು ಎಂಬುದನ್ನು ತಿಳಿಸುವುದೇ ಸಿನೆಮಾದ ಸಿಂಗಲ್ ಲೈನ್‌ ಕತೆ. ಪಾ.ರಂಜಿತ್‌ ಯಾರಿಗೆ ತಿಳಿಸುತ್ತಿದ್ದಾರೆ? ಅದಕ್ಕೆ ನೀವು ಸಿನೆಮಾ ನೋಡಲೇಬೇಕು. ಈ ಕಥನದ ನಿರೂಪಣೆಗೆ ರಂಜಿತ್ ಬಳಸಿಕೊಂಡಿರುವ ತಂತ್ರ Magical realism ಆದರೂ ಈ ತಂತ್ರದೊಂದಿಗೆ ʼಮಿಥ್‌ನೊಂದಿಗೆ ಪಯಣʼ (Journey with a myth) ಮತ್ತು ʼಟ್ರೆಷರ್ ಹಂಟಿಂಗ್ʼ (Treasure hunting style) ಸ್ಟೈಲನ್ನು ಸಮ್ಮಿಶ್ರಗೊಳಿಸಿದ್ದಾರೆ. ಈ ತಂತ್ರವನ್ನು ಹಾಲಿವುಡ್‌ನಲ್ಲಿ ’ದಿ ಮಮ್ಮಿ’ ಸಿನೆಮಾ ನಿರ್ದೇಶಿಸಿದ ಸ್ಟೀಫನ್ ಸೋಮರ್ಸ್ ಸಮರ್ಥವಾಗಿ ಬಳಸಿಕೊಂಡು ಜನಪ್ರಿಯಗೊಳಿಸಿದ್ದನು. ಈಜಿಫ್ಟ್ ಮಿಥ್ ಲೋಕವನ್ನು ಬಹಳ ಪರಿಣಾಮಕಾರಿಯಾಗಿ ಸಮಕಾಲೀನಗೊಳಿಸಲು ಪ್ರಯತ್ನಿಸಿ ಯಶಸ್ವಿಯಾಗಿದ್ದನು. ಅಕಿರ ಕುರೊಸಾವಾನ ʼಡ್ರೀಮ್ಸ್‌ʼ ಅನ್ನು ಸಹ ಇಲ್ಲಿ ನೆನಪಿಸಿಕೊಳ್ಳಬಹುದು. ಪಾ.ರಂಜಿತ್ ಭಾರತೀಯ ಸಿನೆಮಾಕ್ಕೆ ಅದೇ ತಂತ್ರವನ್ನು ಪರಿಚಯಿಸಿದ್ದಾರಾದರೂ, ಅದನ್ನು ’ಟೈಮ್‌ ಟ್ರಾವೆಲಿಂಗ್’ನೊಂದಿಗೆ (Time travelling) ಬೆಸೆದು ನೋಡುಗರ ಮೈಜುಮ್ಮೆನಿಸುವ ಜೊತೆಗೆ ಮೆದುಳಿಗೂ ಕೆಲಸ ಕೊಟ್ಟಿದ್ದಾರೆ. ಈ ಮೂರೂ ತಂತ್ರಗಳನ್ನು ಬಿಗಿಯಾಗಿ ಹಿಡಿದು ಪ್ರೇಕ್ಷಕರು ಅಲ್ಲಾಡದಂತೆ ‘ತಂಗಲಾನ್’ ಚಿತ್ರಕತೆ ಹೆಣೆಯಲಾಗಿದೆ. ಪ್ರತಿಯೊಂದು ಸಮಕಾಲೀನ ದೃಶ್ಯವೂ ಇತಿಹಾಸದೊಂದಿಗೆ ಮಾತಾಡುತ್ತದೆ. ಹಾಗೆ ಮಾತಾಡುತ್ತಲೇ ಇತಿಹಾಸ ಮತ್ತೆ ಮರುಕಳಿಸಿ ’ತಂಗಲಾನ್’ಗೆ ತಾನು ಯಾರೆಂಬ ಅರಿವಾಗುತ್ತದೆ. ಅಲ್ಲಿಗೆ ಸಿನೆಮಾ ನೋಡಿದ ಪ್ರೇಕ್ಷಕರ ಅಂದಾಜೆಲ್ಲ ತಲೆಕೆಳಗಾಗಿ ಊಹಿಸಲಾರದ ಕ್ಲೈಮ್ಯಾಕ್ಸ್ 2500 ವರ್ಷಗಳ ಭಾರತದ ಇತಿಹಾಸವನ್ನು ಕಣ್ಮುಂದೆ ತಂದಿರುತ್ತದೆ.

ತಮಿಳುನಾಡಿನ ಉತ್ತರ ಭಾಗದ ಒಂದು ಹಳ್ಳಿಯ ಹೊರಗಡೆ 1850 ನೇ ಇಸವಿಯಲ್ಲಿ ವಾಸಿಸುತ್ತಿದ್ದ ಜನರ ದಿನನಿತ್ಯ ಜೀವನವನ್ನು ಅನಾವರಣಗೊಳಿಸುತ್ತಾ ಸಿನೆಮಾ ಆರಂಭವಾಗುತ್ತದೆ. ಅಲ್ಲಿ ನೇಕಾರಿಕೆ, ಕಮ್ಮಾರಿಕೆ, ಕುಂಬಾರಿಕೆ, ಚಮ್ಮಾರಿಕೆ, ಬಡಿಗೆ, ದನಗಾಹಿ, ವ್ಯವಸಾಯ ಮಾಡಿಕೊಂಡು ತಳಸಮುದಾಯದ ಜನರು ಬದುಕುತ್ತಿರುತ್ತಾರೆ. ಇವರಲ್ಲೊಬ್ಬನಾದ ತಂಗಲಾನ್‌, ರಾಮಾನುಜಚಾರ್ಯರ ವೈಷ್ಣವ ಪಂಥಕ್ಕೆ ಮಾರುಹೋಗದೆ ಜಾತಿಬಾಹಿರನಾಗಿಯೇ ಉಳಿದುಕೊಂಡಿತ್ತಾನೆ. ಇವನಿಗೆ ಪಿತ್ರಾರ್ಜಿತ ಆಸ್ತಿಯಾಗಿ 5 ಗುಂಟೆ ಭೂಮಿ ಬಂದಿರುತ್ತದೆ. ಅಲ್ಲಿ ತನ್ನೆಲ್ಲಾ ಬಂಧುಗಳು ಭೂಮಿಯನ್ನು ಕಷ್ಟಕ್ಕೋ ಸುಖಕ್ಕೋ ಮಾರಿಕೊಂಡಿರುವಾಗ ಈತ ಮಾತ್ರ ಹಾಗೆಯೇ ಉಳಿಸಿಕೊಂಡು ಜೀವನ ಸಾಗಿಸುತ್ತಿರುತ್ತಾನೆ. ಇದು ಆ ಊರ ಜಮೀನ್ದಾರನ ಕಣ್ಣಿಗೆ ಬಿದ್ದು ತೆರಿಗೆ ನೆಪದಲ್ಲಿ ಒಂದು ಹುನ್ನಾರವನ್ನೂ ಮಾಡಿ ಕಸಿದುಕೊಂಡು ’ತಂಗಲಾನ್’ ಕುಟುಂಬವನ್ನು ಜೀತಕ್ಕೆ ಇಟ್ಟುಕೊಳ್ಳುತ್ತಾನೆ. ಅಷ್ಟೊತ್ತಿಗೆ ಬ್ರಿಟಿಷರಿಗೆ ಕೋಲಾರದ ಸುತ್ತಾ ಮುತ್ತಾ ಚೋಳರಾಜ ಮತ್ತು ಟಿಪ್ಪು ಸುಲ್ತಾನ್‌ ಚಿನ್ನಕ್ಕಾಗಿ ಗಣಿಗಾರಿಕೆಗೆ ಯತ್ನಿಸಿದ್ದು ತಿಳಿಯುತ್ತದೆ. ಈ ನಡುವೆ ತಂಗಲಾನ್ ಕನಸಿನಲ್ಲಿ ಸದಾ ಕಾಡುತ್ತಿರುವ ʼಆರತಿʼ ಕಥೆಯನ್ನು ತನ್ನ ಮಕ್ಕಳಿಗೆ ಕಣ್ಣಿಗೆ ಕಟ್ಟಿದಂತೆ ಹೇಳುವ ಮೂಲಕ ಸಿನೆಮಾ ಒಂದು ಹೊಸ ದಿಕ್ಕಿಗೆ ತಿರುಗಿಕೊಳ್ಳುತ್ತದೆ. ಅಲ್ಲಿಂದ ಪ್ರೇಕ್ಷಕರ ಮನಸ್ಸಿನಲ್ಲಿ ರಿಜಿಸ್ಟರ್‌ ಆಗುವ ʼಆರತಿʼ ತಂಗಲಾನ್‌ ಜೊತೆಗೆ ನೋಡುಗರನ್ನೂ ಬೆಂಬಿಡದೆ ʼಮಾರಿ ಮಾಯ್ಕಾರಿʼಯಂತೆ ಕಾಡುತ್ತಾಳೆ. ಇಲ್ಲಿ ಸ್ಥಳೀಯ ಮೇಲ್ಜಾತಿ ಭೂಮಾಲೀಕನೊಂದಿಗೆ ಬಸವಳಿದುಹೋಗಿದ್ದ ತಳಸಮುದಾಯದ ಜನರಿಗೆ ಬ್ರಿಟಿಷರು ಹೇಗೆ ಬಿಡುಗಡೆಯ ದಾರಿ ತೋರಿದರು ಹಾಗೂ ಅದು ಪ್ರಾಮಾಣಿಕವಾದದ್ದಾ ಎಂಬುದನ್ನು ನೀವು ಸಿನೆಮಾದಲ್ಲಿಯೇ ನೋಡಬೇಕು. ತಂಗಲಾನ್‌ ಹೆಂಡತಿ ಗಂಗಮ್ಮ ನಿಮ್ಮನ್ನಾವರಿಸಿಬಿಡುತ್ತಾಳೆ. ರವಿಕೆ ದೃಶ್ಯವಂತು ನೀರಿಳಿಸುತ್ತದೆ. ಇಂಟರ್ವಲ್‌ ಸೀನ್‌ ಅಷ್ಟೊತ್ತಿಗೆ ʼಆರತಿʼ ನಿಮ್ಮನ್ನು ಕಾಡಲಾರಂಭಿಸಿರುತ್ತಾಳೆ. ಸಿನೆಮಾ ಟಿಕೆಟ್‌ಗೆ ನೀವು ಕೊಟ್ಟ ದುಡ್ಡಿಗೆ ಒಂದು ರೂಪಾಯಿ ಸೇರಿ ನಿಮ್ಮ ಕೈಗೆ ಮರಳಿರುತ್ತದೆ. ಇನ್ನು ಮುಂದಿನದ್ದೆಲ್ಲಾ ಬೋನಸ್.
ʼಆರತಿʼ ಭಾರತದ ಬೌದ್ಧ ಜನಾಂಗವಾದ ʼನಾಗ‌ʼ ಜನರ ನಾಯಕಿ/ದೇವತೆ. ʼಆರತಿʼ ಒಂದು ಪದವಿ ಎಂದುಕೊಳ್ಳಬಹುದು. ತಲೆತಲಾಂತರದಿಂದ ನಾಗಜನರ ಚಿನ್ನದಂತಹ ನಾಡನ್ನು ಕಾಪಾಡಿಕೊಂಡು ಬರುತ್ತಿರುವವಳು ಅವಳೇ. ಈ ನಾಡಿನಲ್ಲಿರುವ ಚಿನ್ನವನ್ನು ಪತ್ತೆ ಹಚ್ಚಿ ಗಣಿ ಮಾಡುವ ತಾಕತ್ತಿರುವುದು ʼತಂಗಲಾನ್ʼ ಪರಂಪರೆಗೆ ಮಾತ್ರ. ಈ ಹಿಂದೆ ಚೋಳರಾಜ ಚಿನ್ನಕ್ಕಾಗಿ ಈ ನಾಗಜನಾಂಗದ ನಾಡಿಗೆ ಲಗ್ಗೆ ಇಟ್ಟಾಗ ನಾಗಜನರ ನಾಯಕಿ ʼಆರತಿʼಯೊಂದಿಗೆ ಯುದ್ಧ ಮಾಡಿ ಚೋಳರಾಜನಿಗೆ ಚಿನ್ನ ದಕ್ಕಿಸಿಕೊಟ್ಟವನು ತಂಗಲಾನ್‌ ಮುತ್ತಾತ ʼಕಾಡಪ್ಪʼನೇ ಆಗಿರುತ್ತಾನೆ. ಆದರೆ ಕಾಡಪ್ಪನಿಗೆ ಒಂದು ಗುಲಗಂಜಿಯಷ್ಟೂ ಚಿನ್ನ ನೀಡದಂತೆ ರಾಜ ಬೆನ್ನಿಗೆ ಚೂರಿ ಹಾಕಿರುತ್ತಾನೆ. ಹಾಗಾಗಿ 19ನೇ ಶತಮಾನದಲ್ಲಿ ಬ್ರಿಟಿಷ್‌ ಅಧಿಕಾರಿ ಕ್ಲೆಮೆಂಟ್‌ ಕಾಡಪ್ಪನ ಸಂತತಿಯವನಾದ ʼತಂಗಲಾನ್‌ʼ ಅನ್ನು ಚಿನ್ನ ಪತ್ತೆ ಹಚ್ಚಲು ಆಯ್ಕೆ ಮಾಡಿಕೊಳ್ಳುತ್ತಾನೆ. ಈ ಚಿನ್ನವನ್ನು ಹುಡುಕುತ್ತಾ ಹೊರಡುವ ತಂಗಲಾನ್‌ ತಂಡದ ಸಾಹಸದ ಜೊತೆಗೆ ತಂಗಲಾನ್‌ ಜೊತೆಯೇ ಅವನ ಸ್ಮೃತಿಯಲ್ಲಿ ಪಯಣಿಸುವ ʼಆರತಿʼ ಅವನನ್ನು ಹೆಜ್ಜೆ ಹೆಜ್ಜೆಗೂ ಎಚ್ಚರಿಸುತ್ತಿರುತ್ತಾಳೆ. ʼತಂಗಲಾನ್‌ʼ ಚಿನ್ನವನ್ನು ಪತ್ತೆ ಹಚ್ಚದಂತೆ ಹಲವು ತೊಡಕುಗಳನ್ನು ಉಂಟು ಮಾಡುತ್ತಾಳೆ. ಅದಕ್ಕಾಗಿ ತಂಗಲಾನ್‌ ಚಿನ್ನ ಪತ್ತೆ ಹಚ್ಚಬೇಕೆಂದರೆ ಆರತಿಯನ್ನು ಕೊಲ್ಲಲೇಬೇಕು. ಇದ್ಯಾಕೆ ಹೀಗೆ ಎಂದರೆ ಅದಕ್ಕೆ ನಿಮಗೆ ಉತ್ತರ ಸಿಗುವುದು ಕ್ಲೈಮ್ಯಾಕ್ಸ್‌ನಲ್ಲಿಯೇ. ಇಲ್ಲಿ ತಂಗಲಾನ್‌ ಕನವರಿಕೆಗಳು ನಾಗಜನಾಂಗದ ಅಂದರೆ ಭಾರತದ ಬಹುಜನರ ಪ್ರಜ್ಞೆಯಲ್ಲಿರುವ ಮೌಖಿಕ ಇತಿಹಾಸವನ್ನು ಸೂಚಿಸುತ್ತದೆ. ಈ ಇತಿಹಾಸ ಪ್ರಾಚೀನ ಭಾರತದಿಂದ ಇಲ್ಲಿಯವರೆಗೂ ಬ್ರಾಹ್ಮಿನಿಸಂ ಮತ್ತು ಬುದ್ಧಿಸಂ ನಡುವೆ ನಡೆಯುತ್ತಿರುವ ಸಂಘರ್ಷವನ್ನು ತಿಳಿಸುತ್ತದೆ.
ಸಿನೆಮಾದಲ್ಲಿನ ರೂಪಕಗಳಾದ ನವಿಲು (ಸಾಮ್ರಾಟ್‌ ಅಶೋಕ ಮನೆತನದ ಕುಲಚಿಹ್ನೆ), ನಾಗರಹಾವುಗಳು (ನಾಗಜನರ ಕುಲಚಿಹ್ನೆ), ಎಕ್ಕದ ಹೂ (ಶೂದ್ರ ಜನಾಂಗದ ಕುಲಚಿಹ್ನೆ), ಆನೆ ಬೆಟ್ಟ (ಬುದ್ಧಿಸಂ ಸಂಕೇತ), ಅರಳಿಮರ, ಟ್ಯಾಟೂ, ಚೇಳು, ಕರಿಚಿರತೆ ಮುಂತಾದುವು ಒಂದೊಂದು ಕತೆಯನ್ನೇ ಹೇಳುತ್ತವೆ. ʼಆರತಿʼ ದಂತಕತೆಯಲ್ಲಿ ಬುದ್ಧ ವಿಗ್ರಹದ ತಲೆಯನ್ನು ಬ್ರಾಹ್ಮಣನೊಬ್ಬ ಶೂದ್ರ ರಾಜನ ಕೈಗಳಿಂದ ಕಡಿಸುವುದು, ಬುದ್ಧ ವಿಗ್ರಹದ ತಲೆಕಡಿದ ನಂತರ ಕಾಡಪ್ಪ ʼಆರತಿʼಯೊಳಗಿನ ಚಿನ್ನ ಕಸಿಯುವುದು, ಮುಂದೆ ನಿಜ ಜೀವನದಲ್ಲಿ ʼತಂಗಲಾನ್‌ʼ ಮಗ ʼಅಶೋಕʼ ಬುದ್ಧನ ವಿಗ್ರಹದ ತಲೆ ಹುಡುಕಿ ಅದನ್ನು ಬುದ್ಧನ ದೇಹಕ್ಕೆ ಮರಳಿ ಸೇರಿಸುವುದು ಮುಂತಾದ ರೂಪಕ ದೃಶ್ಯಗಳು ಇತಿಹಾಸವನ್ನು ವಾಸ್ತವದೊಂದಿಗೆ ಬೆಸೆದು ಮಹಾಕಾವ್ಯವನ್ನೇ ಸೃಷ್ಟಿಸಿವೆ.
ಕೆಜಿಎಫ್‌ ಅನ್ನು ನಾಗಜನಾಂಗದ ಮೂಲಕೇಂದ್ರವಾಗಿಸಿ ಇಡೀ ಭಾರತದ ಇತಿಹಾಸವನ್ನು ಅಂಬೇಡ್ಕರ್‌ ಕಣ್ಣೋಟದಲ್ಲಿ ಕಟ್ಟಿಕೊಟ್ಟಿರುವ ಹಾಗೂ ಆ ಕಣ್ಣೋಟಕ್ಕೆ Magical realism ನ ಸ್ಪರ್ಶ ಕೊಟ್ಟು ಪ್ರೇಕ್ಷಕರಿಗೆ ಕಣ್ಣಿಗೆ ಹಬ್ಬವಾಗಿಸಿರುವ ಪಾ.ರಂಜಿತ್‌ ಸ್ಟೈಲ್‌ ಅದ್ಭುತ. ಅವರಿಗೆ ಜೊತೆಯಾಗಿರುವ ಪ್ರತಿಯೊಬ್ಬರೂ ಸಹ ಈ ʼಕಪ್ಪುಕಾವ್ಯʼ ಸೃಷ್ಟಿಸುವಲ್ಲಿ ಸರಿಸಮಾನವಾಗಿ ದುಡಿದಿದ್ದಾರೆ. ಅವರ ಶ್ರಮ ಪರದೆಯ ಮೇಲೆ ಎದ್ದು ಕಾಣುತ್ತದೆ. ಈ ʼಕಪ್ಪುಕಾವ್ಯʼಕ್ಕೆ ಬಿಳಿ ಚುಕ್ಕೆ ʼವಿಎಫ್‌ಎಕ್ಸ್ʼ ಆಗಿದ್ದು, ಅದೊಂದು ಮತ್ತಷ್ಟು ಬಲಿಷ್ಠವಾಗಿದ್ದರೆ 99 ಅಂಕದ ಬದಲು 100 ಅಂಕ ಲಭಿಸುತ್ತಿತ್ತು.
ಕೊನೆಯದಾಗಿ ಈ ಸಿನೆಮಾದಲ್ಲಿ ʼಚಿನ್ನʼವೆಂಬುದು ಸಹ ಒಂದು ರೂಪಕವಾಗಿದೆ. ಅದು ಅಧಿಕಾರದ ರೂಪಕ. ಆ ಅಧಿಕಾರವನ್ನು ತಳಸಮುದಾಯಗಳಿಂದ ಕಸಿದುಕೊಳ್ಳಲು ತಳಸಮುದಾಯದವರನ್ನೇ ಹೇಗೆಲ್ಲ ಆಳುವ ವರ್ಗಗಳು ಬಳಸಿಕೊಂಡಿವೆ ಎಂಬುದನ್ನು ತಿಳಿಯಲು ನೀವು ʼತಂಗಲಾನ್‌ʼ ನೋಡಲೇಬೇಕು. ಕ್ಲೈಮ್ಯಾಕ್ಸ್‌ ಅನ್ನು ಕಣ್ಮಿಟುಕಿಸದಂತೆ ನೋಡಬೇಕು. ಅಂದಹಾಗೆ ಈ ಸಿನೆಮಾದಲ್ಲಿ ವಿಕ್ರಮ್‌ದು ʼಟ್ರಿಪಲ್‌ ಆಕ್ಟಿಂಗ್‌ʼ! ಅವರಲ್ಲೊಬ್ಬ ವಿಲನ್‌ ಸಹ ಇದ್ದಾನೆ! ನೈಜ ಹೀರೋ ಸಹ ಇದ್ದಾನೆ!

ಇನ್ನೊಂದು ಮಾತು, ಈ‌ ಕಪ್ಪುಕಾವ್ಯದ ಮೂಲಕ ಪಾ.ರಂಜಿತ್ ‘ಇದು ನಮ್ಮ ತಾಯ್ನಾಡು, ನಾವು ಅದರ ಮಕ್ಕಳು, ಕಿತ್ತುಕೊಂಡಿರುವ ಅಧಿಕಾರವನ್ನು ಮರಳಿ ಪಡೆಯುತ್ತೇವೆ’ ಎಂದು ಸಾರಿದ್ದಾರೆ. ಬುದ್ಧಿಸಂ ಎಂದರೆ ಅಹಿಂಸೆಯನ್ನು ಹೊತ್ತು ಬೆನ್ನು ಬಾಗಿಸುವುದಲ್ಲ; ಸ್ವರಕ್ಷಣೆಗಾಗಿ ತಲೆ ಎತ್ತಿ ತಿರುಗಿಬೀಳುವುದು ಸಹ ಎಂದು ನಿರೂಪಿಸಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page