Monday, June 24, 2024

ಸತ್ಯ | ನ್ಯಾಯ |ಧರ್ಮ

ತಂತಿ ಮೇಲಣ ಹೆಜ್ಜೆ

ಇದೊಂದು ಕಥೆಯಲ್ಲದ ಕಥೆ! ಚಿವುಟಿದಷ್ಟೂ ಚಿಗುರುವ ಹೆಣ್ಣಿನ ಆತ್ಮಬಲದ ಸೂಕ್ಷ್ಮತೆಯ ಅನಾವರಣದ ಕಥನ. ದೇಹವೊಂದು ವಿಕಸನಗೊಂಡಂತೆಲ್ಲ ಆ ದೇಹದ ಜತೆ ಹೆಣೆದುಕೊಂಡ ಸವಾಲುಗಳನ್ನು ಎದುರಿಸುತ್ತಾ ಪ್ರತೀ ದಿನ ಸತ್ತು ಹುಟ್ಟುತ್ತಾ ನಾಳೆಗಳ ಭರವಸೆಯಲ್ಲಿಯೇ ಹಣ್ಣಾದ ಒಂಟಿ ಹೆಣ್ಣೊಬ್ಬಳ ಬದುಕಿನ ದಿಟ್ಟ ಪಯಣದ ಕಥನ. ಈ ಕಥನವನ್ನು ತಂತಿ ಮೇಲಣ ಹೆಜ್ಜೆ” ಅಂಕಣದಲ್ಲಿ ಪಡಿ ಮೂಡಿಸಲಿದ್ದಾರೆ ರಂಗಭೂಮಿ ಹಾಗೂ ನೃತ್ಯ ಕಲಾವಿದೆ ವಿದುಷಿ ವಾಣಿ ಸತೀಶ್‌.

“ಏ ಹುಲಿನ ಬೋನ್ನಲ್ಲಿ ಇಡ್ತಾರೆ ಹೊರ್ತು ಹುಲ್ಲೆನಲ್ಲ ತಿಳ್ಕೋ..” ಇದು ನನ್ನ ಹೈಸ್ಕೂಲಿನ ಗೆಳತಿ  ಪದೇಪದೇ ಹೇಳುತ್ತಿದ್ದ  ಮಾತು. ಆ ದಿನಗಳಲ್ಲಿ ನಮ್ಮ ನಡುವೇ ಯಾವುದೇ ಘನ ಗಂಭೀರ  ಚರ್ಚೆ ಆರಂಭವಾದರೂ ಅದು ಸುತ್ತಿ ಬಳಸಿ ಕೊನೆಯಾಗುತ್ತಿದ್ದದ್ದು ಮಾತ್ರ ಅವಳ ಇದೇ ಮಾತಿನಿಂದ. ಒಂದು ಸಾರಿ ಅವಳಲ್ಲಿ, “ಈ ಪದ ಅಂದ್ರೆ ನಿನಗೆ ಯಾಕೆ ಅಷ್ಟು ಇಷ್ಟ” ಅಂತ ಕೇಳಿದ್ದೆವು. ಆಗ ಅವಳು ಒಂದು ಕತೆಯನ್ನೇ ನಮ್ಮ ಮುಂದೆ ಬಿಚ್ಚಿಟ್ಟಿದ್ದಳು. ಅವಳ ಅತ್ತೆ ಬಹಳ ಸುಂದರಿಯೂ, ಚುರುಕಿನವಳೂ ಆಗಿದ್ದಳಂತೆ. ಅವಳ  ಸುತ್ತ ಸದಾ ಹೆಂಗಸರು ಮಕ್ಕಳು ಸಕ್ಕರೆಗೆ ಇರುವೆ ಮುತ್ತಿಕ್ಕುವಂತೆ ಸುಳಿದಾಡುತ್ತಲೇ ಇರುತ್ತಿದ್ದರಂತೆ. ಇದನ್ನು ಸಹಿಸದ ಅವರ ಗಂಡ ಸಣ್ಣ ಪುಟ್ಟ ಕಾರಣಗಳನ್ನು ಹಿಡಿದು ಬಡಿಯುತ್ತಿದ್ದನಂತೆ. ಹೊಡೆತ ತಿಂದ ಅತ್ತೆ ಮೂರು ಮೂರು ದಿನಕ್ಕೂ ತವರಿಗೆ ಬಂದು ಕೂರುವುದು, ತವರಿನವರು ಅತ್ತೆಗೆ ಬುದ್ಧಿ ಹೇಳಿ ಕಳಿಸುವುದು ಸಾಮಾನ್ಯವಾಗಿತ್ತು.  “ನಿನ್ನಂತ ಹೆಂಡ್ತಿನ ಬಾಳಿಸೋಕೆ ಏನವ್ವ ಅವನಿಗೆ ಸಂಕಟ” ಎಂದು ಪ್ರಶ್ನೆ ಮಾಡುತ್ತಿದ್ದ ನೆಂಟರಿಷ್ಟರಿಗೆ, ಊರಿನವರಿಗೆ, ಅತ್ತೆ ಹೇಳುತ್ತಿದ್ದುದು ಇದೊಂದೇ ಮಾತಂತೆ. “ಏ ಹುಲಿನ ಬೋನ್ನಲ್ಲಿ ಇಡ್ತಾರೆ ಹೊರ್ತು ಹುಲ್ಲೆನಲ್ಲ ಅಲುವ್ರ….? ನನ್ನ ಬುದ್ದಿವಂತಿಕೆ ನನ್ನ ಹಿಂದೆ ಇರೋ ಜನ ಕಂಡ್ರೆ ನನ್ನ ಗಂಡುಂಗೆ ಹೆದ್ರುಕೆ. ನನ್ನುನ್ನ ಅವನ ಅಂಕೆ ಸಂಕೆಲಿಟ್ಕೊಬೇಕು ಅನ್ನೋ ಚಿತಾವಣೆ. ನಾನೇನು ಹೆಡ್ಡಿನೋ ಮಡ್ಡಿನೋ ಹೇಳಿ. ಬುಟ್ರೆ ಅವನ ಅಪ್ಪನಂಗೆ ವ್ಯವಾರ ಜಯ್ಸ್ಕೊಂಡು ಬತ್ತಿನಿ. ಅಂತದ್ರಲ್ಲಿ  ಯಾವಾಗ್ಲು ಅವನ ಕಾಲ್ ಸಂದಿಲೇ ಬಿದ್ದಿರ್ಲಿ ಅಂದ್ರೆ ನನ್ಗಾಕಿಲ್ಲ. ನಾನು ಇದುನ್ನ  ಪ್ರಶ್ನೆ ಮಾಡ್ತಿನಿ ಅಂತ್ಲೇ ನನಗೆ ಈ ಪರಿ  ಬವುಮಾನ” ಎಂದು ಹೇಳಿ ಊದಿದ ಮೈಕೈ ತೋರಿಸುತ್ತಿದ್ದಳಂತೆ. ಕೆಲವು ವರ್ಷಗಳು ಹೀಗೆ ಸರಿದು ಒಮ್ಮೆ ತವರಿಗೆ ಸುದ್ದಿ ಬಂದಿತಂತೆ ಅತ್ತೆ ಗಂಗೆಯ ಪಾಲಾದಳೆಂದು. ಅತ್ತೆ ಹೋದ ಮೂರು ತಿಂಗಳಿಗೆ  ಅವಳ ಗಂಡನ ನಿಗಾ ನೋಡಿಕೊಳ್ಳುವವರಿಲ್ಲವೆಂದು ಅವನಿಗೆ  ಸುಸೂತ್ರವಾಗಿ ಮದುವೆ ಮಾಡಿ ಮುಗಿಸಿದರಂತೆ.

ಇದನ್ನು ಹೇಳುತ್ತಿದ್ದ ಗೆಳತಿಯ ಕಣ್ಣಾಲಿಗಳು ತುಂಬಿ ಬರುತ್ತಿದ್ದವು. ಅವಳ ಅತ್ತೆಯೇ ಇಲ್ಲಿ ಬಂದು ಅವಳ ಕತೆ ಹೇಳಿ ಹೋದಳಾ ಎಂಬಷ್ಟರ ಮಟ್ಟಿಗೆ ಅತ್ತೆಯನ್ನು ಆವಾಹಿಸಿಕೊಂಡು ಬಿಡುತ್ತಿದ್ದಳು. ಬಹುವಾಗಿ ಅತ್ತೆಯನ್ನು ಹಚ್ಚಿ ಕೊಂಡಿದ್ದ  ಗೆಳತಿಗೆ,  ಅತ್ತೆ ಸದಾ ಹೇಳುತ್ತಿದ್ದ “ ಹುಲಿನ ಬೋನ್ನಲ್ಲಿ ಇಡ್ತಾರೆ ಹೊರತು ಹುಲ್ಲೆಯನ್ನಲ್ಲ” ಎನ್ನುವ ಮಾತು, ತಾನು ಅತ್ತೆಯ  ಜೊತೆಯಲ್ಲಿಯೇ ಜೀವಿಸುತ್ತಿದ್ದೇನೆ ಎನ್ನುವ ಭಾವ ಮೂಡಿಸುತ್ತಿತ್ತಂತೆ. ಹಾಗಾಗಿ ಗೆಳತಿಯ ನಾಲಿಗೆ ಮೇಲೆ  ಹುಲಿ ಹುಲ್ಲೆಯ ನೆನಪಲ್ಲಿ ಅತ್ತೆಯ ಗಾಢವಾದ ನೆನಪು ಸದಾ ಜೀವಂತವಾಗಿ ಇಣುಕುತ್ತಲೇ ಇರುತ್ತಿತ್ತು…

 ಹೆಣ್ಣಿನ ದೃಷ್ಟಿಯಿಂದ ಅಕ್ಷರಶಃ ಸತ್ಯ ಎನ್ನಿಸುವ  ಈ  ವಾಕ್ಯ ನನ್ನ ಜೋಳಿಗೆಗೆ ಬಿದ್ದಂದಿನಿಂದ ನಾನು ಬಹಳ ಸೂಕ್ಷ್ಮವಾಗಿ ಹೆಣ್ಣು ಲೋಕವನ್ನು ಗಮನಿಸುತ್ತಾ ಅರಿಯ ತೊಡಗಿದೆ. ಶತ ಶತಮಾನಗಳಿಂದಲೂ ನಮ್ಮ ಪುರುಷ ಪ್ರಧಾನ ಸಮಾಜ, ಹೆಣ್ಣಿನ ಸುತ್ತಾ  ದಬ್ಬಾಳಿಕೆಯಿಂದಲೋ  ಅಥವಾ ನವಿರು ಭಾವದ ಸೋಗಿನಿಂದಲೋ ಬಲೆ ಹೆಣೆದು, ಅವಳ ಅದಮ್ಯ ಚೈತನ್ಯ ಶಕ್ತಿಯನ್ನು ತನ್ನ ಸುಪರ್ದಿಗೆ ತೆಗೆದು ಕೊಳ್ಳುವ ಹುನ್ನಾರ ನಡೆಸುತ್ತಲೇ ಬಂದಿದೆ. ಅಂದು ಅವಳು ಗೌರಮ್ಮನ ಹಾಗೆ ಸೆರಗೊದ್ದು, ತಲೆ ತಗ್ಗಿಸಿ ಮುಗ್ಧತೆಯಿಂದ ನಡೆದು ಬಂದಂದಿನಿಂದ ಹಿಡಿದು, ಇಂದು ತನ್ನಿಷ್ಟದ ಉಡುಗೆ ತೊಟ್ಟು ಆತ್ಮವಿಶ್ವಾಸದಿಂದ ತಲೆ ಎತ್ತಿ ನಡೆಯುತ್ತಿರುವ ಈ ಹೊತ್ತಿನವರೆಗೂ ಅವಳ ಬಗ್ಗೆ ನಿಂದನೆಯ ಅಪಮಾನದ ಮಾತುಗಳು ನಿಂತಿಲ್ಲ. ಸಮಾಜದಲ್ಲಿ ಅಥವಾ ಕುಟುಂಬದಲ್ಲಿ ನಡೆಯುವ ಎಲ್ಲಾ ಅನಾಹುತಗಳಿಗೆ, ಅಪರಾಧಗಳಿಗೆ ಅವಳೇ ಕಾರಣೀ ಭೂತಳು ಎನ್ನುವ ಕುಹಕದ ಮಾತುಗಳಂತೂ  ಹಾಸ್ಯಾಸ್ಪದವೇ ಸರಿ. ನಮ್ಮ ಪ್ರತಿಷ್ಠಿತ ಸಮಾಜದ  ಪ್ರತಿಯೊಂದು  ಧರ್ಮ,  ಜಾತಿ, ಜನಾಂಗಗಳಲ್ಲಿಯೂ ಅಂದಿನಿಂದ ಇಂದಿನ ವರೆಗೂ  ಹೆಣ್ಣು ಕುಲ ಎಂಬುದನ್ನು ಎರಡನೆಯ ದರ್ಜೆಯಲ್ಲಿಟ್ಟೇ  ನೋಡುತ್ತಾ, ನಡೆಸಿಕೊಳ್ಳತ್ತಾ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ನಾನು ಸಮಾಜ ಶಾಸ್ತ್ರದಲ್ಲಿ ಓದಿದ್ದ , ಹೆಣ್ಣು ಹುಟ್ಟಿದಂದಿನಿಂದ ಹಿಡಿದು ಸಾಯುವವರೆಗೂ ಅಪ್ಪ, ಗಂಡ, ಮಗ ಹೀಗೆ ಗಂಡಿನ ಆಶ್ರಯದಲ್ಲಿಯೇ ಬಾಳ ಬೇಕು ಎನ್ನುವ ಸಾಲುಗಳು ನನ್ನಲ್ಲಿ ಈಗಲೂ ನಖಶಿಖಾಂತ ಕೋಪ ತರಿಸುತ್ತವೆ. ನಮ್ಮ ಬಾಲ್ಯ, ಯೌವ್ವನಗಳನ್ನು ಸೂರೆ ಗೊಳ್ಳಲು ಹೊರಟ ಇದೇ ಗಂಡಸರ  ನೀಚತನದ ಎದುರು ಸಿಡಿದು, ಒಂಟಿಯಾಗಿ ಬದುಕು ಕಟ್ಟಿಕೊಂಡ ನನ್ನ ಅಮ್ಮನಂತಹ ಅನೇಕ ಮಹಿಳೆಯರನ್ನು ನಾನು ಕಂಡಿದ್ದೇ. ಈಗಲೂ ಕಾಣುತ್ತಲೇ ಇದ್ದೇನೆ. ಹೆಣ್ಣು ತನ್ನ ಬಾಲ್ಯದಿಂದ ಮುದಿತನದ ವರೆಗೂ ಯಾರ ಆಸರೆ ಇಲ್ಲದೆ, ಹೆತ್ತ ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು  ಯಶಸ್ವಿಯಾಗಿ ಒಂಟಿ ಜೀವನ ನಡೆಸ ಬಲ್ಲಳು…. ಇದು ಗಂಡಿನಿಂದ ಸಾಧ್ಯವ…?  ಎಂಬ ಪ್ರಶ್ನೆ ಎದುರಾದಾಗೆಲ್ಲಾ ನನ್ನೆದುರು ತಟ್ಟನೆ ಬಂದು ನಿಲ್ಲುವುದು “ಜಟ್ಟಿ ಬಿದ್ದರು ಮೀಸೆ ಮಣ್ಣಾಗಲಿಲ್ಲ” ಎಂಬ ಗಾದೆ ಮಾತು. ನಾನು ಬೆಳೆದು ಬಂದ  ಇಡೀ ವಾತಾವರಣದಲ್ಲಿ ನಾನು ಕಂಡದ್ದು, ತಮ್ಮ ದಿನಚರಿಯ ಪ್ರತೀ ಹಂತದಲ್ಲು ಹೆಣ್ಣಿನ ಮೇಲೆ ಒರಗಿ ನಿಂತಿರುವ  ಪುರುಷರ ಬಲವಾದ ಅವಲಂಬನೆಯನ್ನೇ. ತಾಯಿ, ಹೆಂಡತಿ, ಮಗಳು, ಸೊಸೆ ಹೀಗೆ ಬೇರೆ ಬೇರೆ ಹೆಣ್ಣು ಮಡಿಲಿನ ಆಶ್ರಯದಲ್ಲಿಯೇ ಪೊರೆಯಲ್ಪಡುವ ಗಂಡು, ತನ್ನ ಈ ಅವಲಂಬನೆಯನ್ನು ಯಾಕೆ ಒಪ್ಪಿಕೊಳ್ಳಲು ತಯಾರಿಲ್ಲ…!? ಎಂಬುದು  ಬಾಲ್ಯದಿಂದಲೂ ನನ್ನೊಂದಿಗೆ ಬೆಳೆದು ಬಂದ ದೊಡ್ಡ ಪ್ರಶ್ನೆಯಾಗಿತ್ತು. ನಾನು ಬೆಳೆದಂತೆಲ್ಲಾ ನಿಧಾನವಾಗಿ ಇದರ ಹಿಂದಿನ ಹುನ್ನಾರ ಅರಿವಾಗತೊಡಗಿತು.

ಪ್ರಕೃತಿದತ್ತವಾಗಿ ಬಂದ ಅವನ ದೈಹಿಕ ಬಲಾಢ್ಯತೆಯನ್ನೇ ಅಸ್ತ್ರವನ್ನಾಗಿಸಿದ ಪುರುಷ, ಹೆಣ್ಣು ತಾನು ಭೋಗಿಸಲೆಂದೇ ಹುಟ್ಟಿ ಬಂದವಳು ಎಂಬಂತೆ ಅವಳ ಮೇಲೆ ಸವಾರಿ ನಡೆಸುತ್ತಾ ಯಜಮಾನನಾಗಿ ಮೆರೆಯತೊಡಗಿದ್ದನ್ನು  ಅರಿತೆ.  ಹೆಣ್ಣು ಅಸಮಾನ್ಯ ಧಾರಣ ಶಕ್ತಿಯುಳ್ಳ ಮಹಾತಾಯಿ, ಮಹಾಲಕ್ಷ್ಮಿ, ಮಹಾಕಾಳಿ ಎಂದು ಹಾಡಿ ಹೊಗಳುತ್ತಲೇ, ಕಾದ ಒಲೆಯ ಮುಂದೆ ಅವಳನ್ನು ಪ್ರತಿಷ್ಠಾಪಿಸಿ, ಗೋರಿ ಕಟ್ಟಿ ಅವನು ಹುಲಿ ವೇಷ ತೊಟ್ಟು ಎದೆಯುಬ್ಬಿಸಿ ನಡೆದು ಬಂದುದ ಅರಿತೆ. ತನ್ನ ಕಪಿಮುಷ್ಟಿಯಲ್ಲಿ ಆರ್ಥಿಕತೆ ಎನ್ನುವ ಮಂತ್ರ ದಂಡವ ಹಿಡಿದು  ಅವಳ ಮಾತು, ಮೆದುಳು, ಬಿಸಿ ನೆತ್ತರು, ಎಲ್ಲವನ್ನು ಹೀರಿ  ಸದಾ ಕಾಲಕ್ಕೂ ಅವಳು ತನ್ನ ಸೇವೆ ಮಾಡುತ್ತಾ ತಣ್ಣಗೆ ಜೀವಿಸ ಬೇಕು ಎನ್ನುವ ಅವನ ಒಳ ಹುನ್ನಾರ ಅರಿತೆ.  ವಿಧಿ ನಿಯಮಗಳ ಸಂಕೋಲೆ ತೊಡಿಸಿ ಅವಳ ಅಭಿವ್ಯಕ್ತಿಯನ್ನೇ ಅಪಹರಿಸಿ ಮೆರೆಯುತ್ತಿರುವ ಭಯಗ್ರಸ್ಥ ಗಂಡಿನ ನಯವಂಚಕತನವನ್ನು ಅರಿತೆ. ಶ್ರೇಷ್ಠ ಎಂದು ಎದೆಯುಬ್ಬಿಸಿ ನಡೆವ  ಜಾತಿಯಿಂದ  ಹಿಡಿದು, ಕನಿಷ್ಠ ಎಂದು ನಡು ಬಗ್ಗಿಸಿ ನಡೆವ  ಜಾತಿಯವರೆಗೂ ಹೆಣ್ಣನ್ನು ಕನಿಷ್ಠಳಲ್ಲಿ ಕನಿಷ್ಠಳಾಗಿ ತಮ್ಮ ಅಡಿಯಾಳಾಗಿ ನಡೆಸಿಕೊಳ್ಳುತ್ತಲೇ ಬರುತ್ತಿರುವ ಮಹಾ ಸತ್ಯವನ್ನರಿತೆ…….!

ಈಗ ಸಮಾಜ ಬದಲಾಗಿದೆ, ಎಲ್ಲೆಡೆಯೂ ಹೆಣ್ಣು ಆರ್ಥಿಕತೆಯತ್ತ ಮುಖ ಮಾಡಿ ಗಂಡಿಗೆ ಸರಿ ಸಮನಾಗಿ ನಿಲ್ಲುತ್ತಿದ್ದಾಳೆ, ಅವಳಿಗೂ ತನ್ನ ಬೇಕು ಬೇಡಗಳನ್ನು ಅಭಿವ್ಯಕ್ತಿಸುವ ಸ್ವಾತಂತ್ರ್ಯ ಬಂದಿದೆ ಎಂದು ಹೇಳುತ್ತಿರುವ ಈ ಹೊತ್ತಿನಲ್ಲು ನನಗೆ ಗಂಟಲು ಕಟ್ಟಿದಂತಾಗುತ್ತದೆ. ಸಂಸಾರ ಮತ್ತು ಉದ್ಯೋಗ ಎಂಬ ಎರಡು ಅಲಗಿನ ಮೇಲೆ ನಡೆಯುತ್ತಿರುವ ಇಂದಿನ  ಹೆಣ್ಣು, ತನ್ನ ತಲೆ ತಲಾಂತರದ ಕನಸು ಕನವರಿಕೆಗಳನ್ನು ಸಾಕಾರ ಗೊಳಿಸಲೋ ಎಂಬಂತೆ, ದಣಿವರಿಯದ ಹಾಗೆ ಓಡುತ್ತಲೇ ಇದ್ದಾಳೆ. ಒಳ ಹೊರಗುಗಳಲ್ಲಿ ಎದುರಾಗುವ ಸಮಸ್ಯೆ ಸವಾಲುಗಳನ್ನು, ದಿಟ್ಟತನದಲ್ಲಿ ಎದುರಿಸಿ ನಿಲ್ಲುವ ಸಾಹಸದಲ್ಲಿ ಹೈರಾಣಾಗುತ್ತಲೇ ಇದ್ದಾಳೆ.  ಇಷ್ಟು ಸಾಲದೆಂಬಂತೆ ಪ್ರತಿ  ಕ್ಷಣವೂ ನಡೆಯುವ ದೌರ್ಜನ್ಯ, ಅತ್ಯಾಚಾರ, ಕೊಲೆಯಂತಹ ಅಮಾನವೀಯ ಘಟನೆಗಳು ಅವಳ ಅಂತಃಶಕ್ತಿಗೆ ಸವಾಲೆಸೆದು ಭೂತದಂತೆ ನಿಂತು, ಅವಳ ಆತ್ಮವಿಶ್ವಾಸ  ಕಸಿಯುವ ಹುನ್ನಾರ ನಡೆಸುತ್ತಲೇ ಇವೆ.

 ಎಲ್ಲಾ ಕಾಲದಲ್ಲು ಇಂತಹ ಲೆಕ್ಕವಿಲ್ಲದಷ್ಟು ಸಮಸ್ಯೆ ಗಳನ್ನು ಎದುರಿಸುತ್ತಲೇ ,ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸತತ ಹೋರಾಟ ಮಾಡಿಕೊಂಡೇ ಬರುತ್ತಿರುವ ಹೆಣ್ಣಿನೊಂದಿಗೆ, ಇಷ್ಟಾದರು ಇಂಬಾಗಿ ನಿಂತ, ಇಂದೂ ನಿಲ್ಲುತ್ತಿರುವ ಮಾನವೀಯ ಅಂತಃಕರಣವುಳ್ಳ ಪುರುಷರ ಬೆಂಬಲವನ್ನು ಎಂದಿಗೂ ಮರೆಯುವಂತಿಲ್ಲ ಎನ್ನುವ ಎಚ್ಚರವನ್ನು ಕಾಪಿಟ್ಟುಕೊಂಡೇ, ಈ ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ಪ್ರತೀ ದಿನ ಸತ್ತು ಹುಟ್ಟುತ್ತಾ ನಾಳೆಗಳ ಭರವಸೆಯಲ್ಲಿಯೇ ಹಣ್ಣಾದ ಒಂಟಿ ಹೆಣ್ಣೊಬ್ಬಳ ದಿಟ್ಟತನದ ಕಥಾನಕವನ್ನು  ಈ “ತಂತಿ ಮೇಲಣ ಹೆಜ್ಜೆ” ಅಂಕಣದ ಮೂಲಕ ಪ್ರಸ್ತುತ ಪಡಿಸುತ್ತಿದ್ದೇನೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲಾ ಅಭಿಪ್ರಾಯಗಳು ಲೇಖಕರದ್ದಾಗಿರುತ್ತೆ.)

ವಾಣಿ ಸತೀಶ್‌
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ನೋಡಿ: ಬಡವರ ಮನೆ ಕಾಣುವ BBMP ಅಧಿಕಾರಿಗಳಿಗೆ ಬಲಿತವರ ಮನೆ ಕಾಣುವುದಿಲ್ಲವೇ?

  • ಅಶೋಕ್‌ ಮೃತ್ಯುಂಜಯ, AAP ವಕ್ತಾರ

ಪೀಪಲ್ ಟೀವಿ ಯೂಟ್ಯೂಬ್ ಚಾನಲ್ ಅನ್ನು SUBSCRIBE ಮಾಡಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ

Related Articles

ಇತ್ತೀಚಿನ ಸುದ್ದಿಗಳು