2013ರ ಅತ್ಯಾಚಾರ ಪ್ರಕರಣದಲ್ಲಿ ತಹಲ್ಕಾ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ಸೋಮವಾರ ಗೋವಾದ ಮಾಪುಸಾ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಶಿಕ್ಷೆಯ ವಿರುದ್ಧದ ಮೇಲ್ಮನವಿಯ ವಿಚಾರಣೆಗೂ ಮುನ್ನ ಶರಣಾಗತಿಯಿಂದ ವಿನಾಯಿತಿ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಕೆಲವೇ ವಾರಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಶರಣಾಗತಿಯ ಬೆನ್ನಲ್ಲೇ ತೇಜ್ಪಾಲ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಬಾಂಬೆ ಹೈಕೋರ್ಟ್ ವಿಧಿಸಿರುವ ಶಿಕ್ಷೆಯನ್ನು ಅನುಭವಿಸಲು ಜೈಲಿಗೆ ಕಳುಹಿಸಲಾಗಿದೆ. ಆದಾಗ್ಯೂ, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅವರು ಸಲ್ಲಿಸಿರುವ ಮೇಲ್ಮನವಿಯು ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿದೆ.
ನವೆಂಬರ್ 2013ರಲ್ಲಿ ಗೋವಾದ ಹೋಟೆಲ್ವೊಂದರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಿರಿಯ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ತೇಜ್ಪಾಲ್ ಅವರನ್ನು 2021ರಲ್ಲಿ ಖುಲಾಸೆಗೊಳಿಸಲಾಗಿತ್ತು. ಆದರೆ, ಆಗಸ್ಟ್ 6ರಂದು ಬಾಂಬೆ ಹೈಕೋರ್ಟ್ನ ಗೋವಾ ಪೀಠವು ಆ ತೀರ್ಪನ್ನು ರದ್ದುಗೊಳಿಸಿ, ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು.
ನ್ಯಾಯಮೂರ್ತಿಗಳಾದ ನೀಲಾ ಗೋಖಲೆ ಮತ್ತು ಅಮಿತ್ ಜಮ್ಸಂಡೇಕರ್ ಅವರಿದ್ದ ವಿಭಾಗೀಯ ಪೀಠವು ತೇಜ್ಪಾಲ್ಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಸಾಕ್ಷ್ಯಾಧಾರಗಳನ್ನು ವಿಚಾರಣಾ ನ್ಯಾಯಾಲಯವು ಮೌಲ್ಯಮಾಪನ ಮಾಡಿದ ರೀತಿಯಲ್ಲಿ ದೋಷವಿದೆ ಎಂದಿದ್ದ ಹೈಕೋರ್ಟ್, ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯು ಹೇಗೆ ವರ್ತಿಸಬೇಕು ಎಂಬ ಬಗೆಗಿನ ರೂಢಿಗತ ಕಲ್ಪನೆಗಳ ಮೇಲೆ ವಿಚಾರಣಾ ನ್ಯಾಯಾಲಯ ಅವಲಂಬಿತವಾಗಿದ್ದನ್ನು ತೀವ್ರವಾಗಿ ಟೀಕಿಸಿತ್ತು.
ನವೆಂಬರ್ 7 ಮತ್ತು 8, 2013ರಂದು ಗೋವಾದ ಹೋಟೆಲ್ನ ಲಿಫ್ಟ್ನಲ್ಲಿ ತೇಜ್ಪಾಲ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಈ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಅದೇ ವರ್ಷ ನವೆಂಬರ್ 30ರಂದು ಅವರನ್ನು ಬಂಧಿಸಲಾಗಿತ್ತು ಮತ್ತು ನಂತರ ಅವರು ಗೋವಾದಲ್ಲಿ ವಿಚಾರಣೆ ಎದುರಿಸಿದ್ದರು.
ಹೈಕೋರ್ಟ್ ಶಿಕ್ಷೆ ವಿಧಿಸಿದ ನಂತರ, ತೇಜ್ಪಾಲ್ ಆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು ಹಾಗೂ ಮೇಲ್ಮನವಿ ಬಾಕಿ ಇರುವ ಅವಧಿಯಲ್ಲಿ ಶರಣಾಗತಿಯಿಂದ ವಿನಾಯಿತಿ ನೀಡಬೇಕೆಂದು ಕೋರಿದ್ದರು. ಆದರೆ ಆಗಸ್ಟ್ 25ರಂದು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರು ವಿನಾಯಿತಿ ಅರ್ಜಿಯನ್ನು ತಿರಸ್ಕರಿಸಿ, ಶರಣಾಗಲು ಹಾಗೂ ಸರ್ವೋಚ್ಚ ನ್ಯಾಯಾಲಯಕ್ಕೆ ಶರಣಾಗತಿ ಪ್ರಮಾಣಪತ್ರ ಸಲ್ಲಿಸಲು ತೇಜ್ಪಾಲ್ಗೆ ಮೂರು ವಾರಗಳ ಕಾಲಾವಕಾಶ ನೀಡಿದ್ದರು.
ಸೆಪ್ಟೆಂಬರ್ 21ರೊಳಗೆ ಶರಣಾಗತಿ ಪ್ರಮಾಣಪತ್ರ ಸಲ್ಲಿಸಿದರೆ, ಸೆಪ್ಟೆಂಬರ್ 22ರಂದು ಕ್ರಿಮಿನಲ್ ಮೇಲ್ಮನವಿಯನ್ನು ನಿಯಮಿತ ಪೀಠದ ಮುಂದೆ ಪಟ್ಟಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿತ್ತು. ತೇಜ್ಪಾಲ್ ಸೋಮವಾರ ಆ ಗಡುವಿನೊಳಗೆ ಶರಣಾಗಿದ್ದಾರೆ.
ವಿಚಾರಣೆಯ ವೇಳೆ ತೇಜ್ಪಾಲ್ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಸೂಕ್ತ ಸಂದರ್ಭಗಳಲ್ಲಿ ಶರಣಾಗತಿಯಿಂದ ವಿನಾಯಿತಿ ನೀಡುವ ಅಧಿಕಾರ ಸುಪ್ರೀಂ ಕೋರ್ಟ್ಗೆ ಇದೆ ಎಂದು ವಾದಿಸಿದ್ದರು ಮತ್ತು ಖುಲಾಸೆ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿರುವುದನ್ನು ಪ್ರಶ್ನಿಸಿರುವ ಮೇಲ್ಮನವಿಯನ್ನು ಮೊದಲು ಪರಿಗಣಿಸಬೇಕು ಎಂದು ಮನವಿ ಮಾಡಿದ್ದರು.
ಆದರೆ ಗೋವಾ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಮನವಿಯನ್ನು ಬಲವಾಗಿ ವಿರೋಧಿಸಿದ್ದರು; ಅಪರಾಧದ ಗಂಭೀರತೆ ಮತ್ತು ತೇಜ್ಪಾಲ್ಗೆ ವಿಧಿಸಲಾದ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ಉಲ್ಲೇಖಿಸಿ ಹೈಕೋರ್ಟ್ನ ಅವಲೋಕನಗಳನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಆದರೆ ಸುಪ್ರೀಂ ಕೋರ್ಟ್ ವಿನಾಯಿತಿ ನೀಡಲು ನಿರಾಕರಿಸಿತು ಮತ್ತು ಮೇಲ್ಮನವಿ ವಿಚಾರಣೆಗೆ ಮುನ್ನ ಶರಣಾಗುವುದನ್ನು ಕಡ್ಡಾಯ ಷರತ್ತನ್ನಾಗಿಸಿತು.
ಈ ಮೊದಲು ಮೇ 2021ರಲ್ಲಿ ಮಾಪುಸಾದ ಸೆಷನ್ಸ್ ನ್ಯಾಯಾಲಯವು ತೇಜ್ಪಾಲ್ ಅವರನ್ನು ಈ ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತು. ಗೋವಾ ಸರ್ಕಾರವು ಈ ತೀರ್ಪನ್ನು ಬಾಂಬೆ ಹೈಕೋರ್ಟ್ನಲ್ಲಿ ಪ್ರಶ್ನಿಸಿತು, ನಂತರ ಹೈಕೋರ್ಟ್ ಖುಲಾಸೆಯನ್ನು ರದ್ದುಗೊಳಿಸಿ ಶಿಕ್ಷೆ ವಿಧಿಸಿತು.
ಇದೀಗ ತೇಜ್ಪಾಲ್ ಶರಣಾಗಿರುವುದರಿಂದ, ಶರಣಾಗತಿ ಪ್ರಮಾಣಪತ್ರ ಸಲ್ಲಿಕೆಯ ಪ್ರಕ್ರಿಯೆ ಪೂರ್ಣಗೊಂಡ ನಂತರ ಹೈಕೋರ್ಟ್ ಶಿಕ್ಷೆಯ ವಿರುದ್ಧದ ಅವರ ಮೇಲ್ಮನವಿಯು ಸೆಪ್ಟೆಂಬರ್ 22ರಂದು ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬರುವ ಸಾಧ್ಯತೆಯಿದೆ.
