Friday, June 14, 2024

ಸತ್ಯ | ನ್ಯಾಯ |ಧರ್ಮ

ಟೇಲರ್ ಸ್ವಿಫ್ಟ್ ಹಾಗೂ ಶಾರುಖ್ ಖಾನ್ : ತಾರೆಗಳ ರಾಜಕೀಯ ನಿಲುವು,ದ್ವಂದ್ವಗಳು 

ಇತ್ತೀಚಿಗೆ ಅಮೆರಿಕದ ಅತಿದೊಡ್ಡ ವೃತ್ತಪತ್ರಿಕೆ/ಮಾಧ್ಯಮ ಸಮೂಹ ಸಂಸ್ಥೆ ಗ್ಯಾನೆಟ್, ಪ್ರಸಿದ್ಧ ಗಾಯಕಿಯರಾದ  ಟೇಲರ್ ಸ್ವಿಫ್ಟ್ ಹಾಗೂ ಬೆಯಾನ್ಸೆಯರ “ಸಂಗೀತ ಮತ್ತು ಸಾಂಸ್ಕೃತಿಕ ಪ್ರಭಾವವನ್ನು” ವರದಿ ಮಾಡಲು ಪ್ರತ್ಯೇಕ ಪತ್ರಕರ್ತರನ್ನು ನೇಮಿಸಿಕೊಳ್ಳಲು ಜಾಹೀರಾತು ನೀಡಿತು. ಈ ಸುದ್ಧಿಯನ್ನು ಉಲ್ಲೇಖಿಸಿ ಭಾರತದ ಪತ್ರಕರ್ತೆ ಪ್ರಿಯಾ ರಮಣಿ, – ಮೀ ಟೂ (#MeToo) ಆಂದೋಲನದ ಸಮಯದಲ್ಲಿ, ಮಾಜಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿದವರು. ನಂತರ ಮಾಜಿ ಸಚಿವರು ಇವರ ವಿರುದ್ಧ ಸಲ್ಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ರಮಣಿಯವರ ಖುಲಾಸೆ ಒಂದೇ ಬಹುಶ ಭಾರತದಲ್ಲಿ  ಅಭಿಯಾನಕ್ಕೆ ಸಿಕ್ಕಿದ  ಗಮನಾರ್ಹ ಗೆಲುವು ! – ಭಾರತದಲ್ಲೂ ಶಾರುಖ್ ಖಾನ್ ರನ್ನು ಈ ರೀತಿಯಲ್ಲಿ ವರದಿ ಮಾಡಲು ಪ್ರತ್ಯೇಕ ಪತ್ರಕರ್ತರನ್ನು ನೇಮಿಸಿಕೊಳ್ಳಬೇಕು ಎಂದು ತಮ್ಮ ಲೇಖನದಲ್ಲಿ ಘೋಷಿಸಿದರು. 

ಹಿಂದಿ ಚಿತ್ರರಂಗದಲ್ಲಿ 30 ವರ್ಷಗಳ ಕಾಲ ಶಾರುಖ್ ಖಾನ್ ಎಲ್ಲಾ ರೀತಿಯ ಪ್ರೇಮಿಯಾಗಿ ನಟಿಸಿದ್ದಾರೆ. “ರಾಜ್ ,ನಾಮ್ ತೊ ಸುನಾ ಹೋಗಾ” ದಿಂದ “ವಿಕ್ರಂ ರಾಥೋಡ್, ನಾಮ್ ತೊ ಸುನಾ ಹೋಗಾ ..” ದವರೆಗೆ ತನ್ನ ಸಿನೆಮಾಗಳಲ್ಲಿ  ನಾಯಕಿಯೆದುರು ಸೋಲುವ, ಅವಳೆದುರು ತಲೆ ಬಾಗುವ ,ಕಾಲು ಒತ್ತುವ, ಅವಳೊಂದಿಗೆ  ಸ್ಪರ್ಧೆಗೆ ಬಿದ್ದವರಂತೆ ಅಳುವ  ಹೆಣ್ಮನದ  ಪಾತ್ರಗಳನ್ನೆ ಹೆಚ್ಚು ಮಾಡಿ ಗೆದ್ದ  ನಟ ಬಹುಶ  ಶಾರುಖ್ ಒಬ್ಬನೇ ಇರಬೇಕು.ಮದುವೆಗಳಲ್ಲಿ ನೃತ್ಯ ಮಾಡುವುದರಿಂದ ಹಿಡಿದು, TED ವೇದಿಕೆ ,ಬ್ರಾಡ್ ಪಿಟ್- ಜೆಫ್ ಬಿಜೋಜ್ ಜೊತೆಗೆ ಚರ್ಚೆಯಂತಹ ಹಲವು ಪ್ರಥಮಗಳನ್ನು ಸಾಧಿಸಿ, ವಿದೇಶೀ ಪತ್ರಕರ್ತರ ಎದುರು ಬಾಲಿವುಡ್ ಫ್ಯಾಂಟಸಿಗಳನ್ನು ಅತ್ಯುತ್ತಮವಾಗಿ ಸಮರ್ಥಿಸಿಕೊಂಡು  ವಿಶ್ವ ವೇದಿಕೆಯಲ್ಲಿ ಭಾರತದ ಅನಧಿಕೃತ ಸಾಂಸ್ಕೃತಿಕ ರಾಯಭಾರಿಯಾದ  ಈ ನಟ/ಸಿನಿ ಉದ್ಯಮಿಯ ಯಶಸ್ಸು ಯಾರೂ ಕರುಬುವಂಥದ್ದು,ಬಯಸುವಂಥದ್ದು. 

 ಸಿನೆಮಾಗಳಲ್ಲಿ ಶಾರುಖ್ -ಕಾಜೋಲ್ ರನ್ನು ಒಟ್ಟಿಗೆ ನೋಡಬೇಕು ಎಂದು ಹೆಚ್ಚಿನ ಅಭಿಮಾನಿಗಳು ಬಯಸಿದರೆ  ಸಂದರ್ಶನಗಳಲ್ಲಿ ಶಾರುಖ್ ನ ಚುರುಕು ಹಾಸ್ಯ ಪ್ರಜ್ಞೆಗೆ ಅನುಷ್ಕಾ  ತಕ್ಕ ಜೊತೆಗಾತಿಯಾಗಿ  ಸ್ಪರ್ಧೆಗೆ ಬಿದ್ದವರಂತೆ ನಗುತ್ತಾರೆ,ನಗಿಸುತ್ತಾರೆ.ಜವಾನ್ ಚಿತ್ರ ಯಶಸ್ಸಿನ ನಂತರದ ಸಂದರ್ಶನದಲ್ಲಿ  ವಿಜಯ್ ಸೇತುಪತಿ-ಶಾರುಖ್ ರ  ಪರಸ್ಪರ ಪ್ರೇಮ ನಿವೇದನೆ, ಮದುವೆಯಾಗಿ ಒಟ್ಟಿಗೆ ಸಿನೆಮಾ ಮಾಡುವ ನಿರ್ಧಾರ ಮಾಡಿದ್ದಂತೂ ಅತ್ಯಂತ ಸ್ವಾಭಾವಿಕವಾಗಿ ,ಆತ್ಮೀಯವಾಗಿತ್ತು .ಜವಾನ್ ಚಲನಚಿತ್ರಕ್ಕಿಂತ ಈ ಸಂದರ್ಶನವು ನನಗೆ ಹೆಚ್ಚು ಸಂತೋಷ ಕೊಟ್ಟುದುದರಿಂದ ಇಲ್ಲಿ ಮರೆಯದೇ ಉಲ್ಲೇಖಿಸಿದ್ದೇನೆ!.  ತನ್ನ ಸಿನೆಮಾಗಳಷ್ಟೇ ಸಂದರ್ಶನಗಳಿಗೂ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಈ ನಟ ಯಾರೂ ಜೊತೆಗಿರದಿದ್ದರೂ ರಂಜಿಸಬಲ್ಲ ,ಕೆಲವೊಮ್ಮೆ ಪೋಲಿ ಜೋಕುಗಳನ್ನ ಕೂಡ ನಯವಾಗಿ ಪ್ರೇಕ್ಷಕರಿಗೆ ದಾಟಿಸುವ ಅದ್ಭುತ ಮಾತುಗಾರ. ದಕ್ಷಿಣದ ರಾಜ್ಯಗಳಲ್ಲೂ ಶಾರುಖ್ ಖಾನ್ ರ  ಹೊರತಾಗಿ ಬೇರೆ ಯಾವ ಬಾಲಿವುಡ್ ನಟನಿಗೂ ಇಷ್ಟು ದೊಡ್ಡ ಅಭಿಮಾನಿ ಬಳಗವಿಲ್ಲ ಅನಿಸುತ್ತೆ.  

 ಶಾರುಖ್ ಖಾನ್ ರ  ತಂದೆ ಸ್ವಾತಂತ್ರ್ಯ ಹೋರಾಟಗಾರರು. ದೆಹಲಿಯ ಮಧ್ಯಮ ವರ್ಗದ ಕುಟುಂಬದ  ಸಾಧಾರಣ ರೂಪದ ಈ ಯುವಕ ಯಾವುದೇ ಗಾಡ್ ಫಾದರ್ ಇಲ್ಲದೆಯೇ  ಹಿಂದಿ ಚಿತ್ರರಂಗ ಪ್ರವೇಶಿಸಿ ಅಂದಿನ ನಾಯಕರು ಮಾಡುತ್ತಿದ್ದ ಸಾಂಪ್ರದಾಯಿಕ ಪಾತ್ರಗಳಿಗೆ ಹೊರತಾದ ಪಾತ್ರಗಳನ್ನು ಮಾಡಿ ಗೆದ್ದವನು. ಅವರ ಧರ್ಮದ ಕಾರಣ,  ದೇಶಪ್ರೇಮವನ್ನು  ಪ್ರಶ್ನೆ ಮಾಡಿದ್ದಕ್ಕಿಂತ ಹಲವು  ಲಕ್ಷ ಹೆಚ್ಚಿನ ಜನ ಅವನನ್ನು ಪ್ರೀತಿಸಿದ್ದಾರೆ. 2012ರಲ್ಲಿ – ಎರಡನೇ ಬಾರಿ –  ಅಮೆರಿಕಾದ ಏರ್ ಪೋರ್ಟಿನಲ್ಲಿ ಶಾರುಖ್ ಖಾನ್ ರನ್ನು  ಗಂಟೆಗಟ್ಟಲೆ ವಿಚಾರಣೆ ಮಾಡಿದ ಪ್ರಸಂಗವು  ಅಮೆರಿಕಾ ರಾಯಭಾರಿ ಕಛೇರಿ ಹಾಗೂ ಅಂದಿನ ವಿದೇಶಾಂಗ ಮಂತ್ರಿ ಎಸ್ .ಎಮ್ ಕೃಷ್ಣರ ನಡುವೆ ಬಿರುಸಿನ ವಾಗ್ವಾದಕ್ಕೆ ಕಾರಣವಾಗಿ ಅಮೆರಿಕ ರಾಯಭಾರಿ ಕಛೇರಿ ಕ್ಷಮೆ ಕೇಳಿದ ಘಟನೆಯೂ ನಡೆಯಿತು. ನಂತರದ 10 ವರ್ಷಗಳಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ  ಧರ್ಮ ಈ ಹಿಂದಿಗಿಂತ ಹೆಚ್ಚು ಹಸ್ತಕ್ಷೇಪ ಮಾಡತೊಡಗಿದೆ. ಸಾಮಾಜಿಕ ಮಾಧ್ಯಮಗಳ ಸಹಾಯದಿಂದ ರಾಜಕೀಯದ ನಾಯಕರು,ಧರ್ಮ ಗುರುಗಳು ಸ್ಟಾರ್ ಗಳಾಗಿದ್ದಾರೆ .ಸಾಮಾಜಿಕ ಮಾಧ್ಯಮಗಳಲ್ಲಿ ಅನ್ಯಧರ್ಮೀಯ ನಟ/ನಟಿಯರನ್ನು “ ಮುಲ್ಲಾ , ತುರ್ಕ, ವಿದೇಶೀ ಏಜೆಂಟ್ .. “ಗಳೆಂದು  ಸಂಭೋಧಿಸುವುದು ಸಹಜವಾಗಿದೆ. ಈ ಭಾಷೆ  ಕೆಲವು ದಿನಗಳ ಹಿಂದೆ ಸಂಸತ್ತನ್ನು ಪ್ರವೇಶಿಸಿ ಆಡಳಿತ ಪಕ್ಷದ ಸಂಸದರು,ಇನ್ನೊಂದು ಪಕ್ಷದ  ಮುಸ್ಲಿಂ ಧರ್ಮಾನುಯಾಯಿ ಸಂಸದರನ್ನು ಇವುಗಳೊಂದಿಗೆ  ಇನ್ನಷ್ಟು ಕಟು ಶಬ್ದಗಳಿಂದ  ನಿಂದಿಸಿದ ಮೊದಲಿಗರಾಗಿ ಪ್ರಸಿದ್ಧರಾಗಿದ್ದಾರೆ. 

ಅಮೆರಿಕದ ಏರ್ಪೋರ್ಟುಗಲ್ಲಿ ತಾನು ಹಲವು ಬಾರಿ ಗಂಟೆಗಟ್ಟಲೆ ವಿಚಾರಣೆಗೊಳಗಾದ ಘಟನೆಗಳ ಕುರಿತು  ಲಘು ಹಾಸ್ಯದ ಧಾಟಿಯಲ್ಲೇ “ನನ್ನ ಬಗ್ಗೆ ನನಗೆ ಅಹಂಕಾರ ಶುರುವಾಗಿದೆಯೆಂದೆನಿಸಿದಾಗಲೆಲ್ಲ  ನಾನು ಅಮೆರಿಕಾ ಪ್ರವಾಸ ಕೈಗೊಳ್ಳುತ್ತೇನೆ. ಅಲ್ಲಿ ವಲಸೆ ಅಧಿಕಾರಿಗಳು ನನ್ನನ್ನು ಆ ತಾರಾ ಪ್ರಪಂಚದಿಂದ ಕೆಳ ಬೀಳುವಂತೆ ಒದೆಯುತ್ತಾರೆ“ ಎಂದು ಶಾರುಖ್ ಖಾನ್ ಪ್ರತಿಕ್ರಿಯಿಸಿದ್ದನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುತ್ತ ನಡೆದ ರಾಜಕೀಯದ ನಂತರ  ಬಾಲಿವುಡ್ ಹಿಂದೆಂದಿಗಿಂತಲೂ ಧ್ರುವೀಕರಣಗೊಂಡಿತು. ಧರ್ಮ -ಸಂಸ್ಕೃತಿ ರಕ್ಷಣೆ ನೆಪದಲ್ಲಿ ಸ್ಟಾರ್ ನಟ -ನಟಿಯರನ್ನು  ಬಹಿಷ್ಕರಿಸುವ  ಅಭಿಯಾನಗಳು ,ಅವರ ತಲೆ ಕಡಿಯಬೇಕೆಂಬ ಕರೆ ಕೊಡುವುದು ಸಾಮಾನ್ಯವಾಯಿತು. ಈಗ ತನ್ನ ಅಹಂಕಾರವನ್ನು ವಿಮರ್ಶಿಸಿಕೊಳ್ಳಲು ಶಾರುಖ್ ಖಾನ್ ಅಥವಾ ಯಾವುದೇ ಸ್ಟಾರ್ ಬೇರೆ ದೇಶದ ಪ್ರವಾಸ ಕೈಗೊಳ್ಳುವ ಅಗತ್ಯವಿಲ್ಲ. 

ಈ  ನಡುವೆ ದಕ್ಷಿಣ ಚಿತ್ರರಂಗದ  ಕೆಲವು ಸಿನಿಮಾಗಳು ಗಮನಾರ್ಹ ಯಶಸ್ಸು ಸಾಧಿಸಿದವು. ಹಿಂದಿ ಚಿತ್ರೋದ್ಯಮ  ಕೊರೋನಾ ಪೂರ್ವದ ಯಶಸ್ಸನ್ನು ಇನ್ನು ಕಾಣಲಾರದೇನೋ  ಎನ್ನುವ ಆತಂಕವನ್ನು  ಪಠಾಣ್ ಚಿತ್ರ ಗಳಿಸಿದ ಅಮೋಘ ಯಶಸ್ಸು  ದೂರ ಮಾಡಿತು. ಬಾಲಿವುಡ್ ನ  ಡ್ರಗ್ಸ್ ವಿವಾದ ಹಾಗೂ  ಪಠಾಣ್ ಚಿತ್ರದ ಕೇಸರಿ ಬಟ್ಟೆಯ ಕುರಿತ ಬಹಿಷ್ಕಾರ ಅಭಿಯಾನಗಳಲ್ಲಿ  ಶಾರುಖ್ ಖಾನ್ ರ ವೈಯುಕ್ತಿಕ ಬದುಕಿನ ಮೇಲೆ ನಡೆದ ದಾಳಿ ಬಹಳ ಅತಿರೇಕದ್ದಾಗಿತ್ತು. ಈ ಬಾರಿ  ಜನರೇ  ಅವರ  ಪರ ನಿಂತು ಈ ರಾಜಕೀಯವನ್ನ ವಿರೋಧಿಸಿ ಶಾರುಖ್ ಖಾನ್ -ಹಾಗೂ ಪಠಾಣ್ – ನನ್ನು  ಅಕ್ಷರಶ ಕಾಪಾಡಿದರು. ‘ಪಠಾಣ್’   ಹಾಗೂ ‘ ಜವಾನ್’  ನಿಜಕ್ಕೂ ಅತೀ ಸಾಧಾರಣ ಚಿತ್ರಗಳು.  ವಿವಾದಗಳ  ಫಲವಾಗಿ  ಹುಟ್ಟಿದ ಮಮತೆ  ಜನರ ಮನಸ್ಸಲ್ಲಿ  ಇನ್ನೂ ಸುಪ್ತವಾಗಿ ಹರಿಯುತ್ತಿದ್ದು  ‘ಜವಾನ್’ ಯಶಸ್ಸಿಗೆ ಕಾರಣವಾದ ಹಲವು ಅಂಶಗಳಲ್ಲಿ ಒಂದು.  

ಅಮೆರಿಕದ ಯುವಜನತೆಯ ಮೇಲೆ ಟೇಲರ್ ಸ್ವಿಫ್ಟ್ ಹಾಗೂ ಬೆಯಾನ್ಸ್ ಹೊಂದಿರುವ ಪ್ರಭಾವ ಅಗಾಧವಾದುದು. 2018ರಲ್ಲಿ ಮೊದಲ ಬಾರಿಗೆ  ಡೆಮೊಕ್ರಟಿಕ್ ಪಕ್ಷದ ಅಭ್ಯರ್ಥಿಯನ್ನು (ನಂತರದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಡೆನ್ ರನ್ನು) ಬೆಂಬಲಿಸಿದಾಗ ಆಕೆಯ ಅಭಿಮಾನಿ ಬಳಗದ ಹಲವರು ಬೀದಿಗಿಳಿದು ಪ್ರತಿಭಟಿಸಿದರೆ, ಅಭಿಮಾನಿಗಳ ಇನ್ನೊಂದು ಗುಂಪು  ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಪಾಪ್ ಸ್ಟಾರ್ ಗಳು ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸುವುದು ಅಗತ್ಯ ಎಂದು ಅಭಿಪ್ರಾಯ ಪಟ್ಟರು. ಅಂದಿನಿಂದ ರಾಜಕೀಯದ ಕುರಿತ ಆಕೆಯ ಟ್ವೀಟ್ ಅಥವಾ ಟಿಪ್ಪಣಿಗಳು ದೇಶದ ಪ್ರಮುಖ ಮಾಧ್ಯಮಗಳಲ್ಲಿ ಚರ್ಚೆಯ ವಸ್ತುಗಳಾಗಿವೆ. 2019ರ ನಂತರ ಸ್ವಿಫ್ಟ್ ಬರೆದ ಹಾಡುಗಳಲ್ಲಿ LGBTQ ಸಮುದಾಯದ ಪರ ಅವರ  ರಾಜಕೀಯ ಸ್ಪಷ್ಟವಾಗತೊಡಗಿತು. ಆಕೆಯ ‘ಓನ್ಲಿ ದಿ ಯಂಗ್.. ‘ ಗೀತೆಯನ್ನು  2020ರ ಡೆಮಾಕ್ರಟಿಕ್ ಪ್ರಚಾರ ತಂತ್ರದಲ್ಲಿ  ಯುವ ಮತದಾರರನ್ನು  ಮತ ಚಲಾಯಿಸಲು ಪ್ರೋತ್ಸಾಹಿಸುವ ಪ್ರತಿಭಟನಾ ಗೀತೆಯಾಗಿ ಬಳಸಲಾಯಿತು. ಹಲವು ಪ್ರಶಸ್ತಿ ಪ್ರಧಾನ ಸಮಾರಂಭಗಳಲ್ಲಿ ಆಕೆ ತನ್ನ ರಾಜಕೀಯ ನಿಲುವನ್ನು ವ್ಯಕ್ತಪಡಿಸಿ ಚಿತ್ರರಂಗ ಹಾಗೂ ಸಂಗೀತ ಕ್ಷೇತ್ರದ ಹಲವು ಗಣ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. 

ಸೆ.19 ರಾಷ್ಟ್ರೀಯ ಮತದಾರರ ನೋಂದಣಿ ದಿನದಂದು ಟೇಲರ್ ಸ್ವಿಫ್ಟ್ ರ ಒಂದು ಇನ್ಸ್ಟಾ ಗ್ರಾಂ ಬರಹವು ಸರ್ಕಾರೇತರ ಸಂಸ್ಥೆ (NGO)ಯೊಂದಕ್ಕೆ 35,000 ಕ್ಕೂ ಹೆಚ್ಚು ಹೊಸ ಮತದಾರರನ್ನು ನೋಂದಾಯಿಸಲು ಸಹಾಯ ಮಾಡಿತು.ಇದು   ಕಳೆದ ವರ್ಷ(2022)ರ ಇದೇ ದಿನ ನೋಂದಣಿಯಾದುದಕ್ಕಿಂತ  ಸುಮಾರು 25% ಹೆಚ್ಚು. ನೋಂದಣಿಯಲ್ಲಿ  18 ವರ್ಷ ವಯಸ್ಸಿನವರ ಸಂಖ್ಯೆ  115% ಹೆಚ್ಚಳವಾಯಿತು.  

ಜವಾನ್ ಚಿತ್ರದಲ್ಲಿ ಕೂಡ ಚುನಾವಣೆಯಲ್ಲಿ ಮತದಾನ ಮಾಡುವ ಮುನ್ನ ಜನರು ಯೋಚಿಸಬೇಕೆಂದು  ‘ಜಾಗರೂಕ’ ನಾಯಕ ಆಗ್ರಹಿಸುವ ಧೀರ್ಘ ಭಾಷಣವಿದೆ. ಚಿತ್ರದ ಹಲವು  ಸಂಭಾಷಣೆಗಳು, ಕಳೆದ ಕೆಲವು ವರ್ಷಗಳಲ್ಲಿ ಶಾರುಖ್ ಖಾನ್ ರ ವಿರುದ್ಧ ನಡೆದ ವೈಯುಕ್ತಿಕ ದಾಳಿ ಹಾಗೂ ಪ್ರಸ್ತುತ ರಾಜಕೀಯ ಪರಿಸ್ಥಿತಿಗೆ ನಟ ತೋರಿದ ಪ್ರತಿರೋಧ ಎಂಬ ಧಾಟಿಯಲ್ಲಿ ಇದ್ದುದರಿಂದ ಚಲನಚಿತ್ರಕ್ಕೆ ಅತೀವ ಪ್ರಚಾರ ದೊರಕಿದ್ದುದು ಕೂಡ ಚಿತ್ರದ ಯಶಸ್ಸಿಗೆ ಕಾರಣವಾಯಿತು. ಟೇಲರ್ ಸ್ವಿಫ್ಟ್ ತನ್ನ ಹಾಡುಗಳ ಮೂಲಕ ಬಲಪಂಥೀಯ ರಾಜಕಾರಣವನ್ನು ಸ್ಪಷ್ಠವಾಗಿ ವಿರೋಧಿಸುತ್ತಾ ಮುನ್ನಡೆದರೆ, ಚಲನಚಿತ್ರದ ಅಪೂರ್ವ ಯಶಸ್ಸಿನ ನಂತರ ಶಾರುಖ್ ಖಾನ್  ಕೋಮು ದ್ವೇಷ ರಾಜಕಾರಣವನ್ನು ಪ್ರೋತ್ಸಾಹಿಸುತ್ತಾ ಅವರ ತಾರಾ ಪಟ್ಟಕ್ಕೆ ಕುತ್ತು ತಂದ ಪಕ್ಷದ ರಾಜಕಾರಣಿಗಳಿಂದ ಆಹ್ವಾನಿತರಾಗಿ ಸನ್ಮಾನ ಸ್ವೀಕರಿಸುತ್ತಿದ್ದಾರೆ. 

ಭಾರತೀಯ ಚಿತ್ರರಂಗದ ನಟರು ಸ್ಯಾನಿಟರಿ ಪ್ಯಾಡ್ ಬಗ್ಗೆ ಜಾಗೃತಿ ಮೂಡಿಸುವ ಜಾಹೀರಾತು ಮಾಡುತ್ತಾರೆ, ಪಾನ್ ಮಸಾಲ ಕೂಡ ಮಾರುತ್ತಾರೆ. ಬಾಲಿವುಡ್ ನಿಂದ ವಿಶ್ವ ವೇದಿಕೆಗೆ ಹಾರಿದ ನಟಿಯರು ತಾವು 50 ದಾಟಿದ ಮೇಲೆಯೂ ಚಾಲ್ತಿಯಲ್ಲಿರಲು  ಬೇಕಾಗುವಷ್ಟು ಮಹಿಳಾ ಸಬಲೀಕರಣದ ಕುರಿತು ಮಾತಾಡಿ ಮೇಲ್ ಮಧ್ಯಮ ವರ್ಗದ ಮಹಿಳೆಯರೂ ಕೊಳ್ಳಲು ಹಿಂಜರಿಯುವಷ್ಟು ದುಬಾರಿ ಸೌಂದರ್ಯ ವರ್ಧಕಗಳ ಕಂಪನಿ ಸ್ಥಾಪಿಸುತ್ತಾರೆ. ಆದರೆ ಸಾಮಾಜಿಕ ಮಾಧ್ಯಮ ನಾಗರಿಕರಿಗೆ ಈ ತಾರೆಯರ ದ್ವಂದ್ವ ನಡೆಗಳನ್ನು ಪ್ರಶ್ನಿಸುವ,ತಮ್ಮ ಸಾಮಾಜಿಕ ಜವಾಬ್ದಾರಿ ನೆನಪಿಸುವ ಶಕ್ತಿಯನ್ನು ಕೊಟ್ಟಿದೆ. ಪಾನ್ ಮಸಾಲ ಜಾಹೀರಾತಿನಲ್ಲಿ ತೊಡಗಿದ ನಟರ ವಿರುದ್ಧ ನಡೆದ ಸಾಮಾಜಿಕ ಮಾಧ್ಯಮ ಅಭಿಯಾನದಿಂದಾಗಿ   ಅಕ್ಷಯ್ ಕುಮಾರ್, ಅಮಿತಾಭ್ ಬಚ್ಚನ್ ರಂತಹ ನಟರು  ಈ ಸಂಸ್ಥೆಗಳೊಂದಿಗಿನ ಒಪ್ಪಂದವನ್ನು ರದ್ಧು ಮಾಡುವಂತಾಯಿತು.  

5 ವರ್ಷದ ಹಿಂದೆ ಮಾಧ್ಯಮ ಹಾಗೂ ಬಾಲಿವುಡ್ ನಡುವಿನ ಚರ್ಚೆಯೊಂದರಲ್ಲಿ ಪತ್ರಕರ್ತ ಅರ್ನಬ್ ಗೋ ಸ್ವಾಮಿ ಪ್ರಶ್ನೆಗೆ   “ಬಡತನದಲ್ಲಿ ಸೃಜನಶೀಲತೆ ನಲುಗುತ್ತದೆ ,ಮೊದಲು ಶ್ರೀಮಂತರಾಗೋಣ  ಆಮೇಲೆ ತತ್ವಜ್ಞಾನದ ಬಗ್ಗೆ ಮಾತಾಡೋಣ”  ಎಂಬ ಶಾರುಖ್ ಖಾನ್ ರ  ಹರಿತವಾದ ಪ್ರತ್ಯುತ್ತರ  ಬಹಳ ಪ್ರಸಿದ್ಧವಾಗಿತ್ತು. ಶಾರುಖ್ ನ ಮಾತಿಗೆ ವಿರುದ್ಧವಾಗಿ ಅಮಿತಾಭ್ ಸೇರಿದಂತೆ ಹಲವರು ‘ಹಲವು ಪ್ರತಿಭಾವಂತರು  ಬಡತನದಲ್ಲೇ ಅಮೋಘವಾದುದನ್ನ ಸೃಷ್ಟಿಸಿದ್ದಾರೆ’ ಎಂಬ ಆದರ್ಶವಾದಿ ಮಾತುಗಳನ್ನಾಡಿದರು. ಆದರೆ ಶಾರುಖ್ ಖಾನ್ ರ ಜೀವನಾನುಭವದಿಂದ ಹೊರಹೊಮ್ಮಿದ ಮಾತುಗಳೊಂದಿಗೆ ಬಡ -ಮಧ್ಯಮ ವರ್ಗದ ಭಾರತೀಯರು ತಮ್ಮನ್ನು ಗುರುತಿಸಿಕೊಂಡು ಸಮ್ಮತಿಸಿದರು. ಪಠಾಣ್ ಹಾಗೂ ಜವಾನ್ ಎರಡೂ ಸಿನೆಮಾಗಳು ಸಾವಿರ ಕೋಟಿಗೆ ಮೀರಿ ಹಣ ಗಳಿಸಿ ಹಿಂದಿ ಚಿತ್ರರಂಗಕ್ಕೆ ಚೈತನ್ಯವನ್ನು ಮರಳಿ ತಂದಿವೆ, ಈ ಗೆಲುವುಗಳಿಂದಾಗಿ  ಶಾರುಖ್ ಖಾನ್ ರ  ಪ್ರಭಾವವನ್ನು ಈ ಮೊದಲಿಗಿಂತಲೂ ಹಲವು ಪಟ್ಟು ಹೆಚ್ಚಿದೆ. ಇಷ್ಟು ಶ್ರೀಮಂತಿಕೆ ದೊರಕಿದ ನಂತರವಾದರೂ  ಬಾದ್ ಶಹಾ, ಕೋಮು ರಾಜಕೀಯವನ್ನು ವಿರೋಧಿಸುವ – ಅಂತರ ಕಾಯ್ದುಕೊಳ್ಳುವ – ಪ್ರಯತ್ನ ಮಾಡುತ್ತಾರೋ ಎಂದು ನೋಡಬೇಕಿದೆ.  

Related Articles

ಇತ್ತೀಚಿನ ಸುದ್ದಿಗಳು