Monday, December 8, 2025

ಸತ್ಯ | ನ್ಯಾಯ |ಧರ್ಮ

ಹಿಂದೂವಾದಿ HDK Vs ಸೆಕ್ಯುಲರ್ HDK | ಭಗವದ್ಗೀತೆ ಬೋಧಿಸಿದರೆ ಹೊಟ್ಟೆ ತುಂಬುತ್ತದೆಯೇ? ಸಚಿವ ಕುಮಾರಸ್ವಾಮಿಯವರ ಹಳೆಯ ಹೇಳಿಕೆ ಮತ್ತೆ ವೈರಲ್‌

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ನಾನು ಕೃಷ್ಣತತ್ವ ನಂಬಿದವನೇ ಹೊರತು ಕಂಸನ ಹಿಂಸೆಯನ್ನಲ್ಲ. ಆದರೆ ಕಾಂಗ್ರೆಸ್ ಕಂಸನಲ್ಲಿ ನಂಬಿಕೆ ಇಟ್ಟಿದೆ” ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಮಹಾದೇವಪ್ಪನವರನ್ನು ಗುರಿಯಾಗಿಸಿಕೊಂಡು ಟ್ವೀಟ್‌ ಮಾಡಿರುವ ಕುಮಾರಸ್ವಾಮಿ “ನನ್ನನ್ನು ಮನುವಾದಿ ಎಂದಿರುವ ಮುಖ್ಯಮಂತ್ರಿ, ಸೈದ್ಧಾಂತಿಕ ಅಧಃಪತನ ಎಂದು ತಾಳ ಹಾಕಿದ ಸಚಿವ ಮಹದೇವಪ್ಪ; ಇವರಿಬ್ಬರೂ ಶಾಲಾ ಮಕ್ಕಳಿಗೇನು ಬೋಧಿಸುತ್ತಾರೆ ಎಂಬುದನ್ನು ಹೇಳಿಲಿ. ಬುದ್ಧಿಗೇಡಿತನಕ್ಕೂ ಮಿತಿ ಬೇಡವೇ?” ಎಂದಿದ್ದಾರೆ

ಭಗವದ್ಗೀತೆ ಜಗದ ಬೆಳಕು, ಅರಿವು. ಸನ್ಮಾರ್ಗದ ದೀವಿಗೆ. ಆದರ್ಶಗಳ ಮಹಾಸಾರ. ಮಕ್ಕಳನ್ನು ಬಾಲ್ಯದಿಂದಲೇ ಒಳ್ಳೇ ಮಾರ್ಗದಲ್ಲಿ ನಡೆಸುವ ಸುದುದ್ದೇಶದಿಂದ ನಾನು ಕೇಂದ್ರದ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್‌ ಅವರಿಗೆ ಪತ್ರ ಬರೆದು ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು ಎಂದು ವಿನಂತಿಸಿದ್ದೇನೆ.

ಬಹುಶಃ; ಮಹದೇವಪ್ಪನವರಿಗೆ ಭಗವದ್ಗೀತೆಯ ಸಾರ ಗೊತ್ತಿಲ್ಲ. ಅವರಿಗೆ ಇನ್ನಾವುದೋ ಗ್ರಂಥದ ಸಾರ ಗಾಢವಾಗಿ ಇಳಿದಿರಬೇಕು!?

ನಾನೂ ಸೇರಿ ಜನಪ್ರತಿನಿಧಿಗಳೆಲ್ಲರೂ ಪ್ರಮಾಣ ಸ್ವೀಕರಿಸುವುದು ಸಂವಿಧಾನಬದ್ಧವಾಗಿಯೇ. ದೇವರು, ತಂದೆ ತಾಯಿ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುತ್ತೇವೆ. ಇದು ಕೂಡ ಸನ್ಮಾರ್ಗವೇ. ಹಾಗಾದರೆ ಮಹದೇವಪ್ಪನವರ ‘ಮಾರ್ಗ’ ಯಾವುದು? ಕಂಸ ಮಾರ್ಗವೇ!!??

ಮಹದೇವಪ್ಪನವರೇ.. ನಿಮಗೆ ತಿಳಿದಿರಲಿ. ಇವತ್ತು ಭಾರತದ ರಾಜನೀತಿ ನಿಂತಿರುವುದೇ ಕೃಷ್ಣತತ್ತ್ವದ ಮೇಲೆ. ಸಮರ, ರಾಜಕೀಯ, ಜ್ಞಾನ, ಆಡಳಿತ, ಮನುಷ್ಯ ಸಂಬಂಧಗಳು ಎಲ್ಲಕ್ಕೂ ಭಗವದ್ಗೀತೆಯೇ ದೀವಿಗೆ. ಕೃಷ್ಣಬೋಧೆ ಸಾರ್ವಕಾಲಿಕ, ಭಗವದ್ಗೀತೆ ಕಾಲಾತೀತ.

ನಿಮ್ಮನ್ನು ಅಜ್ಞಾನಿ ಎನ್ನುವುದು ನನಗೆ ಇಷ್ಟವಿಲ್ಲ. ಸಂವಿಧಾನ, ಪ್ರಜಾಪ್ರಭುತ್ವ ಎಂದು ಸದಾ ಜಪಿಸುವ ನೀವು, ಭಗವದ್ಗೀತೆಯ ಜತೆಗೆ ರಾಮಾಯಣ, ಮಹಾಭಾರತವನ್ನೂ ಓದಿ. ಇದು ನನ್ನ ಸಲಹೆಯಷ್ಟೇ.

ಕೊನೆಗೆ; ಭಗವದ್ಗೀತೆ ಓದಬೇಡಿ ಎಂದು ನಾನೆಂದೂ ಹೇಳಿಲ್ಲ. ಹೇಳುವುದೂ ಇಲ್ಲ ಎಂದಿದ್ದಾರೆ.

ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಈ ಹಿಂದೆ ನೀಡಿದ್ದ ಹೇಳಿಕೆಯೊಂದು ವೈರಲ್‌ ಆಗಿದೆ. ಅವರು ಈ ಹಿಂದೆ “ಸರ್ಕಾರದ ಮುಂದೆ ಟನ್‌ಗಟ್ಟಲೇ ಸಮಸ್ಯೆಗಳ ಸರಮಾಲೆಯೇ ಇದೆ. ಮೊದಲು ಅವುಗಳನ್ನ ಸರಿಪಡಿಸಲಿ. ಭಗವದ್ಗೀತೆ ಪಾಠ ಮಾಡಿದರೆ ಅದರಿಂದ ಹೊಟ್ಟೆ ತುಂಬುತ್ತದೆಯೇ?” ಎಂದು ಶಾಲಾ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಮಾತನಾಡಿದ್ದರು.

ಆದರೆ ಈಗ ಬಿಜೆಪಿ ಜೊತೆ ಕೈ ಜೋಡಿಸಿದ ನಂತರ ಕುಮಾರಸ್ವಾಮಿ ತನ್ನ ರಾಗವನ್ನು ಬದಲಾಯಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗುತ್ತಿದೆ.

https://www.facebook.com/reel/372939404683828

Related Articles

ಇತ್ತೀಚಿನ ಸುದ್ದಿಗಳು

You cannot copy content of this page