Friday, June 14, 2024

ಸತ್ಯ | ನ್ಯಾಯ |ಧರ್ಮ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಟೆಕ್ಕಿಯ ದರೋಡೆ, ನಾಲ್ವರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಬಿಸಿಸಿ ಲೇಔಟ್‌ನಲ್ಲಿ ಸ್ನೇಹಿತನ ಮನೆಗೆ ಹೋಗುತ್ತಿದ್ದ ಇಂಜಿನಿಯರ್ ಒಬ್ಬರನ್ನು ಆಟೋದಲ್ಲಿ ಬಂದ ನಾಲ್ವರು ತಡೆದು ದ್ವಿಚಕ್ರ ವಾಹನ ಸಮೇತ ಪರಾರಿಯಾಗಿದ್ದಾರೆ. ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಸ್ಥಳದಿಂದ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ಆರೋಪಿಗಳ ಪತ್ತೆಗೆ ಯತ್ನಿಸುತ್ತಿದ್ದಾರೆ.

ಗುರುವಾರ ನಸುಕಿನ 1:50ರ ಸುಮಾರಿಗೆ ಟೆಕ್ಕಿ ಇಮ್ಯಾನುವೆಲ್ ಸ್ನೇಹಿತನ ಮನೆಗೆ ಹೋಗುತ್ತಿದ್ದರು. ಹಿಂಬದಿಯಿಂದ ಆಟೋದಲ್ಲಿ ಬಂದ ನಾಲ್ವರ ತಂಡ ಆತನನ್ನು ತಡೆದಿದೆ. ಆರೋಪಿಯು ಸಂತ್ರಸ್ತನನ್ನು ತಡೆದು ಇಷ್ಟು ಹೊತ್ತಿನಲ್ಲಿ ಎಲ್ಲಿ ಹೋಗುತ್ತಿರುವೆ ಎಂದು ವಿಚಾರಿಸಿ ನಂತರ ಬ್ಯಾಗ್‌ ಕಸಿದುಕೊಂಡಿದ್ದಾನೆ

ಆರೋಪಿಗಳು ಸಂತ್ರಸ್ತನ ಬಳಿ ಹಣ ಸಿಗದೇ ಇದ್ದಾಗ ಆತನಿಗೆ ಕಪಾಳಕ್ಕೆ ಹೊಡೆದಿದ್ದಾರೆ. ನಂತರ ಗ್ಯಾಂಗ್ ಸಂತ್ರಸ್ತನ ಬೈಕ್ ಕೀ ತೆಗೆದುಕೊಂಡು ಪರಾರಿಯಾಗಿದೆ. ಘಟನೆಯಿಂದ ಸಂತ್ರಸ್ತ ಇಮ್ಯಾನುವೆಲ್‌ ಆಘಾತದಲ್ಲಿರುವಾಗಲೇ ಆರೋಪಿಗಳಲ್ಲಿ ಒಬ್ಬ ಬೈಕ್‌ ಚಲಾಯಿಸಿಕೊಂಡು ಹೋದರೆ ಉಳಿದವರು ಆಟೋದಲ್ಲಿ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಇಮ್ಯಾನುವೆಲ್ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ.

ಸಂತ್ರಸ್ತ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.

ಈ ನಡುವೆ, ಶೋಧ ಕಾರ್ಯಾಚರಣೆ ನಡೆಯುತ್ತಿರುವಾಗ, ದರೋಡೆ ನಡೆದ ಸ್ಥಳದಲ್ಲೇ ಇಮ್ಯಾನುಯೆಲ್‌ ಅವರಿಗೆ ಬೈಕ್‌ ದೊರೆತಿದ್ದು, ಈ ಕುರಿತು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳ ಪತ್ತೆಗೆ ನೆರವಾಗುವ ಆಟೋ ನಂಬರ್‌ಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು